ಯಾದಗಿರಿ: ಮನೆಯ ಮೇಲ್ಛಾವಣಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ಅಳವಡಿಸುವುದಾಗಿ ನಂಬಿಸಿ, ಶಹಾಪುರದ ಪಿಗ್ನಿ ಏಜೆಂಟ್ ಒಬ್ಬರಿಂದ 2,43,499 ರೂ. ಹಣ ಪಡೆದು ವಂಚಿಸಿರುವ ಕುರಿತು ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಪುರದ ಗಾಂಧಿ ಚೌಕ್ ನಿವಾಸಿ ರೇವಣ್ಣಸಿದ್ದಪ್ಪ ಆನೆಗುಂದಿ ವಂಚನೆಗೆ ಒಳಗಾದವರು. ಇವರು ಕಾಳಿಕಾ ದೇವಿ ಕರಕುಶಲಗಾರರ ಸಹಕಾರ ಸಂಘದಲ್ಲಿ ಪಿಗ್ನಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶಹಾಪುರದ ಆಕ್ಸಿಸ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ.
2026ರ ಆಗಸ್ಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ, ರೇವಣ್ಣಸಿದ್ದಪ್ಪ ಅವರ ಮನೆಯ ಮೊದಲ ಮಹಡಿಯ ಛಾವಣಿಯ ಮೇಲೆ ಬಿಎಸ್‌ಎನ್‌ಎಲ್ ಟವರ್ ಅಳವಡಿಸಲು ಸ್ಥಳ ಆಯ್ಕೆಯಾಗಿದೆ ಎಂದು ತಿಳಿಸಿದ್ದಾನೆ. ಈ ಸಂಬಂಧ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನೂ ಪಡೆದುಕೊಂಡಿದ್ದಾನೆ. ಬಳಿಕ ಪ್ರೊಸೆಸಿಂಗ್ ಶುಲ್ಕ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಹಂತ ಹಂತವಾಗಿ ಹಣ ಪಾವತಿಸುವಂತೆ ನಂಬಿಸಿದ್ದಾನೆ.
ಆರೋಪಿಯ ಮಾತು ನಂಬಿದ ರೇವಣ್ಣಸಿದ್ದಪ್ಪ ಅವರು ಆಗಸ್ಟ್ 24ರಂದು 27,500 ರೂ. ಆಗಸ್ಟ್ 25ರಂದು 75,999 ಹಾಗೂ ಆಗಸ್ಟ್ 27ರಂದು ಮೂರು ಬಾರಿ ಕ್ರಮವಾಗಿ ₹40,000, 60,000 ಮತ್ತು 40,000 ಸೇರಿದಂತೆ ಒಟ್ಟು 2,43,499 ರೂ. ಹಣವನ್ನು ಗೂಗಲ್ ಪೇ ಮೂಲಕ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಂತರ ಆರೋಪಿಗಳು ಅವರ ಮನೆಯ ವಿಳಾಸಕ್ಕೆ ನಕಲಿ ದಾಖಲೆಗಳನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟವರ್ ಅಳವಡಿಸದಿರುವುದು ಹಾಗೂ ಹಣ ಹಿಂದಿರುಗಿಸದಿರುವುದರಿಂದ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ರೇವಣ್ಣಸಿದ್ದಪ್ಪ ಅವರು ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಈ ಸಂಬಂಧ ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.