ಹುಣಸಗಿ: ಹಣ ಪಣಕ್ಕಿಟ್ಟು ಕೋಳಿ ಪಂಜ ಆಡುತ್ತಿದ್ದ ಆರೋಪದ ಮೇರೆಗೆ 10 ಮಂದಿಯ ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕಾಮನಟಗಿ ಸೀಮೆಯ ಬಸವನ ಕಟ್ಟಿಯ ಸಮೀಪ ಸಣ್ಣ ಕಾಲುವೆ ರಸ್ತೆಯ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಪಂಜ ನಡೆಯುತ್ತಿರುವ ಕುರಿತು ಹುಣಸಗಿ ವೃತ್ತದ ಸಿಪಿಐ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಲು ಸೂಚಿಸಿದ್ದರು.
ಬಳಿಕ ಕೈಗೊಂಡ ಕಾರ್ಯಾಚರಣೆಯಲ್ಲಿ ಕೋಳಿ ಪಂಜದಲ್ಲಿ ತೊಡಗಿದ್ದರೆನ್ನಲಾದ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 8,250 ನಗದು ಹಾಗೂ ಎರಡು ಹುಂಜಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.