Blog

  • ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಮುದ್ದೇಬಿಹಾಳ; ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಹಾಗೂ ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುದ್ದೇಬಿಹಾಳ ಘಟಕ ಬೆಳಗಾವಿ ಚಲೋ ಇಂದು(ಮಂಗಳವಾರ) ಹಮ್ಮಿಕೊಳ್ಳಲಾಗಿದೆ.

    ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60ಮೀ. ದಿಂದ 524.256 ಮೀ ವರೆಗೆ ಹೆಚ್ಚಿಸುವ ಕಾಮಗಾರಿಗೆ ಕೂಡಲೆ ಟೆಂಡರ ಕರೆಯಬೇಕು. ಕೇಂದ್ರ ಸರಕಾರ ಕೂಡಲೇ ಆದೇಶ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿ.ಎಮ್.ಸಿ. ನೀರನ್ನು ಯು.ಕೆ.ಪಿ. 3ನೇ ಹಂತಕ್ಕೆ ಬಳಸಿಕೊಳ್ಳಲು ಅಧಿಸೂಚಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆಮಾಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 2015ರಲ್ಲಿ ಮುಖ್ಯಮಂತ್ರಿಗಳು 1ಲಕ್ಷ ಕೋಟಿ ರೂ. ಅನುದಾನ ನೀಡಲು ಮಾತು ಕೊಟ್ಟಿದ್ದು, 1ಲಕ್ಷಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯದ ಅಡಿಯಲ್ಲಿ ಬರುವ 9 ಏತ ನೀರಾವರಿ ಯೋಜನೆಗಳನ್ನು ಕೂಡಲೇ ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಜಲಾನಯನ ಪ್ರದೇಶದಲ್ಲಿ ಆರ್ಥಿಕ ಬೆಳೆಗಳನ್ನು ಬೆಳೆಯಲು ಸರಕಾರ ಆದೇಶ ಮಾಡಬೇಕು ಎಂದು ರೈತ ಸಂಘದ ಬೇಡಿಕೆಯಲ್ಲಿ ಹೇಳಲಾಗಿದೆ.

    ಕೃಷ್ಣಾ ಮೇಲ್ದಂಡೆ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಕಛೇರಿಯು ಆಲಮಟ್ಟಿಯಲ್ಲಿ ನೆಪ ಮಾತ್ರಕ್ಕೆ ಇದ್ದು, ಕೂಡಲೇ ಬೆಂಗಳೂರಿನಲ್ಲಿರುವ ವ್ಯವಸ್ಥಾಪಕ ನಿರ್ದೆಶಕರ ಕಛೇರಿಯನ್ನು ರದ್ದುಗೊಳಿಸಿ ಆಲಮಟ್ಟಿಯಲ್ಲೇ ಮುಂದುವರೆಸಬೇಕು. ಕಳೆದ ವರ್ಷದ ಮತ್ತು ಈ ವರ್ಷದ ನೀರಾವರಿ ಸಲಹಾ ಸಮೀತಿ ಸಭೆಗಳನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಇದು ರೈತ ವಿರೋಧಿ ನೀತಿ, ಮುಂಬರುವ ಎಲ್ಲ ನೀರಾವರಿ ಸಲಹಾ ಸಮಿತಿ ಸಭೆಗಳನ್ನು ಆಲಮಟ್ಟಿಯಲ್ಲಿ ಜರುಗಿಸಬೇಕು. ಸಭೆಗೆ ಕಡ್ಡಾಯವಾಗಿ 5 ಜನ ರೈತ ಮುಂಖಡರನ್ನು ಪಕ್ಷಾತೀತವಾಗಿ ಆಹ್ವಾನ ನೀಡಬೇಕು.

    ಇನ್ನು ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು 8 ವರ್ಷ ಕಳೆದಿದೆ. ಪಂಪಸೆಟ್ ಪ್ರಾರಂಭ ಸ್ಥಿತಿಯಲ್ಲಿದೆ. ಸುಮಾರು 5 ವರ್ಷದಿಂದ ತಿಂಗಳಿಗೆ 24 ಲಕ್ಷ ರೂ. ಗಳನ್ನು ಕೆ.ಇ.ಬಿ.ಗೆ ಸರಕಾರ ಕನಿಷ್ಠ ಹಣ ತುಂಬುತ್ತಿದೆ. ಆದರೆ 5 ವರ್ಷದಿಂದ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ, ರೈತರ ಹೊಲಗಳಿಗೆ ಸುಮಾರ 5 ವರ್ಷದಿಂದ ನೀರು ಹರಿದಿಲ್ಲ. ಕಾಮಗಾರಿ ವಿಳಂಬ ವಾಗಿದ್ದಕ್ಕೆ ಸಂಬಂದಪಟ್ಟ ಅಧಿಕಾರಿಗಳಮೇಲೆ ಕ್ರಮ ಜರುಗಿಸಬೇಕು, ಹಾಗೂ ಕೂಡಲೆ ರೈತರ ಹೊಲಗಳಿಗೆ ಹೊಲಗಾಲುವೆಗಳೆಗೆ ಶೀಘ್ರ ಟೆಂಡರ ಕರೆದು ನೀರು ಹರಿಸಬೇಕು. ಈ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಈ ಬೆಳಗಾವಿ ಚಲೋದಲ್ಲಿ ಧ್ವನಿ ಮೊಳಗಲಿದೆ ಎಂದು ಮುದ್ದೇಬಿಹಾಳ ಹಸಿರು ಸೇನೆ ರೈತ ಸಂಘ ಹೇಳಿದೆ.

    apvc-iconPost Views: 20
  • ಐಪಿಎಲ್ ನ ಮತ್ತೊಂದು ತಂಡ ಈಗ ಮಾರಾಟಕ್ಕಿದೆ!

    ಐಪಿಎಲ್ ನ ಮತ್ತೊಂದು ತಂಡ ಈಗ ಮಾರಾಟಕ್ಕಿದೆ!

    ಐಪಿಎಲ್ ಅಂಗಳದಲ್ಲಿ ಮತ್ತೊಂದು ದೊಡ್ಡ ಚಲನವಲನದ ಗಾಳಿ ಬೀಳತೊಡಗಿದೆ. ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ರಾಜಸ್ಥಾನ್ ರಾಯಲ್ಸ್ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ತಂಡದ ಒಡೆತನಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಬರಬಹುದಾದ ಸೂಚನೆಗಳು ಸುತ್ತಮುತ್ತ ಹರಡಿವೆ. ಫ್ರಾಂಚೈಸಿಯ ಮುಖ್ಯ ಮಾಲೀಕರಾದ ಮನೋಜ್ ಬದಾಲೆ ತಮ್ಮ ಬಹುಪಾಲು ಷೇರುಗಳನ್ನು ಮಾರಾಟ ಮಾಡುವ ದಿಸೆಯಲ್ಲಿ ಚರ್ಚೆ ಆರಂಭಿಸಿರುವುದು ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ದಾರಿಯಾಗಿದೆ.

    ರಾಜಸ್ಥಾನ್ ರಾಯಲ್ಸ್ ಮೌಲ್ಯ ಈಗ ಬಿಲಿಯನ್ ಡಾಲರ್ ಗಡಿಯನ್ನೇ ತಲುಪಿದೆ ಎನ್ನುವ ಅಂದಾಜು ಕ್ರಿಕೆಟ್‌ ವ್ಯವಹಾರ ಜಗತ್ತಿಗೆ ಮತ್ತಷ್ಟು ಚಟುವಟಿಕೆ ತಂದಿದೆ. ಬದಾಲೆ ಅವರಿಗೆ ಸೇರಿದ ‘ಎಮರ್ಜಿಂಗ್ ಮೀಡಿಯಾ ವೆಂಚರ್ಸ್’ ಈ ತಂಡದಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಉಳಿದ ಪಾಲು ಅಮೆರಿಕ ಮೂಲದ ಹೂಡಿಕೆ ಸಂಸ್ಥೆಗಳು ಮತ್ತು ಮಾಧ್ಯಮ ಗುಂಪುಗಳಿಗೆ ಸೇರಿದೆ. ಹೊಸ ಹೂಡಿಕೆದಾರರು ಯಾರಾಗುತ್ತಾರೆ? ಎಷ್ಟು ಪ್ರಮಾಣದ ಹಂಚಿಕೆ ಮಾರಾಟವಾಗಬಹುದು? ಈ ಪ್ರಶ್ನೆಗಳಿಗೂ ಉತ್ತರ ಇನ್ನೂ ಸಿಕ್ಕಿಲ್ಲ.

    ಈ ಬಾರಿ ವ್ಯವಹಾರವನ್ನು ನಿಭಾಯಿಸಲು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಹೊಂದಿರುವ ‘ದಿ ರೈನ್ ಗ್ರೂಪ್’ ಸಲಹೆಗಾರರಾಗಿ ನೇಮಕಗೊಂಡಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮಾಲೀಕತ್ವ ಬದಲಾದ ಬಳಿಕ, ಐಪಿಎಲ್ ಫ್ರಾಂಚೈಸಿಗಳ ಮೌಲ್ಯ ಮತ್ತು ಬೇಡಿಕೆ ಎರಡೂ ಹೆಚ್ಚಿರುವುದರಿಂದ, ರಾಜಸ್ಥಾನ್ ರಾಯಲ್ಸ್ ಮೇಲೂ ಹೂಡಿಕೆದಾರರ ಕಣ್ಣುಬಿದ್ದಿದೆ. ಖಾಸಗಿ ಈಕ್ವಿಟಿ ಸಂಸ್ಥೆಗಳು, ದೊಡ್ಡ ಉದ್ಯಮಿ ಗುಂಪುಗಳು, ಕ್ರೀಡಾ ಹೂಡಿಕೆದಾರರು ಎಲ್ಲರೂ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.

    ಆದಾಗ್ಯೂ, ಎಲ್ಲರೂ ಈ ಓಟಕ್ಕೆ ಸಿದ್ಧವಾಗಿಲ್ಲ. ಕೆಲವು ಹೆಸರುಗಟ್ಟಿದ ಉದ್ಯಮಿಗಳು ಈಗಾಗಲೇ ತಮ್ಮ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಐಪಿಎಲ್ ನಿಯಮ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಕಂಪನಿ ಒಂದೇ ವೇಳೆ ಎರಡು ತಂಡಗಳ ನೇರ ಒಡೆತನ ಹೊಂದಲು ಸಾಧ್ಯವಿಲ್ಲ. ಹೀಗಾಗಿ ರಾಯಲ್ಸ್ ಖರೀದಿಗೆ ಹೂಡಿಕೆ ಮಾಡಲು ಮುಂದಾಗುವವರು ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಲೇಬೇಕಾಗುತ್ತದೆ.

    ತಂಡದ ಮೈದಾನದ ಬಲವೂ ಈ ಚರ್ಚೆಗೆ ಹೊಸ ಚೈತನ್ಯ ನೀಡಿದೆ. ಕೋಚ್ ಕುಮಾರ್ ಸಂಗಕಾರ ನೇತೃತ್ವದಲ್ಲಿ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಮುಂತಾದ ಪ್ರಮುಖ ಆಟಗಾರರು ತಂಡದ ಮೌಲ್ಯ ಹೆಚ್ಚಿಸುವಲ್ಲಿ ಪಾತ್ರವಹಿಸಿದ್ದಾರೆ. ಬರುವ ಸೀಸನ್‌ಗೆ ಮುನ್ನ ಇಂತಹ ಸುದ್ದಿ ಬಹಿರಂಗವಾಗಿರುವುದರಿಂದ, ಕ್ರೀಡಾಪ್ರೇಮಿಗಳಿಗೆ ತಂಡದ ಭವಿಷ್ಯವೇ ಕುತೂಹಲದ ವಿಷಯವಾಗಿದೆ.

    ಒಟ್ಟಾರೆ ನೋಡಿದರೆ, ರಾಜಸ್ಥಾನ್ ರಾಯಲ್ಸ್ ಮಾರಾಟದ ಚರ್ಚೆ ಈಗ ಐಪಿಎಲ್ ಕ್ಷೇತ್ರದಲ್ಲಿ ಭಾರೀ ಚಲನವಲನ ಸೃಷ್ಟಿಸಿದೆ. ಮೌಲ್ಯ ಎಷ್ಟು ಅಂತಿಮವಾಗುತ್ತದೆ? ನೂತನ ಮಾಲೀಕರು ಯಾರು?ಈ ಪ್ರಶ್ನೆಗಳ ಉತ್ತರ ಮುಂದಿನ ವಾರಗಳಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

    apvc-iconPost Views: 17
  • ಕಲಿಕಾ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಬಲ ತುಂಬುವ ಸಹಾಯಧನ

    ಕಲಿಕಾ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಬಲ ತುಂಬುವ ಸಹಾಯಧನ

    ಕಟ್ಟಡ, ನಿರ್ಮಾಣ ಮತ್ತು ಇತ್ಯಾದಿ ಕಠಿಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ತಮ್ಮ ಮಕ್ಕಳ ಶಿಕ್ಷಣದ ವಿಷಯ ಬಂದಾಗ ಸಾಕಷ್ಟು ಆರ್ಥಿಕ ಒತ್ತಡ ಉಂಟಾಗುವುದು ಸಹಜ. ಈ ಒತ್ತಡವನ್ನು ಕಡಿಮೆ ಮಾಡಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ‘ಕಲಿಕಾ ಭಾಗ್ಯ’ ಹೆಸರಿನ ವಿಶೇಷ ಶಿಕ್ಷಣ ಸಹಾಯಧನವನ್ನು ನೀಡುತ್ತಿದೆ. 2025–26ನೇ ಸಾಲಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ರಾಜ್ಯದ ನೋಂದಾಯಿತ ಕಾರ್ಮಿಕರು ತಮ್ಮ ಮಕ್ಕಳಿಗಾಗಿ ಈ ನೆರವನ್ನು ಪಡೆಯಬಹುದು.

    ಈ ಯೋಜನೆಯ ಮುಖ್ಯ ಉದ್ದೇಶ ಮಕ್ಕಳಿಗೆ ಬಾಲ್ಯದಿಂದಲೇ ಉನ್ನತ ಶಿಕ್ಷಣದವರೆಗೆ ಮಾರ್ಗ ಸುಗಮವಾಗಲು ನೆರವಾಗುವುದು. ನರ್ಸರಿ ತರಗತಿಯಿಂದ ಪೋಸ್ಟ್ಗ್ರ್ಯಾಡ್ಯುಯೇಟ್‌ ಮಟ್ಟದವರೆಗೆ ಕಲಿಯುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು ಸಿಗುತ್ತದೆ. ಕುಟುಂಬದ ಮೇಲೆ ಹೆಚ್ಚುವರಿ ಭಾರ ಬೀಳದಂತೆ ಗರಿಷ್ಠ ಇಬ್ಬರು ಮಕ್ಕಳಿಗೆ ವರ್ಷಕ್ಕೆ 50,000 ರೂ.ವರೆಗೆ ಸಹಾಯಧನ ಪಡೆಯಲು ಅವಕಾಶ ಇದೆ.

    ಈ ಯೋಜನೆಯ ಪ್ರಯೋಜನ ಪಡೆಯಲು ಕೆಲವು ಮೂಲಭೂತ ಅಂಶಗಳನ್ನು ಸರ್ಕಾರ ನಿಗದಿ ಪಡಿಸಿದೆ. ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಾಯಿತರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂ.ವರೆಗೆ ಇದ್ದರೆ ಮಾತ್ರ ಅರ್ಜಿ ಅಂಗೀಕಾರವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಕರ್ನಾಟಕದ ಸರ್ಕಾರ ಮಾನ್ಯತೆ ನೀಡಿರುವ ಶಾಲೆ–ಕಾಲೇಜುಗಳಲ್ಲಿ ನಿಯಮಿತವಾಗಿ ಹಾಜರಾಗಿ ವ್ಯಾಸಂಗ ಮಾಡುತ್ತಿರಬೇಕು. ದೂರಶಿಕ್ಷಣ ಅಥವಾ ಆನ್‌ಲೈನ್‌ ಮೂಲಕ ಕಲಿಯುವವರಿಗೆ ಇಲ್ಲಿನ ನೆರವು ಅನ್ವಯಿಸುವುದಿಲ್ಲ.

    ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸಮರ್ಪಕ ಅಂಕಗಳನ್ನು ಪಡೆದಿರಬೇಕು. ಕೆಲ ವಿಶೇಷ ವರ್ಗಗಳಲ್ಲಿ ಓದುತ್ತಿರುವ ಪ್ರತಿಭಾವಂತ ಮಕ್ಕಳು ಹೆಚ್ಚುವರಿ ಸಹಾಯಧನ ಪಡೆಯುವ ಅವಕಾಶವೂ ಇದೆ.

    ಮಕ್ಕಳ ವಯಸ್ಸು ಮತ್ತು ವಿದ್ಯಾಭ್ಯಾಸದ ಮಟ್ಟಕ್ಕೆ ಅನುಗುಣವಾಗಿ ಸರ್ಕಾರ ನೀಡುವ ಮೊತ್ತವೂ ಬದಲಾಗುತ್ತದೆ. ಪ್ರಾಥಮಿಕ ತರಗತಿಗಳಲ್ಲಿ ಓದುತ್ತಿರುವ ಮಕ್ಕಳಿಗೆ ರೂ.2,000ರಿಂದ ಪ್ರೌಢಶಾಲೆ ಪಿಯುಸಿ ವಿದ್ಯಾರ್ಥಿಗಳಿಗೆ ರೂ.8,000ವರೆಗೆ ಸಿಗುತ್ತದೆ. ಉನ್ನತ ಶಿಕ್ಷಣಕ್ಕೆ ಬಂದಾಗ ಮೊತ್ತಗಳು ಮತ್ತಷ್ಟು ಹೆಚ್ಚುತ್ತವೆ ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್‌, ವೈದ್ಯಕೀಯ, ಪಿಎಚ್‌ಡಿ ಎಲ್ಲಕ್ಕೂ ವಿಭಿನ್ನ ರೀತಿಯಲ್ಲಿ ನೆರವು ನೀಡಲಾಗುತ್ತದೆ. ಕೆಲವು ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಏಕಕಾಲದ ಮೊತ್ತ ಲಭ್ಯವಾಗುತ್ತದೆ; ನಂತರ ಪ್ರತಿ ವರ್ಷ ಅಧ್ಯಯನ ಮುಂದುವರೆದಂತೆ ಮತ್ತಷ್ಟು ಹಣ ಸಿಗುತ್ತದೆ.

    ಪಿಎಚ್‌ಡಿ ಓದುತ್ತಿರುವವರಿಗೆ ಪ್ರಬಂಧ ಸ್ವೀಕಾರದ ಸಂದರ್ಭದಲ್ಲಿ ವಿಶೇಷ ಸಹಾಯಧನವನ್ನೂ ನೀಡಲಾಗುತ್ತದೆ. ಒಟ್ಟಾರೆ, ಯಾವುದೇ ಮಗುವಿನ ಶಿಕ್ಷಣ ಆರ್ಥಿಕ ತೊಂದರೆಯಿಂದ ಸ್ತಂಭಿಸಬಾರದೆಂಬುದು ಈ ಯೋಜನೆಯ ಮೂಲ ಉದ್ದೇಶ.

    ಅರ್ಜಿಯನ್ನು ಸಂಪೂರ್ಣ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸರ್ಕಾರದ ಅಧಿಕೃತ ಪೋರ್ಟಲ್‌ olan karepass.cgg.gov.in ನಲ್ಲಿ ನೋಂದಣಿ ಮಾಡಿ ಲಾಗಿನ್ ಆಗಬೇಕು. ವಿದ್ಯಾರ್ಥಿಯ ಮಾಹಿತಿಗಳು, ಶಾಲೆ/ಕಾಲೇಜಿನ ವಿವರಗಳು ಮತ್ತು ಬ್ಯಾಂಕ್‌ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಿದ ನಂತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಕಾರ್ಮಿಕರ ಲೇಬರ್‌ ಕಾರ್ಡ್‌, ಆಧಾರ್‌, ವಿದ್ಯಾರ್ಥಿಯ SATS ಐಡಿ, ವ್ಯಾಸಂಗ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ವಿವರ — ಇವೆಲ್ಲವೂ ಕಡ್ಡಾಯ.

    ಒಮ್ಮೆ ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಯ ದಾಖಲಾತಿಗಳು ಪರಿಶೀಲನೆಗೆ ಒಳಗಾಗುತ್ತವೆ. ಅರ್ಹರೆಂದು ದೃಢಪಟ್ಟವರಿಗೆ ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತದೆ.

    ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಸಾವಿರಾರು ಕಾರ್ಮಿಕರಿಗೆ ಮಕ್ಕಳ ಶಿಕ್ಷಣವೇ ದೊಡ್ಡ ಚಿಂತೆ. ‘ಕಲಿಕಾ ಭಾಗ್ಯ’ ಯೋಜನೆ ಈ ಚಿಂತೆಯನ್ನು ಕಡಿಮೆ ಮಾಡುವುದಲ್ಲದೆ, ಮಕ್ಕಳ ಭವಿಷ್ಯಕ್ಕೆ ಭದ್ರ ಮೂಲ ಹಾಕುತ್ತಿದೆ. ಸರಿಯಾದ ದಾಖಲೆ ಮತ್ತು ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದರೆ, ರಾಜ್ಯ ಸರ್ಕಾರ ನೀಡುವ ಈ ನೆರವು ಕುಟುಂಬಕ್ಕೆ ದೊಡ್ಡ ಬಲವಾಗಲಿದೆ.

    apvc-iconPost Views: 7
  • ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ಕಾಣುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಕೀಯದ ಕೇಂದ್ರಬಿಂದು ಆಗಿರುವ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬಿಕ್ಕಟ್ಟುಗಳು, ಸರ್ಕಾರಿ ಭರವಸೆಗಳ ಅನುಷ್ಠಾನ, ಹಾಗೂ ಸಿಎಂ ಕುರ್ಚಿ ಸುತ್ತಲಿನ ಹಗ್ಗಜಗ್ಗಾಟ ಎಲ್ಲವೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮನೋವೈಜ್ಞಾನಿಕ ಆಟ ಈಗ ಮತ್ತಷ್ಟು ಹೆಚ್ಚಾಗಿದೆ!

    10 ದಿನಗಳ ಈ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಯ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಬಿಜೆಪಿ–ಜೆಡಿಎಸ್ ದೋಸ್ತಿ ದಾಳಿ ಸರ್ಕಾರದ ರಕ್ಷಣಾ ಕೌಶಲ್ಯಕ್ಕೆ ಪರೀಕ್ಷೆ:

    ವಿಪಕ್ಷ ಬಿಜೆಪಿ–ಜೆಡಿಎಸ್ ಜಂಟಿ ದಾಳಿ ನಡೆಸಲು ತಂತ್ರ ರೂಪಿಸಿವೆ. ಸರ್ಕಾರವನ್ನು ಮೂಲೆಗೆ ತಳ್ಳಲು ಒಳಗಿನ ಅಸಮಾಧಾನ, ಬಣಗಾರಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳನ್ನು ಆಯುಧವಾಗಿ ಬಳಸಿಕೊಳ್ಳಲಿವೆ.

    ಮುಂದುವರಿದ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ತರಲು ಚಿಂತನೆ ನಡೆದರೂ ಕಮಲಪಡೆ ಈಗ ಹಿಂದೆ ಸರಿದಿದೆ.

    ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ. ನಂತರದಿಂದ ಪ್ರತಿಯೊಂದು ವಿಚಾರವೂ ಸರ್ಕಾರಕ್ಕೆ ಸವಾಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

    ಉತ್ತರ ಕರ್ನಾಟಕ ಪ್ರಮುಖ ಅಸ್ತ್ರ:

    ಕಳೆದ ಅಧಿವೇಶನದಲ್ಲಿ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ವಿಪಕ್ಷಗಳು ಕಿಡಿಗೇಡಿಯಾಗಿ ಪ್ರಶ್ನೆ ಎತ್ತಲಿವೆ. ನೀರಾವರಿ, ಬೆಳೆ ಬೆಲೆ ಹಾಗೂ ಮೂಲಭೂತ ಸೌಕರ್ಯಗಳ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

    ಪ್ರತಿಭಟನೆಯ ಬಿಸಿ ಬೆಳಗಾವಿಯ ಬೀದಿಗಳೂ ಕದನಭೂಮಿ:

    ಅಧಿವೇಶನಕ್ಕೆ ಸಮೀಪಿಸುತ್ತಿರುವಾಗಲೇ ವಿವಿಧ ಸಂಘಟನೆಗಳು ಪ್ರತಿಭಟನೆಯ ಸಿದ್ಧತೆಯಲ್ಲಿ ಇವೆ.

    • ಕಬ್ಬು ಬೆಲೆ — ರೈತರ ಆಕ್ರೋಶ
    • ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಲೆ ಕುಸಿತ
    • 2.5 ಲಕ್ಷ ಹುದ್ದೆಗಳ ನೇಮಕಾತಿ ಬೇಡಿಕೆ

    ಒಳ ಮೀಸಲಾತಿ ವಿವಾದ ಪರಿಶಿಷ್ಟ ಸಮುದಾಯಗಳ ಪ್ರತಿಭಟನೆ:

    ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರ ವೇತನ ಪರಿಷ್ಕರಣೆ.

    ಮಹಾರಾಷ್ಟ್ರ ಪರ ಸಂಘಟನೆಗಳ ತಗಾದೆ ಆತಂಕ.

    ಬೆಳಗಾವಿ ಅಧಿವೇಶನವೆಂದರೆ ರಾಜಕೀಯದಷ್ಟೇ ಜನಾಆಸೆಯ ವಿಷಯ! ಈ ಬಾರಿ ಕೂಡ ಆಡಳಿತ–ವಿಪಕ್ಷಗಳ ರಾಜಕೀಯ ಕಾದಾಟದ ನಡುವೆ ಜನರ ಸಮಸ್ಯೆಗಳು ಯಾವ ಮಟ್ಟಿಗೆ ಆಲಿಸಿಕೊಳ್ಳಲಾಗುತ್ತವೆ ಎಂಬುದೇ ದೊಡ್ಡ ಪ್ರಶ್ನೆ

    apvc-iconPost Views: 8
  • ಮಾರ್ಕ್’ ಟ್ರೈಲರ್ ರಿಲೀಸ್ ಆದ ಕೆಲ ಹೊತ್ತಲ್ಲೇ ದಾಖಲೆ

    ಮಾರ್ಕ್’ ಟ್ರೈಲರ್ ರಿಲೀಸ್ ಆದ ಕೆಲ ಹೊತ್ತಲ್ಲೇ ದಾಖಲೆ

    ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ‘ಮಾರ್ಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸ್ಯಾಂಡಲ್‌ವುಡ್‌ ವಾತಾವರಣವೇ ಬದಲಾಗಿದೆ. ಯೂಟ್ಯೂಬ್ ತೆರೆಯುತ್ತಿದ್ದವರಿಗೇ ಮೊದಲಿಗೆ ಕಾಣಿಸಿಕೊಂಡದ್ದು ಕಿಚ್ಚನ ಖಡಕ್ ಲುಕ್. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ದಾಟಿ, ‘ಮಾರ್ಕ್’ ಟ್ರೆಂಡಿಂಗ್ ಪಟ್ಟಿಯ ಮೇಲ್ಭಾಗಕ್ಕೆ ಸರಿಯುವಷ್ಟು ಸದ್ದು ಮಾಡಿದೆ.

    ಟ್ರೈಲರ್ ನೋಡಿದ ಕ್ಷಣದಿಂದಲೇ ಅಭಿಮಾನಿಗಳ ಪ್ರತಿಕ್ರಿಯೆ ಒಂದೇ ರೀತಿ ಇದು ಕಿಚ್ಚನ ಪಕ್ಕಾ ಮಾಸ್ ಲುಕ್. ಪೊಲೀಸ್ ಅಧಿಕಾರಿಯಾಗಿ ನಿಂತುಕೊಂಡಿರುವ ಸುದೀಪ್‌ ಅವರ ನೋಟ, ಸಂಭಾಷಣೆ, ಶೈಲಿ ಎಲ್ಲವೂ ‘ಮ್ಯಾಕ್ಸ್’ನ ಜೋಶ್‌ ಹಿಂದಿರುಗಿದೆ ಅನ್ನೋ ಭಾವನೆ ಕೊಡುತ್ತದೆ. 18 ಮಕ್ಕಳ ಅಪಹರಣ ಪ್ರಕರಣವನ್ನು 18 ಗಂಟೆಗಳೊಳಗೆ ಬಗೆಹರಿಸಬೇಕಾದ ಒತ್ತಡದ ಕಥೆ ಟ್ರೈಲರ್‌ನಷ್ಟರಲ್ಲೇ ತೀವ್ರತೆಯನ್ನು ತೋರಿಸಿದೆ. ಸುದೀಪ್‌ ಅವರ ಮುಖದಲ್ಲಿರುವ ಗಂಭೀರತೆ, ಟ್ರೈಲರ್‌ನ ಬ್ಯಾಕ್ಗ್ರೌಂಡ್ ಮ್ಯೂಸಿಕ್, ಆಕ್ಷನ್ ಸೀನ್‌ಗಳು ಎಲ್ಲವೂ ಒಟ್ಟಿಗೆ ಸಿನಿಮಾ ದಿಕ್ಕೇ ಹೇಳುವಂತೆ ಮಾಡಿವೆ.

    ಕಳೆದ ವರ್ಷ ಇದೇ ಸಮಯದಲ್ಲಿ ‘ಮ್ಯಾಕ್ಸ್’ ಹುಚ್ಚುಹಬ್ಬ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿತ್ತು. ಈಗ ಅದೇ ಜೋಶ್ ಮತ್ತೆ ಕಾಣಿಸಿಕೊಂಡಿದೆ. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ದಾಖಲೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಾಮಾನ್ಯ ಪ್ರೇಕ್ಷಕರೂ ಟ್ರೈಲರ್‌ ಅನ್ನು ಹಂಚಿಕೊಳ್ಳುತ್ತಿರುವುದು ಚಿತ್ರಕ್ಕೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

    ಸುದೀಪ್ ಹಾಕಿರುವ ಹೊಸ ಹಾಡಿನ ಸಣ್ಣ ಸ್ಟೆಪ್ ಟ್ರೈಲರ್‌ನಲ್ಲೇ ಗಮನ ಸೆಳೆದಿದೆ. ‘ಮ್ಯಾಕ್ಸ್’ ಸಮಯದಲ್ಲಿ ಹೇಗೆ ಕಿಚ್ಚನ ಸ್ಟೆಪ್ಸ್ ವೈರಲ್ ಆಗಿದ್ದವೋ, ಇದೇ ರೀತಿ ಈ ಬಾರಿಯೂ ಟ್ರೆಂಡ್ ಆಗೋದ್ರಲ್ಲಿ ಎರಡು ಮಾತಿಲ್ಲ. ಕಿಚ್ಚನ ನ್ಯಾಚುರಲ್ ಸ್ಟೈಲ್, ಕಿಕ್ ಕೊಡುವ ಸ್ಕ್ರೀನ್ ಪ್ರೆಸೆನ್ಸ್ಈ ರೀತಿಯದ್ದನ್ನು ನೋಡುವುದು ಅಭಿಮಾನಿಗಳಿಗೆ ಯಾವಾಗಲೂ ವಿಶೇಷ.

    ‘ಮಾರ್ಕ್’ ಚಿತ್ರದಲ್ಲಿ ವಿಕ್ರಾಂತ್, ನವೀನ್ ಚಂದ್ರ, ರೋಶಿಣಿ ಪ್ರಕಾಶ್, ಯೋಗಿಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೂಡ ಸಂಭ್ರಮದ ನಡುವೆಯೇ ಜರುಗಿದ್ದು, ನಿರ್ದೇಶಕ ಪ್ರೇಮ್‌, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮತ್ತು ಸುದೀಪ್‌ ಅವರ ಪತ್ನಿ ಪ್ರಿಯಾ ಕೂಡ ಉಪಸ್ಥಿತರಿದ್ದರು.

    ಡಿಸೆಂಬರ್ 25ರಂದು ಕ್ರಿಸ್‌ಮಸ್ ದಿನ ‘ಮಾರ್ಕ್’ ಬಿಡುಗಡೆಯಾಗಲಿದೆ. ಟ್ರೈಲರ್‌ನಷ್ಟರಲ್ಲೇ ಸಿನಿಮಾ ಕೊಡುವ ಜೋಷ್ ಸ್ಪಷ್ಟವಾಗಿದೆ. ಬಿಡುಗಡೆಯ ದಿನವು ಅಭಿಮಾನಿಗಳಿಗೆ ಹಬ್ಬದಂತೆಯೇ ಇರಲಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಟ್ರೈಲರ್ ನೀಡಿರುವ ಸ್ಪೀಡ್ ನೋಡಿದರೆ ‘ಮಾರ್ಕ್’ ಬಾಕ್ಸ್ ಆಫೀಸ್‌ನಲ್ಲಿ ಧೂಳು ಎಬ್ಬಿಸೋದು ಅನಿವಾರ್ಯ ಎನ್ನುವ ಮಾತು ಈಗಲೇ ಕೇಳಿ ಬರುತ್ತಿದೆ.

    apvc-iconPost Views: 4
  • ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದ ಸುತ್ತ ಭದ್ರತಾ ವಲಯ ಗಟ್ಟಿ

    ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದ ಸುತ್ತ ಭದ್ರತಾ ವಲಯ ಗಟ್ಟಿ

    ಕರ್ನಾಟಕ ರಾಜಕೀಯದ ಅರಮನೆ ಎಂದೇ ಕರೆಯಲ್ಪಡುವ ಬೆಳಗಾವಿಯ ಸುವರ್ಣಸೌಧ ಮತ್ತೊಮ್ಮೆ ರಾಜ್ಯ ರಾಜಕೀಯದ ಪ್ರಮುಖ ಚಟುವಟಿಕೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ.

    ಡಿಸೆಂಬರ್‌ 8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಎದುರಿಸಬೇಕಾದ ಪ್ರಶ್ನೆಗಳು ಗಂಭೀರವಾಗಿವೆ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ, ಉತ್ತರ ಕರ್ನಾಟಕದ ಬೇಡಿಕೆಗಳು, ಗಡಿ ವಿವಾದ, ರಾಜ್ಯದ ಹಣಕಾಸು ಪರಿಸ್ಥಿತಿ, ಹಾಗೂ ಜನಮುಖಿ ಯೋಜನೆಗಳ ಅನುಷ್ಟಾನ. ಇಂತಹ ಮಹತ್ವದ ಅಧಿವೇಶನದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

    ಸುವರ್ಣಸೌಧ ಸುತ್ತ ಹೈಅಲರ್ಟ್ — 6,000 ಪೊಲೀಸ್ ಪಡೆ ನಿಯೋಜನೆ:

    ಕೆಲವು ದಿನಗಳ ಹಿಂದೆ ದೆಹಲಿ ಕೆಂಪುಕೋಟೆಯ ಬಳಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಸುರಕ್ಷತಾ ಸಂಸ್ಥೆಗಳು ಬೆಳಗಾವಿಯಲ್ಲಿ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಿವೆ. ಇದರ ಫಲವಾಗಿ, ಸುವರ್ಣಸೌಧ ಸುತ್ತಮುತ್ತ ಮತ್ತು ಬೆಳಗಾವಿ ಮಹಾನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರ ನೇತೃತ್ವದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು:

    • 6,000 ಪೊಲೀಸರ ಹೆಚ್ಚುವರಿ ನಿಯೋಜನೆ
    • 6 ಎಸ್‌ಪಿ ಹುದ್ದೆಯ ಅಧಿಕಾರಿಗಳು
    • 146 ಹಿರಿಯ ಪೊಲೀಸ್ ಅಧಿಕಾರಿಗಳು
    • 3,820 ಪೊಲೀಸ್ ಸಿಬ್ಬಂದಿ
    • 500 ಹೋಂ ಗಾರ್ಡ್‌ಗಳು
    • 8 ಕ್ಷಿಪ್ರ ಕಾರ್ಯಪಡೆ ತಂಡಗಳು
    • 10 ಡಿಎಆರ್ ತುಕಡಿಗಳು
    • 35 ಕೆಎಸ್‌ಆರ್‌ಪಿ ತುಕಡಿಗಳು
    • 1 ಬಾಂಬ್‌ ನಿಷ್ಕ್ರಿಯ ಪಡ (ಬಿಡಿಡಿಎಸ್)
    • 1 ಗರುಡಾ ಫೋರ್ಸ್
    • 16 ವಿಶೇಷ ತಪಾಸಣೆ ತಂಡಗಳು

    ಪೊಲೀಸ್ ಸರ್ಪಗಾವಲು ವ್ಯವಸ್ಥೆ ಜಾರಿಗೊಂಡಿದ್ದು, ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರತಿಭಟನೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ.

    ಅತಿಥಿಗಳ ವಸತಿ ಮತ್ತು ನಿರ್ವಹಣೆ:

    ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲಾ ಅಧಿಕಾರಿಗಳ ವಸತಿ ವ್ಯವಸ್ಥೆ ಪೂರ್ಣಗೊಂಡಿದೆ. ಜಿಲ್ಲಾಡಳಿತ ಈಗಾಗಲೇ 3,000 ಕೊಠಡಿಗಳನ್ನು ಬುಕ್ ಮಾಡಿಸಿದ್ದು, ಸಿಎಂ ಮತ್ತು ಡಿಸಿಎಂಗೆ ವಿಶೇಷ ಅತಿಥಿ ಗೃಹದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ಸಿಬ್ಬಂದಿಗೆ ಆಹಾರ, ಸಾರಿಗೆ, ಹಾಗೂ ಸಂವಹನ ವ್ಯವಸ್ಥೆಗಳನ್ನೂ ಸಜ್ಜುಗೊಳಿಸಲಾಗಿದೆ.

    ಅಧಿವೇಶನದ ಮಹತ್ವ:

    ಬೆಳಗಾವಿ ಅಧಿವೇಶನವು ವಿಶೇಷ ಪ್ರಾಮುಖ್ಯತೆಯದ್ದಾಗಿದೆ ಏಕೆಂದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳು ಇಲ್ಲಿ ಹೆಚ್ಚಿನ ಚರ್ಚೆಗೆ ಬರುತ್ತವೆ. ಗಡಿ ಸಮಸ್ಯೆ ಕುರಿತು ರಾಜಕೀಯ ತಾಪಮಾನ ಏರಲಿದೆ. ಜನರ ಸಮಸ್ಯೆಗಳ ಕುರಿತು ವಿರೋಧಪಕ್ಷಗಳು ಕಿಡಿಕಾರಲು ಸಜ್ಜಾಗಿವೆ. ಜನರ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವ ಚರ್ಚೆಗಳು, ತೀರ್ಮಾನಗಳು ಇಲ್ಲಿಂದ ಹೊರಬರಬೇಕು ಎಂಬ ನಿರೀಕ್ಷೆ ಹೆಚ್ಚಿದೆ.

    apvc-iconPost Views: 28
  • ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾ ಗದ್ದಲಗೊಂಡಿದೆ. ಆದರೆ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ಒಂದೇ ‘ಬಿಗ್ ಬಾಸ್ ಕನ್ನಡ 12’ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ತಕ್ಷಣದ ಹಾಸ್ಯಭರಿತ ಎಂಟ್ರಿ.

    ಟ್ರೇಲರ್‌ನಲ್ಲೊಂದು ಸಣ್ಣ ಸನ್ನಿವೇಶ. ಪೊಲೀಸ್‌ ಮುಂದೆ ಕುಳಿತಿರುವ ಗಿಲ್ಲಿ ನಟ, ತಮ್ಮದೇ ಶೈಲಿಯಲ್ಲಿ “ಎಕ್ಸ್‌ಕ್ಯೂಸ್ ಮಿ ಪಿಸಿ… ಸ್ವಲ್ಪ ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ!” ಎನ್ನುವ ಡೈಲಾಗ್ ಹೇಳುತ್ತಾರೇನು, ಕ್ಷಣಾರ್ಧದಲ್ಲೇ ಆ ದೃಶ್ಯಕ್ಕೇ ಬಣ್ಣ ಬದಲಾಗುತ್ತದೆ. ಅವರ ಡೆಲಿವರಿ, ಟೈಮಿಂಗ್ ಎರಡೂ ಸೇರಿ ಟ್ರೇಲರ್‌ನಲ್ಲಿರುವ ಗಂಭೀರತೆಯಲ್ಲಿ ಕ್ಷಣಿಕ ನಗುವಿನ ಗಾಳಿ ಹರಿಸುತ್ತವೆ.

    ಬಿಗ್ ಬಾಸ್’ ಮನೆಯಲ್ಲಿ ಈಗಾಗಲೇ ಗಿಲ್ಲಿ ನಟ ಹಾಸ್ಯದಿಂದ ಜನರ ಮನ ಗೆದ್ದಿದ್ದಾರೆ. ಡಬಲ್ ಮೀನಿಂಗ್ ಬೇಡ, ಅಸಭ್ಯ ಪದ ಬೇಡ… ಮನೆಯಲ್ಲೇ ನಡೆಯುವ ಚಿಕ್ಕ ಘಟನೆಗಳಿಗೆ ಸನ್ನಿವೇಶ, ಚಿತ್ರ ರೆಫರೆನ್ಸ್‌ ಜೋಡಿಸಿ, ತಕ್ಷಣ ಕಾಮಿಡಿ ಸಿಡಿಸುವುದು ಅವರ ಸ್ಟೈಲ್. ಅದೇ ಶೈಲಿ ಟ್ರೇಲರ್‌ನಲ್ಲೂ ಕಂಡುಬಂದಿದ್ದು, ವೀಕ್ಷಕರಿಗೆ “ಇವರ ಪಾತ್ರ ಸಿನಿಮಾದಲ್ಲೂ ಮುಖ್ಯವೇನೋ” ಎಂಬ ಅಂದಾಜು ಮೂಡಿಸಿದೆ.

    ಈಗಾಗಲೇ ಶೋ ಮೂಲಕ ಜನರಿಗೆ ಕನೆಕ್ಟ್ ಆಗಿರುವ ಅವರು, ದೊಡ್ಡ ಪರದೆ ಮೇಲೂ ತಮ್ಮದೇ ರೀತಿಯ ಗುರುತು ಮೂಡಿಸಿಕೊಳ್ಳಬಹುದು ಅನ್ನೋ ಆಸೆ ಅಭಿಮಾನಿಗಳಲ್ಲಿದೆ. ‘ಮ್ಯಾಕ್ಸ್ ಮಂಜು’ ಹೇಗೆ ಒಂದು ಚಿತ್ರದ ಮೂಲಕ ಹೊಸ ಇಮೇಜ್ ಪಡೆದುಕೊಂಡರೋ, ಗಿಲ್ಲಿ ನಟನಿಗೂ ‘ದಿ ಡೆವಿಲ್’ ಅದೇ ಅವಕಾಶ ಕೊಡುವ ಸಾಧ್ಯತೆ ದೊಡ್ಡದು.

    ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಟ್ರೇಲರ್‌ನಲ್ಲಿ ಕೇವಲ ಕೆಲವು ಸೆಕೆಂಡ್‌ನಲ್ಲಿಲೇ ಸದ್ದು ಮಾಡಿದ ಗಿಲ್ಲಿ ನಟ, ಚಿತ್ರ ಬಂದ ಮೇಲೆ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ದರ್ಶನ್‌ ಅಭಿನಯದ ಭಾರೀ ಚಿತ್ರದಲ್ಲಿ ಅವರು ಯಾವ ರೀತಿಯಲ್ಲಿ ಮೆರುಗು ತರುತ್ತಾರೆ ಅನ್ನೋದನ್ನು ಈಗ ಎಲ್ಲರೂ ಕಾತರದಿಂದ ಕಾದಿದ್ದಾರೆ.

    apvc-iconPost Views: 11
  • ಆರನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ

    ಆರನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ

    ಹಾಸನದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಪ್ರಮುಖ ಘೋಷಣೆಯನ್ನು ಮಾಡಿತು. ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಗ್ಯಾರಂಟಿಗಳ ಸರಣಿಗೆ ಇದೀಗ ಆರನೇ ಗ್ಯಾರಂಟಿಯೂ ಸೇರ್ಪಡೆಗೊಂಡಿದೆ. ಈ ಬಾರಿ ಸರ್ಕಾರ ನೇರವಾಗಿ ಭೂಮಿ ಹಾಗೂ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಕಂಡುಕೊಂಡು, ಅದಕ್ಕೆ ‘ಭೂಮಿ ಗ್ಯಾರಂಟಿ’ ಎಂದು ಹೆಸರು ನೀಡಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಕೆಲಸದ ಧೋರಣೆಯನ್ನು ಒಂದೇ ವಾಕ್ಯದಲ್ಲಿ ವಿವರಿಸುವಂತೆ “ಮಾತು ಹೆಚ್ಚು ಮಾಡೋದು ನಮ್ಮ ಶೈಲಿ ಅಲ್ಲ, ಕೆಲಸವೇ ನಮ್ಮ ರಾಜಕೀಯ” ಎಂದು ಸ್ಪಷ್ಟಪಡಿಸಿದರು. ರಾಜ್ಯಾದ್ಯಂತ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೋಟ್ಯಂತರ ರೂಪಾಯಿ ಮೌಲ್ಯದ ಹೊಣೆಗಾರಿಕೆಯನ್ನು ಒಳಗೊಂಡಿದ್ದರೂ, ಅವುಗಳ ಪರಿಣಾಮ ಜನರ ಜೀವನದಲ್ಲಿ ನೇರವಾಗಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು.

    ಈ ಹೊಸ ಭೂಮಿ ಗ್ಯಾರಂಟಿಯ ಮೂಲಕ, ವರ್ಷಗಳಿಂದ ಆಸ್ತಿ ದಾಖಲೆಗಳು ಸರಿಯಾಗದ ಕಾರಣ ಒದ್ದಾಡುತ್ತಿದ್ದ ಸಾವಿರಾರು ರೈತರು ಮತ್ತು ಮನೆಮಾಲೀಕರಿಗೆ ಶಾಶ್ವತ ಪರಿಹಾರ ಸಿಗಲಿದೆ. ಹಿಂದೆ ಒಂದು ಪೋಡಿ ಅಥವಾ ದರ್ಖಾಸ್ತು ದಾಖಲೆ ಪಡೆಯುವುದೇ ದೊಡ್ಡ ಕೆಲಸವಾಗಿತ್ತು. ಕಚೇರಿಗಳಲ್ಲಿ ಸುತ್ತಾಡುವುದು, ಮಧ್ಯವರ್ತಿಗಳ ಒತ್ತಡ, ಅನಗತ್ಯ ವೆಚ್ಚ ಇವೆಲ್ಲ ಸಾಮಾನ್ಯ. ಈಗ ಸರ್ಕಾರ ಈ ವ್ಯವಸ್ಥೆಯನ್ನು ಸರಳಗೊಳಿಸಿರುವುದಾಗಿ ಉಪ ಮುಖ್ಯಮಂತ್ರಿ ತಿಳಿಸಿದರು. ಅರ್ಜಿ ಹಾಕಿದವರ ಹೆಸರಿನಲ್ಲೇ ದಾಖಲೆಗಳನ್ನು ತಕ್ಷಣ ನೀಡುವ ವ್ಯವಸ್ಥೆ ಹಾಸನ ಸೇರಿದಂತೆ ಹಲವೆಡೆ ಈಗಾಗಲೇ ಪ್ರಾರಂಭವಾಗಿದೆ.

    ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೆಚ್ಚುಗೆ ಪಡೆಯಿತು. ಅವರ ನೇತೃತ್ವದಲ್ಲಿ ಸಾವಿರಾರು ಜನರಿಗೆ ಆಸ್ತಿ ದಾಖಲೆಗಳನ್ನು ಹಸ್ತಾಂತರಿಸಿರುವುದು ಸರ್ಕಾರ ಹೊಸ ಕ್ರಮದೊಂದಿಗೆ ಜನರಲ್ಲಿ ವಿಶ್ವಾಸ ಮೂಡಿಸಿದೆ. ಹಾಸನದ ಅಭಿವೃದ್ಧಿಗೆ ಸರ್ಕಾರ ಚಿತ್ತಸಿದ್ಧವಾಗಿದ್ದು, ಹಲವು ಇಲಾಖೆಗಳಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ ಎಂಬುದೂ ಈ ಸಮಾರಂಭದ ಸಜೀವ ಚಿತ್ರಣವಾಗಿತ್ತು.

    ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯದಲ್ಲಿ ಟೀಕೆ ಪ್ರಶಂಸೆ ಸಾಮಾನ್ಯ. ಆದರೆ ಈ ಬಾರಿ ಉಪ ಮುಖ್ಯಮಂತ್ರಿ ಅದಕ್ಕೆ ವಿಭಿನ್ನ ಉತ್ತರ ನೀಡಿದರು. “ಜನರು ಕಣ್ಣಾರೆ ಕಾಣುವ ಕೆಲಸವೇ ನಂಬಿಕೆಗೆ ಹುದ್ದೆ. ಕೇಳಿದ ಮಾತಿಗೆ ಮೌಲ್ಯ ಕೊಡುವ ಕಾಲ ಹೋಗಿದೆ” ಎಂಬ ಸಂದೇಶವನ್ನು ಅವರು ಹಾಸ್ಯಮಿಶ್ರಿತ ಕಥಾ ಉದಾಹರಣೆಯಿಂದ ಹಂಚಿಕೊಂಡರು. ಸರ್ಕಾರದ ಯೋಜನೆಗಳು ಜನರ ಕೈಗೆ ತಲುಪುತ್ತಿರುವುದು ಮುಖ್ಯ.

    ಕಡೆಯಾಗಿ, ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣಾ ಭರವಸೆಯಾಗಿ ನೋಡದೆ, ಜನರ ಬದುಕನ್ನು ಬದಲಾಯಿಸುವ ಸಾಧನಗಳಾಗಿ ಮುಂದುವರಿಸುತ್ತಿದೆ ಎಂಬ ನಿಲುವನ್ನು ಡಿಸಿಎಂ ಪುನರುಚ್ಚರಿಸಿದರು. “ಜನರು ನಂಬಿದ ದಾರಿಗೆ ನಾವು ಸತ್ಯನಿಷ್ಠೆಯಿಂದ ಸಾಗುತ್ತಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ತೋರಿಸುವ ಕನ್ನಡಕ” ಎಂದು ಅವರು ವೇದಿಕೆಯಿಂದ ಸಂದೇಶ ನೀಡಿದರು.

    apvc-iconPost Views: 17
  • ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಕರ್ನಾಟಕ ರಾಜಕೀಯದಲ್ಲಿ ಸಚಿವ ಸ್ಥಾನ ಹಂಚಿಕೆ, ನಾಯಕತ್ವದ ಅಸಮಾಧಾನ, ಮತ್ತು ಭವಿಷ್ಯದ ರಾಜಕೀಯ ಕುರಿತು ಚರ್ಚೆಗಳು ಮರುಕಳಿಸುತ್ತಿರುವ ಸಮಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಮ್ಮನ್ನು ಒಳಪಡಿಸುವ ವಿಚಾರದ ಬಗ್ಗೆ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗ ಶಾಸಕರು ಪುನಃ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿರುವ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮಂತ್ರಿಯಾಗಿರಲು ಇಷ್ಟಪಡುವುದಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ನೇರವಾಗಿ ತಿಳಿಸಿದ್ದಾರೆ.

    ಅಲ್ಲದೆ, ರಾಜಣ್ಣ ಅವರು ಈ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿದ್ದು, ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ದಾರಿಗೆ ಸಂಬಂಧಿಸಿದಂತೆ ಪ್ರಶ್ನೆ ಎತ್ತಿ ಅವರೇನು ಸಿಎಂ ಆಗಿಯೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂದು ತಿರುಗೇಟು ನೀಡಿದರು.

    ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಮತ್ತೇ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸುತ್ತಿರುವ ಎಲ್ಲ ಬೆಂಬಲಿಗರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜಣ್ಣ ಅವರ ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಉಂಟಾಗುತ್ತಿರುವ ಅಸಮಾಧಾನದ ಧ್ವನಿಯನ್ನು ಮತ್ತಷ್ಟು ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪಕ್ಷದ ಹಿರಿಯ ನಾಯಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದರ ಕುರಿತ ಕುತೂಹಲ ಹೆಚ್ಚಿಸಿದೆ.

    apvc-iconPost Views: 3
  • ಇಂಡಿಗೋ ವಿಮಾನ ಸಮಸ್ಯೆ ರೈಲ್ವೆಯಿಂದ ಹೆಚ್ಚುವರಿ ಕೋಚ್‌ಗಳ ವ್ಯವಸ್ಥೆ

    ಇಂಡಿಗೋ ವಿಮಾನ ಸಮಸ್ಯೆ ರೈಲ್ವೆಯಿಂದ ಹೆಚ್ಚುವರಿ ಕೋಚ್‌ಗಳ ವ್ಯವಸ್ಥೆ

    ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಏರ್ಪಟ್ಟ ಗೊಂದಲವು ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಶೇಷವಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಯಲ್ಲಿ ಪೈಲಟ್‌ಗಳ ಕೊರತೆ ಉಲ್ಬಣಗೊಂಡಿದ್ದರಿಂದ ನೂರಾರು ವಿಮಾನಗಳು ರದ್ದುಗೊಂಡಿದ್ದು, ಪ್ರಯಾಣದ ಯೋಜನೆ ಮಾಡಿಕೊಂಡಿದ್ದ ಅನೇಕ ಜನರು ತಲೆಬಿಸಿಗೆ ಒಳಗಾಗಿದ್ದಾರೆ. ಹಬ್ಬ-ಜಾತ್ರೆ, ಪ್ರವಾಸ, ಉದ್ಯೋಗ ಸಂಬಂಧಿತ ಪ್ರಯಾಣಗಳ ಗರಿಷ್ಠ ಸಮಯದಲ್ಲಿ ಬಂದಿರುವ ಈ ತೊಂದರೆ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ, ಪ್ರಯಾಣಿಕರ ಅನುಕೂಲವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿರುವ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ವಿಮಾನ ರದ್ದುಗಳಿಂದ ಬಾಧಿತರಾಗಿರುವವರಿಗೆ ತಕ್ಷಣದ ಪರ್ಯಾಯ ಪ್ರಯಾಣ ಅವಕಾಶ ಕಲ್ಪಿಸಲು ಹಲವಾರು ಪ್ರೀಮಿಯಂ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಿ ಪ್ರಯಾಣ ವ್ಯವಸ್ಥೆಯನ್ನು ಸುಧಾರಿಸಿದೆ.

    ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ, ಹೆಚ್ಚಿನ ಗರಿಷ್ಠ ಬೇಡಿಕೆ ಎದುರಿಸುತ್ತಿರುವ ದೇಶದ ಪ್ರಮುಖ ನಗರಗಳಿಂದ ಪ್ರಯಾಣಿಸುವ ಒಟ್ಟು 37 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಕೋಚ್‌ಗಳು ಮತ್ತು ಹೆಚ್ಚುವರಿ ಟ್ರಿಪ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ ಸ್ಲೀಪರ್, ಚೇರ್ ಕಾರ್, ಸೆಕೆಂಡ್ ಎಸಿ, ಮತ್ತು ಥರ್ಡ್ ಎಸಿ ಸೇರಿದಂತೆ ವಿವಿಧ ಶ್ರೇಣಿಗಳ 116 ಹೆಚ್ಚುವರಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸುಲಭವಾಗಿ ಕಾಯ್ದಿರಿಸಿದ ಟಿಕೆಟ್‌ ಸಿಗುವಂತಾಗಿದೆ.

    ಬೆಂಗಳೂರು ಮೂಲದ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳು:

    ಬೆಂಗಳೂರು ನಗರದಿಂದ ದೇಶದ ವಿವಿಧ ಭಾಗಗಳಿಗೆ ಸಂಚರಿಸುವ ಕೆಲವು ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಸೇರಿಸಲಾಗಿದೆ.

    • ಬೆಂಗಳೂರು – ಅಗರ್ತಲಾ ಹಂಸಫರ್ ಎಕ್ಸ್‌ಪ್ರೆಸ್
    • ಬೆಂಗಳೂರು – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್
    • ಬೆಂಗಳೂರು – ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್
    • ಬೆಂಗಳೂರು – ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
    • ಬೆಂಗಳೂರು – ಮುಂಬೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
    • ಬೆಂಗಳೂರು – ಚೆನ್ನೈ ಬೀಚ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್

    ಇಂಡಿಗೋದ ಸಂಕಷ್ಟಕ್ಕೆ ಕಾರಣವೇನು?:

    ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ. 60 ಕ್ಕಿಂತ ಹೆಚ್ಚು ಪಾಲು ಹೊಂದಿರುವ ಇಂಡಿಗೋ, ಪೈಲಟ್‌ಗಳ ತೀವ್ರ ಕೊರತೆಯಿಂದಾಗಿ ಕಾರ್ಯಾಚರಣೆಯಲ್ಲಿ ಅಡಚಣೆ ಅನುಭವಿಸುತ್ತಿದೆ. ಇದರಿಂದ ನಿರಂತರವಾಗಿ ವಿಮಾನಗಳು ರದ್ದುಗೊಳ್ಳುತ್ತಿದ್ದು, ಪ್ರಯಾಣಿಕರ ಬೇಸರ ಹೆಚ್ಚುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಬದಲಿ ವ್ಯವಸ್ಥೆಗಾಗಿ ಜನರು ಹಾತೊರೆಯುತ್ತಿದ್ದಾರೆ.

    ಪ್ರಯಾಣಿಕರ ಕಷ್ಟವನ್ನು ಮನಗಂಡ ಭಾರತೀಯ ರೈಲ್ವೆ, ತ್ವರಿತ ನೆರವಿನೊಂದಿಗೆ ಸುಧಾರಿತ ಮತ್ತು ಸುರಕ್ಷಿತ ಪ್ರಯಾಣ ಮಾರ್ಗವನ್ನು ಒದಗಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ದೊಡ್ಡ ಪರಿಹಾರವಾಗಿದೆ. ಇನ್ನೊಂದು ಕಡೆ, ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಶೀಘ್ರ ಸುಧಾರಿಸುವ ನಿರೀಕ್ಷೆಯಿದೆ.

    apvc-iconPost Views: 5