ಯಾದಗಿರಿ: 22 ವರ್ಷದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ GRPF ಸಿಬ್ಬಂದಿ ಸೇರಿದಂತೆ ಆರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಯಾದಗಿರಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ. ಈರಣ್ಣ ಅವರು ವಜಾಗೊಳಿಸಿದ್ದಾರೆ ಎಂದು ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ‘ಸತ್ಯಕಾಮ’ಕ್ಕೆ ತಿಳಿಸಿದ್ದಾರೆ.
ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಸಾಕ್ಷ್ಯ ಮತ್ತು ದಾಖಲೆಗಳ ಸಂಗ್ರಹ ಕಾರ್ಯ ಬಾಕಿ ಇದ್ದು, ವಿಧಿವಿಜ್ಞಾನ ತಜ್ಞರ ವರದಿಗಳೂ ಸಲ್ಲಿಕೆಯಾಗಿಲ್ಲ. ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ತೇಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಎ-1, ಎ-3 ಮತ್ತು ಎ-4 ಆರೋಪಿಗಳು ಬಂಧನದಲ್ಲಿದ್ದು, ಎ-2, ಎ-5 ಮತ್ತು ಎ-6 ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.