Blog

  • ಚೋರ್ಲಾ ಘಾಟ್‌ನಲ್ಲಿ ಭಾರಿ 400 ಕೋಟಿ ರೂ ದರೋಡೆ

    ಚೋರ್ಲಾ ಘಾಟ್‌ನಲ್ಲಿ ಭಾರಿ 400 ಕೋಟಿ ರೂ ದರೋಡೆ

    ಬೆಳಗಾವಿ–ಗೋವಾ ಗಡಿ ಭಾಗದಲ್ಲಿ ಬೆಳಕಿಗೆ ಬಂದಿರುವ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಈ ಪ್ರಕರಣ ಇದೀಗ ತನಿಖಾ ಹಂತದಲ್ಲೇ ಹಲವು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕರ್ನಾಟಕ–ಮಹಾರಾಷ್ಟ್ರ–ಗೋವಾ ಮೂರು ರಾಜ್ಯಗಳ ಗಡಿ ಭಾಗದಲ್ಲಿರುವ ಚೋರ್ಲಾ ಘಾಟ್‌ ಈ ದರೋಡೆಗೆ ಏಕೆ ಆಯ್ಕೆಯಾಯ್ತು ಎಂಬುದೇ ಪ್ರಮುಖ ಕುತೂಹಲವಾಗಿದೆ.

    ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ಧಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಮೂಲ ತನಿಖೆ ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದು, ಕರ್ನಾಟಕ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು. ಗಡಿ ಪ್ರದೇಶವಾದ ಕಾರಣ ಯಾರು ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

    ಜನವರಿ 6ರಂದು ನಾಸಿಕ್ ಜಿಲ್ಲೆಯ ಪೊಲೀಸ್ ಅಧಿಕಾರಿಯಿಂದ ಚೋರ್ಲಾ ಘಾಟ್‌ನಲ್ಲಿ ದೊಡ್ಡ ಮೊತ್ತದ ದರೋಡೆ ನಡೆದಿದೆ ಎಂಬ ಮಾಹಿತಿ ಪತ್ರದ ಮೂಲಕ ನಮಗೆ ಬಂದಿದೆ. ಈ ಪ್ರಕರಣ ಅಕ್ಟೋಬರ್ ತಿಂಗಳಲ್ಲಿ ನಡೆದಿರುವ ಸಾಧ್ಯತೆ ಇದೆ. ಸುಮಾರು 400 ಕೋಟಿ ರೂಪಾಯಿ ನಗದು ಅಪಹರಣವಾಗಿದೆ ಎಂಬ ಶಂಕೆಯ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಪಿ ವಿವರಿಸಿದರು.

    ತನಿಖೆಯ ವೇಳೆ ಬೆಳಕಿಗೆ ಬಂದ ಮತ್ತೊಂದು ಅಂಶವೇ ಕಿಡ್ನ್ಯಾಪ್ ಪ್ರಕರಣ. ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಎಂಬ ವ್ಯಕ್ತಿಯನ್ನು ಅಪಹರಿಸಿ ವಿಚಾರಣೆ ನಡೆಸಿದಾಗ, ದರೋಡೆ ಬಗ್ಗೆ ಮಾಹಿತಿ ದೊರೆತಿದೆ. ಕಿಡ್ನ್ಯಾಪ್ ಮಾಡಿದವರು ಚೋರ್ಲಾ ಘಾಟ್ ಪ್ರದೇಶದಲ್ಲೇ ಹಣ ದರೋಡೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖಾನಾಪುರ ಸಬ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಜೊತೆಗೆ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿದೆ.

    ಚೋರ್ಲಾ ಘಾಟ್ ಪ್ರದೇಶವೇ ದರೋಡೆಗೆ ಸೂಕ್ತ ಸ್ಥಳವಾಗಿದ್ದೇಕೆ ಎಂಬ ಪ್ರಶ್ನೆಗೆ ಭೌಗೋಳಿಕ ಅಂಶಗಳೇ ಉತ್ತರವಾಗಿವೆ. ಈ ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಬಹುತೇಕ ಇಲ್ಲ. ಗೋವಾ ಗಡಿಯಿಂದ ಬೆಳಗಾವಿಯ ಜಾಂಬೋಟಿವರೆಗೆ ಗಂಟೆಗಳ ಕಾಲ ಸಂಪರ್ಕ ಕಡಿತವಾಗಿರುತ್ತದೆ. ಕಿರಿದಾದ ರಸ್ತೆಗಳು, ಅರಣ್ಯ ದಾರಿಗಳು, ಸಣ್ಣ ವಾಹನಗಳು ಮಾತ್ರ ಸಂಚರಿಸಬಹುದಾದ ಹಾದಿಗಳು ಇಲ್ಲಿ ಇವೆ. ಒಂದು ವಾಹನದಿಂದ ಮತ್ತೊಂದಕ್ಕೆ ಹಣ ವರ್ಗಾಯಿಸಿ ಕಣ್ಮರೆಯಾಗಲು ಇದು ಸೂಕ್ತ ಪ್ರದೇಶ ಎನ್ನುವುದು ತನಿಖಾಧಿಕಾರಿಗಳ ಅನುಮಾನ.

    ಈ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಎಸ್‌ಐಟಿ ತಂಡ ಈಗಾಗಲೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಂದು ಮತ್ತೊಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆಯಿಂದ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

    ಚೋರ್ಲಾ ಘಾಟ್‌ನಲ್ಲಿ ಮುಂದಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ.

    ದೇಶದ ದರೋಡೆ ಇತಿಹಾಸದಲ್ಲೇ ಅಪರೂಪದ ಪ್ರಕರಣವೆನ್ನಲಾಗುತ್ತಿರುವ ಈ ಘಟನೆ, ಗಡಿ ಪ್ರದೇಶಗಳ ಭದ್ರತೆ ಮತ್ತು ಹಣ ಸಾಗಣೆಯ ಮೇಲ್ವಿಚಾರಣೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸತ್ಯಗಳು ಹೊರಬರುವ ನಿರೀಕ್ಷೆಯಿದೆ.

    apvc-iconPost Views: 49
  • ವ್ಹೀಲಿಂಗ್‌ ಹಾವಳಿಗೆ ಬ್ರೇಕ್: ಬೆಂಗಳೂರು ಗ್ರಾಮಾಂತರ ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಕೆ

    ವ್ಹೀಲಿಂಗ್‌ ಹಾವಳಿಗೆ ಬ್ರೇಕ್: ಬೆಂಗಳೂರು ಗ್ರಾಮಾಂತರ ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಕೆ

     

     

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರ ವ್ಹೀಲಿಂಗ್‌ ಹಾವಳಿ ಹೆಚ್ಚಾಗಿದ್ದು, ಇದು ಸಾರ್ವಜನಿಕ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲ ಯುವಕರು ಮೋಜು–ಮಸ್ತಿಗಾಗಿ ಅಪಾಯಕಾರಿ ವ್ಹೀಲಿಂಗ್‌ ನಡೆಸುತ್ತಿರುವುದು ಇತರೆ ವಾಹನ ಸವಾರರಲ್ಲಿ ಆತಂಕ ಹಾಗೂ ಕಿರಿಕಿರಿಯನ್ನುಂಟು ಮಾಡುತ್ತಿದೆ.

     

    ಬೆಂಗಳೂರಿನ ಸುತ್ತಮುತ್ತ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಜಾಲವೂ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ. ಇದರ ಪರಿಣಾಮವಾಗಿ ವಾಹನ ಸಂಚಾರದ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಈ ಸೌಲಭ್ಯಗಳ ಮಧ್ಯೆ ವ್ಹೀಲಿಂಗ್‌ ಎಂಬ ದುಸ್ಸಾಹಸ ತಲೆಎತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲ ಯುವಕರು ಯಾವುದೇ ಅಪಾಯದ ಅರಿವು ಇಲ್ಲದೆ ಸಾರ್ವಜನಿಕ ರಸ್ತೆಗಳನ್ನೇ ಕ್ರೀಡಾಂಗಣದಂತೆ ಬಳಸುತ್ತಿರುವ ದೃಶ್ಯಗಳು ಕಂಡುಬಂದಿವೆ.

     

    ಈ ಸಮಸ್ಯೆಗೆ ಕಡಿವಾಣ ಹಾಕಲು ಬೆಂಗಳೂರು ಗ್ರಾಮಾಂತರ ಪೊಲೀಸ್‌ ಇಲಾಖೆ ಕಠಿಣ ಕ್ರಮಗಳಿಗೆ ಮುಂದಾಗಿದೆ. ಹೆದ್ದಾರಿ ಪ್ರಾಧಿಕಾರದ ಸಹಕಾರದೊಂದಿಗೆ ಪ್ರಮುಖ ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಹಲವೆಡೆ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ವ್ಹೀಲಿಂಗ್‌ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ದೊಡ್ಡಬಳ್ಳಾಪುರ, ಹೊಸಕೋಟೆ, ಯಲಹಂಕ ವ್ಯಾಪ್ತಿ ಸೇರಿದಂತೆ ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ, ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ಯಲಹಂಕ–ಗೌರಿಬಿದನೂರು ರಾಜ್ಯ ಹೆದ್ದಾರಿಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಗಮನಕ್ಕೆ ಬಂದಿವೆ.

     

    ವ್ಹೀಲಿಂಗ್‌ ಹೆಚ್ಚು ನಡೆಯುವ ರಸ್ತೆಗಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಾಕಳಿ ರಸ್ತೆ, ತೂಬಗರೆ ರಸ್ತೆ ಸೇರಿದಂತೆ ಕೆಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ಕೆಲವು ಕಿಲೋಮೀಟರ್‌ಗಳಿಗೆ ಒಂದರಂತೆ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ನಿಗಾ ಇನ್ನಷ್ಟು ಕಠಿಣವಾಗಲಿದೆ.

     

    ಕೆಲವರು ವಾಹನಗಳ ನಂಬರ್‌ ಪ್ಲೇಟ್‌ ತೆಗೆದು ವ್ಹೀಲಿಂಗ್‌ ಮಾಡುವ ಪ್ರಯತ್ನ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ನಾಗದೇನಹಳ್ಳಿ ಸಮೀಪ ನಡೆದ ಘಟನೆಯೊಂದರಲ್ಲಿ ವ್ಹೀಲಿಂಗ್‌ ನಡೆಸುತ್ತಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಕಠಿಣ ಎಚ್ಚರಿಕೆ ನೀಡಿರುವುದೂ ನಡೆದಿದೆ.

     

    ಪೊಲೀಸ್‌ ಇಲಾಖೆ ಮಾತ್ರವಲ್ಲದೆ ಸಮಾಜವೂ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಕ್ಷಣಿಕ ಉಲ್ಲಾಸಕ್ಕಾಗಿ ಮಾಡುವ ಇಂತಹ ದುಸ್ಸಾಹಸಗಳು ಜೀವಕ್ಕೆ ಕುತ್ತು ತರಬಹುದಾದವು. ಮಕ್ಕಳ ಭವಿಷ್ಯದ ಮೇಲೆ ಅಪಾರ ನಂಬಿಕೆ ಇಟ್ಟು ಕನಸು ಕಟ್ಟಿಕೊಂಡಿರುವ ತಂದೆ–ತಾಯಿಯರ ಆಶಯಗಳನ್ನು ಹುಸಿಗೊಳಿಸದೆ, ಯುವಜನತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂಬ ಸಂದೇಶವನ್ನು ಪೊಲೀಸರು ಹಾಗೂ ಸಾರ್ವಜನಿಕರು ಒಂದೇ ಧ್ವನಿಯಲ್ಲಿ ನೀಡುತ್ತಿದ್ದಾರೆ.

    apvc-iconPost Views: 19
  • ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಸತ್ಯಕಾಮ ವಾರ್ತೆ ಯಾದಗಿರಿ:

    ನಟ ಡಾಲಿ ಧನಂಜಯ ಅವರು ಯಾದಗಿರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರು ಸಿನಿಮಾಗಳನ್ನು ಅಪಾರ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ಪ್ರೀತಿ ಕಲಾವಿದರಿಗೆ ದೊಡ್ಡ ಶಕ್ತಿ ಎಂದು ಹೇಳಿದರು.

    ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಡವರಾಸ್ಕಲ್’ ನಿರ್ದೇಶಕರೊಂದಿಗೆ ಮಾಡುತ್ತಿರುವ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಕೊನೆಯ ಶೆಡ್ಯೂಲ್ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ಸಿನಿಮಾ ‘ಹಲಗಲಿ’ ಯ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಸುಮಾರು 40 ಶೇಕಡಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉಳಿದ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

    ಇದರ ಜೊತೆಗೆ ‘ಟ್ರಿಪಲ್ ಸಿಕ್ಸ್ – ಆಪರೇಶನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಕೂಡ ನಿರಂತರವಾಗಿ ಸಾಗುತ್ತಿದೆ. ಈ ವರ್ಷದ ಮಧ್ಯಭಾಗದಿಂದ ತಮ್ಮ ಅಭಿನಯದ ಹಾಗೂ ನಿರ್ಮಾಣದ ಸಿನಿಮಾಗಳು ಒಂದರ ಬಳಿಕ ಒಂದಾಗಿ ಬಿಡುಗಡೆಯಾಗಲಿವೆ ಎಂದು ಧನಂಜಯ ಹೇಳಿದರು.

    ತಮ್ಮ ನಿರ್ಮಾಣದ ‘ಜೆಸಿದ ಯೂನಿವರ್ಸಿಟಿ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಹಾಗೂ ಪ್ರೇಮ ಅವರು ಬಿಡುಗಡೆ ಮಾಡಿದ್ದಾರೆ. ಜೈಲು ಹಿನ್ನೆಲೆಯ ಈ ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಹೊಸ ನಾಯಕ–ನಾಯಕಿ ಹಾಗೂ ಹೊಸ ನಿರ್ದೇಶಕರ ತಂಡವನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.

    ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕಡಿಮೆ ದರದಲ್ಲೇ ಎಲ್ಲ ವರ್ಗದ ಪ್ರೇಕ್ಷಕರು ಸಿನಿಮಾ ನೋಡಬಹುದಾಗಿತ್ತು. ಟಿಕೆಟ್ ದರ ಸ್ವಲ್ಪ ಕಡಿಮೆಯಾದರೆ ಬಡ ಪ್ರೇಕ್ಷಕರಿಗೂ ಸಿನಿಮಾ ನೋಡುವ ಅವಕಾಶ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

    ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪೈರಸಿ ಕುರಿತು ಮಾತನಾಡಿದ ಅವರು, ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು ಎಂದು ಹೇಳಿದರು. ಪ್ರೇಕ್ಷಕರು ಪೈರಸಿ ಪ್ರತಿಗಳನ್ನು ತಿರಸ್ಕರಿಸಿ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಮುಂದಾದರೆ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

    ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ಜನರ ಪ್ರೀತಿ ಹಾಗೂ ಬೆಂಬಲವೇ ತಮ್ಮ ಶ್ರಮಕ್ಕೆ ದೊಡ್ಡ ಪ್ರೇರಣೆ ಎಂದು ಹೇಳಿದರು.

    ಕೊನೆಗೆ ಉತ್ತರ ಕರ್ನಾಟಕದ ಜನರ ಆತ್ಮೀಯತೆಗೆ ಋಣಿ ಎಂದು ಡಾಲಿ ಧನಂಜಯ ಹೇಳಿದರು.

    apvc-iconPost Views: 102
  • ನಾಯಕತ್ವ ಸ್ಪಷ್ಟತೆಗೆ ಮತ್ತೆ ದೆಹಲಿಯ ದಾರಿ ಹಿಡಿದ ಡಿಕೆಶಿ

    ನಾಯಕತ್ವ ಸ್ಪಷ್ಟತೆಗೆ ಮತ್ತೆ ದೆಹಲಿಯ ದಾರಿ ಹಿಡಿದ ಡಿಕೆಶಿ

     


    ರಾಜ್ಯ ಕಾಂಗ್ರೆಸ್‌ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಗೊಂದಲಕ್ಕೆ ಸ್ಪಷ್ಟತೆ ಸಿಗಬೇಕೆಂಬ ಆಶಯದೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಕೆಶಿ, ಇದೀಗ ಅನಿವಾರ್ಯ ಕಾರಣಕ್ಕಾಗಿ ಬೀದರ್‌ಗೆ ತೆರಳಿ ಮತ್ತೆ ದೆಹಲಿಯತ್ತ ವಾಪಸ್ ಆಗಲಿದ್ದಾರೆ.

    ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಹೈದರಾಬಾದ್ ಮೂಲಕ ಬೀದರ್‌ಗೆ ಆಗಮಿಸಲಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ ನಂತರ ಮತ್ತೆ ದೆಹಲಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಹೈಕಮಾಂಡ್ ಪ್ರಮುಖ ನಾಯಕರನ್ನು ಭೇಟಿಯಾಗುವ ಉದ್ದೇಶ ಅವರದ್ದಾಗಿದೆ.

    ಇದಕ್ಕೂ ಮೊದಲು ಅಸ್ಸಾಂ ವಿಧಾನಸಭೆ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಲು ಡಿಕೆಶಿ ದೆಹಲಿಗೆ ತೆರಳಿದ್ದರು. ಅಸ್ಸಾಂ ವೀಕ್ಷಕರಾಗಿ ನೇಮಕಗೊಂಡಿರುವ ಕಾರಣ ಈ ಸಭೆ ಅವರಿಗೆ ರಾಜಕೀಯವಾಗಿ ಮಹತ್ವದ್ದಾಗಿತ್ತು. ಸಭೆಯ ವೇಳೆ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರೂ, ಒನ್ ಟು ಒನ್ ಮಾತುಕತೆಗೆ ಅವಕಾಶ ಸಿಗಲಿಲ್ಲ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಖರ್ಗೆ ಮೂಲಕ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ.

    ಇದೇ ವೇಳೆ ಕೇರಳ ವೀಕ್ಷಕರಾಗಿ ನೇಮಕಗೊಂಡಿರುವ ಸಚಿವ ಕೆ.ಜೆ. ಜಾರ್ಜ್ ದೆಹಲಿಗೆ ತೆರಳುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಕಾಂಗ್ರೆಸ್‌ ವಲಯದಲ್ಲಿ ಗಮನ ಸೆಳೆದಿದೆ. ದೆಹಲಿಯಲ್ಲಿ ಕೆಲ ದಿನಗಳಿಂದ ವಾಸ್ತವ್ಯ ಹೂಡಿದ್ದರೂ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಇನ್ನೂ ನೇರ ಮಾತುಕತೆ ಅವಕಾಶ ಸಿಗದಿರುವುದು ಚರ್ಚೆಗೆ ಕಾರಣವಾಗಿದೆ.

    ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಹಾಕಿದ್ದ ಟ್ವೀಟ್‌ಗಳು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಇನ್ನಷ್ಟು ಇಂಧನ ಹಾಕಿದ್ದವು. ಈ ಕುರಿತು ಸ್ವತಃ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಟ್ವೀಟ್‌ಗೆ ನಾಯಕತ್ವ ರಾಜಕೀಯದೊಂದಿಗೆ ಯಾವುದೇ ಸಂಬಂಧ ಇಲ್ಲ, ಅದು ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿದ್ದಾರೆ. ಆದರೂ ಕಾಂಗ್ರೆಸ್‌ ಒಳವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು ತಣ್ಣಗಾಗಿಲ್ಲ.

    ಒಟ್ಟಾರೆ, ನಾಯಕತ್ವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲದಿದ್ದರೂ, ದೆಹಲಿಯ ರಾಜಕೀಯ ಚಲನವಲನಗಳು ಮತ್ತು ಡಿಕೆ ಶಿವಕುಮಾರ್ ಅವರ ನಿರಂತರ ಪ್ರಯತ್ನಗಳು ರಾಜ್ಯ ಕಾಂಗ್ರೆಸ್‌ ರಾಜಕಾರಣವನ್ನು ಮತ್ತೆ ಕುತೂಹಲದ ಹಂತಕ್ಕೆ ತಂದು ನಿಲ್ಲಿಸಿವೆ. ಮುಂದಿನ ಕೆಲ ದಿನಗಳಲ್ಲಿ ಹೈಕಮಾಂಡ್ ಭೇಟಿಗಳು ಯಾವ ಸಂದೇಶ ನೀಡಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

    apvc-iconPost Views: 20
  • ‘ಕಲ್ಟ್’ ಸಿನಿಮಾ ಫ್ಲೆಕ್ಸ್‌ ತೆರವು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಬೆದರಿಕೆ, ವಿವಾದ ಭುಗಿಲು

    ‘ಕಲ್ಟ್’ ಸಿನಿಮಾ ಫ್ಲೆಕ್ಸ್‌ ತೆರವು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಬೆದರಿಕೆ, ವಿವಾದ ಭುಗಿಲು


    ಶಿಡ್ಲಘಟ್ಟದಲ್ಲಿ ‘ಕಲ್ಟ್’ ಸಿನಿಮಾ ಪ್ರಚಾರಕ್ಕೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದ ವಿಚಾರ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದೊಂದಿಗೆ ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.

     

    ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ನಡೆದಿತ್ತು. ಕಾರ್ಯಕ್ರಮದ ಭಾಗವಾಗಿ ಕೋಟೆ ವೃತ್ತದ ಬಳಿ ರಸ್ತೆ ಮಧ್ಯೆ ಹಾಗೂ ಸಂಚಾರಕ್ಕೆ ಅಡ್ಡಿಯಾಗುವಂತೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರಿಂದ ನಗರಸಭೆಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಅಳವಡಿಸಿದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ನಗರಸಭೆ ಕಚೇರಿಗೆ ತರಲಾಗಿದೆ.

     

    ಫ್ಲೆಕ್ಸ್‌ ತೆರವುಗೊಳಿಸಿದ ವಿಷಯ ತಿಳಿಯುತ್ತಿದ್ದಂತೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಕರೆ ಮಾಡಿ ಕಿಡಿಕಾರಿದ್ದು, ಅವಾಚ್ಯ ಶಬ್ದಗಳಲ್ಲಿ ನಿಂದನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತಷ್ಟು ಗಂಭೀರವಾಗಿದೆ.

     

    ಆಡಿಯೋದಲ್ಲಿ, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಕ್ಕೆ ಕೋಪಗೊಂಡ ರಾಜೀವ್ ಗೌಡ ಅವರು ಬೆದರಿಕೆಯ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಪೌರಾಯುಕ್ತೆ ಅಮೃತಾ ಗೌಡ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿರುವುದು ಆಡಿಯೋದಲ್ಲೇ ಕೇಳಿಸುತ್ತಿದೆ. ಅಪಘಾತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಹೊರುವ ಪರಿಸ್ಥಿತಿ ಉಂಟಾಗುವುದರಿಂದ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

     

    ಈ ಘಟನೆಯು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರವೃತ್ತಿಯನ್ನೇ ತೋರಿಸುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜೀವ್ ಗೌಡ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು. ಅವರ ಪತ್ನಿ ಸ್ಥಳೀಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲೂ ಪ್ರಕರಣಕ್ಕೆ ರಾಜಕೀಯ ಬಣ್ಣ ಸಿಕ್ಕಿದೆ.

     

    ಆಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ, ರಾಜೀವ್ ಗೌಡ ಅವರು ತಮ್ಮ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತೆ ಅಮೃತಾ ಗೌಡ ಅವರ ಬಳಿ ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ. ಆದರೂ, ಈ ಘಟನೆ ಆಡಳಿತಾತ್ಮಕ ಅಧಿಕಾರಿಗಳ ರಕ್ಷಣೆಯ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

    apvc-iconPost Views: 15
  • ಸೂರ್ಯಕುಮಾರ್ ವಿವಾದ: ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

    ಸೂರ್ಯಕುಮಾರ್ ವಿವಾದ: ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

     


    ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೆಸರು ಒಳಗೊಂಡ ಹೇಳಿಕೆಗಳ ಕಾರಣದಿಂದ ನಟಿ ಖುಷಿ ಮುಖರ್ಜಿ ಇತ್ತೀಚೆಗೆ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ, ಸೂರ್ಯಕುಮಾರ್ ಯಾದವ್ ಹಿಂದೆ ತಮಗೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ ನಟಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ವಿಷಯ ಕಾನೂನು ಹಂತಕ್ಕೂ ತಲುಪಿದೆ.

     

    ಈ ಹೇಳಿಕೆಗಳು ಕ್ರಿಕೆಟಿಗನ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಅವರು ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜ.13ರಂದು ಈ ಕುರಿತು ದೂರು ಸಲ್ಲಿಸಿರುವ ಅನ್ಸಾರಿ, ಸೂರ್ಯಕುಮಾರ್ ಯಾದವ್ ಅವರಂತಹ ಅಂತರಾಷ್ಟ್ರೀಯ ಮಟ್ಟದ ಆಟಗಾರರ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವುದು ಅಸಹ್ಯಕರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಮಾಧ್ಯಮಗಳ ಮುಂದೆ ಮಾತನಾಡಿದ ಅನ್ಸಾರಿ, ಖುಷಿ ಮುಖರ್ಜಿ ನೀಡಿದ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಿರುವ ಸುಳ್ಳು ಆರೋಪಗಳೆಂದು ಹೇಳಿದ್ದಾರೆ. ಇದರಿಂದ ಕ್ರಿಕೆಟಿಗರ ವ್ಯಕ್ತಿತ್ವಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳು ಇರುವುದನ್ನು ಉಲ್ಲೇಖಿಸಿದ ಅವರು, ಈ ವಿಷಯವನ್ನು ಜನರ ಮುಂದೆ ತರುವ ಜವಾಬ್ದಾರಿ ನನ್ನದೆಂದು ಹೇಳಿದ್ದಾರೆ.

     

    ಈ ವಿವಾದದ ಮೂಲ ಕ್ರಿಕೆಟಿಗರನ್ನು ಡೇಟ್ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಖುಷಿ ಮುಖರ್ಜಿ ನೀಡಿದ ಉತ್ತರ. ಯಾವುದೇ ಕ್ರಿಕೆಟಿಗರನ್ನು ಡೇಟ್ ಮಾಡುವ ಆಸಕ್ತಿ ಇಲ್ಲ ಎಂದು ಹೇಳಿದ್ದ ಅವರು, ಕೆಲವರು ಹಿಂದೆ ತಮ್ಮತ್ತ ಆಸಕ್ತಿ ತೋರಿಸಿದ್ದರು ಎಂದಿದ್ದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ಹಿಂದೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ್ದ ಮಾತುಗಳು ಹೆಚ್ಚು ಚರ್ಚೆಗೆ ಗ್ರಾಸವಾದವು. ಬಳಿಕ “ಈಗ ಅವರು ಸಂಪರ್ಕದಲ್ಲಿಲ್ಲ, ತಮ್ಮ ಹೆಸರನ್ನು ಅವರೊಂದಿಗೆ ಜೋಡಿಸಬಾರದು” ಎಂದು ಕೂಡ ಹೇಳಿದ್ದರು. ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಟೀಕೆ, ಆಕ್ರೋಶ ಎರಡೂ ಹೆಚ್ಚಿದವು.

     

    ವಿವಾದ ತೀವ್ರವಾದ ನಂತರ, ಖುಷಿ ಮುಖರ್ಜಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿದ ಅವರು, ಸೂರ್ಯಕುಮಾರ್ ಯಾದವ್ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಕೆಲವು ಅಂಶಗಳನ್ನು ಅತಿಶಯವಾಗಿ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದ್ದುದರಿಂದ ಗೊಂದಲ ಉಂಟಾಗಿದೆ ಎಂದು ಕೂಡ ತಿಳಿಸಿದ್ದಾರೆ.

     

    ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತರಾಗಿ ಮಾತ್ರ ಮಾತನಾಡಿದ್ದೆ ಎಂದು ಹೇಳಿದ ಖುಷಿ ಮುಖರ್ಜಿ, ಈಗ ಅವರೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿವಾದದ ನಡುವೆಯೇ ಟೀಮ್ ಇಂಡಿಯಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಮುಂಬರುವ ವಿಶ್ವಕಪ್‌ಗೆ ಶುಭಾಶಯ ಕೋರಿರುವ ಅವರು, ಹಿಂದೆ ನಡೆದ ಮಾತುಕತೆಗಳು ಸಂಪೂರ್ಣವಾಗಿ ಸ್ನೇಹಪೂರ್ವಕವಾಗಿದ್ದವು ಎಂದು ಹೇಳಿದ್ದಾರೆ.

     

    ಒಟ್ಟಿನಲ್ಲಿ, ಒಂದು ಹೇಳಿಕೆಯಿಂದ ಆರಂಭವಾದ ವಿಷಯ ಇದೀಗ ಭಾರೀ ಕಾನೂನು ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    apvc-iconPost Views: 8
  • ಶಿವಣ್ಣ ಭವಿಷ್ಯ ನಿಜವಾಗುತ್ತಾ? ʻಬಿಗ್‌ ಬಾಸ್‌ 12ʼ ಫಿನಾಲೆಗೆ ಮುನ್ನ ಗಿಲ್ಲಿ  ಅಲೆ ಜೋರು

    ಶಿವಣ್ಣ ಭವಿಷ್ಯ ನಿಜವಾಗುತ್ತಾ? ʻಬಿಗ್‌ ಬಾಸ್‌ 12ʼ ಫಿನಾಲೆಗೆ ಮುನ್ನ ಗಿಲ್ಲಿ ಅಲೆ ಜೋರು


    ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಫಿನಾಲೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಿನ್ನರ್‌ ಕುರಿತ ಚರ್ಚೆ ಜೋರಾಗಿದೆ. ಯಾರು ಕಿರೀಟ ಹೊಡೆಯುತ್ತಾರೆ ಎಂಬ ಕುತೂಹಲದ ನಡುವೆ ಈಗ ನಟ ಶಿವರಾಜ್‌ಕುಮಾರ್‌ ಅವರ ಹೇಳಿಕೆ ದೊಡ್ಡ ಮಟ್ಟದ ಗಮನ ಸೆಳೆದಿದೆ. “ಈ ಸೀಸನ್‌ ಗಿಲ್ಲಿಯದ್ದೇ” ಎಂಬ ಶಿವಣ್ಣ ಮಾತುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್‌ ಆಗಿದ್ದು, ಗಿಲ್ಲಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

     

    ಈ ಸೀಸನ್‌ ಅಂತಿಮ ಹಂತ ತಲುಪುತ್ತಿದ್ದಂತೆ ವೋಟಿಂಗ್‌, ಅಭಿಮಾನಿಗಳ ಅಭಿಯಾನ, ರ್ಯಾಲಿ, ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗಳು ಎಲ್ಲವೂ ಗಿಲ್ಲಿ ಪರವಾಗಿಯೇ ಕಾಣಿಸುತ್ತಿವೆ. ಸಾಮಾನ್ಯ ವೀಕ್ಷಕರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳವರೆಗೂ ಗಿಲ್ಲಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇಷ್ಟು ಮಟ್ಟಿಗೆ ಜನಪ್ರೀತಿ ಪಡೆದ ಸ್ಪರ್ಧಿ ಕನ್ನಡದ ʻಬಿಗ್‌ ಬಾಸ್‌ʼ ಇತಿಹಾಸದಲ್ಲೇ ವಿರಳ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

     

    ಗಿಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವುದಕ್ಕೆ ಮುಖ್ಯ ಕಾರಣ ಅವರ ನ್ಯಾಚುರಲ್‌ ಆಟ. ಯಾವುದೇ ಕೃತಕತೆ ಇಲ್ಲದೆ, ತಮ್ಮದೇ ಶೈಲಿಯ ಕಾಮಿಡಿ, ಸರಳ ನಡವಳಿಕೆ ಹಾಗೂ ಎಂಟರ್‌ಟೈನ್‌ಮೆಂಟ್‌ ಮೂಲಕ ಅವರು ಜನರಿಗೆ ಹತ್ತಿರವಾಗಿದ್ದಾರೆ. ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ “ವಿನ್ನರ್‌ ಫಿಕ್ಸ್‌” ಎಂಬ ಮಟ್ಟಿಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವುದು ಇದರ ಸ್ಪಷ್ಟ ಉದಾಹರಣೆ.

     

    ಗಿಲ್ಲಿ ಹಾಗೂ ಶಿವರಾಜ್‌ಕುಮಾರ್‌ ಅವರ ಪರಿಚಯ ಹೊಸದಲ್ಲ. ಜೀ ಕನ್ನಡದ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ವೇದಿಕೆಯಲ್ಲಿ ಗಿಲ್ಲಿಯ ಪ್ರದರ್ಶನ ನೋಡಿ ಶಿವಣ್ಣ ಮೆಚ್ಚಿಕೊಂಡಿದ್ದರು. ಆ ಕಾರ್ಯಕ್ರಮದಲ್ಲೇ “ಟ್ರೂ ಹಾನೆಸ್ಟ್‌ ಎಂಟರ್‌ಟೈನರ್‌” ಎಂದು ಗಿಲ್ಲಿಯನ್ನು ಹೊಗಳಿದ್ದ ಶಿವಣ್ಣ, ಅವರ ಎನರ್ಜಿ ಮತ್ತು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಿಲ್ಲಿಯ ಕಾಮಿಡಿ ಹಾಗೂ ನೃತ್ಯ ಶೈಲಿ ಅಂದಿನ ಜಡ್ಜ್‌ಗಳನ್ನೇ ಮನರಂಜಿಸಿದ್ದದ್ದು ಎಲ್ಲರಿಗೂ ನೆನಪಿದೆ.

     

    ಇದೀಗ ಹೊರಬಿದ್ದಿರುವ ವಿಡಿಯೋದಲ್ಲಿ ಶಿವರಾಜ್‌ಕುಮಾರ್‌ ಅವರು ಸ್ಪಷ್ಟವಾಗಿ “ಈ ಸೀಸನ್‌ ಗಿಲ್ಲಿನೇ ಗೆಲ್ಲೋದು” ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತಂದಿದೆ. ಜೊತೆಗೆ ಗಿಲ್ಲಿಗೆ “ಆಲ್‌ ದಿ ಬೆಸ್ಟ್‌” ಎಂದು ಶುಭಾಶಯ ಕೋರಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಮಾತುಗಳು ಹೊರಬಿದ್ದ ಕೂಡಲೇ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಗಿಲ್ಲಿ ಪರ ವಾತಾವರಣ ಇನ್ನಷ್ಟು ಗಟ್ಟಿಯಾಗುತ್ತಿದೆ.

     

    ಫಿನಾಲೆ ಹತ್ತಿರವಾಗುತ್ತಿದ್ದಂತೆ ಎಲ್ಲರ ಕಣ್ಣೂ ಒಂದೇ ಪ್ರಶ್ನೆಯ ಮೇಲೆ ಇದೆ ಶಿವಣ್ಣ ಭವಿಷ್ಯ ನಿಜವಾಗುತ್ತಾ? ಗಿಲ್ಲಿ ಈ ಸೀಸನ್‌ ಕಿರೀಟ ಧರಿಸುತ್ತಾನಾ? ಇದಕ್ಕೆ ಉತ್ತರ ಸಿಗಲು ಇನ್ನೂ ಕೆಲವೇ ದಿನಗಳು ಬಾಕಿ. ಆದರೆ, ಈ ಕ್ಷಣಕ್ಕೆ ಮಾತ್ರ ಗಿಲ್ಲಿ ಪರ ಅಲೆ ಜೋರಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

    apvc-iconPost Views: 17
  • ಬಳ್ಳಾರಿ ಬ್ಯಾನರ್‌ ಗಲಭೆ ಖಂಡಿಸಿ BJP–JDS ಪಾದಯಾತ್ರೆ; ಫೆ.5ಕ್ಕೆ ಬೆಂಗಳೂರಿನಲ್ಲಿ ಅಂತ್ಯ

    ಬಳ್ಳಾರಿ ಬ್ಯಾನರ್‌ ಗಲಭೆ ಖಂಡಿಸಿ BJP–JDS ಪಾದಯಾತ್ರೆ; ಫೆ.5ಕ್ಕೆ ಬೆಂಗಳೂರಿನಲ್ಲಿ ಅಂತ್ಯ

     


    ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಭೆ ಪ್ರಕರಣ ರಾಜಕೀಯವಾಗಿ ಇನ್ನಷ್ಟು ತೀವ್ರತೆ ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಜಂಟಿಯಾಗಿ ದೊಡ್ಡ ಹೋರಾಟಕ್ಕೆ ಸಜ್ಜಾಗಿವೆ. ಗಲಭೆ ಖಂಡಿಸಿ ಜನವರಿ 17ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ ನಡೆಸಿ, ಅಲ್ಲಿಂದ ಬೆಂಗಳೂರಿನತ್ತ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.

    ಬಳ್ಳಾರಿಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ನಗರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ತನಿಖೆ ವಿಳಂಬವಾಗಿದ್ದು, ತಪ್ಪಿತಸ್ಥರಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಆರೋಪವನ್ನು ಮುಂದಿಟ್ಟರು. ಇದಕ್ಕೆ ವಿರೋಧವಾಗಿ ಜನವರಿ 17ರಂದು ನಡೆಯುವ ಸಮಾವೇಶದ ಬಳಿಕ ಪಾದಯಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.

    ಬಿಜೆಪಿ–ಜೆಡಿಎಸ್‌ ಜಂಟಿಯಾಗಿ ಆಯೋಜಿಸಿರುವ ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಚಲುವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗವಹಿಸುವ ನಿರೀಕ್ಷೆಯಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

    ಸಮಾವೇಶದ ನಂತರ ಆರಂಭವಾಗುವ ಪಾದಯಾತ್ರೆ ಬಳ್ಳಾರಿಯಿಂದ ಹೊರಟು ಹಲಕುಂದಿ, ಕಣ್ವಕುಪ್ಪ ಕ್ರಾಸ್‌, ನಾಗಸಮುದ್ರ, ಬಿಜಿ ಕೆರೆ, ತಳಕು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಶಿರಾ, ನೆಲಮಂಗಲ ಸೇರಿದಂತೆ ಹಲವು ಗ್ರಾಮ–ಪಟ್ಟಣಗಳನ್ನು ದಾಟುತ್ತ ಸಾಗಲಿದೆ. ಫೆಬ್ರವರಿ 5ರಂದು ಗೊರಗುಂಟೆಪಾಳ್ಯ ಮೂಲಕ ಬೆಂಗಳೂರಿನ ಅರಮನೆ ಮೈದಾನ ತಲುಪಿ, ಅಲ್ಲಿ ಅಂತಿಮ ಸಮಾವೇಶ ನಡೆಯಲಿದೆ ಎಂದು ನಾಯಕರಿಂದ ಮಾಹಿತಿ ನೀಡಲಾಗಿದೆ.

    ಈ ಹೋರಾಟದ ಪ್ರಮುಖ ಉದ್ದೇಶ ಗಲಭೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು ಎಂಬ ಒತ್ತಾಯವೇ ಆಗಿದೆ. ನಗರ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಅವರ ಆಪ್ತ ಸತೀಶ್‌ ರೆಡ್ಡಿ ಸೇರಿ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ–ಜೆಡಿಎಸ್‌ ನಾಯಕರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಸಂದೇಶವನ್ನು ಜನರ ನಡುವೆ ತಲುಪಿಸುವುದೂ ಈ ಪಾದಯಾತ್ರೆಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

    ಗಲಭೆ ತನಿಖೆಯಲ್ಲಿನ ಲೋಪಗಳ ಕುರಿತು ಕೂಡ ಗಂಭೀರ ಆರೋಪಗಳು ಕೇಳಿಬಂದಿವೆ. ಘಟನೆ ನಡೆದ ಹಲವು ದಿನಗಳ ಬಳಿಕ ಮಾತ್ರ ಪಂಚನಾಮೆ ನಡೆಸಿರುವುದು ಮತ್ತು ತನಿಖೆ ಆರಂಭಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಪ್ರಕರಣದ ಸತ್ಯಾಂಶ ಹೊರಬರಲು ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಅಥವಾ ಸಿಬಿಐ ಮೂಲಕ ತನಿಖೆ ನಡೆಯಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.

    ಇದೇ ವೇಳೆ, ಗಲಭೆ ಸಂದರ್ಭದಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ ರೆಡ್ಡಿ ಸಾವಿನ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವೊಂದು ಪಾಯಿಂಟ್‌ ಬ್ಲಾಂಕ್‌ನಲ್ಲೇ ಗುಂಡು ಹಾರಿಸಿದಂತೆ ಕಾಣುತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಖಾಸಗಿ ಗನ್‌ಮ್ಯಾನ್‌ ಚರಣಸಿಂಗ್‌ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದರೂ, ಗುಂಡು ಹಾರಿಸಿದ ಸಂದರ್ಭ, ಅದರ ಹಿಂದೆ ಇರುವ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ.

    ಒಟ್ಟಿನಲ್ಲಿ, ಬಳ್ಳಾರಿ ಬ್ಯಾನರ್‌ ಗಲಭೆ ಪ್ರಕರಣ ಇದೀಗ ರಾಜಕೀಯ ಹೋರಾಟದ ರೂಪ ಪಡೆದುಕೊಂಡಿದ್ದು, ಬಳ್ಳಾರಿಯಿಂದ ಬೆಂಗಳೂರು ತನಕ ನಡೆಯಲಿರುವ ಈ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

    apvc-iconPost Views: 40
  • ರಾಜ್ಯ ರಾಜಕೀಯದಿಂದ ದೂರ ಸರಿಯಲ್ಲ: ಮರಳುವ ಸುಳಿವು ನೀಡಿದ ಎಚ್‌ಡಿಕೆ

    ರಾಜ್ಯ ರಾಜಕೀಯದಿಂದ ದೂರ ಸರಿಯಲ್ಲ: ಮರಳುವ ಸುಳಿವು ನೀಡಿದ ಎಚ್‌ಡಿಕೆ

     


    ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟವಾಗಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ನಿರ್ಧರಿಸುವುದಿಲ್ಲ, ಅದು ಸಂಪೂರ್ಣವಾಗಿ ರಾಜ್ಯದ ಜನತೆಯ ಆಶಯದ ಮೇಲೆ ನಿಂತಿದೆ ಎಂದು ಹೇಳಿದರು. ನಾನು ಯಾವ ಸ್ಥಾನದಲ್ಲಿ ಇರಬೇಕು, ಯಾವ ಸಮಯದಲ್ಲಿ ರಾಜ್ಯ ರಾಜಕೀಯಕ್ಕೆ ಮರಳಬೇಕು ಎಂಬುದನ್ನು ಜನತೆಯೇ ತೀರ್ಮಾನಿಸುತ್ತಾರೆ. ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳ ಮೂಲಕ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವನ್ನೂ ನೀಡಿದರು.

     

    ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಮಾತನಾಡಿದ ಕೇಂದ್ರ ಸಚಿವರು, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಸಂಕ್ರಾಂತಿ ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಹಬ್ಬ. ಈ ಬಾರಿ ಪ್ರಕೃತಿಯ ಸಹಕಾರ ಸಿಗಲಿ, ಕಾಲಕಾಲಕ್ಕೆ ಮಳೆ ಬಂದು ಕೃಷಿಕರ ಬದುಕು ಸುಗಮವಾಗಲಿ ಎಂದು ಅವರು ಆಶಿಸಿದರು. ಸುಗ್ಗಿ ಮತ್ತು ಸಮೃದ್ಧಿಯ ಸಂಕೇತವಾದ ಈ ಹಬ್ಬ ಎಲ್ಲರ ಮನೆ ಮನಗಳಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ತುಂಬಲಿ, ಎಳ್ಳು-ಬೆಲ್ಲದಂತೆ ಸಂಬಂಧಗಳು ಮಧುರವಾಗಲಿ ಎಂದು ಹಾರೈಸಿದರು.

     

    ರಾಜಕೀಯ ವಿಚಾರಕ್ಕೆ ಬಂದಾಗ, ನಾವು ಎನ್‌ಡಿಎ ಮೈತ್ರಿಯ ಭಾಗವಾಗಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವುದು. ಇದು ನನ್ನ ವೈಯಕ್ತಿಕ ಆಸೆ ಮಾತ್ರವಲ್ಲ, ಜನತೆಯ ನಿರೀಕ್ಷೆಯೂ ಹೌದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಈಗ ನಡೆಯುತ್ತಿರುವ ಆಡಳಿತವನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಜನತೆ ನೆಮ್ಮದಿಯಿಂದ ಬದುಕುವಂತಹ ಸರ್ಕಾರ ಬರಬೇಕು ಎಂಬುದು ನನ್ನ ಆಶಯ ಎಂದು ಕುಮಾರಸ್ವಾಮಿ ಹೇಳಿದರು.

     

    ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಎಂಬ ಮಾತುಗಳು ತಪ್ಪು ಕಲ್ಪನೆ. ನಾನು ರಾಜ್ಯ ರಾಜಕಾರಣದಲ್ಲಿ ಇದ್ದೇ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಮಂತ್ರಿಗಳು ನನಗೆ ಎರಡು ಮಹತ್ವದ ಖಾತೆಗಳ ಜವಾಬ್ದಾರಿ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಆದರೆ ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂಬುದನ್ನು ಪರಿಸ್ಥಿತಿ ಮತ್ತು ಜನತೆಯ ಮನಸ್ಸು ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.

     

    ಈ ವೇಳೆ ಅವರು ರಾಜ್ಯ ಸರ್ಕಾರದ ಆಡಳಿತ ಶೈಲಿಯ ಮೇಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಮೇಲೆ ಒತ್ತಡ ಮತ್ತು ದೌರ್ಜನ್ಯ ಹೆಚ್ಚಾಗಿದೆ. ಶಿಡ್ಲಘಟ್ಟದಲ್ಲಿ ನಡೆದ ಘಟನೆಯನ್ನು ಉದಾಹರಿಸಿದ ಅವರು, ಕಾಂಗ್ರೆಸ್ ಮುಖಂಡನೊಬ್ಬ ಅಧಿಕಾರಿಗೆ ಬೆದರಿಕೆ ಹಾಕಿರುವುದು ತುಂಬಾ ಬೇಸರ ತಂದಿದೆ ಎಂದರು. ಯಾವುದೇ ಪಕ್ಷದವರಾಗಲಿ, ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ಒಂದೆರಡು ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದರೆ ಉಳಿದವರಿಗೆ ಪಾಠವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

     

    ಅಧಿಕಾರಿಗಳ ಮೇಲೆ ಅನಗತ್ಯ ಒತ್ತಡ ಹೇರಿ ಕಾನೂನುಬಾಹಿರ ಕೆಲಸ ಮಾಡಿಸುವ ಪ್ರವೃತ್ತಿ ಸರ್ಕಾರದಲ್ಲಿ ವ್ಯಾಪಕವಾಗಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ನೇತೃತ್ವ ಸರಿಯಾಗಿಲ್ಲದಿದ್ದಾಗ ಇಂತಹ ಘಟನೆಗಳು ಹೆಚ್ಚಾಗುತ್ತವೆ. ಮೇಲಿನಿಂದ ಕೆಳಗಿನವರೆಗೂ ನಿಯಂತ್ರಣ ಇದ್ದರೆ ಮಾತ್ರ ವ್ಯವಸ್ಥೆ ಸರಿಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

     

    ಇದೇ ವೇಳೆ ಅಧಿಕಾರಿಗಳಿಗೂ ಕಿವಿಮಾತು ಹೇಳಿದರು. ಬಡ್ತಿ ಅಥವಾ ಪೋಸ್ಟಿಂಗ್ ಆಸೆಗೆ ಬಿದ್ದು ಕಾನೂನು ಉಲ್ಲಂಘನೆ ಮಾಡಿದರೆ ಮುಂದೆ ಅದಕ್ಕೆ ಬೆಲೆ ತೀರಿಸಬೇಕಾಗುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಗ್ರಬರಹವನ್ನು ಉಲ್ಲೇಖಿಸಿದ ಅವರು, ವಿಕಾಸಸೌಧ ನಿರ್ಮಾಣದ ವೇಳೆ ನಡೆದ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಎಂಟು ವರ್ಷಗಳ ನಂತರ ಲೋಕಾಯುಕ್ತ ನೀಡಿದ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ ಎಂದರು. ಜನಪ್ರತಿನಿಧಿಗಳ ಒತ್ತಡಕ್ಕೆ ಒಳಗಾಗದೆ, ಸರ್ಕಾರದ ನಿಯಮಾವಳಿಯೊಳಗೆ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ಅಧಿಕಾರಿಗಳಿಗೂ ಗೌರವ ಉಳಿಯುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

    apvc-iconPost Views: 13
  • ಶಾಲಾ ಮಕ್ಕಳ ಆರೋಗ್ಯಕ್ಕೆ ಹೊಸ ರಕ್ಷಣೆ: ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಡ್ಡಾಯ

    ಶಾಲಾ ಮಕ್ಕಳ ಆರೋಗ್ಯಕ್ಕೆ ಹೊಸ ರಕ್ಷಣೆ: ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಡ್ಡಾಯ


    ಮಕ್ಕಳ ಆರೋಗ್ಯಕರ ಭವಿಷ್ಯ ನಿರ್ಮಾಣದಲ್ಲಿ ಪೋಷಣೆಯಷ್ಟೇ ಮಹತ್ವ ಹೊಂದಿರುವ ಅಂಶವೆಂದರೆ ಸಮರ್ಪಕ ನೀರಿನ ಸೇವನೆ. ಆದರೆ ಶಾಲಾ ವಾತಾವರಣದಲ್ಲಿ ಆಟ, ಪಾಠ ಮತ್ತು ಪರೀಕ್ಷೆಗಳ ನಡುವೆ ಮಕ್ಕಳು ನೀರು ಕುಡಿಯುವುದನ್ನೇ ಮರೆತುಬಿಡುವ ಸ್ಥಿತಿ ಸಾಮಾನ್ಯ. ಇದರಿಂದ ದೇಹದ ಉಷ್ಣತೆ ಹೆಚ್ಚುವುದು, ದಣಿವು, ಏಕಾಗ್ರತೆ ಕೊರತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಗೆ ಪರಿಣಾಮಕಾರಿ ಪರಿಹಾರವಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ.

     

    ಇನ್ನುಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ನೀರು ಕುಡಿಯಲು ‘ವಾಟರ್ ಬೆಲ್’ (Water Bell) ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಲ್.ಕೆ.ಜಿ ಹಾಗೂ ಯು.ಕೆ.ಜಿ ಸೇರಿದಂತೆ ಎಲ್ಲಾ ತರಗತಿಗಳ ಮಕ್ಕಳಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ.

     

    ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವ ಬಗ್ಗೆ ಬೇಕಾದಷ್ಟು ಅರಿವು ಇಲ್ಲದಿರುವುದರಿಂದ, ದಿನಪೂರ್ತಿ ನೀರಿಲ್ಲದೇ ಇರುವ ಸಂದರ್ಭಗಳು ಹೆಚ್ಚಾಗುತ್ತಿವೆ. ಆದರೆ ನೀರು ದೇಹದ ಬೆಳವಣಿಗೆಗೆ, ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ವಾಟರ್ ಬೆಲ್ ವ್ಯವಸ್ಥೆ ಅತ್ಯಗತ್ಯವೆಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

     

    ಈ ಮಹತ್ವದ ಯೋಜನೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಸಲ್ಲಿಸಿತ್ತು. ಅದರಂತೆ ಆಯೋಗದ ಶಿಫಾರಸನ್ನು ಪರಿಗಣಿಸಿದ ಶಿಕ್ಷಣ ಇಲಾಖೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಸುತ್ತೋಲೆ ಹೊರಡಿಸಿ, ಶಾಲೆಗಳಲ್ಲಿ ನಿಗದಿತ ಸಮಯಕ್ಕೆ ವಾಟರ್ ಬೆಲ್ ಬಾರಿಸಿ ಮಕ್ಕಳಿಗೆ ನೀರು ಕುಡಿಯುವಂತೆ ಜಾಗೃತಿ ಮೂಡಿಸಲು ಸೂಚನೆ ನೀಡಿದೆ.

     

    ವಾಟರ್ ಬೆಲ್ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸವನ್ನು ಬೆಳೆಸುವ ಜೊತೆಗೆ, ಭವಿಷ್ಯದಲ್ಲಿ ನೀರು ಸೇವನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಹೊಸ ವ್ಯವಸ್ಥೆ ರಾಜ್ಯದ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.

    apvc-iconPost Views: 41