Blog

  • ಹುಬ್ಬಳ್ಳಿ–ಪಂಢರಪುರ ನಡುವೆ ವಿಶೇಷ ರೈಲು ಸಂಚಾರ

    ಹುಬ್ಬಳ್ಳಿ–ಪಂಢರಪುರ ನಡುವೆ ವಿಶೇಷ ರೈಲು ಸಂಚಾರ

    ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿ–ಪಂಢರಪುರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಹಮ್ಮಿಕೊಂಡಿದೆ. ಈ ವೇಳೆ ಭಕ್ತರ ಅನುಕೂಲಕ್ಕಾಗಿ ನಾಲ್ಕು ದಿನಗಳ ಕಾಲ ಕಾಯ್ದಿರಿಸದ ವಿಶೇಷ ರೈಲು ಓಡಿಸಲಿದ್ದು, ಭಕ್ತರ ಯಾತ್ರೆಗೆ ಸುಲಭ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.

    ಈ ವಿಶೇಷ ರೈಲು ಅಕ್ಟೋಬರ್ 30, 31 ಮತ್ತು ನವೆಂಬರ್ 2, 3 ರಂದು ಸಂಚರಿಸಲಿದೆ. ಪ್ರತಿ ಪ್ರಯಾಣದ ದಿನದಲ್ಲಿ ಹುಬ್ಬಳ್ಳಿಯಿಂದ ಬೆಳಿಗ್ಗೆ 5.10ಕ್ಕೆ ರೈಲು ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಪವಿತ್ರ ಪಂಢರಪುರ ತಲುಪಲಿದೆ. ಮರಳಿ ಪಂಢರಪುರದಿಂದ ಸಂಜೆ 6 ಗಂಟೆಗೆ ರೈಲು ಹೊರಟು, ಮರುದಿನ ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

    ಈ ನಾಲ್ಕು ದಿನಗಳ ಸಂಚಾರವು ಕಾರ್ತಿಕ ಏಕಾದಶಿ ಸಂದರ್ಭಕ್ಕೆ ಯೋಜಿಸಲಾಗಿದ್ದು, ಪಂಢರಪುರದ ವಿಠೋಬ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ಪ್ರಯಾಣ ಮಾಡುವ ಹಿನ್ನೆಲೆ ರೈಲ್ವೆ ಈ ವಿಶೇಷ ರೈಲು ಸೇವೆ ನೀಡಲಾಗಿದೆ. ಭಕ್ತರಿಗೆ ಹಿತಕರ ಸಮಯದಲ್ಲಿ ರೈಲು ಹೊರಡುವಂತೆ ಹಾಗೂ ತಲುಪುವಂತೆ ಸಮಯ ನಿಗದಿಪಡಿಸಲಾಗಿದೆ.

    ಹುಬ್ಬಳ್ಳಿ–ಪಂಢರಪುರ ನಡುವಿನ ಈ ಸೇವೆ ರೈಲು ಸಂಖ್ಯೆ 07367/07368 ಅಡಿಯಲ್ಲಿ ಸಂಚರಿಸಲಿದೆ. ಬೆಳಗ್ಗೆ ಹೊರಡುವ ರೈಲು ಪಂಢರಪುರ ತಲುಪಿದ ಬಳಿಕ, ಅಂದೇ ಸಂಜೆ ಮರಳಿ ಪ್ರಯಾಣ ಆರಂಭಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಇದರೊಂದಿಗೆ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ರೈಲ್ವೆ ಮಂಡಳಿಯು ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಯಶವಂತಪುರ–ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ (06261/06262) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ಮೊದಲು ಅಕ್ಟೋಬರ್ 2025ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿದ್ದ ಈ ರೈಲುಗಳು ಈಗ ನವೆಂಬರ್ ಅಂತ್ಯದವರೆಗೆ ಮುಂದುವರಿಯಲಿವೆ.

    ರೈಲು ಸಂಖ್ಯೆ 06261 ಯಶವಂತಪುರ–ಮುಜಫ್ಫರಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಅಕ್ಟೋಬರ್ 29ರಿಂದ ನವೆಂಬರ್ 26ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಅದೇ ರೀತಿಯಾಗಿ 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ರೈಲು ಅಕ್ಟೋಬರ್ 31ರಿಂದ ನವೆಂಬರ್ 28ರವರೆಗೆ ಪ್ರತಿ ಶುಕ್ರವಾರ ಓಡಲಿದೆ.

    ಈ ಎರಡು ವಿಶೇಷ ರೈಲುಗಳು ತಮ್ಮ ಹಳೆಯ ನಿಲುಗಡೆಗಳು ಹಾಗೂ ಬೋಗಿಗಳ ವಿನ್ಯಾಸದಲ್ಲೇ ಮುಂದುವರಿಯಲಿವೆ. ಆದರೆ, ಒಂದು ಸಣ್ಣ ಬದಲಾವಣೆ ಪ್ರಯಾಣಿಕರು ಗಮನಿಸಬೇಕಾದದ್ದು 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ರೈಲು ಈಗ ಮುಂಚೆ ಇದ್ದಂತೆ ಬೆಳಿಗ್ಗೆ 6:30ಕ್ಕೆ ಅಲ್ಲ, ಬೆಳಿಗ್ಗೆ 7:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

    ಸಮಯದಲ್ಲಿ ಈ ಬದಲಾವಣೆ ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದ್ದು, ರೈಲುಗಳು ಸರಾಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕಾರ್ತಿಕ ಮಾಸದ ಈ ವಿಶೇಷ ಸಂದರ್ಭದಲ್ಲಿ ಭಕ್ತರು ಸುಗಮವಾಗಿ ಪಂಢರಪುರ ದರ್ಶನಕ್ಕೆ ತೆರಳಲು ಹಾಗೂ ಉತ್ತರ ಭಾರತದ ದೀರ್ಘ ಪ್ರಯಾಣಿಕರಿಗೆ ಸಹಾಯವಾಗುವಂತೆ ಈ ಹೊಸ ವೇಳಾಪಟ್ಟಿ ಜಾರಿಯಾಗಿದೆ.

    apvc-iconPost Views: 22
  • ನ.01ರಿಂದ ಹೊಸ ಆರ್ಥಿಕ ಮತ್ತು ಪಡಿತರ ನಿಯಮಗಳಲ್ಲಿ ಬದಲಾವಣೆ!

    ನ.01ರಿಂದ ಹೊಸ ಆರ್ಥಿಕ ಮತ್ತು ಪಡಿತರ ನಿಯಮಗಳಲ್ಲಿ ಬದಲಾವಣೆ!

    ನವೆಂಬರ್ 1, 2025ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾಮಾನ್ಯ ನಾಗರಿಕರು, ಬ್ಯಾಂಕ್ ಗ್ರಾಹಕರು, ಹೂಡಿಕೆದಾರರು ಹಾಗೂ ಪಡಿತರ ಚೀಟಿದಾರರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವಂತಿವೆ.

    ಬ್ಯಾಂಕಿಂಗ್, ಆಧಾರ್ ನವೀಕರಣ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆ, ಮ್ಯೂಚುವಲ್ ಫಂಡ್ ಹೂಡಿಕೆ ನಿಯಮಗಳು ಮತ್ತು ಉಚಿತ ಪಡಿತರ ವ್ಯವಸ್ಥೆ ಇವುಗಳೆಲ್ಲವೂ ಹೊಸ ರೂಪ ಪಡೆಯಲಿವೆ. ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಈ ಬದಲಾವಣೆಗಳನ್ನು ಪಾರದರ್ಶಕತೆ, ಸುರಕ್ಷತೆ ಮತ್ತು ಸಮರ್ಥ ನಿರ್ವಹಣೆಯನ್ನು ಹೆಚ್ಚಿಸಲು ತರಲಿವೆ.

    ಆಧಾರ್ ನವೀಕರಣ ಪ್ರಕ್ರಿಯೆಯಲ್ಲಿ ದೊಡ್ಡ ಸುಧಾರಣೆ: 

    ಯುಐಡಿಎಐ (UIDAI) ಈಗ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಪೂರ್ಣವಾಗಿ ಡಿಜಿಟಲ್ ಮಾಡಿದ್ದಾರೆ.

    ಹಿಂದಿನಂತೆ ಕೇಂದ್ರಕ್ಕೆ ಹೋಗಿ ದಾಖಲೆ ನೀಡುವ ಅವಶ್ಯಕತೆ ಇಲ್ಲ. ಈಗ ನೀವು ಆನ್‌ಲೈನ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಯನ್ನು ಸುಲಭವಾಗಿ ನವೀಕರಿಸಬಹುದು.

    ಕೇವಲ ಬಯೋಮೆಟ್ರಿಕ್ (ಫಿಂಗರ್ ಪ್ರಿಂಟ್ ಅಥವಾ ಐರಿಸ್) ಬದಲಾವಣೆಗೆ ಮಾತ್ರ ಆಧಾರ್ ಕೇಂದ್ರಕ್ಕೆ ಭೇಟಿ ಅಗತ್ಯ.

    ಹೊಸ ವ್ಯವಸ್ಥೆಯಡಿಯಲ್ಲಿ, ಪ್ಯಾನ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, MGNREGA ಅಥವಾ ಶಾಲಾ ದಾಖಲೆಗಳಂತಹ ಸರ್ಕಾರಿ ಡೇಟಾಬೇಸ್‌ಗಳೊಂದಿಗೆ UIDAI ನಿಮ್ಮ ವಿವರಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ ಅಂದರೆ ದಾಖಲೆ ಅಪ್‌ಲೋಡ್ ಪ್ರಕ್ರಿಯೆ ಇಲ್ಲದೆ ನವೀಕರಣ ಸಾಧ್ಯ.

    ಬ್ಯಾಂಕ್ ನಿಯಮಗಳಲ್ಲಿ ಹೊಸ ತಿದ್ದುಪಡಿ: 

    ಬ್ಯಾಂಕಿಂಗ್ ವಲಯದಲ್ಲಿಯೂ ನವೆಂಬರ್ 1ರಿಂದ ಪ್ರಮುಖ ಬದಲಾವಣೆ ಜಾರಿಗೆ ಬರುತ್ತದೆ.

    ಬ್ಯಾಂಕಿಂಗ್ ಕಾನೂನು (ಪರಿಷ್ಕರಣೆ) ಕಾಯ್ದೆ 2025 ಪ್ರಕಾರ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆ, ಲಾಕರ್ ಮತ್ತು ಸುರಕ್ಷಿತ ಕಸ್ಟಡಿ ಖಾತೆಗಳಿಗೆ ಗರಿಷ್ಠ ನಾಲ್ಕು ನಾಮಿನಿಗಳನ್ನು ನೇಮಿಸಿಕೊಳ್ಳಬಹುದು.

    ಅಷ್ಟೇ ಅಲ್ಲ, ಪ್ರತಿಯೊಬ್ಬ ನಾಮಿನಿಗೆ ಶೇಕಡಾವಾರು ಪಾಲು (percentage share) ನೀಡುವ ಅವಕಾಶವೂ ಇದೆ.

    ಮೊದಲ ನಾಮಿನಿ ಜೀವಂತವಾಗಿಲ್ಲದಿದ್ದರೆ, ಅವರ ಪಾಲು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗಾಯಿಸಲಾಗುತ್ತದೆ.

    ಇದು ಬ್ಯಾಂಕ್ ಗ್ರಾಹಕರಿಗೆ ಅವರ ಹಣಕಾಸು ಹಕ್ಕುಗಳನ್ನು ನಿರ್ವಹಿಸಲು ಹೆಚ್ಚಿನ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

    ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ ಹೊಸ ನಿಯಮಗಳು: 

    SBI ಕ್ರೆಡಿಟ್ ಕಾರ್ಡ್ ಗ್ರಾಹಕರಿಗೂ ನವೆಂಬರ್ 1ರಿಂದ ಹೊಸ ನಿಯಮಗಳು ಅನ್ವಯಿಸುತ್ತವೆ. ಅಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಿಗೆ ಈಗ 3.75% ಶುಲ್ಕ ವಿಧಿಸಲಾಗುತ್ತದೆ. D CRED, CheQ, Mobikwik ಮುಂತಾದ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಶಾಲೆ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ಹೆಚ್ಚುವರಿ 1% ಶುಲ್ಕ ಅನ್ವಯಿಸುತ್ತದೆ, ಆದರೆ ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ POS ಯಂತ್ರದ ಮೂಲಕ ನೇರ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.

    ₹1,000 ಕ್ಕಿಂತ ಹೆಚ್ಚು ಮೊತ್ತವನ್ನು ವ್ಯಾಲೆಟ್‌ಗೆ ಲೋಡ್ ಮಾಡಿದರೆ 1% ಶುಲ್ಕ ವಿಧಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್‌ನಿಂದ ಚೆಕ್ ಪಾವತಿಗಳಿಗೆ ₹200 ಶುಲ್ಕ ವಿಧಿಸಲಾಗುತ್ತದೆ.

    ಈ ಕ್ರಮಗಳು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಎಸ್‌ಬಿಐ ಕೈಗೊಂಡಿರುವ ಕ್ರಮಗಳಾಗಿವೆ.

    ಸೆಬಿ (SEBI) ಹೊಸ ಹೂಡಿಕೆ ನಿಯಮಗಳು: 

    ಹೂಡಿಕೆ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸಲು ಭಾರತೀಯ ಮೌಲ್ಯಪತ್ರ ಮತ್ತು ವಿನಿಮಯ ಮಂಡಳಿ (SEBI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಅಧಿಕಾರಿಗಳು ಅಥವಾ ಅವರ ಕುಟುಂಬ ಸದಸ್ಯರು ₹15 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು (ಟ್ರಾನ್ಸಾಕ್ಷನ್) ಮಾಡಿದರೆ, ಅದನ್ನು ಅನುಸರಣಾ ಅಧಿಕಾರಿಗೆ (Compliance Officer) ಕಡ್ಡಾಯವಾಗಿ ವರದಿ ಮಾಡಬೇಕಾಗಿದೆ.

    ಇದರಿಂದ ಒಳಗಿನ ವಹಿವಾಟು (insider trading) ನಿಯಂತ್ರಣ ಹಾಗೂ ಹೂಡಿಕೆದಾರರ ಹಿತಾಸಕ್ತಿ ಕಾಪಾಡುವುದು ಉದ್ದೇಶ.

    ಪಡಿತರ ಚೀಟಿ (Ration Card) ನಿಯಮಗಳಲ್ಲಿ ಬದಲಾವಣೆ:

    ಕೇಂದ್ರ ಸರ್ಕಾರವು ಉಚಿತ ಪಡಿತರ ಯೋಜನೆಯಲ್ಲೂ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಹೊಸ ನಿಯಮಗಳು ನವೆಂಬರ್ 1, 2025 ರಿಂದ ಜಾರಿಗೆ ಬರುತ್ತವೆ ಮತ್ತು ಕೋಟ್ಯಂತರ ಪಡಿತರ ಚೀಟಿದಾರರ ಮೇಲೆ ಪರಿಣಾಮ ಬೀರುತ್ತವೆ. ಸರ್ಕಾರವು ಪ್ರತಿ ಪಡಿತರ ಚೀಟಿದಾರರಿಗೂ ಹೊಸ ಅರ್ಹತಾ ಪರಿಶೀಲನೆ ನಡೆಸಲಿದೆ.

    ಕೆಳಗಿನವರು ತಮ್ಮ BPL ಪಡಿತರ ಚೀಟಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ:

    ನಿಗದಿತ ಆದಾಯ ಮಿತಿಗಿಂತ ಹೆಚ್ಚುಗಳಿಸುವವರು.

    ಸರ್ಕಾರಿ ಉದ್ಯೋಗಿಗಳು ಅಥವಾ ಪಿಂಚಣಿ ಪಡೆಯುವವರು.

    ವಸತಿ ಯೋಜನೆಗಳು ಅಥವಾ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುವವರು. ನಾಲ್ಕು ಚಕ್ರದ ವಾಹನ ಅಥವಾ ದೊಡ್ಡ ವ್ಯವಹಾರ ಹೊಂದಿರುವವರು. ಸುಳ್ಳು ಅಥವಾ ನಕಲಿ ಮಾಹಿತಿ ನೀಡಿದವರು. ಪರಿಶೀಲನೆಯಲ್ಲಿ ಸಹಕರಿಸದವರು.

    ಸರ್ಕಾರವು ಒನ್ ನೇಷನ್, ಒನ್ ರೇಷನ್ ಕಾರ್ಡ್ ನೀತಿಯಡಿಯಲ್ಲಿ ಪಡಿತರ ಚೀಟಿದಾರರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ ಪರಿಶೀಲಿಸುತ್ತದೆ, ಅರ್ಥಾತ್ ಅರ್ಹತೆ ಇಲ್ಲದ ಫಲಾನುಭವಿಗಳನ್ನು ಬೇರ್ಪಡಿಸಲಾಗುತ್ತದೆ.

    ಒಟ್ಟಾರೆಯಾಗಿ, ನವೆಂಬರ್ 1, 2025ರಿಂದ ಜಾರಿಗೆ ಬರುವ ಈ ನಿಯಮಗಳು ಭಾರತದ ಆರ್ಥಿಕ, ಹೂಡಿಕೆ ಹಾಗೂ ಸಾರ್ವಜನಿಕ ವಲಯದ ಕಾರ್ಯವಿಧಾನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿವೆ.

    ಆಧಾರ್‌ನಿಂದ ಹಿಡಿದು ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಮ್ಯೂಚುವಲ್ ಫಂಡ್ ಮತ್ತು ಪಡಿತರ ಚೀಟಿದಾರರಿಗೆ ಪ್ರತಿಯೊಂದು ವಿಭಾಗದಲ್ಲಿಯೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುರಕ್ಷತೆಯ ನವೀನ ವ್ಯವಸ್ಥೆ ಸ್ಥಾಪನೆಯಾಗಲಿದೆ.

    apvc-iconPost Views: 16
  • 5 ವರ್ಷಗಳ ಸೇವೆಯ ನಂತರ ದೊರೆಯುವ ಕಾನೂನುಬದ್ಧ ಹಕ್ಕು.! ಗ್ರಾಚ್ಯುಟಿಯ ಸಂಪೂರ್ಣ ಮಾಹಿತಿ

    5 ವರ್ಷಗಳ ಸೇವೆಯ ನಂತರ ದೊರೆಯುವ ಕಾನೂನುಬದ್ಧ ಹಕ್ಕು.! ಗ್ರಾಚ್ಯುಟಿಯ ಸಂಪೂರ್ಣ ಮಾಹಿತಿ

    ಉದ್ಯೋಗ ಜೀವನದಲ್ಲಿ ಪ್ರತಿಯೊಬ್ಬ ನೌಕರನಿಗೂ ಒಂದು ಗುರಿ ಇರುತ್ತದೆ ಭದ್ರ ಭವಿಷ್ಯವನ್ನು ನಿರ್ಮಿಸುವುದು. ವರ್ಷಗಳ ಕಾಲ ನಿಷ್ಠೆಯಿಂದ, ಪರಿಶ್ರಮದಿಂದ ಕೆಲಸ ಮಾಡಿದ ನಂತರ ನಿವೃತ್ತಿ ಅಥವಾ ಉದ್ಯೋಗ ಬದಲಾವಣೆ ಸಮಯದಲ್ಲಿ ಗ್ರಾಚ್ಯುಟಿ ಎಂಬುದು ಆರ್ಥಿಕ ಭದ್ರತೆ ನೀಡುವ ಪ್ರಮುಖ ಲಾಭವಾಗಿದೆ. ಇದು ಕೇವಲ ಹಣಕಾಸಿನ ಸಹಾಯವಲ್ಲ ನೌಕರರ ನಿಷ್ಠೆ, ದೀರ್ಘಾವಧಿ ಸೇವೆ ಮತ್ತು ಸಂಸ್ಥೆಯ ಮೇಲಿನ ಬದ್ಧತೆಯ ಪ್ರತಿಫಲವಾಗಿದೆ. ಭಾರತದ Payment of Gratuity Act, 1972 ಪ್ರಕಾರ, ಗ್ರಾಚ್ಯುಟಿ ಒಂದು ಕಾನೂನುಬದ್ಧ ಹಕ್ಕಾಗಿದೆ. ಈ ಕಾನೂನಿನ ಉದ್ದೇಶ ನೌಕರರ ಜೀವನದ ಸ್ಥಿರತೆಯನ್ನು ಖಾತ್ರಿಪಡಿಸುವುದು ಮತ್ತು ನಿವೃತ್ತಿಯ ನಂತರವೂ ಆರ್ಥಿಕ ಸುರಕ್ಷತೆ ಒದಗಿಸುವುದು.

    ಗ್ರಾಚ್ಯುಟಿ ಎಂದರೇನು?
    ಗ್ರಾಚ್ಯುಟಿ ಎಂದರೆ, ನೌಕರರು ಒಂದು ಸಂಸ್ಥೆಯಲ್ಲಿ ನಿರಂತರವಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಉದ್ಯೋಗದಾತರಿಂದ ನೀಡಲಾಗುವ ಆರ್ಥಿಕ ಮೊತ್ತ. ಇದು ನೌಕರರ ಸೇವಾ ಅವಧಿಯ ಗೌರವ ಸೂಚಕವಾಗಿದೆ. ನೌಕರರು ನಿವೃತ್ತಿಯಾದಾಗ, ರಾಜೀನಾಮೆ ನೀಡಿದಾಗ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ (ಉದಾಹರಣೆಗೆ ಸಾವು ಅಥವಾ ಗಂಭೀರ ಅನಾರೋಗ್ಯ) ಈ ಮೊತ್ತವನ್ನು ಪಾವತಿಸಲಾಗುತ್ತದೆ.

    ಯಾರಿಗೆ ಗ್ರಾಚ್ಯುಟಿ ಸಿಗುತ್ತದೆ?:
    ಗ್ರಾಚ್ಯುಟಿ ಪಡೆಯಲು ನೌಕರರು ಕನಿಷ್ಠ 5 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.
    ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ,
    ನೌಕರರ ಸಾವು,
    ಅಪಘಾತ ಅಥವಾ ತೀವ್ರ ಅನಾರೋಗ್ಯ,
    ಅಥವಾ ಸೇವೆ ಮುಗಿಯುವ ಮುಂಚಿನ ಅಪಾಯಕಾರಿ ಪರಿಸ್ಥಿತಿಗಳು
    ಈ ಸಂದರ್ಭಗಳಲ್ಲಿ ಐದು ವರ್ಷ ಪೂರೈಸದಿದ್ದರೂ, ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಗ್ರಾಚ್ಯುಟಿ ಮೊತ್ತ ಪಾವತಿಸಲಾಗುತ್ತದೆ.
    ಈ ನಿಯಮ ನೌಕರರನ್ನು ಸಂಸ್ಥೆಯೊಂಗಿದೆ ದೀರ್ಘಾವಧಿಗೆ ಬದ್ಧವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

    ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ ಮಾಡುವುದು?:
    ಗ್ರಾಚ್ಯುಟಿ ಲೆಕ್ಕಾಚಾರ ಸರಳವಾದ ಒಂದು ಸೂತ್ರದ ಆಧಾರದ ಮೇಲೆ ಮಾಡಲಾಗುತ್ತದೆ,
    ಗ್ರಾಚ್ಯುಟಿ = (ಕೊನೆಯ ಸಂಬಳ × 15 × ಸೇವಾ ವರ್ಷಗಳು) ÷ 26
    ಕೊನೆಯ ಸಂಬಳ = ಮೂಲ ಸಂಬಳ + ಡಿಎ (Dearness Allowance)
    15 = ತಿಂಗಳ 15 ದಿನಗಳ ಸಂಬಳಕ್ಕೆ ಸಮನಾದ ಮೊತ್ತ
    26 = ತಿಂಗಳಲ್ಲಿ ಸರಾಸರಿ ಕೆಲಸದ ದಿನಗಳ ಸಂಖ್ಯೆ

    ಉದಾಹರಣೆ: 7 ವರ್ಷ ಸೇವೆ ಸಲ್ಲಿಸಿದ ನೌಕರನ ಲೆಕ್ಕಾಚಾರ
    ಒಬ್ಬ ನೌಕರನ ಕೊನೆಯ ಸಂಬಳ ₹70,000 ಎಂದು ಪರಿಗಣಿಸೋಣ. ಅವರು 7 ವರ್ಷಗಳ ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.
    ಹಂತ 1: ಕೊನೆಯ ಸಂಬಳವನ್ನು 15/26 ರೊಂದಿಗೆ ಗುಣಿಸೋಣ
    = ₹70,000 × (15/26)
    = ₹70,000 × 0.576923
    ≈ ₹40,384.62

    ಹಂತ 2: ಈ ಮೊತ್ತವನ್ನು ಸೇವಾ ವರ್ಷಗಳೊಂದಿಗೆ ಗುಣಿಸೋಣ
    = ₹40,384.62 × 7
    ≈ ₹2,82,692.34
    ಅಂತಿಮ ಗ್ರಾಚ್ಯುಟಿ ಮೊತ್ತ: ₹2,82,692

    ಗ್ರಾಚ್ಯುಟಿಯ ಪ್ರಮುಖ ಪ್ರಯೋಜನಗಳು
    ಆರ್ಥಿಕ ಭದ್ರತೆ:
    ನಿವೃತ್ತಿ ಅಥವಾ ಕೆಲಸ ಬಿಟ್ಟ ನಂತರ ಹಣಕಾಸಿನ ಹಿನ್ನಡೆ ತಪ್ಪಿಸಲು ಸಹಾಯ ಮಾಡುತ್ತದೆ.

    ನೌಕರರ ಪರಿಶ್ರಮಕ್ಕೆ ಗೌರವ:
    ಸಂಸ್ಥೆಯು ನಿಷ್ಠಾವಂತ ನೌಕರರನ್ನು ಗೌರವಿಸುವ ಮಾರ್ಗವಾಗಿದೆ.

    ತೆರಿಗೆ ಮುಕ್ತ ಲಾಭ:
    ₹20 ಲಕ್ಷ ರೂ.ವರೆಗೆ ಗ್ರಾಚ್ಯುಟಿ ಮೊತ್ತ ತೆರಿಗೆ ಮುಕ್ತವಾಗಿದೆ (ಆಕರ್ಷಕ ಲಾಭ).

    ಕುಟುಂಬದ ಸುರಕ್ಷತೆ:
    ತುರ್ತು ಸಂದರ್ಭಗಳಲ್ಲಿ (ಸಾವು ಅಥವಾ ಅನಾರೋಗ್ಯ) ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುತ್ತದೆ.

    ಗ್ರಾಚ್ಯುಟಿಯ ಮಹತ್ವ: ನೌಕರರ ಭವಿಷ್ಯದ ಆರ್ಥಿಕ ಆಧಾರ,
    ಗ್ರಾಚ್ಯುಟಿ ನೌಕರರಿಗಾಗಿ ಕೇವಲ ಒಂದು ಪಾವತಿ ಅಲ್ಲ, ಅದು ನಿಷ್ಠೆ, ಪರಿಶ್ರಮ ಮತ್ತು ಸೇವೆಯ ಮೌಲ್ಯವನ್ನು ಗುರುತಿಸುವ ಒಂದು ಗೌರವ ಸೂಚಕ. ನಿವೃತ್ತಿಯ ನಂತರವೂ ಈ ಮೊತ್ತ ಜೀವನದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮನೆ ಖರ್ಚು, ಆರೋಗ್ಯ, ಮಕ್ಕಳ ಶಿಕ್ಷಣ ಮುಂತಾದ ಅಗತ್ಯಗಳಲ್ಲಿ ಇದು ಉಪಯೋಗವಾಗುತ್ತದೆ. ಸಂಸ್ಥೆಯು ಗ್ರಾಚ್ಯುಟಿಯ ಮೂಲಕ ನೌಕರರೊಂದಿಗೆ ದೀರ್ಘಾವಧಿಯ ವಿಶ್ವಾಸದ ಬಾಂಧವ್ಯವನ್ನು ನಿರ್ಮಿಸುತ್ತದೆ. ನೌಕರನಿಗೂ ಈ ಮೊತ್ತದಿಂದ ಭರವಸೆ, ಶಾಂತಿ ಮತ್ತು ಭದ್ರತೆ ದೊರಕುತ್ತದೆ.

    ಒಟ್ಟಾರೆಯಾಗಿ, ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರತಿಯೊಬ್ಬ ನೌಕರರಿಗೂ ಗ್ರಾಚ್ಯುಟಿ ಹಕ್ಕು ಇದೆ. ಇದು ನೌಕರರ ಜೀವನದ ಭದ್ರತೆಗೆ ಕಾನೂನುಬದ್ಧವಾದ, ಮಾನವೀಯ ಹಾಗೂ ಗೌರವಯುತ ಪ್ರೋತ್ಸಾಹವಾಗಿದೆ.

    apvc-iconPost Views: 36
  • ವೀರಪ್ಪನ್ ಪುತ್ರಿ ವಿದ್ಯಾರಾಣಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ?

    ವೀರಪ್ಪನ್ ಪುತ್ರಿ ವಿದ್ಯಾರಾಣಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ?

    ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿರುವ ಒಂದು ವಿಡಿಯೋ ತುಣುಕಿನಿಂದ ಕಾಡಿನ ಕಳ್ಳ ವೀರಪ್ಪನ್ ಅವರ ಪುತ್ರಿಯರು ಮತ್ತೆ ಸುದ್ದಿಯಲ್ಲಿದ್ದಾರೆ. ಅಂಕಣಕಾರ ಶ್ರೀಕಂಠ ಬಾಳಗಂಚಿ ನೀಡಿರುವ ಸಂದರ್ಶನದ ಒಂದು ಭಾಗದಲ್ಲಿ ಅವರು “ವೀರಪ್ಪನ್ ಸತ್ತ ನಂತರ ಆರ್‌ಎಸ್ ಎಸ್ ಸಂಸ್ಥೆ ಅವರ ಮಗಳನ್ನು ಶಿಕ್ಷಣದ ದಾರಿಗೆ ತಂದಿತು. ಇಂದು ಅವರು ವಕೀಲೆಯಾಗಿ ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ” ಎಂದು ಹೇಳಿರುವುದು ಜನರ ಗಮನ ಸೆಳೆದಿದೆ.

    ಈ ವಿಡಿಯೋ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವೀರಪ್ಪನ್ ಪುತ್ರಿಯರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕುತೂಹಲ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.

    ವೀರಪ್ಪನ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ವಿದ್ಯಾರಾಣಿ ಮತ್ತು ಪ್ರಭಾರಾಣಿ. ತಂದೆಯ ಸಾವಿನ ನಂತರ ಇಬ್ಬರ ಬದುಕು ಸಂಪೂರ್ಣ ಬದಲಾಗಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಈ ಇಬ್ಬರು ಮಗಳುಗಳು ಜೀವನದ ನೂರಾರು ಕಠಿಣ ಹಾದಿಗಳನ್ನು ಎದುರಿಸಿ ತಮ್ಮದೇ ದಾರಿಯಲ್ಲಿ ಮುಂದುವರಿದಿದ್ದಾರೆ.

    ವಿದ್ಯಾರಾಣಿಯವರು ವಾರಾಣಸಿಯಲ್ಲಿರುವ ಆರ್‌ಎಸ್ಸೆಸ್‌ನ ಕಲ್ಯಾಣ ಆಶ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಕಾಲೇಜಿಲ್ಲಿ ಕಾನೂನು ಪದವಿ ಪೂರ್ಣಗೊಳಿಸಿ ವಕೀಲೆಯಾದರು. 2024ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಅವರು ಈಗ ಕೃಷ್ಣಗಿರಿಯಲ್ಲೇ ನೆಲೆಸಿ ವಕೀಲೆಯಾಗಿ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದ ಸ್ಟೇಟ್ಸ್‌ಮನ್ ವರದಿ ಪ್ರಕಾರ, ವಿದ್ಯಾರಾಣಿ ದಲಿತ ಕ್ರೈಸ್ತ ಯುವಕನನ್ನು ಮದುವೆಯಾಗಿದ್ದು, ಸ್ಥಳೀಯವಾಗಿ ಶಾಲೆ ನಡೆಸುತ್ತಿದ್ದಾರೆ.

    ತಂದೆಯ ದುಷ್ಕೀರ್ತಿ ಹಿನ್ನಲೆಯಲ್ಲಿ ಸಮಾಜದಿಂದ ದೂರವಿದ್ದ ಅವರು, ಶಿಕ್ಷಣ ಮತ್ತು ಸೇವೆಯ ಮೂಲಕ ಹೊಸ ಗುರುತನ್ನು ಗಳಿಸಿದ್ದಾರೆ. ವಿದ್ಯಾರಾಣಿ ಹಿಂದೆ ಬಿಜೆಪಿಗೆ ಸೇರಿದ್ದರು. ನಂತರ 2024ರ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆದು ನಾಮ್ ತಮಿಳರ್ ಕಚ್ಚಿ ಪಕ್ಷದ ಟಿಕೆಟ್‌ನಿಂದ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಆ ಚುನಾವಣೆಯಲ್ಲಿ ಸೋಲು ಕಂಡರು.

    ವೀರಪ್ಪನ್ ಅವರ ಕಿರಿಯ ಮಗಳು ಪ್ರಭಾರಾಣಿ ತಂದೆ ಮೃತಪಟ್ಟಾಗ ಕೇವಲ 11 ವರ್ಷದವಳು. ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಚೆನ್ನೈನ ವಕೀಲರೊಬ್ಬರು ಹೊತ್ತಿದ್ದರು. ಪ್ರಭಾರಾಣಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಆಕೆಯ ಪ್ರಸ್ತುತ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

    ವೀರಪ್ಪನ್ ಪುತ್ರಿಯರು ತಂದೆಯ ನೆರಳಿನಿಂದ ದೂರವಾಗಿ, ಶಿಕ್ಷಣ, ಗೌರವ ಮತ್ತು ಸಮಾಜಸೇವೆಯ ಜೀವನ ಕಟ್ಟಿಕೊಂಡಿದ್ದಾರೆ. ಅರಣ್ಯದಲ್ಲಿ ಹುಟ್ಟಿ ಬದುಕಿದ ತಂದೆಯ ಮಕ್ಕಳು ಇಂದಿನ ದಿನಗಳಲ್ಲಿ ಶಿಕ್ಷಣದ ಬೆಳಕಿನ ಮೂಲಕ ಹೊಸ ಜೀವನ ಕಟ್ಟಿಕೊಂಡಿರುವುದು ಮನಮುಟ್ಟುವ ಸಂಗತಿ.

    apvc-iconPost Views: 12
  • ಸಚಿವ ಸ್ಥಾನಕ್ಕೆ ನೀವು ಲಾಭಿ ಮಾಡಿ ನನ್ನ ತಕರಾರಿಲ್ಲ; ಶಾಸಕ ಸಿ.ಎಸ್ ನಾಡಗೌಡ

    ಸಚಿವ ಸ್ಥಾನಕ್ಕೆ ನೀವು ಲಾಭಿ ಮಾಡಿ ನನ್ನ ತಕರಾರಿಲ್ಲ; ಶಾಸಕ ಸಿ.ಎಸ್ ನಾಡಗೌಡ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಸಿ.ಎಸ್ ನಾಡಗೌಡ ಅವರಿಗೆ ಬರುವ ಪುನರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೇಳಬಾರದು ಎಂದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಗಾಗಿ ನಾಡಗೌಡರಿಗೆ ಈಗ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ ಎಂಬ ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಹೇಳಿಕೆಗೆ ತೀಕ್ಷ್ಣವಾಗಿ ಶಾಸಕ ಸಿ.ಎಸ್ ನಾಡಗೌಡ ಅವರು ತಿರುಗೇಟು ನೀಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ್, ಎಂ.ಬಿ ಪಾಟೀಲ್ ಅವರಿಗಾಗಲಿ ಎಲ್ಲಿಯೂ ನಾನು ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಲಾಭಿ ಮಾಡಿಲ್ಲ. ಜಿಲ್ಲೆಯಲ್ಲಿ 1981 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದೇನೆ. ಜಿಲ್ಲೆಯಲ್ಲಿ ಹಿರಿಯ ಶಾಸಕ ಹೀಗಾಗಿ ನನ್ನ ಮೀಸಲಾತಿಯಲ್ಲಿ ಸಚಿವ ಸ್ಥಾನ ಕೇಳುತ್ತಿದ್ದೆನೆ. ನೀವು ಸಹ ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸಿ ಇದಕ್ಕೆ ನನ್ನದು ಯಾವುದೇ ತಕರಾರಿಲ್ಲ ಎಂದರು.

    ಯಶವಂತರಾಯಗೌಡ ಅವರನ್ನು ನನ್ನ ಸ್ವಂತ ಸಹೋದರ ರೀತಿ ಇಷ್ಟು ದಿನ ಕಂಡಿದ್ದೆ, ಈಗಲೂ ಸಹ ಅದೇ ಭಾವನೆವಿದೆ. ಅದೇ ಆತ್ಮೀಯತೆವಿದೆ. ಯಾವ ದೃಷ್ಟಿಯಿಂದ ಈ ರೀತಿ ಇಂಡಿ ಶಾಸಕರು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷಕ್ಕೆ ಇಟ್ಟಿರುವ ನಿಷ್ಠೆ, ಪಕ್ಷಕ್ಕೆ ಸಲ್ಲಿಸಿದ ಸೇವೆ ಹಿನ್ನಲೆಯಲ್ಲಿ ಪಕ್ಷ ನನ್ನನ್ನು ಗುರುತಿಸಬೇಕೆಂದು ಬೇಡಿಕೆ ಇಟ್ಟಿದ್ದೇನೆ. ಯಾವುದೇ ವ್ಯಕ್ತಿಗಾಗಲಿ ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಹೇಳಿಕೆ ಹೈಕಮಾಂಡ್ ಮಟ್ಟದಲ್ಲಿ ಆಗಲಿ ಮಾಧ್ಯಮಗಳಲ್ಲಿಯಾಗಲಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಶಾಸಕ ಸಿ.ಎಸ್ ನಾಡಗೌಡ ಸ್ಪಷ್ಟಪಡಿಸಿದರು.

    ಯಶವಂತರಾಯಗೌಡ ಅವರು ಸಚಿವ ಸ್ಥಾನಕ್ಕಾಗಿ ನಿಮ್ಮ ಪ್ರಯತ್ನ ನೀವು ಮಾಡಿ, ಇದಕ್ಕೆ ಅಡ್ಡಿ ಮಾಡಲ್ಲ. ಜಯಗಳಿಸಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಒಗ್ಗೂಡಿ ಹೈಕಮಾಂಡ್ ಹತ್ತಿರ ಹೋಗೋಣ, ಯಾವ ವ್ಯಕ್ತಿಯನ್ನಾಗಲಿ ಸಚಿವ ಸ್ಥಾನ ನೀಡಿ ಎಂದೇಳಿ ಬರೋಣ, ಆಗ ಹೈಕಮಾಂಡ್ ಮಾಡಿದ ಮಂತ್ರಿ ಸ್ಥಾನಗಳಿಗೆ ನನ್ನ ಸಹಮತವಿದೆ.

    ಇನ್ನು ಸಿ.ಎಸ್‌. ನಾಡಗೌಡರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅಲ್ಲದೇ ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಈಗ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ ಎಂಬ ಹೇಳಿಕೆಗೆ ಸಿಟ್ಟಾದ ಸಿ.ಎಸ್ ನಾಡಗೌಡರು ಆಗ ಸಚಿವ ಸ್ಥಾನಕ್ಕಾಗಿ ನಾನು ಅರ್ಜಿ ಹಾಕಿದವನಲ್ಲ. ಬಯಸಿದವನಲ್ಲ. ತಾನಾಗಿಯೇ ಒಮ್ಮೆ ಮಂತ್ರಿ ಸ್ಥಾನ ಒಲಿದು ಬಂದಿತ್ತು. ಈಗ ಸೋಪ್ ಮತ್ತು ಡಿಟರ್ಜಂಟ್ ನಿಗಮ ಅಧ್ಯಕ್ಷ ಸ್ಥಾನವನ್ನು ಬಿಡಬೇಕೆಂದು ಯಶವಂತರಾಯಗೌಡ ಅವರು ಆಗ್ರಹಿಸಿದರೆ ನಾಳೆಯೇ ಆ ಸ್ಥಾನದ ಪದತ್ಯಾಗ ಮಾಡುತ್ತೇನೆ. ಈ ಸ್ಥಾನವನ್ನು ನೀವು ಅಲಂಕರಿಸಬಹುದು. ನೀವು ಮಂತ್ರಿಯಾದರು ನನಗೆ ಸಂತೋಷ. ಈ ರೀತಿಯ ಬಾಲಿಷ ಹೇಳಿಕೆಯನ್ನು ನೀಡಿ ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ ಎಂದು ನಾಡಗೌಡರು ಕಿವಿಮಾತ ಹೇಳಿದರು.

    ಈ ಹಿಂದೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶವಂತರಾಯಗೌಡ ಅವರಿಗೆ ಬೆಂಬಲವಾಗಿ ನಿಂತವರು ಯಾರು ಎಂಬುದನ್ನು ಒಮ್ಮೆ ಸ್ಮರಿಸಿಕೊಳ್ಳಬೇಕು. ರಾಜಕೀಯದಲ್ಲಿ ಬದ್ಧತೆ ರಾಜಕಾರಣಿ ಸಿಗುವುದು ಈಗ ಅಪರೂಪ. ಸಚಿವ ಸ್ಥಾನಕ್ಕೆ ಸಿಗುವ ಎಲ್ಲಾ ಸೌಕರ್ಯಗಳನ್ನು ಸಣ್ಣವನಿರುವಾಗಲೇ ನಾನು ಅನುಭವಿಸಿದ್ದೇನೆ. ಈಗ ಸಚಿವ ಸ್ಥಾನ ಸಿಕ್ಕರೆ ಮತಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂಬ ದೃಷ್ಟಿಯಲ್ಲಿ ಹೈಕಮಾಂಡ್ ಹತ್ತಿರ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದೇನೆ ಹೊರತು ಎಸಿ ಕಾರಿಗಲ್ಲ. ಬರುವ ಪುನರ್ ಸಚಿವ ಸಂಪುಟದಲ್ಲಿ ಹೈಕಮಾಂಡ್ ನನ್ನನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭರವಸೆವಿದೆ ಎಂದು ಶಾಸಕ ಸಿ.ಎಸ್ ನಾಡಗೌಡ ವ್ಯಕ್ತಪಡಿಸಿದರು.

    apvc-iconPost Views: 75
  • ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.

    ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

     

    ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.

    ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.

    ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.

    ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

    apvc-iconPost Views: 44
  • ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಸಿನಿಮಾ ಲೋಕದಲ್ಲಿ ಜನಪ್ರಿಯತೆ ಪಡೆದವರು ಎದುರಿಸಬೇಕಾದ ದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ತಮ್ಮ ಹೆಸರು ಮತ್ತು ಮುಖದ ದುರುಪಯೋಗ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆ ಡೀಪ್‌ಫೇಕ್ ಎಂಬ ಹೊಸ ಅಪಾಯವನ್ನು ತಂದುಕೊಟ್ಟಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಈ ತಂತ್ರಜ್ಞಾನವು ಯಾರ ಮುಖವನ್ನು ಬೇರೆ ವ್ಯಕ್ತಿಯ ದೇಹದ ಮೇಲೆ ನಿಖರವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಜವಾದ ಹಾಗೇ ಕಾಣುವ ನಕಲಿ ವೀಡಿಯೋಗಳನ್ನು ರಚಿಸಲಾಗುತ್ತದೆ. ಇದೇ ತಂತ್ರಜ್ಞಾನದಿಂದ ಈಗ ಮೆಗಾಸ್ಟಾರ್ ಚಿರಂಜೀವಿ ಸಂಕಷ್ಟ ಅನುಭವಿಸುತ್ತಿದ್ದಾರೆ

    ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿಯೂ, ಸಾಮಾನ್ಯ ಜನರಲ್ಲಿಯೂ ಆಘಾತ ಮೂಡಿಸಿದೆ. ಚಿರಂಜೀವಿ ಅವರ ಹೆಸರು, ಮುಖದ ಹೋಲಿಕೆ ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಿದ ಅಶ್ಲೀಲ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಟ ಸ್ವತಃ ಕಾನೂನು ಹೋರಾಟ ಆರಂಭಿಸಿದ್ದಾರೆ.

    ಚಿರಂಜೀವಿ ಅವರ ದೂರಿನಲ್ಲಿ ಏನಿದೆ?

    ಹಲವು ವೆಬ್‌ಸೈಟ್‌ಗಳು ನನ್ನ ಹೆಸರು ಮತ್ತು ಮುಖವನ್ನು ಬಳಸಿ ಕೃತಕವಾಗಿ ರಚಿಸಿದ ಅಶ್ಲೀಲ ವೀಡಿಯೋಗಳನ್ನು ಪ್ರಕಟಿಸಿವೆ. ಈ ವೀಡಿಯೋಗಳು ನನಗೆ ವಿರುದ್ಧವಾದ ತಪ್ಪು ಗ್ರಹಿಕೆಯನ್ನು ಉಂಟುಮಾಡಿ, ನನ್ನ ಮಾನ-ಗೌರವಕ್ಕೆ ಧಕ್ಕೆಯುಂಟುಮಾಡಿವೆ. ನನ್ನ ಮೇಲೆ ಜನರಲ್ಲಿದ್ದ ಸದ್ಭಾವನೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ, ಎಂದು ತಿಳಿಸಿದ್ದಾರೆ.

    ಈ ದೂರು ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಷನ್‌ಗಳು 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 79, 294, 296 ಮತ್ತು 336(4) ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4 ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.

    ಚಿರಂಜೀವಿ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, ಈ ವೀಡಿಯೋಗಳು ಸಂಪೂರ್ಣ ನಕಲಿ. ಕೃತಕ ಬುದ್ಧಿಮತ್ತೆ ಮೂಲಕ ನನ್ನ ಮುಖಭಾವ, ಶರೀರಭಾಷೆ ಮತ್ತು ವ್ಯಕ್ತಿತ್ವವನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಮಾನಹಾನಿಕಾರಕ, ಎಂದು ಖಂಡಿಸಿದ್ದಾರೆ.

    ಈ ಪ್ರಕರಣ ಕೇವಲ ಚಿರಂಜೀವಿಯವರ ವೈಯಕ್ತಿಕ ಹಕ್ಕಿನ ವಿಷಯವಲ್ಲ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರಕ್ರಿಯೆಗಳ ವಿರುದ್ಧ ಎಚ್ಚರಿಕೆಯ ಗಂಟೆ ಎಂಬಂತೆ ಪರಿಣಿತರು ಹೇಳಿದ್ದಾರೆ. ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಸೃಜನಶೀಲ ಕ್ಷೇತ್ರಗಳಿಗೆ ಅವಕಾಶಗಳನ್ನೂ ಕೊಡುವುದೇ ಸರಿ, ಆದರೆ ಅದನ್ನು ದುರುಪಯೋಗ ಮಾಡಿದರೆ ವ್ಯಕ್ತಿಗಳ ಗೌರವ ಮತ್ತು ಸಮಾಜದ ನೈತಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ.

    ಹೈದರಾಬಾದ್ ಪೊಲೀಸರು ಈಗ ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಚಿರಂಜೀವಿಯ ಪ್ರಕರಣದಿಂದ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

    apvc-iconPost Views: 9
  • ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಉತ್ತಮ‌ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಶಾಸಕ ಶರಣಗೌಡ ಕಂದಕೂರ ವೈದ್ಯರಿಗೆ ಕಿವಿ ಮಾತು ಹೇಳಿದರು.

    ತಾಲೂಕಿನ ಅರಕೇರಾ(ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಶಸ್ತ್ರ ಚಿಕಿತ್ಸಾಲಯದ ಕೋಣೆಯನ್ನು ಉದ್ಘಾಟಿಸಿದ ಶಾಸಕರು, ಸರ್ಕಾರಿ ದವಾಖಾನಿಗಳಿಗೆ ಬರುವವರು ಬಡವರೇ ಆಗಿರುತ್ತಾರೆ. ಅವರಿಗೋಸ್ಕರವೇ ಸರ್ಕಾರಗಳು‌ ಇಂತಹ ವ್ಯವಸ್ತೆ ಮಾಡಿರುತ್ತದೆ. ಕಾರಣ, ನಿಗದಿತ ಅವಧಿಯಲ್ಲಿ ರೋಗಕ್ಕೆ ತಕ್ಕ ಚಿಕಿತ್ಸೆ ನೀಡುವ ಮೂಲಕ ತಾವುಗಳು ಎರಡನೇ ದೇವರಾಗಬೇಕೆಂದು ಮಾರ್ಮಿಕವಾಗಿ ಹೇಳಿದರು.

    ಇಲ್ಲಿ ಇನ್ನೂ ಏನಾದರೂ ಸೌಲಭ್ಯಗಳು ಬೇಕಾದರೇ ತಮ್ಮ ಗಮನಕ್ಕೆ ತಂದರೇ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ‌ ಪ್ರಯತ್ನ ಮಾಡಲಾಗುವುದೆಂದರು.

    ಪರಮಾನಂದೇಶ್ವರ ಶ್ರೀಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ಡಿಎಚ್ ಒ ಡಾ.ಮಹೇಶ ಬಿರಾದಾರ, ಡಾ.ಎಂ.ಎಸ್.ಪಾಟೀಲ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ನೀಲಾಂಬಿಕಾ ಎಂ.ಜಾಪಟ್ಟಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

    apvc-iconPost Views: 31
  • ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025–28 ನೇ ಅವಧಿಯ ಚುನಾವಣೆಯು ನವೆಂಬರ್ 9ರಂದು ನಡೆಯಲಿದ್ದು, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ದಿನೇಶ್ ವಿ.ಸಿ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕ ಕುಮಾರಸ್ವಾಮಿ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

    ಈ ವೇಳೆ ಸಂಜೆಕಾಲ ಪತ್ರಿಕೆಯ ಸಂಪಾದಕರಾದ ರಾಜೇಶ್ ಪಾಟೀಲ್, ಪತ್ರಕರ್ತರಾದ ತೋಟೆಂದ್ರ, ಮಲ್ಲು ಕಾಮರೆಡ್ಡಿ, ಕುದಾನ್ ಸಾಬ್, ಬಸವರಾಜ್ ಕಾಂಬಳೆ, ಮಂಜು ಬಿರಾದಾರ್, ದೇವಿಂದ್ರ ಕಿಲ್ಲನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    apvc-iconPost Views: 88
  • ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!

    ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!

    ಭಾರತೀಯ ಸಂಸ್ಕೃತಿಯಲ್ಲಿ ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ. ಕಳಶವು ದೇವತೆಯ ಶಕ್ತಿ, ಶುದ್ಧತೆ ಮತ್ತು ಸೃಷ್ಟಿಯ ಮೂಲ ತತ್ವದ ಪ್ರತೀಕವೆಂದು ವೇದಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ಇಡುವ ತೆಂಗಿನಕಾಯಿ ಕೇವಲ ಅಲಂಕಾರವಲ್ಲ ಅದು ದೈವೀ ಶಕ್ತಿಯ ಆವರಣ ಎಂದು ಪರಿಗಣಿಸಲಾಗುತ್ತದೆ.

    ಆದರೆ ಅನೇಕರು ಪೂಜೆ ಮುಗಿದ ಬಳಿಕ ಈ ಕಳಶದ ತೆಂಗಿನಕಾಯಿಯನ್ನು ಏನು ಮಾಡಬೇಕು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ತಿಳಿಯದೇ ಗೊಂದಲದಲ್ಲಿರುತ್ತಾರೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಶಾಸ್ತ್ರೋಕ್ತವಾಗಿ ನೀಡಿರುವ ಮಾಹಿತಿ ಹೀಗಿದೆ.

    ಕಳಶದಲ್ಲಿನ ತೆಂಗಿನಕಾಯಿಯ ದೈವೀ ಮಹತ್ವ: 

    ಕಳಶಕ್ಕೆ ಇಡುವ ತೆಂಗಿನಕಾಯಿ ದೇವರ ಸಾನಿಧ್ಯದಲ್ಲಿ ಇರಿಸುವುದರಿಂದ ಅದು ದೈವ ಸ್ವರೂಪ ಪಡೆಯುತ್ತದೆ. ಹೀಗಾಗಿ ಪೂಜೆ ಬಳಿಕ ಅದನ್ನು ನಿರ್ಲಕ್ಷ್ಯವಾಗಿ ಅಥವಾ ಸಾಮಾನ್ಯ ಉಪಯೋಗಕ್ಕಾಗಿ ಬಳಸಬಾರದು.

    ಮಾಂಸದ ಅಡುಗೆಯಲ್ಲಿ ಬಳಸಬಾರದು: 

    ಶಾಸ್ತ್ರಗಳಲ್ಲಿ ಉಲ್ಲೇಖವಾದಂತೆ, ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನು ಮಾಂಸದ ಅಡುಗೆಗೆ ಬಳಸುವುದು ಅಪಶಕುನ ಎಂದು ಹೇಳಲಾಗಿದೆ. ಇಂತಹ ಪ್ರಯೋಗದಿಂದ ಪೂಜೆಯ ಪಾವಿತ್ರ್ಯ ಕಳೆದುಹೋಗುತ್ತದೆ.

    ಸಿಹಿ ಪದಾರ್ಥಕ್ಕೆ ಬಳಸುವುದು ಶ್ರೇಷ್ಠ:

    ಜ್ಯೋತಿಷಿ ವಿವೇಕಾನಂದ ಆಚಾರ್ಯರ ಪ್ರಕಾರ, ಕಳಶದ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳು (ಉದಾ: ಪಾಯಸ, ಹೋಳಿಗೆ, ಲಾಡು ಮುಂತಾದವು) ತಯಾರಿಸಲು ಬಳಸುವುದು ಅತ್ಯಂತ ಶುಭಕರ. ತಯಾರಿಸಿದ ಸಿಹಿ ಪದಾರ್ಥಗಳನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಹಂಚಿದರೆ ಶುಭಫಲ ದೊರೆಯುತ್ತದೆ.

    ತೆಂಗಿನಕಾಯಿ ಆಯ್ಕೆ ಮಾಡುವಾಗ ಎಚ್ಚರಿಕೆ:

    ಕಳಶಕ್ಕೆ ಇಡುವ ತೆಂಗಿನಕಾಯಿ ಪೂರ್ಣವಾಗಿ ಒಣಗಿರಬಾರದು. ಒಣ ತೆಂಗಿನಕಾಯಿ ಕಳಶದಲ್ಲಿ ಇಟ್ಟರೆ ಮನೆಯವರ ಜೀವನದಲ್ಲಿ ಸಂಕಷ್ಟಗಳು ಅಥವಾ ಅಡೆತಡೆಗಳು ಎದುರಾಗಬಹುದು ಎಂದು ಶಾಸ್ತ್ರ ನುಡಿಸುತ್ತದೆ.

    ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ ಅಥವಾ ಬಿರುಕು ಬಿಟ್ಟರೆ ಏನಾಗುತ್ತದೆ?

    ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ, ಅದು ಆರ್ಥಿಕ ನಷ್ಟ ಅಥವಾ ಹಣಕಾಸಿನ ತೊಂದರೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.

    ತೆಂಗಿನಕಾಯಿಗೆ ಬಿರುಕು ಬಿದ್ದರೆ, ಮನೆಯ ಸದಸ್ಯರಿಗೆ ಅಪಘಾತ ಅಥವಾ ಅನಾರೋಗ್ಯ ಉಂಟಾಗುವ ಸಂಭವವಿದೆ ಎಂಬ ನಂಬಿಕೆಯೂ ಇದೆ.

    ನೀರಿಲ್ಲದ ತೆಂಗಿನಕಾಯಿ ಶಕುನ:

    ಕಳಶಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ, ಅದು ಸಂತಾನ ಭಾಗ್ಯ ಕುಂದಿಸುವ ಸೂಚನೆ ಎಂದು ಹೇಳಲಾಗಿದೆ. ಕೆಲವೆಡೆ ಇದನ್ನು ಮಕ್ಕಳು ದಾರಿ ತಪ್ಪುವ ಸಾಧ್ಯತೆ ಎಂದೂ ಅರ್ಥೈಸಲಾಗುತ್ತದೆ.

    ಅರ್ಚಕರಿಗೆ ಅಥವಾ ಅನ್ಯರಿಗೆ ನೀಡಬಾರದು: 

    ಪೂಜೆ ಮುಗಿದ ಬಳಿಕ ಕಳಶದ ತೆಂಗಿನಕಾಯಿಯನ್ನು ಅನ್ಯರಿಗೆ ಅಥವಾ ಅರ್ಚಕರಿಗೆ ನೀಡುವುದು ತಪ್ಪು ಎಂದು ಜ್ಯೋತಿಷಿ ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ, ಪೂಜೆಯಿಂದ ಪಡೆದ ಪುಣ್ಯ ಫಲ ನಮ್ಮಿಂದ ದೂರವಾಗಿ, ಅದನ್ನು ಸ್ವೀಕರಿಸಿದವರಿಗೆ ತಲುಪುತ್ತದೆ ಎಂದು ನಂಬಿಕೆ ಇದೆ.

    ಕಳಶದ ತೆಂಗಿನಕಾಯಿ ಕೇವಲ ಪೂಜಾ ಸಾಮಗ್ರಿ ಅಲ್ಲ, ಅದು ದೇವರ ಕೃಪೆಯ ಪ್ರತೀಕ. ಅದನ್ನು ಗೌರವದಿಂದ ಬಳಸುವುದು, ಸಿಹಿ ಪದಾರ್ಥ ತಯಾರಿಸಿ ಹಂಚಿಕೊಳ್ಳುವುದು ಮತ್ತು ನಿರ್ಲಕ್ಷ್ಯವಾಗಿ ಉಪಯೋಗಿಸದಿರುವುದು ಶಾಸ್ತ್ರೋಕ್ತ ಶ್ರೇಷ್ಠ ಕ್ರಮ ಎಂದು ಪರಿಗಣಿಸಲಾಗಿದೆ.

    apvc-iconPost Views: 6