ಸತ್ಯಕಾಮ ವಾರ್ತೆ ಯಾದಗಿರಿ:
ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ತಮ್ಮ ನಿತ್ಯ ದಿನಚರಿಗಳಲ್ಲಿ ತೊಡಗಿಸಿಕೊಂಡು, ಧ್ಯಾನ ಹಾಗೂ ವ್ಯಾಯಾಮಗಳಂತಹ ಕ್ರಿಯೆಗಳ ಮೂಲಕ ಏಕಾಗ್ರತೆಯಿಂದ ವೃದ್ಧಿಯಾಗಬೇಕು. ಸರ್ಕಾರದ ವತಿಯಿಂದ ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ವಿಶೇಷ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಜಿಲ್ಲೆಯ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಬೇಕೆಂದು ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಸಲಹೆ ನೀಡಿದರು.
ತಾಲೂಕಿನ ಮುಂಡರಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸಮಾಜದ ಕಲ್ಯಾಣ ಇಲಾಖೆ, ಎಸ್.ಸಿ.ಎಸ್.ಪಿ ಮತ್ತು ಟಿಎಸ್.ಪಿ ಯೋಜನೆಯಡಿಯಲ್ಲಿ ಆಯೋಜಿಸಿದ ವಿದ್ಯಾರ್ಥಿ ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಪರಿಶ್ರಮದ ದಾರಿಯೇ ಹೊರತು ಅಡ್ಡ ದಾರಿಯ ಮಾರ್ಗ ಎಂದಿಗೂ ಸಫಲವಾಗುವುದಿಲ್ಲ. ಸರ್ಕಾರದಿಂದ ಸಿಗುವ ಅನೇಕ ಯೋಜನೆಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಳಸಿಕೊಂಡು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಿಂದ ನಡೆಸಿಕೊಂಡ ಸಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಬೆಳಿಗ್ಗೆ ಬ್ರಾಹ್ಮಿ ಮೂಹುರ್ಥದಲ್ಲಿ ಎದ್ದು ಸೂರ್ಯ ನಮಸ್ಕಾರದ ಮೂಲಕ ದೇಹ ದಂಡಿಸಿ, ಓದಲು ಕೂರಬೇಕು. ಏಕಾಗ್ರತೆಗಾಗಿ ಧ್ಯಾನವನ್ನು ರೂಢಿಸಿಕೊಂಡು ತಮ್ಮ ದಿನಚರಿಗಳನ್ನು ಆರಂಭಿಸುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವೆಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ಚನ್ನಬಸವ ಅವರು ಮಾತನಾಡಿ, ಇಂತಹ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುತ್ತಿದ್ದು, ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಇದರ ಮಹತ್ವ ಅರಿಯಬೇಕೆಂದು ತಿಳಿಸಿದರು.
ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ವಂದನಾ.ಜೆ ಅವರು ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ, ವಸತಿ ಶಾಲಾ ಮಕ್ಕಳನ್ನು ಗಮನದಲಿಟ್ಟುಕೊಂಡ ವಿದ್ಯಾರ್ಥಿ ಚೇತನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿದ್ಯಾರ್ಥಿ ಚೇತನ ಕಾರ್ಯಕ್ರಮ ಮಹತ್ವ ಪೂರ್ಣವಾದದ್ದು, ಯೋಗ ತರಬೇತಿ ಸೇರಿದಂತೆ ದೈಹಿಕ ಚಟುವಟಿಕೆ, ವ್ಯಾಯಮಗಳನ್ನು ಸಹ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವೈದ್ಯರಾದ ಡಾ.ಪ್ರಕಾಶ ಎಚ್.ರಾಜಾಪುರ ಅವರು ಪ್ರಾಸ್ತಾವಿಕ ಮಾತುಗಳಾಡಿದರು. ವಸತಿ ಶಾಲಾ ಮಕ್ಕಳಿಗೆ ದಿನಚರಿಯನ್ನು ವೈದ್ಯೆಧಿಕಾರಿಯಾದ ಡಾ.ಎಂ.ಬಿ.ಪಾಟೀಲ ನೀಡಿದರು. ಸಂಗಮೇಶ ಕೆಂಭಾವಿ ಅವರು ನಿರೂಪಿಸಿದರು.
ವೇದಿಕೆ ಮೇಲೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಲ್ಲಣ್ಣ ಮಾಲೀಪಾಟೀಲ, ಡಾ.ರಮೇಶ ಸಜ್ಜನ್, ರವಿಕುಮಾರ ಪಾಟೀಲ, ಡಾ.ದೀಪಾ ರಾಠೋಡ, ಯೋಗ ತರಬೇತುದಾರ ಶಿವರೆಡ್ಡಿ, ಮಂಜುನಾಥ ಉಪಸ್ಥಿತರಿದ್ದರು.

