Blog

  • ವಿಶ್ವದಲ್ಲೇ ಮೊದಲು ಹೊಸ ಫೀಚರ್ಸ್‌ಗಳೊಂದಿಗೆ iQOO 15 ಲಾಂಚ್! 

    ವಿಶ್ವದಲ್ಲೇ ಮೊದಲು ಹೊಸ ಫೀಚರ್ಸ್‌ಗಳೊಂದಿಗೆ iQOO 15 ಲಾಂಚ್! 

    ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪ್ರತಿ ಕಂಪನಿಯೂ ಹೊಸ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ತಮ್ಮ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಪೈಕಿ, ಈಗ iQOO ಕಂಪನಿಯು ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಅನ್ನು ಲಾಂಚ್ ಮಾಡಿದೆ. ಈ ಫೋನ್‌ನಲ್ಲಿ ವಿಶ್ವದ ಮೊದಲ ಬಗೆಯ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಇದರಿಂದ ಸ್ಮಾರ್ಟ್‌ಫೋನ್ ಪ್ರಿಯರ ನಡುವೆ ಈಗಾಗಲೇ ಚರ್ಚೆ ಹುಟ್ಟಿದೆ.

    ಈ ಹೊಸ ಮಾದರಿ ಕೇವಲ ವೇಗ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದಷ್ಟೇ ಅಲ್ಲದೆ, ವಿನ್ಯಾಸ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ವಿಭಾಗಗಳಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. iQOO 15 ತನ್ನ ಹಿಂದಿನ ಮಾದರಿ iQOO 13 ಹೋಲಿಸಿದರೆ ಹಲವು ಪ್ರಮುಖ ಅಪ್‌ಗ್ರೇಡ್‌ಗಳನ್ನು ಪಡೆದಿದೆ.

    iQOO 15 ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:

    ಡಿಸ್ಪ್ಲೇ:

    iQOO 15 ನಲ್ಲಿ ವಿಶ್ವದ ಮೊದಲ 6.85 ಇಂಚಿನ 2K+ ಕರ್ವ್ ಸ್ಯಾಮ್‌ಸಂಗ್ M14 8T LTPO AMOLED ಡಿಸ್ಪ್ಲೇ ಬಳಸಲಾಗಿದೆ. ಇದಕ್ಕೆ HDR10+ ಪ್ರಮಾಣೀಕರಣ ಮತ್ತು 144Hz ರಿಫ್ರೆಶ್ ರೇಟ್ ಇದೆ. ಈ ಡಿಸ್ಪ್ಲೇ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚು ಹೊಳಪು, ಸ್ಪಷ್ಟತೆ ಮತ್ತು ಪರಿಸರ ಸ್ನೇಹಪರ ಅನುಭವ ನೀಡುತ್ತದೆ. ಗೇಮಿಂಗ್ ಹಾಗೂ ವೀಡಿಯೊ ವೀಕ್ಷಣೆಗೆ ಇದು ಅತ್ಯುತ್ತಮ ದೃಶ್ಯಾನುಭವ ನೀಡುತ್ತದೆ.

    ಪ್ರೊಸೆಸರ್ ಮತ್ತು ಪ್ರದರ್ಶನ:

    ಈ ಫೋನ್‌ನ್ನು Qualcomm Snapdragon 8 Elite Gen 5 ಪ್ರೊಸೆಸರ್ ಚಾಲಿತಗೊಳಿಸುತ್ತದೆ. ಇದರೊಂದಿಗೆ Adreno 840 GPU ಸಹ ಲಭ್ಯವಿದ್ದು, ಉನ್ನತ ಮಟ್ಟದ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಪವರ್‌ಫುಲ್ ಕಾರ್ಯಕ್ಷಮತೆ ನೀಡುತ್ತದೆ.

    ಮೆಮೊರಿ ಮತ್ತು ಸ್ಟೋರೇಜ್:

    iQOO 15 ನಲ್ಲಿ 12GB ಅಥವಾ 16GB LPDDR5X RAM ಮತ್ತು 256GB, 512GB ಅಥವಾ 1TB UFS 4.1 ಇಂಟರ್‌ನಲ್ ಸ್ಟೋರೇಜ್ ಆಯ್ಕೆಗಳು ಲಭ್ಯ. ಇದರ ವೇಗ ಮತ್ತು ಸ್ಟೋರೇಜ್ ಸಾಮರ್ಥ್ಯ ಇಬ್ಬರೂ ಅತ್ಯುನ್ನತ ಮಟ್ಟದಲ್ಲಿದೆ.

    ಬ್ಯಾಟರಿ ಮತ್ತು ಚಾರ್ಜಿಂಗ್:

    ಈ ಫೋನ್ 7,000mAh ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಅಂದರೆ ಕೆಲವೇ ನಿಮಿಷಗಳಲ್ಲಿ ಶೇಕಡಾ 50 ಚಾರ್ಜ್ ಆಗುವ ಸಾಮರ್ಥ್ಯವಿದೆ.

    ಕ್ಯಾಮೆರಾ ವಿಭಾಗ:

    iQOO 15 ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ.

    50MP ಪ್ರಾಥಮಿಕ ಕ್ಯಾಮೆರಾ (OIS ಸಹಿತ)

    50MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್

    50MP 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (OIS ಸಹಿತ)

    ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.

    ನೀರಿನ ಮತ್ತು ಧೂಳಿನ ನಿರೋಧಕತೆ:

    ಫೋನ್‌ವು IP68/IP69 ರೇಟಿಂಗ್ ಪಡೆದಿದೆ. ಅಂದರೆ ಇದು ನೀರು, ಧೂಳು ಹಾಗೂ ಬಿಸಿನೀರು ಅಥವಾ ಶೀತದ ಜೆಟ್‌ಗಳಿಂದ ರಕ್ಷಿತವಾಗಿದೆ.

    ಸಾಫ್ಟ್‌ವೇರ್:

    ಹೊಸ ಫೋನ್ OriginOS 6 ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಹಿಂದಿನ Funtouch OSಗೆ ಬದಲಿ. ಸಾಫ್ಟ್‌ವೇರ್ ನವೀಕರಣಗಳು ವೇಗವಾಗಿ ದೊರಕುವ ಸಾಧ್ಯತೆ ಇದೆ.

    ಹೊಸ ತಂತ್ರಜ್ಞಾನ Eye Protection 2.0:

    iQOO 15 ವಿಶ್ವದ ಮೊದಲ Eye Protection 2.0 ತಂತ್ರಜ್ಞಾನವನ್ನು ಹೊಂದಿದೆ, ಇದು ಧ್ರುವೀಕರಿಸದ ನೈಸರ್ಗಿಕ ಬೆಳಕಿನ ಪ್ರದರ್ಶನ ನೀಡುತ್ತದೆ ಮತ್ತು ಗೇಮಿಂಗ್ ವೇಳೆ ಕಣ್ಣಿನ ಒತ್ತಡವನ್ನು ತಗ್ಗಿಸುತ್ತದೆ.

    ಬಣ್ಣಗಳ ಆಯ್ಕೆ:

    ಫೋನ್‌ವು Lingyun, Legendary Edition, Track Edition ಹಾಗೂ Wilderness Edition ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯ.

    iQOO 15 ಬೆಲೆ (ಚೀನಾ ಮಾರುಕಟ್ಟೆ ಬೆಲೆ ಆಧಾರವಾಗಿ):

    iQOO 15 ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ಫೋನ್ ವಿವಿಧ RAM ಮತ್ತು ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಬೆಲೆ ಅದರ ಮಾದರಿಯ ಪ್ರಕಾರ ಬದಲಾಗುತ್ತದೆ. 12GB RAM + 256GB ಸ್ಟೋರೇಜ್ ಮಾದರಿಯ ಬೆಲೆ 4,199 ಯುವಾನ್ (ಸುಮಾರು ರೂ.51,900) ಆಗಿದೆ. 16GB RAM + 512GB ಮಾದರಿ 4,499 ಯುವಾನ್ (ರೂ.55,500) ಕ್ಕೆ, 12GB RAM + 512GB ಆವೃತ್ತಿ 4,699 ಯುವಾನ್ (ರೂ.58,000) ಕ್ಕೆ ಲಭ್ಯ. ಅದೇ ರೀತಿ 16GB RAM + 512GB ಮಾದರಿ 4,999 ಯುವಾನ್ (ರೂ.61,700) ಕ್ಕೆ ದೊರೆಯುತ್ತದೆ. ಅತೀ ಪ್ರೀಮಿಯಂ 16GB RAM + 1TB ಸ್ಟೋರೇಜ್ ಆವೃತ್ತಿಯ ಬೆಲೆ 4,399 ಯುವಾನ್ (ಸುಮಾರು ರೂ.54,300) ಆಗಿದೆ. ವಿವಿಧ ಕಾಂಫಿಗರೇಷನ್‌ಗಳೊಂದಿಗೆ, iQOO 15 ವಿಭಿನ್ನ ಬಳಕೆದಾರರ ಅಗತ್ಯ ಹಾಗೂ ಬಜೆಟ್‌ಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

    ಭಾರತ ಬಿಡುಗಡೆ ದಿನಾಂಕ:

    ಕಂಪನಿಯು ಅಧಿಕೃತವಾಗಿ ಘೋಷಿಸಿರುವಂತೆ, iQOO 15 ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿಯೂ ಇದರ ಬೆಲೆ ಅಂದಾಜು ರೂ.50,000 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

    iQOO 15 ವಿಶ್ವದ ಮೊದಲ ಹಲವು ಕ್ರಾಂತಿಕಾರಿ ವೈಶಿಷ್ಟ್ಯಗಳೊಂದಿಗೆ ಬಂದಿರುವ ಫೋನ್. ಡಿಸ್ಪ್ಲೇ ಗುಣಮಟ್ಟ, ವೇಗದ ಚಾರ್ಜಿಂಗ್, ಶಕ್ತಿಯುತ ಪ್ರೊಸೆಸರ್ ಮತ್ತು ಅತ್ಯಾಧುನಿಕ Eye Protection ತಂತ್ರಜ್ಞಾನದಿಂದ ಇದು 2025ರ ಅತ್ಯಂತ ಗಮನ ಸೆಳೆಯುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ.

    apvc-iconPost Views: 19
  • ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಕ್ರಿಕೆಟ್ ಪ್ರಪಂಚದ ಗಮನ ಈಗ ಅಡಿಲೇಡ್‌ನತ್ತ ನೆಟ್ಟಿದೆ.  ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣ ತರುವಂತ ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಬರೆಯಲು ಸಜ್ಜಾಗಿದ್ದಾರೆ. ಅಕ್ಟೋಬರ್ 23ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ದಾಖಲೆಗಳ ಮಳೆ ಸುರಿಸುವ ಸಾಧ್ಯತೆ ಇದೆ.

    ಅಡಿಲೇಡ್ ಮೈದಾನ ಕೊಹ್ಲಿಗೆ ಅತಿ ಪ್ರಿಯವಾದ ಮೈದಾನಗಳಲ್ಲಿ ಒಂದು. ಇಲ್ಲಿಯ ಪಿಚ್, ವಾತಾವರಣ ಮತ್ತು ಅಭಿಮಾನಿಗಳ ಉತ್ಸಾಹ ಈ ಎಲ್ಲವೂ ಅವರ ಆಟಕ್ಕೆ ಜೀವ ತುಂಬುತ್ತವೆ. ಈ ಮೈದಾನದಲ್ಲಿ ಅವರು ಈಗಾಗಲೇ 5 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ 2 ಏಕದಿನಗಳು ಮತ್ತು 3 ಟೆಸ್ಟ್‌ಗಳು ಸೇರಿವೆ. ಈ ಮೂಲಕ ಅವರು ಇಂಗ್ಲೆಂಡ್‌ನ ದಾಂಡಿಗ ಜ್ಯಾಕ್ ಹಾಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಬ್ಸ್ ಅವರು ಮೆಲ್ಬೋರ್ನ್ ಮೈದಾನದಲ್ಲಿ 5 ಶತಕಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ಹೊಸ ದಾಖಲೆಯು ಅವರ ಹೆಸರಿಗಿರಲಿದೆ.

    ಇಷ್ಟೇ ಅಲ್ಲದೆ ಕೊಹ್ಲಿ ಇನ್ನೂ ಕೇವಲ 25 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ರನ್ ಪೂರೈಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಗೌರವವೂ ಅವರಿಗೆ ದೊರೆಯಲಿದೆ. ಈಗಾಗಲೇ ಅವರು ಈ ಮೈದಾನದಲ್ಲಿ 17 ಇನಿಂಗ್ಸ್‌ಗಳಲ್ಲಿ 975 ರನ್‌ಗಳನ್ನು ಕಲೆಹಾಕಿದ್ದಾರೆ. ಅಂದರೆ ನಾಳೆಯ ಪಂದ್ಯದಲ್ಲಿ ಕೇವಲ ಒಂದು ಸಣ್ಣ ಇನಿಂಗ್ಸ್ ಅವರ ಹೆಸರನ್ನು ಮತ್ತೊಂದು ಮೈಲುಗಲ್ಲಿನತ್ತ ಕರೆದೊಯ್ಯಲಿದೆ.

    ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಎಂದರೆ ಕಣ್ಣಿಗೆ ಹಬ್ಬ. ಪಿಚ್‌ನಲ್ಲಿ ಬೌನ್ಸ್ ಮತ್ತು ಸ್ವಿಂಗ್ ಇದ್ದರೂ ಅವರು ಅದನ್ನು ತಾಳ್ಮೆಯಿಂದ ಎದುರಿಸಿ, ಅಚ್ಚುಕಟ್ಟಾದ ಶಾಟ್‌ಗಳ ಮೂಲಕ ರನ್ ಕಲೆಹಾಕುತ್ತಾರೆ. ಅವರ ಸ್ಮರಣೀಯ ಇನಿಂಗ್ಸ್‌ಗಳು, ಗೆಲುವಿಗೆ ದಾರಿ ಮಾಡಿದ ಶತಕಗಳು  ಇವೆಲ್ಲವೂ ಈ ಮೈದಾನದ ನೆನಪನ್ನು ಅಭಿಮಾನಿಗಳ ಮನದಲ್ಲಿ ಶಾಶ್ವತಗೊಳಿಸಿವೆ.

    ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿಯ ಹೆಸರು ಎಂದರೆ ನಂಬಿಕೆ, ಹೋರಾಟ, ಹಾಗೂ ಪ್ರೇರಣೆ. ಅವರು ಕೇವಲ ಬ್ಯಾಟ್ಸ್‌ಮನ್ ಅಲ್ಲ, ಭಾರತದ ಕ್ರಿಕೆಟ್ ಗೌರವದ ಪ್ರತೀಕ. ಈ ಸರಣಿಯಲ್ಲೂ ಅವರು ಅದೇ ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದ್ದಾರೆ.

    ಅಭಿಮಾನಿಗಳೆಲ್ಲರೂ ಈಗ ಕಾತರದಿಂದ ಕಾಯುತ್ತಿರುವುದು ಒಂದೇ ವಿಷಯಕ್ಕೆ ಅಡಿಲೇಡ್ ಮೈದಾನದಲ್ಲಿ ಮತ್ತೆ ಒಮ್ಮೆ ಕಿಂಗ್ ಕೊಹ್ಲಿಯ ಬ್ಯಾಟ್ ಮಿಂಚಲಿ, ಮತ್ತೊಂದು ಶತಕ ಭಾರಿಸಿ ಇತಿಹಾಸ ಬರೆಯಲಿ!

    apvc-iconPost Views: 17
  • ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರು: ನಗರದ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ದುರ್ಘಟನೆ ಒಂದು ವಿದ್ಯಾರ್ಥಿ ಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ತಿರುಪತಿ ಮೂಲದ ಬಿಟೆಕ್ ವಿದ್ಯಾರ್ಥಿ ಪವನ್, ತಾನು ವಾಸವಾಗಿದ್ದ ಪಿಜಿಯಲ್ಲೇ ಸಿಂಪಡಿಸಿದ್ದ ತಿಗಣೆ (ಪೆಸ್ಟಿಸೈಡ್) ಔಷಧಿಯ ವಾಸನೆಗೆ ಬಲಿಯಾದ ಘಟನೆ ನಗರದಲ್ಲಿ ದೊಡ್ಡ ಆತಂಕ ಮೂಡಿಸಿದೆ.

    ಪವನ್ ವಾಸವಾಗಿದ್ದ ಅಶ್ವಥ್ ನಗರದಲ್ಲಿನ ಬಿಎಸ್‌ಆರ್ ಪಿಜಿಯಲ್ಲಿ ಕೆಲವು ದಿನಗಳಿಂದ ತಿಗಣೆಗಳ ತೊಂದರೆ ಇತ್ತು ಎಂದು ತಿಳಿದುಬಂದಿದೆ. ಇದಕ್ಕಾಗಿ ಪಿಜಿ ನಿರ್ವಾಹಕರು ಔಷಧ ಸಿಂಪಡಿಸಿದ್ದರು. ಆದರೆ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಪವನ್ ಔಷಧ ಸಿಂಪಡಿಸಿದ ಬಳಿಕ ಕೊಠಡಿಗೆ ಹೋದಾಗ, ವಿಷಕಾರಿ ವಾಸನೆಯಿಂದ ಉಸಿರಾಟ ತೊಂದರೆ ಅನುಭವಿಸಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.

    ಅಸ್ವಸ್ಥನಾದ ಪವನ್‌ನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಗಲೇ ಪವನ್ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಪವನ್ ತಂದೆ ದೇವರಾಜಲು ಮತ್ತು ತಾಯಿ ರಮ್ಯಾ ಘಟನೆ ಕುರಿತು ಮಾತನಾಡುತ್ತಾ, “ಬೆಳಗ್ಗೆ 7 ಗಂಟೆಗೆ ಪವನ್ ಕರೆ ಮಾಡಿದ್ದ. ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಅಂದ. ಅದಾದ ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಪಿಜಿ ನಿರ್ವಾಹಕರಿಂದ ಮಗ ಮೃತಪಟ್ಟಿದ್ದಾನೆಂಬ ದುಃಖಕರ ಸುದ್ದಿ ಬಂದಿತು,” ಎಂದು ಕಣ್ಣೀರಿನೊಂದಿಗೆ ಹೇಳಿದರು.

    ಪೋಷಕರು ಪಿಜಿ ನಿರ್ವಾಹಕರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು ಆರೋಪಿಸಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. “ಔಷಧ ಸಿಂಪಡಣೆ ಮಾಡುವ ಮುನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಬೇಕಿತ್ತು. ಆದರೆ ಅಂಥ ಮಾಹಿತಿ ನೀಡದೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ,” ಎಂದು ಆರೋಪಿಸಿದ್ದಾರೆ.

    ಈ ಪ್ರಕರಣದ ಹಿನ್ನೆಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ (Unnatural Death Report) ದಾಖಲಾಗಿದೆ. ಪೊಲೀಸರು ಪಿಜಿ ನಿರ್ವಾಹಕರು ಮತ್ತು ಔಷಧ ಸಿಂಪಡಣೆ ನಡೆಸಿದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಿಜಿಗಳ ಸಂಖ್ಯೆ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ನಡೆಯಬಾರದು ಎಂಬ ಬೇಡಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಮೊಳಗುತ್ತಿದೆ.

    apvc-iconPost Views: 28
  • ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲಬುರಗಿ: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ನೂತನ ಆಯುಕ್ತರಾಗಿ ಬಿ. ವೆಂಕಟಸಿಂಗ್ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ರೈಲು ನಿಲ್ದಾಣ ಹತ್ತಿರದ ಮಹಲ್-ಎ-ಶಾಹಿ ಅತಿಥಿಗೃಹ ಆವರಣದಲ್ಲಿರುವ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

    ಈ ವೇಳೆ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ವತಿಯಿಂದ ಆಯುಕ್ತರನ್ನು ಸನ್ಮಾನಿಸಿ ಶುಭಕೋರಲಾಯಿತು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಹನುಮಂತ ಬೋಧಾನ್, ಸಹ ಕಾರ್ಯದರ್ಶಿ ರುಕ್ಮಿಶ್ ಭಂಡಾರಿ, ಸದಸ್ಯ ವಿಟ್ಟಲ್ ಚಿಕಣಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ ಹಾಗೂ ವಾರ್ತಾ ಇಲಾಖೆಯ ಗ್ರಂಥಪಾಲಕ ರವಿ ಮಿರಾಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    apvc-iconPost Views: 10
  • TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    ರಾಜ್ಯದ ಸಾವಿರಾರು ಶಿಕ್ಷಕ ಹುದ್ದೆಗಳಿಗೆ ಬಾಗಿಲು ತೆಗೆಯುವ ಮಹತ್ವದ ಪರೀಕ್ಷೆಯಾದ ಶಿಕ್ಷಕರ ಅರ್ಹತಾ ಪರೀಕ್ಷೆ (TET) – 2025 ಗಾಗಿ ಕರ್ನಾಟಕ ಸರ್ಕಾರ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಶಿಕ್ಷಕ ವೃತ್ತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರಕಿದೆ.

    ಪರೀಕ್ಷೆಯ ದಿನಾಂಕ ಹಾಗೂ ಅಧಿಕೃತ ಪ್ರಕಟಣೆ:

    ಶಿಕ್ಷಕರ ಅರ್ಹತಾ ಪರೀಕ್ಷೆ ಡಿಸೆಂಬರ್ 7 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಪರೀಕ್ಷೆ ಕುರಿತಂತೆ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

    TET ಪರೀಕ್ಷೆಯ ಹಿನ್ನೆಲೆ ಮತ್ತು ಉದ್ದೇಶ:

    Right to Education” (RTE) ಕಾಯ್ದೆಯ ಸೆಕ್ಷನ್ 23 ಉಪವಿಭಾಗ (1) ರ ಪ್ರಕಾರ, ಶಿಕ್ಷಕರಾಗಿ ನೇಮಕಾತಿಗೆ ಅಗತ್ಯವಾದ ಕನಿಷ್ಠ ಅರ್ಹತೆಯನ್ನು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ (NCTE) ನಿಗದಿಪಡಿಸಿದೆ. ಈ ಕಾಯ್ದೆಯಡಿ, 2010ರ ಆಗಸ್ಟ್ 23, 2011ರ ಜುಲೈ 29 ಮತ್ತು 2018ರ ಜೂನ್ 28 ರಂದು ಹೊರಡಿಸಲಾದ ಅಧಿಸೂಚನೆಗಳ ಪ್ರಕಾರ, ಪ್ರಾಥಮಿಕ (1 ರಿಂದ 5ನೇ ತರಗತಿ) ಹಾಗೂ ಪ್ರೌಢ ಪ್ರಾಥಮಿಕ (6ರಿಂದ 8ನೇ ತರಗತಿ) ಮಟ್ಟದ ಶಿಕ್ಷಕರಾಗಿ ನೇಮಕಾತಿ ಪಡೆಯಲು TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

    ಶಿಕ್ಷಕರ ಅರ್ಹತಾ ಪರೀಕ್ಷೆಯ ಮಹತ್ವ:

    ಆರ್‌.ಟಿ.ಇ ಕಾಯ್ದೆಯ ಸೆಕ್ಷನ್ 2ರ ಉಪವಿಭಾಗ (ಎನ್) ಪ್ರಕಾರ, ಯಾವುದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅಭ್ಯರ್ಥಿಯು ಸರ್ಕಾರದಿಂದ ನಡೆಸಲಾಗುವ TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಪರೀಕ್ಷೆಯ ಉದ್ದೇಶವು ಬೋಧನಾ ವೃತ್ತಿಗೆ ಅಗತ್ಯವಾದ ಶೈಕ್ಷಣಿಕ ಕೌಶಲ್ಯ, ಪಾಠಮಾಲೆ ತಯಾರಿ, ವಿದ್ಯಾರ್ಥಿ ಮನೋವಿಜ್ಞಾನ ಹಾಗೂ ಪಠ್ಯಕ್ರಮದ ಅರಿವು ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸುವುದು.

    ಅರ್ಹತಾ ಮಾನದಂಡಗಳು:

    ಪೇಪರ್-I (1 ರಿಂದ 5ನೇ ತರಗತಿಗಳಿಗೆ): ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿರಬೇಕು.

    ಪೇಪರ್-II (6 ರಿಂದ 8ನೇ ತರಗತಿಗಳಿಗೆ): ಹಿರಿಯ ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಮತ್ತು B.Ed. ಪದವಿ ಹೊಂದಿರಬೇಕು.

    ಮುಖ್ಯ ಅಂಶಗಳು:

    ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ.

    ಪರೀಕ್ಷಾ ದಿನಾಂಕ: ಡಿಸೆಂಬರ್ 7, 2025

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಹಾಗೂ ಹಾಲ್‌ಟಿಕೆಟ್‌ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

    ಅಧಿಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್‌ನ್ನು ಸಂಪರ್ಕಿಸಬೇಕು.

    ಶಿಕ್ಷಕರಾಗಿ ಸೇವೆ ಸಲ್ಲಿಸಲು ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. TET ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಲು ಇದು ಪ್ರಮುಖ ಹಂತ. ಆದ್ದರಿಂದ, ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ, ತಯಾರಿ ಆರಂಭಿಸುವುದು ಸೂಕ್ತ.

    apvc-iconPost Views: 44
  • ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಸಜ್ಜು.!

    ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಸಜ್ಜು.!

    ಕರ್ನಾಟಕದ ಸರ್ಕಾರಿ ನೌಕರರಿಗೆ ಸಂತೋಷದ ಸುದ್ದಿ ಬಂದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನೀಡಿರುವ ಇತ್ತೀಚಿನ ಹೇಳಿಕೆ ಪ್ರಕಾರ, ನೌಕರರ ಹಿತಾಸಕ್ತಿಗಾಗಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿಯೇ ಪ್ರಮುಖವಾಗಿರುವುದು ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರಲು ನಡೆಯುತ್ತಿರುವ ಪ್ರಯತ್ನಗಳು.

    ರಾಜ್ಯ ಸರ್ಕಾರಿ ನೌಕರರ ಸಂಘವು 2026-27ರ ಅಂತ್ಯದೊಳಗೆ ಕೇಂದ್ರ ಸರ್ಕಾರದ ಮಾದರಿಯ ವೇತನ ಶ್ರೇಣಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಬದ್ಧವಾಗಿದೆ ಎಂದು ಸಂಘದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದರಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಹಾಗೂ ಸೌಲಭ್ಯಗಳು ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

    ನೌಕರರ ಹಿತಕ್ಕಾಗಿ ಸಂಘದ ಮುಂದಾಳತ್ವ:

    ಕಾರವಾರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ರಾಜ್ಯದ ನೌಕರರು ನೆಮ್ಮದಿಯಿಂದ ಬದುಕುವುದೇ ನಮ್ಮ ಸಂಘದ ಧ್ಯೇಯವಾಗಿದೆ. ಹೀಗಾಗಿ ನೌಕರರಿಗೆ ನೀಡಲಾಗುವ ಹಬ್ಬದ ಮುಂಗಡವನ್ನು ಪ್ರಸ್ತುತ ₹25,000 ರಿಂದ ₹50,000ಕ್ಕೆ ಹೆಚ್ಚಿಸಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ, ಎಂದು ತಿಳಿಸಿದ್ದಾರೆ. ಹೊಸ ಪಿಂಚಣಿ ಯೋಜನೆ (NPS) ಬದಲಿಗೆ ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರಲು ನಮ್ಮ ಸಂಘ ನಿರಂತರ ಪ್ರಯತ್ನಿಸುತ್ತಿದೆ. ನೌಕರರ ಭವಿಷ್ಯ ಭದ್ರತೆಗೆ ಇದು ಅತ್ಯಂತ ಅಗತ್ಯ ಎಂದು ತಿಳಿಸಿದ್ದಾರೆ.

    ನೌಕರರಿಗೆ ಕ್ಯಾಂಟೀನ್ ಸೌಲಭ್ಯ, ಗೃಹೋಪಯೋಗಿ ವಸ್ತುಗಳಿಗೆ ರಿಯಾಯಿತಿ:

    ನೌಕರರ ಆರ್ಥಿಕ ಭಾರ ಕಡಿಮೆ ಮಾಡಲು, ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್‌ಐಎಲ್ (MSIL) ಮುಖಾಂತರ ಹೊಸ ಯೋಜನೆ ರೂಪಿಸಲಾಗಿದೆ.

    ಈ ಯೋಜನೆಯಡಿ, ಸರ್ಕಾರಿ ನೌಕರರು 20 ರಿಂದ 25 ಶೇಕಡಾ ರಿಯಾಯಿತಿಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಪಡೆಯಲಿದ್ದಾರೆ.

    ಮೊದಲ ಹಂತದಲ್ಲಿ ಈ ಯೋಜನೆ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.

    ನೌಕರರ ಕುಟುಂಬ ಭದ್ರತೆಗೆ ಹೊಸ ವಿಮೆ ಯೋಜನೆ:

    ಕರ್ತವ್ಯ ನಿರ್ವಹಣೆಯ ವೇಳೆ ದುರ್ಘಟನೆಗೆ ಒಳಗಾಗಿ ಮರಣ ಹೊಂದಿದ ಸರ್ಕಾರಿ ನೌಕರರ ಕುಟುಂಬಕ್ಕೆ ₹1 ಕೋಟಿ ರೂ. ವಿಮೆ ಮೊತ್ತ ನೀಡುವ ಸ್ಯಾಲರಿ ಪ್ಯಾಕೇಜ್ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಇದರ ಮೂಲಕ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ಷಡಾಕ್ಷರಿ ತಿಳಿಸಿದ್ದಾರೆ.

    ಆರೋಗ್ಯ ಸಂಜೀವಿನಿ ಯೋಜನೆ:

    ಅಕ್ಟೋಬರ್ 1ರಿಂದ ರಾಜ್ಯ ಸರ್ಕಾರವು ‘ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ಜಾರಿಗೆ ತಂದಿದ್ದು, ಈಗ ಮೊದಲ ಹಂತದಲ್ಲಿ ಒಳರೋಗಿಗಳಿಗೆ ಸೌಲಭ್ಯ ಲಭ್ಯವಿದೆ.

    ಮುಂದಿನ ದಿನಗಳಲ್ಲಿ ಹೊರ ರೋಗಿಗಳಿಗೆ ಸಹ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶ ಇದೆ.

    ಮಹಿಳಾ ನೌಕರರು ತಮ್ಮ ತಂದೆ–ತಾಯಿಗಳನ್ನು ಸಹ ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ ಎಂಬುದು ವಿಶೇಷ.

    ಮಹಿಳಾ ನೌಕರರಿಗೆ ವಿಶೇಷ ರಜೆ:

    ಮಹಿಳಾ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, ಋತುಚಕ್ರದ ಅವಧಿಯಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆಗಳು ನೀಡುವಂತೆ ಸಂಘದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

    ಈ ಪ್ರಸ್ತಾವನೆಗೆ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

    ಇದರಿಂದ ರಾಜ್ಯದ 2.25 ಲಕ್ಷ ಮಹಿಳಾ ನೌಕರರು ಪ್ರಯೋಜನ ಪಡೆಯಲಿದ್ದಾರೆ.

    ಸಾಮಾಜಿಕ ಸಮೀಕ್ಷೆ ಕುರಿತು ಅಸಮಾಧಾನ:

    ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವೇಳೆ ನೌಕರರು ಅನುಭವಿಸಿದ ತೊಂದರೆಗಳ ಕುರಿತು ಮಾತನಾಡಿದ ಷಡಾಕ್ಷರಿ, 60 ಪ್ರಶ್ನೆಗಳಲ್ಲಿ ಅನೇಕ ಅನಾವಶ್ಯಕ ಪ್ರಶ್ನೆಗಳಿದ್ದರಿಂದ ನೌಕರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ.

    ಇನ್ನು , ರಾಜ್ಯ ಸರ್ಕಾರಿ ನೌಕರರ ಸಂಘದ ಈ ಪ್ರಕಟಣೆ ನೌಕರರ ಹಿತಾಸಕ್ತಿ, ಭದ್ರತೆ ಮತ್ತು ಸೌಲಭ್ಯಗಳ ಕಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬುದನ್ನು ತೋರಿಸುತ್ತದೆ.

    ಹಳೆ ಪಿಂಚಣಿ ಯೋಜನೆ ಜಾರಿಯ ಪ್ರಯತ್ನದಿಂದ ಹಿಡಿದು ಮಹಿಳಾ ನೌಕರರ ಕಲ್ಯಾಣದವರೆಗೆ, ಸರ್ಕಾರ ಮತ್ತು ಸಂಘದ ಸಂಯುಕ್ತ ಪ್ರಯತ್ನಗಳು ರಾಜ್ಯದ ಸರ್ಕಾರಿ ನೌಕರರ ಜೀವನಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ಭರವಸೆ ನೀಡುತ್ತಿವೆ.

    apvc-iconPost Views: 43
  • ಡಾಲರ್ ಎದುರು ಹೊಸ ಚೈತನ್ಯ ಪಡೆದ ರೂಪಾಯಿ!

    ಡಾಲರ್ ಎದುರು ಹೊಸ ಚೈತನ್ಯ ಪಡೆದ ರೂಪಾಯಿ!

    ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಸ್ವಲ್ಪ ಮಟ್ಟಿಗೆ ನಗೆ ಮೂಡಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು 9 ಪೈಸೆಗಳಷ್ಟು ಏರಿಕೆ ಕಂಡು 87.93 ರೂ.ಗೆ ತಲುಪಿದೆ ಎನ್ನಬಹುದು.

    ರೂಪಾಯಿ ಕಳೆದ ಕೆಲವು ದಿನಗಳಿಂದ ದುರ್ಬಲ ಹಾದಿಯಲ್ಲಿ ಸಾಗುತ್ತಿದ್ದರೂ, ಈಗಿನ ಮಾರುಕಟ್ಟೆ ಸ್ವಲ್ಪ ರೂಪಾಯಿ ಮೌಲ್ಯಕ್ಕೆ ಚೇತರಿಕೆಯುಂಟಾಗಿದೆ. ವಿದೇಶಿ ಬಂಡವಾಳದ ಒಳಹರಿವು, ಕಚ್ಚಾತೈಲದ ಬೆಲೆ ಇಳಿಕೆ ಹಾಗೂ ದೇಶೀಯ ಷೇರುಪೇಟೆಯ ಚೈತನ್ಯ ಇವೆಲ್ಲರೂ ಸೇರಿ ರೂಪಾಯಿಗೆ ಬೆಂಬಲ ಉಂಟಾಗಿದೆ.

    ಶುಕ್ರವಾರದ ಅಂತ್ಯದ ವೇಳೆಗೆ ರೂಪಾಯಿ 88.02 ರೂ. ಇದ್ದರೂ, ಸೋಮವಾರ ವಹಿವಾಟಿನ ಕೊನೆಯಲ್ಲಿ 87.93 ರೂ. ಗೆ ಮುಟ್ಟಿದೆ. ಬೆಳಿಗ್ಗೆ 87.94 ರೂ.ನಲ್ಲಿ ಆರಂಭವಾದ ರೂಪಾಯಿ ದಿನಪೂರ್ತಿ 87.74 ರೂ. ರಿಂದ 87.94 ರೂ. ಶ್ರೇಣಿಯಲ್ಲಿ ಚಲಿಸಿತು.

    ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರು ಮತ್ತೆ ಭಾರತೀಯ ಮಾರುಕಟ್ಟೆಯತ್ತ ಮುಖ ಮಾಡುತ್ತಿರುವುದು ರೂಪಾಯಿಗೆ ಶಕ್ತಿ ನೀಡಿದೆ. ಜೊತೆಗೆ ಅಂತರರಾಷ್ಟ್ರೀಯ ತೈಲದ ಬೆಲೆ ಇಳಿಕೆಯಿಂದ ಆಮದು ವೆಚ್ಚ ತಗ್ಗುವ ಸಾಧ್ಯತೆಯೂ ಇದೆ ಎಂದಿದ್ದಾರೆ.

    ಆದರೆ ತಜ್ಞರು ಎಚ್ಚರಿಕೆಯೊಂದನ್ನೂ ಸಹ ನೀಡುತ್ತಾರೆ ಜಾಗತಿಕ ಮಾರುಕಟ್ಟೆಯ ಚಲನೆ, ಅಮೆರಿಕದ ಬಡ್ಡಿದರ ನಿರ್ಧಾರಗಳು ಮತ್ತು ಡಾಲರ್‌ ಸೂಚ್ಯಂಕದ ಬದಲಾವಣೆಗಳು ಮುಂದಿನ ದಿನಗಳಲ್ಲಿ ರೂಪಾಯಿಯ ದಿಕ್ಕನ್ನು ನಿರ್ಧರಿಸಲಿವೆ.

    ಒಟ್ಟಾರೆ, ಈಗಿನ ಏರಿಕೆ ಸಣ್ಣದಾದರೂ ಅದು ಆಶಾದಾಯಕವಾಗಿದೆ. ರೂಪಾಯಿ ಬಲಪಡುವುದು ದೇಶದ ಆರ್ಥಿಕತೆಗೆ ಚೈತನ್ಯ ನೀಡುವ ಸೂಚನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಮುಂದಿನ ವಹಿವಾಟು ದಿನಗಳಲ್ಲಿ ರೂಪಾಯಿ ಈ ಚೈತನ್ಯ ಮುಂದುವರಿಸುತ್ತದೆಯೇ ಎನ್ನುವುದು ಕಾದು ನೋಡಬೇಕಾಗಿದೆ.

    apvc-iconPost Views: 39
  • ಎಚ್ಚರಿಕೆ: ಈ 10 ಫೋನ್ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು.!

    ಎಚ್ಚರಿಕೆ: ಈ 10 ಫೋನ್ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು.!

    ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇದೇ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸುವ ಹೊಸ ಹೊಸ ಮಾರ್ಗಗಳನ್ನು ಸ್ಕ್ಯಾಮರ್‌ಗಳು ಕಂಡುಹಿಡಿಯುತ್ತಿದ್ದಾರೆ. ಬ್ಯಾಂಕ್ ಖಾತೆ, ಲಾಟರಿ, ಡೆಲಿವರಿ, ಡೆಬಿಟ್ ಕಾರ್ಡ್ ಅಥವಾ ಬಹುಮಾನ ಯಾವ ವಿಷಯವನ್ನಾದರೂ ನೆಪವನ್ನಾಗಿ ಮಾಡಿಕೊಂಡು ಅವರು ಜನರಿಂದ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕಸಿದುಕೊಳ್ಳುತ್ತಾರೆ.

    ಇತ್ತೀಚೆಗೆ ‘ಬೀನ್ವೆರಿಫೈಡ್’ (BeenVerified) ಎಂಬ ಅಮೆರಿಕಾದ ಸೈಬರ್‌ಸಿಕ್ಯೂರಿಟಿ ಕಂಪನಿಯೊಂದು ಮಹತ್ವದ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಹೆಚ್ಚು ಸಂಖ್ಯೆಯ ಹಗರಣಗಳಿಗೆ ಬಳಸಲಾಗಿದ್ದ ಟಾಪ್ 10 ಮೋಸದ ಫೋನ್ ಸಂಖ್ಯೆಗಳು ಬಹಿರಂಗಗೊಂಡಿವೆ. ಈ ಸಂಖ್ಯೆಗಳ ಮೂಲಕ ಅನೇಕರು ಬಲಿಯಾಗಿರುವುದಾಗಿ ವರದಿಯಾಗಿದೆ. ನೀವು ಸಹ ನಿಮ್ಮ ಹಣ ಮತ್ತು ಡೇಟಾವನ್ನು ಕಾಪಾಡಿಕೊಳ್ಳಬೇಕೆಂದರೆ, ಕೆಳಗಿನ ಸಂಖ್ಯೆಗಳ ಕರೆ ಅಥವಾ ಮೆಸೇಜ್‌ಗಳಿಗೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ.

    ಹಗರಣಗಳಲ್ಲಿ ಹೆಚ್ಚು ಬಳಸಲಾಗಿರುವ 10 ಅಪಾಯಕಾರಿ ಸಂಖ್ಯೆಗಳು:

    (865) 630-4266:
    ಈ ಸಂಖ್ಯೆಯಿಂದ ಬರುವ ಕರೆಗಳಲ್ಲಿ ಜನರಿಗೆ “ನಿಮ್ಮ ವೆಲ್ಸ್ ಫಾರ್ಗೋ ಬ್ಯಾಂಕ್ ಖಾತೆ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ” ಎಂಬ ಸಂದೇಶ ಬರುತ್ತದೆ. ನಂತರ “ಅನ್‌ಲಾಕ್ ಮಾಡಲು ಬ್ಯಾಂಕ್‌ಗೆ ಕರೆ ಮಾಡಿ” ಎಂದು ಹೇಳುತ್ತಾರೆ. ಇದು ನಕಲಿ ಬ್ಯಾಂಕ್ ಹಗರಣ.

    (469) 709-7630:
    ಈ ಕರೆಗಳಲ್ಲಿ “ನಿಮ್ಮ ಪಾರ್ಸೆಲ್ ವಿತರಣೆ ವಿಫಲವಾಗಿದೆ” ಎಂಬ ನೆಪ ಹೇಳಿ, ನೀವು ಅಥವಾ ನಿಮ್ಮ ಬಂಧುಗಳ ಹೆಸರು ಬಳಸಿ, ಆನ್‌ಲೈನ್ ಲಿಂಕ್ ಒತ್ತಿಸಲು ಅಥವಾ ಕರೆ ಮಾಡಲು ಪ್ರೇರೇಪಿಸುತ್ತಾರೆ.

    (805) 637-7243:
    ವೀಸಾ ಕಾರ್ಡ್ ಹಗರಣ ವಿಭಾಗದಿಂದ ಕರೆ ಬಂದಿದೆ ಎಂದು ನಂಬಿಸಲು ಪ್ರಯತ್ನಿಸುವ ಮೋಸಗಾರರು ಈ ಸಂಖ್ಯೆಯನ್ನು ಬಳಸುತ್ತಾರೆ.

    (858) 605-9622:
    ನಿಮ್ಮ ಬ್ಯಾಂಕ್ ಖಾತೆ ತಡೆಹಿಡಿಯಲಾಗಿದೆ ಎಂಬ ಎಚ್ಚರಿಕೆ ಸಂದೇಶಗಳು ಈ ಸಂಖ್ಯೆಯಿಂದ ಬರುತ್ತವೆ. ನಿಜವಾದ ಬ್ಯಾಂಕ್‌ಗಳು ಇಂತಹ ಕರೆಗಳನ್ನು ಮಾಡುವುದಿಲ್ಲ.

    (863) 532-7969:
    ಯಾವುದೇ ಬ್ಯಾಂಕ್ ಹೆಸರು ಹೇಳದೆ “ನಿಮ್ಮ ಡೆಬಿಟ್ ಕಾರ್ಡ್ ಸ್ಥಗಿತಗೊಂಡಿದೆ” ಎಂದು ಹೇಳುವ ಕರೆಗಳು ಈ ಸಂಖ್ಯೆಯಿಂದ ಬಂದಿವೆ.

    (904) 495-2559:
    ಈ ಸಂಖ್ಯೆ ಮೂಲಕ ಜನರಿಗೆ “ನೀವು AT&T ಲಾಟರಿ ಗೆದ್ದಿದ್ದೀರಿ” ಎಂಬ ಸುಳ್ಳು ಸಂದೇಶಗಳು ಕಳುಹಿಸಲ್ಪಟ್ಟಿವೆ.

    (312) 339-1227:
    ತೂಕ ಇಳಿಸುವ ಉತ್ಪನ್ನಗಳು ಅಥವಾ ನಕಲಿ ಪ್ಯಾಕೇಜ್ ಹಗರಣಗಳನ್ನು ಉತ್ತೇಜಿಸಲು ಈ ಸಂಖ್ಯೆಯನ್ನು ಬಳಸಲಾಗಿದೆ.

    (917) 540-7996:
    ಸ್ಟ್ರೀಮ್ VI” ಎನ್ನುವ ಹೆಸರಿನಲ್ಲಿ ನಕಲಿ ಮಾರ್ಕೆಟಿಂಗ್ ಹಗರಣ ನಡೆಸಲಾಗಿದೆ.

    (347) 437-1689:
    ಉಚಿತ ಡೈಸನ್ ವ್ಯಾಕ್ಯೂಮ್ ಕ್ಲೀನರ್ ಅಥವಾ ಸಣ್ಣ ಡಾಲರ್ ಉಡುಗೊರೆಗಳ ಭರವಸೆ ನೀಡಿ ಜನರನ್ನು ವಂಚಿಸುವ ಕರೆಗಳು ಈ ಸಂಖ್ಯೆಯಿಂದ ಬರುತ್ತವೆ.

    (301) 307-4601:
    ಯುಎಸ್ಪಿಎಸ್ ವಿತರಣಾ ಹಗರಣ “ನಿಮ್ಮ ಪಾರ್ಸೆಲ್ ವಿಳಾಸ ತಪ್ಪಾಗಿದೆ” ಎಂಬ ನೆಪದಲ್ಲಿ ಲಿಂಕ್ ಕಳುಹಿಸಿ ವೈಯಕ್ತಿಕ ಮಾಹಿತಿ ಕಸಿಯುವ ಪ್ರಯತ್ನ.

    ಹಾಗಿದ್ದರೆ ನೀವು ಹೇಗೆ ಸುರಕ್ಷಿತರಾಗಬಹುದು?:
    ಅಜ್ಞಾತ ಸಂಖ್ಯೆಯಿಂದ ಬಂದ ಯಾವುದೇ ಕರೆ ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
    ಬ್ಯಾಂಕ್, ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಸರಕಾರಿ ಸಂಸ್ಥೆಗಳು ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಕರೆ ಮೂಲಕ ಕೇಳುವುದಿಲ್ಲ.
    ಯಾವುದೇ ಲಾಟರಿ ಅಥವಾ ಉಡುಗೊರೆ ಗೆದ್ದಿದ್ದೀರಿ ಎಂಬ ಸಂದೇಶ ಬಂದರೆ ಅದು ನೂರಕ್ಕೆ ನೂರು ಹಗರಣವಾಗಿರುತ್ತದೆ.
    ಸಂಶಯಾಸ್ಪದ ಸಂಖ್ಯೆಗಳನ್ನು ತಕ್ಷಣ “Block” ಮಾಡಿ ಮತ್ತು “Report Spam” ಆಯ್ಕೆ ಬಳಸಿ.

    ಬೀನ್ವೆರಿಫೈಡ್ ವರದಿಯ ಪ್ರಕಾರ, ಫೋನ್ ಹಗರಣಗಳು ದಿನೇದಿನೇ ಸುಧಾರಿತ ತಂತ್ರಜ್ಞಾನ ಬಳಸಿ ನಡೆಯುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರೂ ಎಚ್ಚರಿಕೆಯಿಂದ ಇರಬೇಕು. ಒಂದು ತಪ್ಪು ಕರೆ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮೊತ್ತವನ್ನೇ ಹಾಳುಮಾಡಬಹುದು. ಜಾಗರೂಕರಾಗಿರಿ, ಸುರಕ್ಷಿತರಾಗಿರಿ.

    apvc-iconPost Views: 44
  • ಒಂದೇ ಹೆಗಲಿಗೆ ಬ್ಯಾಗ್ ಹಾಕುವ ಅಭ್ಯಾಸ ಇದೆಯೇ? ಹಾಗಿದ್ರೆ ಎಚ್ಚರ!

    ಒಂದೇ ಹೆಗಲಿಗೆ ಬ್ಯಾಗ್ ಹಾಕುವ ಅಭ್ಯಾಸ ಇದೆಯೇ? ಹಾಗಿದ್ರೆ ಎಚ್ಚರ!

    ಶಾಲೆ, ಕಾಲೇಜು ಅಥವಾ ಕೆಲಸಕ್ಕೆ ಹೋಗುವಾಗ ಬ್ಯಾಗ್ ಹಾಕಿಕೊಳ್ಳುವುದು ಎಲ್ಲರಿಗೂ ತೀರಾ ಸಾಮಾನ್ಯ. ಆದರೆ ನಾವು ಒಂದೇ ಹೆಗಲಿಗೇ ಬ್ಯಾಗ್ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುತ್ತೇವೆ. ಈ ಸಣ್ಣ ಅಭ್ಯಾಸವೇ ಕಾಲಕ್ರಮೇಣ ಭುಜದ ನೋವು, ಕುತ್ತಿಗೆಯ ಬಿಗಿತ ಮತ್ತು ಸಂಧಿವಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ಬಹುತೇಕರು ಅರಿಯುವುದೇ ಇಲ್ಲ.

    ನಮ್ಮ ದೇಹ ಸಮತೋಲನಕ್ಕಾಗಿ ನಿರ್ಮಿತವಾಗಿದೆ. ಆದರೆ ನೀವು ನಿರಂತರವಾಗಿ ಒಂದೇ ಹೆಗಲಿಗೆ ಬ್ಯಾಗ್ ಹಾಕಿಕೊಂಡರೆ ದೇಹದ ತೂಕ ಒಂದು ಬದಿಗೆ ಹೆಚ್ಚು ಬೀಳುತ್ತದೆ. ಇದರ ಪರಿಣಾಮವಾಗಿ ಆ ಭಾಗದ ಸ್ನಾಯುಗಳು ಹೆಚ್ಚು ಕೆಲಸ ಮಾಡುತ್ತವೆ, ಮತ್ತೊಂದು ಬದಿಯ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ನಿಧಾನವಾಗಿ ಭುಜದ ಮೇಲೆ ಒತ್ತಡ ಹೆಚ್ಚಾಗಿ ಕೀಲುಗಳಲ್ಲಿ ನೋವು, ಕೀಲು ಕಳಚುವಿಕೆ ಹಾಗೂ ಉರಿಯೂತ ಕಾಣಿಸಿಕೊಳ್ಳಬಹುದು.

    ತಜ್ಞರ ಪ್ರಕಾರ, ಈ ರೀತಿಯ ಒತ್ತಡದಿಂದ ಭುಜದ ಕಾರ್ಟಿಲೆಜ್ ಹಾನಿಗೊಳಗಾದರೆ ಅದು ಮುಂದಿನ ದಿನಗಳಲ್ಲಿ ಸಂಧಿವಾತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಬೆನ್ನುಮೂಳೆಯ ವಕ್ರತೆ ಮತ್ತು ಕುತ್ತಿಗೆಯ ಬಿಗಿತವೂ ಉಂಟಾಗಬಹುದು. ಇದರ ಪರಿಣಾಮ ತಲೆನೋವು ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು.

    ಈ ಸಮಸ್ಯೆಯನ್ನು ತಪ್ಪಿಸಲು ಏನು ಮಾಡಬಹುದು?

    ಬ್ಯಾಗ್‌ನ ಎರಡೂ ಪಟ್ಟಿಗಳನ್ನು ಬಳಸಿರಿ. ಇದು ತೂಕವನ್ನು ಸಮವಾಗಿ ಹಂಚುತ್ತದೆ.

    ಒಂದೇ ಪಟ್ಟಿಯ ಬ್ಯಾಗ್ ಬಳಸುತ್ತಿದ್ದರೆ, ಭುಜಗಳನ್ನು ಆಗಾಗ ಬದಲಾಯಿಸಿ.

    ಭುಜ ಮತ್ತು ಬೆನ್ನು ಸ್ನಾಯುಗಳನ್ನು ಬಲಪಡಿಸುವ ಸರಳ ವ್ಯಾಯಾಮಗಳನ್ನು ಪ್ರತಿದಿನ ಮಾಡಿ.

    ಬ್ಯಾಗ್‌ನ ತೂಕವನ್ನು ಕಡಿಮೆ ಇಡಿ. ಅದು ನಿಮ್ಮ ದೇಹದ ತೂಕದ 10–15% ಕ್ಕಿಂತ ಹೆಚ್ಚು ಇರಬಾರದು.

    ಒಂದು ಮಾತಿನಲ್ಲಿ ಹೇಳುವುದಾದರೆ, ಒಂದೇ ಹೆಗಲಿಗೆ ಬ್ಯಾಗ್ ಹಾಕುವುದು ಸುಲಭವಾದಂತೆ ಕಂಡರೂ, ಅದರ ಪರಿಣಾಮ ಗಂಭೀರವಾಗಿರಬಹುದು. ಆದ್ದರಿಂದ ಮುಂದಿನಿಂದಲೇ ಎಚ್ಚರಿಕೆ ವಹಿಸಿ ಎರಡು ಹೆಗಲಿಗೂ ಸಮತೋಲನ ನೀಡಿರಿ, ಭುಜದ ನೋವು ನಿಮ್ಮ ಜೀವನದ ಭಾಗವಾಗದಂತೆ ನೋಡಿಕೊಳ್ಳಿ!

    apvc-iconPost Views: 44
  • ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ನಾಯಕತ್ವದ ಗಾಳಿ – ಶಾಹೀನ್ ಶಾ ಅಫ್ರಿದಿಗೆ ಹೊಸ ಜವಾಬ್ದಾರಿ!

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ನಾಯಕತ್ವದ ಗಾಳಿ – ಶಾಹೀನ್ ಶಾ ಅಫ್ರಿದಿಗೆ ಹೊಸ ಜವಾಬ್ದಾರಿ!

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಬದಲಾವಣೆಯ ಅಲೆ ಬೀಸಿದೆ. ಪಾಕ್ ಕ್ರಿಕೆಟ್ ಬೋರ್ಡ್ (PCB) ಇತ್ತೀಚಿಗೆ ಪ್ರಕಟಿಸಿದ ಹೊಸ ನಿರ್ಧಾರದಿಂದ, ಮೊಹಮ್ಮದ್ ರಿಜ್ವಾನ್ ಅವರ ಏಕದಿನ (ODI) ನಾಯಕತ್ವ ಅವಧಿಗೆ ತೆರೆ ಬಿದ್ದಿದೆ. ಅವರ ಸ್ಥಾನಕ್ಕೆ ಯುವ ವೇಗ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ಹೊಸ ನಾಯಕನಾಗಿ ನೇಮಕ ಮಾಡಲಾಗಿದೆ.

    ಇತ್ತೀಚಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದಿಂದ ನಿರೀಕ್ಷಿತ ಫಲಿತಾಂಶಗಳು ಬರದಿದ್ದರಿಂದ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರಿಂದ, ಪಿಸಿಬಿ ಬೋರ್ಡ್ ತಕ್ಷಣ ಕ್ರಮ ಕೈಗೊಂಡಿದೆ. ಹೊಸ ಚೈತನ್ಯ ತರಬೇಕೆಂಬ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

    ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನದ ವೇಗದ ಬೌಲಿಂಗ್‌ನ ಪ್ರತೀಕವಾಗಿರುವ ಯುವ ಆಟಗಾರ. ಕೇವಲ 25ರ ಹರೆಯದಲ್ಲೇ 60ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು, ತಮ್ಮ ವೇಗ, ಶಿಸ್ತು ಹಾಗೂ ನಿರಂತರ ಪ್ರದರ್ಶನದಿಂದ ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ. ಅವರ ನಾಯಕತ್ವ ಶೈಲಿ ಆತ್ಮವಿಶ್ವಾಸದೊಂದಿಗೆ ನಿಂತು, ತಂಡವನ್ನು ಒಗ್ಗೂಡಿಸುವ ಗುಣವನ್ನು ಹೊಂದಿದ್ದಾರೆ ಎಂಬುದೇ ಇದಕ್ಕೆ ಮುಖ್ಯ ಕಾರಣ.

    ಅಫ್ರಿದಿ ಮೊದಲು ಟಿ20 ತಂಡದ ನಾಯಕತ್ವವನ್ನು ಕೆಲವು ಪಂದ್ಯಗಳಲ್ಲಿ ನಿರ್ವಹಿಸಿದ್ದರು. ಆದರೆ ಈಗ ಅವರಿಗೆ ದೊಡ್ಡ ವೇದಿಕೆಯಾಗಿ ಏಕದಿನ ತಂಡದ ಪೂರ್ಣ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಪಾಕ್ ಕ್ರಿಕೆಟ್ ಅಭಿಮಾನಿಗಳು ಈಗ “ಶಾಹೀನ್ ಯುಗ” ಪ್ರಾರಂಭವಾಗುತ್ತದೆ ಎಂಬ ಆಶಾಭಾವದಲ್ಲಿದ್ದಾರೆ.

    ಆದರೆ ಗಮನಿಸಬೇಕಾದ ಅಂಶವೆಂದರೆ, ಕಳೆದ ಒಂದು ವರ್ಷದಲ್ಲೇ ಪಾಕಿಸ್ತಾನ ತಂಡದಲ್ಲಿ ಇದು ಮೂರನೇ ನಾಯಕತ್ವ ಬದಲಾವಣೆ. ಇದು ತಂಡದ ಒಳಗಿನ ಅಸ್ಥಿರತೆಯನ್ನು ತೋರಿಸುತ್ತಿದೆ. ಹೊಸ ನಾಯಕ ಶಾಹೀನ್ ಶಾ ಅಫ್ರಿದಿ ಈ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಂಡಕ್ಕೆ ಹೊಸ ದಿಕ್ಕು ಹೇಗೆ ನೀಡುತ್ತಾರೆ ಎಂಬುದು ಮುಂದಿನ ಸರಣಿಗಳಲ್ಲಿ ಸ್ಪಷ್ಟವಾಗಲಿದೆ.

    ಒಟ್ಟು ಹೇಳುವುದಾದರೆ, ಪಾಕ್ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಮೊಹಮ್ಮದ್ ರಿಜ್ವಾನ್ ಯುಗ ಮುಗಿದಿದ್ದು, ಶಾಹೀನ್ ಶಾ ಅಫ್ರಿದಿ ಕಾಲ ಶುರುವಾಗಿದೆ. ಯುವ ಶಕ್ತಿ, ಉತ್ಸಾಹ ಮತ್ತು ಹೊಸ ತಂತ್ರದ ಸಂಕೇತವಾದ ಶಾಹೀನ್, ಪಾಕಿಸ್ತಾನ ಕ್ರಿಕೆಟ್‌ಗೆ ಹೊಸ ಜೀವನ ತುಂಬಬಹುದೇ?

    apvc-iconPost Views: 2