ಬೀದರ್: ಪಂಚಾಂಗದ ತಿಥಿ ಹಾಗೂ ಶುಭ ಮುಹೂರ್ತದ ಆಧಾರದ ಮೇಲೆ ಅ.20ರಂದು ಮಂಗಳವಾರ ವಿಜಯದಶಮಿ ಹಬ್ಬವನ್ನು ಆಚರಿಸುವುದು ಸೂಕ್ತವಾಗಿದೆ ಎಂದು ಸಿದ್ಧಾರೂಢ ಮಠದ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ತಿಳಿಸಿದ್ದಾರೆ.
ವಿಜಯದಶಮಿ ಹಿಂದೂ ಧರ್ಮದ ಪವಿತ್ರ ಹಾಗೂ ಮಹತ್ವದ ಹಬ್ಬವಾಗಿದೆ. ಇದು ಅಧರ್ಮದ ವಿರುದ್ಧ ಧರ್ಮದ ವಿಜಯ, ದುಷ್ಟಶಕ್ತಿಗಳ ವಿರುದ್ಧ ಸತ್ಯದ ಗೆಲುವು ಹಾಗೂ ಅಜ್ಞಾನದ ವಿರುದ್ಧ ಜ್ಞಾನದ ವಿಜಯವನ್ನು ಸಾರುತ್ತದೆ. ಆದ್ದರಿಂದ ಈ ಹಬ್ಬವನ್ನು ಸಂಪ್ರದಾಯ, ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಬೇಕು ಎಂದು ಅವರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪಂಚಾಂಗದ ಪ್ರಕಾರ, ಅ.20ರಂದು ಮಧ್ಯಾಹ್ನ 2.02ರಿಂದ 2.24ರವರೆಗೆ ಆಯುಧ ಪೂಜೆ ನೆರವೇರಿಸಲು ವಿಜಯ ಮುಹೂರ್ತವಿದೆ. ಈ ಶುಭ ಸಮಯದಲ್ಲಿ ಆಯುಧಗಳು, ವಾಹನಗಳು, ಕೃಷಿ ಉಪಕರಣಗಳು, ಯಂತ್ರೋಪಕರಣಗಳು ಹಾಗೂ ವೃತ್ತಿ-ಉದ್ಯೋಗಕ್ಕೆ ಸಂಬಂಧಿಸಿದ ಸಲಕರಣೆಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ ಎಂದು ತಿಳಿಸಿದ್ದಾರೆ.
ವಿಜಯದಶಮಿಯಂದು ಆಯುಧ ಪೂಜೆಯ ಜತೆಗೆ ಶಮಿ ಪೂಜೆ ಹಾಗೂ ಸೀಮೋಲ್ಲಂಘನಕ್ಕೂ ವಿಶೇಷ ಮಹತ್ವವಿದೆ. ವಿಜಯದ ಸಂಕೇತವಾಗಿ ಆಚರಿಸುವ ಸೀಮೋಲ್ಲಂಘನವನ್ನು ಆಯುಧ ಪೂಜೆಯ ಬಳಿಕ ಸಂಜೆ 6.49ರೊಳಗೆ ನೆರವೇರಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.
ವಿಜಯದಶಮಿ ಪ್ರತಿಯೊಬ್ಬರ ಜೀವನದಲ್ಲಿ ಸತ್ಯ, ಧರ್ಮ, ಧೈರ್ಯ, ಕರ್ತವ್ಯಪ್ರಜ್ಞೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಹಬ್ಬವಾಗಿದೆ. ಕೆಟ್ಟ ಗುಣಗಳನ್ನು ತೊರೆದು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪಕ್ಕೆ ಈ ದಿನ ಪ್ರೇರಣೆಯಾಗಬೇಕು. ಪಂಚಾಂಗದ ತಿಥಿ ಹಾಗೂ ಶುಭ ಮುಹೂರ್ತದ ಮಹತ್ವವನ್ನು ಅರಿತು ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸುವ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಅವರು ಕೋರಿದ್ದಾರೆ.