ಯಾದಗಿರಿ: ಎಂಟು ತಿಂಗಳ ಹಿಂದೆ ಪೂರ್ಣಗೊಂಡಿದ್ದ ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸುರಪುರದ ಜೆಸ್ಕಾಂನ ಇಬ್ಬರು ಕಿರಿಯ ಎಂಜಿನಿಯರ್ಗಳ ವಿರುದ್ಧ ಯಾದಗಿರಿ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದಾರೆ.
ಜೆಸ್ಕಾಂ ಕಿರಿಯ ಎಂಜಿನಿಯರ್ಗಳಾದ ಸಚಿನ್ ಯೆಡಕೆ ಮತ್ತು ಶ್ರೀಶೈಲ ತಮ್ಮದಡ್ಡಿ ಅವರು 3,63,942 ಮೊತ್ತದ ಕಾಮಗಾರಿಯ ಬಿಲ್ ಮಂಜೂರು ಮಾಡಲು 9 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 3 ಸಾವಿರ ಸ್ವೀಕರಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ಟಿಂಟಿಣಿ ಗ್ರಾಮದ ಭೈರಣ್ಣ ದೇವೇಂದ್ರ ಅಂಬಿಗೇರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರ ಅಡಿಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಸೆಕ್ಷನ್ 7(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.
ಯಾದಗಿರಿ ಲೋಕಾಯುಕ್ತ ಪೊಲೀಸ್ ಘಟಕದ ಎಸ್ಪಿ ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ತಲಕೇರಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದರು. ಡಿವೈಎಸ್ಪಿ ಜೆ.ಎಚ್. ಇನಾಮದಾರ್ ಅವರು ತಂಡದ ಮೇಲ್ವಿಚಾರಣೆ ವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.