Blog

  • ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಚಿತ್ರವೆಂದರೆ ‘ಕಾಂತಾರ ಚಾಪ್ಟರ್ 1’. ಈ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಶೋಗಳು ನಡೆಯುತ್ತಿವೆ. ಕಥಾ ಹಂದರ, ತಾಂತ್ರಿಕ ಮೆರುಗು ಹಾಗೂ ಸಂಸ್ಕೃತಿಯ ನೈಜ ಚಿತ್ರಣದಿಂದ ಈ ಚಿತ್ರವು ದೇಶಾದ್ಯಂತ ಸದ್ದು ಮಾಡುತ್ತಿದೆ. ಮೊದಲ ಭಾಗದಂತೆಯೇ, ಈ ಚಾಪ್ಟರ್ ಕೂಡ ಭಾವನಾತ್ಮಕ ಕತೆಯ ಜೊತೆಗೆ ಸಂಸ್ಕೃತಿ ಹಾಗೂ ಭಕ್ತಿಯ ಅಂಶಗಳನ್ನು ಒಟ್ಟುಗೂಡಿಸಿರುವುದರಿಂದ ಪ್ರೇಕ್ಷಕರ ಮನ ಗೆದ್ದಿದೆ.

    ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇವಿ ಆಶೀರ್ವಾದ ಪಡೆಯಲು ಧಾರ್ಮಿಕ ಯಾತ್ರೆಗೆ ತೆರಳಿದ್ದಾರೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಅವರು ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ತಮ್ಮ ಹರ್ಷವನ್ನು ಹಂಚಿಕೊಂಡ ಬಗೆ ಹೀಗಿದೆ, ಎಲ್ಲವೂ ತುಂಬಾ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ಪ್ರೇಕ್ಷಕರು ನಮ್ಮ ಸಿನಿಮಾಗೆ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು, ಅದೇ ರೀತಿಯಲ್ಲಿ ಈ ಬಾರಿಯೂ ಪ್ರೇಕ್ಷಕರು ಚಾಪ್ಟರ್ 1 ಅನ್ನೂ ಕೂಡ ಹೃದಯಪೂರ್ವಕವಾಗಿ ಸ್ವೀಕರಿಸಿರುವುದು ನನಗೆ ಅಪಾರ ಸಂತೋಷವನ್ನು ನೀಡಿದೆ.

    ಇನ್ನು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಿಷಬ್ ಶೆಟ್ಟಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಅವರು ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

    ಕಾಂತಾರ ಚಾಪ್ಟರ್ 1’ ಯಶಸ್ಸು ಕೇವಲ ಒಂದು ಸಿನಿಮಾ ವಿಜಯವಲ್ಲ, ಇದು ಕನ್ನಡ ಸಂಸ್ಕೃತಿ, ಭಕ್ತಿ ಮತ್ತು ಹಳ್ಳಿ ಜೀವನದ ಆಳವಾದ ಕಥೆಯೊಂದರ ವಿಜಯವಾಗಿದೆ.

    apvc-iconPost Views: 11
  • ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಭಾರತದ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ವೇದಿಕೆಯ ಮೇಲೆ ತಮ್ಮ ಗಾಯನದಿಂದ ಜನಮನ ಸೆಳೆಯುವ ವಿಶಿಷ್ಟ ಶೈಲಿಯಿಂದ ಖ್ಯಾತಿ ಗಳಿಸಿರುವ ರಘು, ಇದೀಗ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಈ ಮದುವೆ ಕೇವಲ ಇಬ್ಬರು ಕಲಾವಿದರ ವೈಯಕ್ತಿಕ ಬಂಧನವಲ್ಲ, ಸಂಗೀತ ಲೋಕದಲ್ಲಿ ಮೂಡಿದ ಅಪರೂಪದ ಬಾಂಧವ್ಯಕ್ಕೂ ಸಾಕ್ಷಿಯಾಗಲಿದೆ. ಇಬ್ಬರೂ ಕೂಡ ತಮ್ಮದೇ ಆದ ಗುರುತಿನಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದು, ಅವರ ಸಂಗೀತಯಾತ್ರೆಯೇ ಈ ಪ್ರೀತಿಯ ಸೇತುವೆಯಾಗಿದೆ ಎನ್ನಬಹುದು.

    ಎರಡನೇ ವಿವಾಹ, ಹೊಸ ಬಾಳಿನ ಹೊಸ ಪುಟ: ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಅವರೊಂದಿಗೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರ ವಿವಾಹ ಮುರಿದುಬಿದ್ದಿತ್ತು. ಆ ಬಳಿಕ, ತಮ್ಮ ಸಂಗೀತಯಾತ್ರೆಯ ಮಧ್ಯೆ ವಾರಿಜಶ್ರೀ ಅವರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದರು ರಘು ದೀಕ್ಷಿತ್.

    ವಾರಿಜಶ್ರೀ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯತೆ ಅವರು, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವನ್ನು ವಿಶಿಷ್ಟವಾಗಿ ಸಂಯೋಜಿಸುವ ಶೈಲಿಗೆ ಖ್ಯಾತರಾಗಿದ್ದಾರೆ. ರಘುದೀಕ್ಷಿತ್ ಮತ್ತು ವಾರಿಜಶ್ರೀ ಹಲವಾರು ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ ಮತ್ತು ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು.

    ಸಂಗೀತದಿಂದ ಪ್ರೀತಿ, ಪ್ರೀತಿಯಿಂದ ಜೀವನ: ಸಾಕು ಇನ್ನು ಸಾಕು ಆಲ್ಬಮ್‌ನಲ್ಲಿ ಇವರ ಸಂಗೀತ ಸಹಯೋಗವೇ ಇವರ ಪ್ರೀತಿಗೆ ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತಿದೆ. COVID ಕಾಲಘಟ್ಟದಲ್ಲಿ ಇವರಿಬ್ಬರು ಹಾಡಿದ ಕೆಲವು ಹಾಡುಗಳು ಅಪಾರ ಜನಪ್ರಿಯತೆ ಪಡೆದಿದ್ದವು. ಅದೇ ಸಮಯದಲ್ಲಿ ಇವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

    ಈ ತಿಂಗಳ ಕೊನೆಯಲ್ಲಿ ಮದುವೆ: ಇವರ ವಿವಾಹ ಈ ತಿಂಗಳ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮದುವೆ ಸಂಗೀತ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಮತ್ತು ಸಂಗೀತಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

    ಹೊಸ ಜೀವನಕ್ಕೆ ಸಂಗೀತಮಯ ಶುಭಾರಂಭ: ರಘು ದೀಕ್ಷಿತ್ ಅವರ ಜೀವನದಲ್ಲಿ ಹೊಸ ವಸಂತ ಬಂದಿದೆ ಎನ್ನಬಹುದು. ಸಂಗೀತದಲ್ಲಿ ಒಂದಾಗಿದ್ದ ಈ ಇಬ್ಬರು ಕಲಾವಿದರು ಈಗ ಜೀವನದಲ್ಲೂ ಒಂದಾಗಲು ಸಿದ್ಧರಾಗಿದ್ದಾರೆ. ಇವರ ದಾಂಪತ್ಯವು ಸಂಗೀತ ಲೋಕಕ್ಕೆ ಹೊಸ ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆಯಿದೆ.

    apvc-iconPost Views: 32
  • ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಕರ್ನಾಟಕದಲ್ಲಿ ಇತ್ತೀಚೆಗೆ ಬಿಪಿಎಲ್‌ (BPL) ಮತ್ತು ಎಪಿಎಲ್‌ (APL) ಕಾರ್ಡ್‌ಗಳ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಆಹಾರ ಇಲಾಖೆಯ ಪ್ರಕಾರ, ಅನೇಕರು ನಕಲಿ ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್ ಪಡೆದಿದ್ದರು. ಇಂತಹವರ ಕಾರ್ಡ್‌ಗಳನ್ನು ಈಗ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ನಿಜವಾದ ಬಡ ಕುಟುಂಬಗಳ ಕಾರ್ಡ್‌ಗಳೂ ಸಹ ತಪ್ಪಾಗಿ ಬದಲಾಯಿಸಿರುವುದು ಕಂಡುಬಂದಿದೆ.

    ಆದರೆ ಚಿಂತೆ ಬೇಡ! ಸರ್ಕಾರ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ ಯಾರು ನಿಜವಾಗಿಯೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಾಗಿದ್ದಾರೋ ಅವರು ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಿದರೆ, ಅವರ ಎಪಿಎಲ್‌ ಕಾರ್ಡ್‌ಗಳನ್ನು ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುತ್ತದೆ.

    ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಅರ್ಜಿಯನ್ನು ಸಲ್ಲಿಸಿದ ನಂತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ಸಾಬೀತಾದರೆ 45 ದಿನಗಳ ಒಳಗಾಗಿ ಆ ಕುಟುಂಬಕ್ಕೆ ಹೊಸ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತದೆ.

    ರಾಜ್ಯದಲ್ಲಿ ನಕಲಿ ದಾಖಲೆಗಳಿಂದ ಪಡೆದಿರುವ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 7,76,000 ಬಿಪಿಎಲ್‌ ಕಾರ್ಡ್‌ಗಳು ಅನರ್ಹ ಎಂದು ಕಂಡುಬಂದಿವೆ. ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ, ಒಟ್ಟು 13,87,651 ಪಡಿತರ ಚೀಟಿಗಳು ಅನರ್ಹ ಎಂದು ಪರಿಗಣಿಸಲಾಗಿದೆ.

    ಅದರಿಂದಾಗಿ ಅರ್ಹರು ತಮ್ಮ ಪ್ರದೇಶದ ತಹಶೀಲ್ದಾರ್‌ ಕಚೇರಿಗೆ ತೆರಳಿ, ಕುಟುಂಬದ ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ಅಥವಾ ಆಸ್ತಿ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ದಾಖಲೆಗಳು ಸರಿಯಾಗಿದ್ದರೆ ಬಿಪಿಎಲ್‌ ಕಾರ್ಡ್‌ ಮತ್ತೆ ನೀಡಲಾಗುತ್ತದೆ.

    ಆದರೆ, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳ ವಿತರಣೆ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಆದ್ದರಿಂದ ಸರ್ಕಾರವು ಮೊದಲು ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಮುಗಿಸಿ ನಂತರ ಹೊಸ ಕಾರ್ಡ್‌ಗಳನ್ನು ನೀಡುವ ಯೋಜನೆ ಹೊಂದಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಬಡ ಕುಟುಂಬಗಳು ಹೊಸ ಕಾರ್ಡ್‌ಗಾಗಿ ಕಾಯುತ್ತಿವೆ.

    ಈ ಪರಿಸ್ಥಿತಿಯಿಂದ ಜನರು ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಪಡಿತರ ಸಿಗದೆ ಅನೇಕ ಬಡ ಕುಟುಂಬಗಳು ಪರದಾಡುತ್ತಿವೆ. ಸಾರ್ವಜನಿಕರು “ಬಿಪಿಎಲ್‌ ಕಾರ್ಡ್‌ಗಳ ದುರ್ಬಳಕೆ ತಡೆಯುವುದು ಸರಿಯೇ, ಆದರೆ ನಿಜವಾದ ಬಡವರಿಗೆ ತೊಂದರೆ ಕೊಡಬಾರದು” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಒಟ್ಟಿನಲ್ಲಿ, ಸರ್ಕಾರದ ಉದ್ದೇಶ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿ ನಿಜವಾದ ಬಡ ಕುಟುಂಬಗಳಿಗೆ ನೆರವು ನೀಡುವುದಾಗಿದೆ. ಆದರೆ ತಪ್ಪು ಕಾರ್ಡ್‌ ಬದಲಾವಣೆಗಳಿಂದ ಸಮಸ್ಯೆ ಉಂಟಾಗಿದೆ. ಅರ್ಹರು 45 ದಿನಗಳೊಳಗೆ ದಾಖಲೆ ಸಲ್ಲಿಸಿದರೆ ಮತ್ತೆ ಬಿಪಿಎಲ್‌ ಕಾರ್ಡ್‌ ಪಡೆಯುವ ಅವಕಾಶವಿದೆ.

    apvc-iconPost Views: 138
  • ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ಶತಕದಿಂದ ವಂಚಿತರಾದ ಆರ್ ಸಿ ಬಿ ಹುಡುಗ ಪಡಿಕ್ಕಲ್

    ರಾಜ್ ಕೋಟ್ : ರಣಜಿ ಟ್ರೋಫಿಯ ಎಲೈಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಶತಕ ಜೊತೆಯಾಟದ ನೆರವಿನಿಂದ ಕರ್ನಾಟಕ ತಂಡವು ಬಲಿಷ್ಠ ಸೌರಾಷ್ಟ್ರ ವಿರುದ್ಧ ಮೊದಲ ದಿನದಲ್ಲೇ ಪಂದ್ಯದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

    ಟಾಸ್ ಗೆದ್ದ ಸೌರಾಷ್ಟ್ರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಕರ್ನಾಟಕಕ್ಕೆ ಸತತ ಎರಡು ವಿಕೆಟ್ ನಷ್ಟವಾದರೂ, ಬಳಿಕ ಪಡಿಕ್ಕಲ್ ಮತ್ತು ಕರುಣ್ ನಾಯರ್ ಜೋಡಿಯ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

    ಆರಂಭಿಕ ಆಟಗಾರರಾಗಿ ನಿಕಿನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆರಂಭಿಕ ಜೋಡಿ ಸ್ವಲ್ಪ ಸಮಯ ಕ್ರೀಸ್ ನಲ್ಲಿ ನಿಂತು ಎದುರಾಳಿ ತಂಡಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಮೈದಾನಕ್ಕಿಳಿದ ಎಡಗೈ ಬ್ಯಾಟರ್ ಪಡಿಕ್ಕಲ್ 11 ಬೌಂಡರಿ ಸಹಿತ 141 ಎಸೆತಗಳಲ್ಲಿ 96 ರನ್ ಗಳಿಸಿ ಶತಕದ ಹತ್ತಿರ ತಲುಪಿ ಶತಕ ವಂಚಿತರಾದರು,

    Photo Credit: BCCI Domestic

    ಬಳಿಕ ಕಣಕ್ಕಿಳಿದ ಕರುಣ್ ನಾಯರ್ 9 ಬೌಂಡರಿ ಸಹಿತ 126 ಎಸೆತಗಳಲ್ಲಿ 73 ರನ್ ಗಳ ಸೊಗಸಾದ ಆಟವಾಡಿದರು. ಪಡಿಕ್ಕಲ್ ಮತ್ತು ಕರುಣ್ ಇವರಿಬ್ಬರ ನಡುವಿನ 146 ರನ್‌ಗಳ ತೃತೀಯ ವಿಕೆಟ್ ಜೊತೆಯಾಟ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ರನ್ ಕಲೆಹಾಕಲು ಸುಲಭವಾಯಿತು.

    ನಂತರ ಬ್ಯಾಟ್ ಬೀಸಲು ಬಂದ ಸ್ಮರಣ್ ಮತ್ತು ಶ್ರೇಯಸ್ ಗೋಪಾಲ್ ಅವರ 81 ರನ್‌ಗಳ ಜೊತೆಯಾಟ ಕರ್ನಾಟಕದ ರನ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿ ಮುಂದಿನ ದಿನದಾಟಕ್ಕೆ ಕಾಲಿಟ್ಟಿತು.

    ಸೌರಾಷ್ಟ್ರ ಪರವಾಗಿ ಬೌಲ್ ಮಾಡಿದ ಸ್ಪಿನ್ನರ್ ಧರ್ಮೇಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಕರ್ನಾಟಕದ ಬ್ಯಾಟರ್ ಗಳನ್ನು ಕಟ್ಟಿಹಾಕಲು ಮುಂದಾದರೂ ಕೂಡ ಫಲ ದೊರೆಯಲಿಲ್ಲ.

    ಪಡಿಕ್ಕಲ್ ರವರ ಲಯಬದ್ದ ಬೌಂಡರಿಗಳು ಮತ್ತು ಕರುಣ್ ನಾಯರ್ ಅವರ ಉತ್ತಮ ಬ್ಯಾಟಿಂಗ್ ಶೈಲಿ ಕರ್ನಾಟಕದ ಅಭಿಮಾನಿಗಳಿಗೆ ನಾಳಿನ ಪಂದ್ಯವನ್ನು ನೋಡಲು ಉತ್ಸಾಹ ಭರಿತರಾಗಿ ಕಾಯುವಂತೆ ಮಾಡಿದೆ.

    apvc-iconPost Views: 23
  • ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲ್ಲೂಕಿನ ಬನೋಶಿ ಗ್ರಾಮದ ದಲಿತ ಸಮಾಜದ ಅಪ್ರಾಪ್ತೆ ಯುವತಿಯನ್ನ ಅತ್ಯಾಚಾರ ಎಸಗಿ ನೇಣು ಹಾಕಲಾಗಿದೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಂಕಿಸಿ ದೂರು ದಾಖಲಾಗಿದೆ.

    ಬನೋಶಿ ಗ್ರಾಮದ 16 ವರ್ಷದ ಬಸಮ್ಮಳ ಅತ್ಯಾಚಾರ ಏಸಗಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಅನುಮಾನಿತ ಮೂವರ ವಿರುದ್ದ ಯುವತಿಯ ತಂದೆಯಾದ ಮಾನಪ್ಪ ಚಲವಾದಿ ದೂರು ನೀಡಿದ್ದಾರೆ.

    ನನ್ನ ಮಗಳು ಬಸಮ್ಮ ಇವಳಿಗೆ ಶಾಲೆ ಬಿಡಿಸಿದ್ದು ಸದ್ಯ ಮನೆಯಲ್ಲಿಯೇ ಇರುತ್ತಿದ್ದಳು. ಈಗ ಸುಮಾರು 2-3 ತಿಂಗಳಿಂದ ಬನೋಶಿ ಗ್ರಾಮದ ಮಾಳಿಂಗರಾಯ ದಂಡೋಜಿ ಇವನು ನನ್ನ ಮಗಳು ಬಸಮ್ಮ ಇವಳಿಗೆ ಹಿಂದೆ ಬಿದ್ದು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತಾ ಅನ್ನುತ್ತಾ ನನ್ನ ಮಗಳಿಗೆ ಕಾಡಿಸುತ್ತಿದ್ದು ಈ ಬಗ್ಗೆ ನಮಗೆ ಗೊತ್ತಾಗಿ ನಾವು ನಮ್ಮ ಮಗಳಿಗೆ ಬುದ್ದಿ ಹೇಳಿ ನಮ್ಮ ಮನೆಯಲ್ಲಿ ಇರಿಸಿಕೊಂಡಿದ್ದೇವು. ಇತ್ತಿತ್ತಲಾಗಿ ನನ್ನ ಮಗಳು ಬಸಮ್ಮ ಇವಳಿಗೆ ನಮ್ಮ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡುವ ಬಗ್ಗೆ ನಾವು ಮನೆಯ ಜನರು ಮಾತನಾಡಿರುವ ಸಂಗತಿಯೂ ಮಾಳಿಂಗರಾಯ ದಂಡೋಜಿ ಇವನಿಗೆ ಗೊತ್ತಾದ ಮೇಲೆ ನನ್ನ ಮಗಳಿಗೆ ನನ್ನ ಬಿಟ್ಟು ನೀನು ಹೇಗೆ ಬೇರೆಯವನ ಸಂಗಡ ಮದುವೆ ಮಾಡಿಕೊಳ್ಳುತ್ತಿ ಅಂತಾ ನನ್ನ ಮಗಳಿಗೆ ಅವನನ್ನು ಪ್ರೀತಿಸಬೇಕು ಅಂತಾ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ, ನಮ್ಮ ಮಗಳಿಂದ ಸಂಗತಿ ಕೇಳಿ ಗೊತ್ತಾಗಿದ್ದು ಇರುತ್ತದೆ, ಹಾಗೂ ಶಿವನಗೌಡ ಬಿರಾದಾರ ಇವನು ಮಾಳಿಂಗರಾಯ ಇವನಿಗೆ ನನ್ನ ಮಗಳಿಗೆ ಕಿರುಕುಳ ನೀಡಲು ಕುಮ್ಮಕ್ಕು ನೀಡುತ್ತಿದ್ದನು ಎಂದು ಯುವತಿಯ ತಂದೆಯಾದ ಮಾನಪ್ಪ ಚಲವಾದಿ ಎಫ್ಐಆರ್ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಸೋಮವಾರ(ಅ.13) ನಮ್ಮ ಕುಟುಂಬ ಸಂತೆಗೆ ಮುದ್ದೇಬಿಹಾಳಕ್ಕೆ ಹೋಗುವಾಗ ಬಸಮ್ಮ ಇವಳು ನಮ್ಮ ಮನೆಯಲ್ಲಿಯೇ ಇದ್ದಳು. ಸಂಜೆ 5 ಗಂಟೆ ಸುಮಾರಿಗೆ ನಾವು ಮುದ್ದೇಬಿಹಾಳದಿಂದ ವಾಪಸ್ ನಮ್ಮ ಮನೆಗೆ ಹೋಗಿ ನೋಡಲು ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ರಾತ್ರಿ ಇಡೀ ದಿನ ಹುಡುಕಿದರು ನಮ್ಮ ಮಗಳು ಸಿಗಲಿಲ್ಲ. ಮರುದಿನ ಮಂಗಳವಾರ(ಅ.14) ಬೆಳಿಗ್ಗೆ ಗ್ರಾಮದ ಜಮೀನುಯೊಂದರಲ್ಲಿ ನನ್ನ ಮಗಳ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಅನುಮಾನಿತರ ವಿರುದ್ಧ ದೂರಿದ್ದಾರೆ.

    ಯುವತಿ ಅತ್ಯಾಚಾರ ಕೊಲೆ ಶಂಕೆ ಬಗ್ಗೆ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಯುವತಿಯ ಶವವಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಗಲ್ಲಿಗೇರಿಸಿ ಎಂಬ ಕೂಗು ಸಾರ್ವಜನಿಕವಾಗಿ ಕೇಳಿಬಂದವು.

    ಬನೋಶಿ ಗ್ರಾಮದಲ್ಲಿ ಯುವತಿ ಅತ್ಯಾಚಾರ ಶಂಕೆ ಬಗ್ಗೆ ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹಾಗೂ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದು, ಶಂಕಿಸಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ತನಿಖೆ ಮುಂದುವರೆದಿದೆ. ಯುವತಿಯ ಮರಣೋತ್ತರ ಪರೀಕ್ಷೆ ಬರುವವರೆಗೂ ಏನು ಹೇಳಾಗದು ಎಂದು ತಿಳಿಸಿದರು.

    ಸಂತ್ರಸ್ತೆ ಯುವತಿ ಕುಟುಂಬಕ್ಕೆ ಪರಿಹಾರ

    ಎಫ್ಐಆರ್ ಆಧರಿಸಿ ಪ್ರಾಥಮಿಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ ಮಾಡಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಇನ್ನುಳಿದ 50% ರಷ್ಟು ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುವುದು. ಈಗಾಗಲೇ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಲಾಗಿದ್ದು, ಇನ್ನುಳಿದ ಸರ್ಕಾರದ ಸೌಲಭ್ಯಗಳನ್ನು ಕುಟುಂಬಕ್ಕೆ ಇಲಾಖೆಯಿಂದ ನೀಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ ಮಠ ಹೇಳಿದ್ದಾರೆ.

     

    apvc-iconPost Views: 80
  • ದೀಪಾವಳಿಗೆ ರಾಜ್ಯ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಏರಿಕೆ..!

    ದೀಪಾವಳಿಗೆ ರಾಜ್ಯ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಏರಿಕೆ..!

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಜೀವನೋಪಾಯದ ವೆಚ್ಚದ ಹಿನ್ನೆಲೆಯಲ್ಲಿ ನೌಕರರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ತುಟ್ಟಿ ಭತ್ಯೆ (Dearness Allowance – DA) ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಈ ಕ್ರಮದಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ನೇರ ಲಾಭ ದೊರಕಲಿದೆ.

    ರಾಜ್ಯ ಸರ್ಕಾರ ಪ್ರಕಟಿಸಿರುವ ಹೊಸ ಆದೇಶದ ಪ್ರಕಾರ, ನೌಕರರ ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ DA ದರವು ಪ್ರಸ್ತುತ ಶೇ. 12.25ರಿಂದ ಶೇ. 14.25ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು 2025ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಹೆಚ್ಚುವರಿ ಭತ್ಯೆಯ ಮೊತ್ತವನ್ನು ಮುಂದಿನ ವೇತನದೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

    ಕೇಂದ್ರ ಸರ್ಕಾರವು ಇತ್ತೀಚೆಗೆ ವಿಜಯದಶಮಿ ಹಬ್ಬದ ಮುನ್ನಾದಿನ ಕೇಂದ್ರ ನೌಕರರಿಗೆ ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಈ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ, ಕೇಂದ್ರ ಸರ್ಕಾರದ DA ಏರಿಕೆಯ ನಂತರ ರಾಜ್ಯ ಸರ್ಕಾರವೂ ಅದೇ ಮಾದರಿಯನ್ನು ಅನುಸರಿಸಿ ನೌಕರರಿಗೆ ಹೆಚ್ಚುವರಿ ಭತ್ಯೆ ನೀಡುವುದು ರೂಢಿಯಾಗಿದೆ.

    ತುಟ್ಟಿ ಭತ್ಯೆ ಎಂದರೆ ಜೀವನೋಪಾಯದ ವೆಚ್ಚದ ಏರಿಕೆಯಿಂದ ನೌಕರರ ಖರೀದಿ ಸಾಮರ್ಥ್ಯದಲ್ಲಿ ಉಂಟಾಗುವ ಕುಗ್ಗುವಿಕೆಯನ್ನು ಸರಿದೂಗಿಸಲು ನೀಡುವ ಹಣಕಾಸಿನ ಪರಿಹಾರ. ಇದನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಈ ಕ್ರಮದಿಂದ ನೌಕರರ ಖರ್ಚು ಸಾಮರ್ಥ್ಯ ಹೆಚ್ಚುವ ನಿರೀಕ್ಷೆ ಇದೆ ಹಾಗೂ ಹಬ್ಬದ ಸಮಯದಲ್ಲಿ ಈ ಘೋಷಣೆ ನೌಕರರ ಮನಗಳಲ್ಲಿ ಉತ್ಸಾಹ ತುಂಬಿದೆ.

    ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ನೌಕರರು ಹಾಗೂ ಪಿಂಚಣಿದಾರರ ಮನೆಗಳಲ್ಲಿ ದೀಪಾವಳಿಯ ಸಂತಸ ಮನೆಮಾಡಿದೆ.

    apvc-iconPost Views: 67
  • ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ : ಸಚಿವ ಲಾಡ್

    ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ : ಸಚಿವ ಲಾಡ್

    ಸತ್ಯಕಾಮ ವಾರ್ತೆ ಯಾದಗಿರಿ:

    ಆರ್.ಎಸ್.ಎಸ್. ನಿಲುವುಗಳನ್ನು ಪ್ರಶ್ನಿಸಿ ಸಾರ್ವಜನಿಕ, ಸರ್ಕಾರದ ಪ್ರದೇಶಗಳಲ್ಲಿ ಶಾಖೆ ಪ್ರದರ್ಶನ ಮಾಡುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಸಲ್ಲಿಸಿದ ಮನವಿ ಪತ್ರದ ಬಗ್ಗೆ ವಿರೋಧಿಸಿ ಅನೇಕರು ಪ್ರಿಯಾಂಕ್ ಖರ್ಗೆ ಅವರಿಗೆ ಫೋನ್ ಕರೆ ಮೂಲಕ ಜೀವ ಬೆದರಿಕೆ, ಭಯ ಹುಟ್ಟಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ, ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

    ನಗರದ ಸರ್ಕೀಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಹಲವರಿಗೆ ಜೀರ್ಣಿಸಿಕೊಳ್ಳಲು ಆಗದೆ ಅಡ್ಡ ಮಾರ್ಗದಿಂದ ವೈಯಕ್ತಿಕ ನಿಂದನೆ ಹೇಳುತ್ತಿರುವುದು ಅದು ಅವರ ಮನಸ್ಥಿತಿ ತೋರಿಸುತ್ತಿದೆ ಎಂದರು.

    ಈ ದೇಶದಲ್ಲಿ ಮಹಾತ್ಮ ಗಾಂಧಿಯನ್ನೆ ಕೊಂದ ಸಂತತಿ ಇವರದು, ಇತಿಹಾಸದಲ್ಲಿ ಒರಿಜಿನಲ್ ಹಿಂದೂಗಳ ಇವರ ಪರವಾಗಿ ಇರುವುದು ಯಾವ ಸಾಕ್ಷಿಯೂ ಇಲ್ಲ‌. ಒರಿಜಿನಲ್ ಹಿಂದೂಗಳು ಪ್ರಿಯಾಂಕ್ ಖರ್ಗೆ ಅವರ ಪರವಾಗಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

    apvc-iconPost Views: 311
  • ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ ಎಂದು ನಂಬಿಸಿ, ಗ್ರಾಮದ ಸುಮಾರು 50 ಮಂದಿಯಿಂದ ಒಟ್ಟು ₹21.59 ಲಕ್ಷ ರೂ. ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಣ್ಣಿವಡಗೇರಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಈ ಸಂಬಂಧ ಬಸವರಾಜ @ ಬಸಪ್ಪ ಯಮನಪ್ಪ ಆಶ್ಯಾಳ ಮತ್ತು ಅವನ ಅಣ್ಣ ಮುತ್ತಪ್ಪ ಯಮನಪ್ಪ ಆಶ್ಯಾಳ ಎಂಬವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರುದಾರ ನಿಂಗಪ್ಪ ದೂಳಪ್ಪ ಪೂಜಾರಿ ನೀಡಿರುವ ದೂರಿನ ಪ್ರಕಾರ, 2013ರಲ್ಲಿ ಆರೋಪಿ ಬಸವರಾಜ ಘರಿಮಾ ಹೋಮ್ ಅಂಡ್ ಫಾರಂ ಹೌಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಇನ್ಸುರೆನ್ಸ್ ಕಂಪನಿ ಪ್ರಾರಂಭಿಸಿ, ಪ್ರತಿ ವರ್ಷ ₹1,250ರಂತೆ ಐದು ವರ್ಷ ಹಣ ಕಟ್ಟಿದರೆ ಹೂಡಿಕೆ ಡಬಲ್ ಆಗುತ್ತದೆ ಎಂದು ಭರವಸೆ ನೀಡಿದ್ದನು.

    ಈ ಭರವಸೆ ನಂಬಿ ಗ್ರಾಮದ ಸುಮಾರು 50 ಮಂದಿ ಒಟ್ಟು ₹21.59 ಲಕ್ಷ ರೂ. ಹೂಡಿಕೆ ಮಾಡಿದರು. ಆದರೆ 2019ರಲ್ಲಿ ಅವಧಿ ಮುಗಿದರೂ ಹಣವನ್ನು ಹಿಂತಿರುಗಿಸದೆ ಕಾಲಹರಣ ಮಾಡಿದನು. 2020ರಲ್ಲಿ ಗ್ರಾಮ ಹಿರಿಯರ ಸಮ್ಮುಖದಲ್ಲಿ ನಡೆದ ನ್ಯಾಯಪಂಚಾಯಿತಿಯಲ್ಲೂ ಐದು ವರ್ಷಗಳ ಅವಧಿ ಕೇಳಿ ವಂಚನೆ ಮುಂದುವರಿಸಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇತ್ತೀಚೆಗೆ ದೂರುದಾರರು ಹಣವನ್ನು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅಣ್ಣ ಮುತ್ತಪ್ಪ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

    ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ BNS ಕಲಂ 316(2), 318(3), 351(2), 352 ಹಾಗೂ 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

    apvc-iconPost Views: 99
  • ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಆಯುರ್ವೇದ ಚಿಕಿತ್ಸೆ  ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮಹಿಳೆ ನೀಡಿದ ದೂರಿನ ಪ್ರಕಾರ ಹೊಟ್ಟೆನೋವಿನ ಚಿಕಿತ್ಸೆಗಾಗಿ ತಾಯಿ ಹಾಗೂ ಅತ್ತೆಯೊಂದಿಗೆ ಗೋಗಿ(ಕೆ) ಗ್ರಾಮದ ಮುರ್ಸಿದ್ ಮುತ್ಯಾ ಅಲಿಯಾಸ್ ಸಯ್ಯದ ಮುರಾನ್ ಹುಸೇನಿ ಎಂಬಾತನ ಮನೆಗೆ ಅಕ್ಟೋಬರ್ 8ರಂದು  ಮಹಿಳೆ ತೆರಳಿದ್ದಳು. ಈ ವೇಳೆ  ಚಿಕಿತ್ಸೆ ನೆಪದಲ್ಲಿ ಆರೋಪಿ ಯುವತಿಯನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಒಳಗಿನಿಂದ ಹಾಕಿಕೊಂಡು, ಮೂಗಿಗೆ ಏನೋ ಔಷಧಿ ಹಚ್ಚಿ ಸುಂದಾಗುವಂತೆ ಮಾಡಿ, ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂದರ್ಭದಲ್ಲಿ ಮಹಿಳೆ ಚೀರಿದಾಗ ಆಕೆಯ ತಾಯಿ ಬಾಗಿಲು ಬಡಿದು ಒಳಗೆ ಬಂದಿದ್ದು, ಆರೋಪಿ ತನ್ನ ತಪ್ಪನ್ನು ಮುಚ್ಚಿಹಾಕಲು ಆಕೆಗೆ ಚಿಕಿತ್ಸೆ ಮುಗಿದಿದೆ ಎಂದು ಹೇಳಿದನೆಂದು ದೂರಿನಲ್ಲಿ ತಿಳಿಸಲಾಗಿದೆ.

    ಘಟನೆಯ ಬಳಿಕ ಮಹಿಳೆ ಮನೆಗೆ ಹೋದ ನಂತರ ತಾಯಿ ಮತ್ತು ಅತ್ತೆಗೆ ವಿಷಯ ತಿಳಿಸಿದ್ದು, ನಂತರ ಗೋಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.

    apvc-iconPost Views: 442
  • ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಪದಗ್ರಹಣ 

    ಸತ್ಯಕಾಮ ವಾರ್ತೆ ಸುರಪುರ:

    ಕನ್ನಡ ನಾಡು ನುಡಿ ನೆಲ ಜಲದ ಭಾಷೆ ವಿಷಯಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೀಮು ನಾಯಕ ಕಳೆದ ಅನೇಕ ವರ್ಷಗಳಿಂದ ಕನ್ನಡಪರ ಹೋರಾಟಗಾರನಾಗಿದ್ದು ಮುಂದೆಯೂ ಉತ್ತಮವಾದ ಸಂಘಟನೆಯನ್ನು ಜಿಲ್ಲೆಯಲ್ಲಿ ಬೆಳೆಸಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ಇಂದು ತುಂಬಾ ಅಪಾಯದಲ್ಲಿದೆ ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕನ್ನಡಿಗರಿಗೆ ಇದ್ದು, ಮ.ರಾ.ಮೂರ್ತಿ, ವಿ.ಕೃ ಗೋಕಾಕ ಡಾ.ರಾಜಕುಮಾರ್,ವಾಟಾಳ

    ನಾಗರಾಜ್, ಜಿ ನಾರಾಯಣ ಕುಮಾರ್ ಸೇರಿದಂತೆ ಹಲವು ಮಹನೀಯರು ಕನ್ನಡಕ್ಕಾಗಿ ದುಡಿದಿದ್ದಾರೆ ಅಂತವರಿಂದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಆರಂಭಗೊಂಡಿದೆ ಎಂದರು.

    ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಭೀಮು ನಾಯಕ ಮಲ್ಲಿಬಾವಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬೆಳೆಸುವುದಾಗಿ ತಿಳಿಸಿದರು.

    ಪ್ರಸ್ತಾವಿಕವಾಗಿ ಸಾಹಿತಿ ಅಶೋಕ ಚೌಧರಿ ಮಾತನಾಡಿ, 80ರ ದಶಕದಲ್ಲಿ ಕನ್ನಡಕ್ಕೆ ಪಕ್ಕದ ರಾಜ್ಯಗಳ ಭಾಷೆಗಳು ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಜಿ ನಾರಾಯಣ ಕುಮಾರ್ ಅವರು ರಾಜ್ಯದಲ್ಲಿ ಕನ್ನಡಿಗರನ್ನು ಸಂಘಟಿಸುವ ಜೊತೆಗೆ ದೊಡ್ಡಮಟ್ಟದಲ್ಲಿ ಹೋರಾಟವನ್ನು ನಡೆಸಿ ಕನ್ನಡ ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.

    ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗಮಿಸುತ್ತಿದ್ದಂತೆ ನಗರದಲ್ಲಿ ಅದ್ದೂರಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌಧರಿ ಮಾತನಾಡಿದರು.ಯಲ್ಲಪ್ಪ ನಾಯಕ ಮಲ್ಲಿಬಾವಿ ನೇತೃತ್ವ ವಹಿಸಿದ್ದರು. ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಸಮಿತಿಯ ಮುಖಂಡ ರಾಜಣ್ಣ ಉಪಸ್ಥಿತರಿದ್ದರು.ಮಹೇಶ ಗಂಜಿ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ಪರಶುರಾಮ ಮಲ್ಲಿಬಾವಿ ವಂದಿಸಿದರು. ಸಂಘಟನೆಯ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

    ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಭೀಮು ಹೆಚ್.ನಾಯಕ ಅವರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಸ್ವಾಮೀಜಿಗಳ ಮೂಲಕ ನೀಡಿ ಗೌರವಿಸಲಾಯಿತು.
    apvc-iconPost Views: 11