Blog

  • ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾವಾಗಿ ನ.2 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಕಸಾಪ ಸಭಾಂಗಣದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವ ಮತ್ತು 2025 ನೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಕರ್ಮ ಏಕದಂಡಿಗಿ ಮಠದ ಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಈ ಜೋಡು ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುದೋಳ್ ಉದ್ಘಾಟಿಸುವರು,ನಿವೃತ್ತ ಶಿಕ್ಷಕರಾದ ಸಕ್ರಪ್ಪ ಮಾಮನಿ, ಬಸವರಾಜ ಸಾಹು ಗೊಂದಡಗಿ, ಶಿವಪ್ಪ ದಾಸನಕೇರಿ, ಹಸನ್ ಸಾಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಹೊಟ್ಟಿ ಹೇಳಿದರು.

    ತಮ್ಮ ಅಧ್ಯಕ್ಷತೆಯಲ್ಲಿ ಸಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಅವರು ಕರ್ನಾಟಕ ಏಕಿಕರಣ ಚಳುವಳಿ‌ ಕುರಿತು ಹಾಗೂ ಕನ್ನಡ ಅಧ್ಯಾಪಕ ಡಾ. ಡಿ.ಎನ್. ಪಾಟೀಲ್ ಕರಡಕಲ್ ಅವರು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆಂದರು.
    ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವಿಂದ್ರ ಹೊಸಮನಿ, ಯಾದಗಿರಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರೆಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಗೌರವ ಕೋಶಾಧ್ಯಕ್ಷ ಬಸವರಾಜ ಅರಳಿ ಮೊಟನಳ್ಳಿ, ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಪಾಟೀಲ್ ಕಿಲ್ಲನಕೇರಾ, ದೇವರಾಜಗೌಡ ಬೆಳಗೆರಿ, ಗೌರವ ಕೋಶಾಧ್ಯಕ್ಷ ವೀರಭದ್ರಪ್ಪ ಸ್ವಾಮಿ ಜಾಕಾ ಮಠ, ನಾಗಪ್ಪ ಸಜ್ಜನ್‌,  ವೆಂಕಟೇಶ ಕಲಕಂಬ,  ಸ್ವಾಮಿದೇವ ದಾಸನಕೇರಿ  ಸೇರಿದಂತೆಯೇ ಇತರರಿದ್ದರು.

    apvc-iconPost Views: 47
  • ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆಯನ್ನು ಗೈದು ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಹಾಲಿ ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ವಿಶ್ವದಾಖಲೆಯ ಗುರಿ ಬೆನ್ನತ್ತುವುದರ ಮೂಲಕ ಸಾಧನೆ ಮಾಡಿತು. 338 ರನ್‌ಗಳ ಗುರಿ ಎದುರಿಸಿದ ಭಾರತ, ಒತ್ತಡದ ಸಂದರ್ಭದಲ್ಲೂ ಶಾಂತಿ ಕಳೆದುಕೊಳ್ಳದೇ, ನಿರ್ಧಾರಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಕ್ಕಿದ್ದರೂ, ಮಧ್ಯ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ನಿರೀಕ್ಷಿತ ಅಂತ್ಯ ಪಡೆಯುವಲ್ಲಿ ವಿಫಲವಾಯಿತು. ಭಾರತೀಯ ಬೌಲರ್‌ಗಳು ಪ್ರಮುಖ ಕ್ಷಣಗಳಲ್ಲಿ ವಿಕೆಟ್‌ ತೆಗೆಯುವ ಮೂಲಕ ಪಂದ್ಯವನ್ನು ಹಿಡಿತದಲ್ಲಿಟ್ಟರು.

    ಭಾರತದ ಇನ್ನಿಂಗ್ಸ್‌ಗೆ ಚಾಲನೆ ಸಿಕ್ಕ ತಕ್ಷಣವೇ, ಆರಂಭಿಕ ಆಟಗಾರ್ತಿಯರು ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಬೇಗನೆ ಪೆವಿಲಿಯನ್ ಸೇರುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಥಳೀಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಪಂದ್ಯದ ಭವಿಷ್ಯವನ್ನು ಬದಲಾಯಿಸಿ ಜತೆಯಾಟ ಪ್ರದರ್ಶಿಸಿದರು. ಇಬ್ಬರು ತಾಳ್ಮೆಯ ಜೊತೆಗೆ ಆಕ್ರಮಣಾತ್ಮಕ ಆಟ ತೋರಿಸಿ 165 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು.

    ಹರ್ಮನ್‌ಪ್ರೀತ್ ಕೌರ್ 89 ರನ್ ಗಳಿಸಿ ಔಟಾದರೂ, ಜೆಮಿಮಾ ರೋಡ್ರಿಗಸ್ ಕ್ರೀಸ್‌ ಕಚ್ಚಿ ನಿಂತಿದ್ದು ತಂಡಕ್ಕೆ ದೊಡ್ಡ ಸಹಾಯವಾಯ್ತು. ಒತ್ತಡದ ಸಂದರ್ಭದಲ್ಲೂ ಶಾಂತ ಮನೋಭಾವದಿಂದ ಆಡಿದ ಜೆಮಿಮಾ 127 ರನ್‌ಗಳ ಅಜೇಯ ಇನ್ನಿಂಗ್ಸ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ, ರಿಚಾ ಘೋಷ್ ಹಾಗೂ ಅಮನ್‌ಜೋತ್ ಕೌರ್ ಅಗತ್ಯ ರನ್‌ಗಳನ್ನು ಸೇರಿಸಿ ಭಾರತ ಗುರಿ ತಲುಪುವಲ್ಲಿ ಯಶಸ್ವಿಯಾದರು.

    ಈ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಅತಿ ದೊಡ್ಡ ಗುರಿ ಬೆನ್ನತ್ತಿದ ತಂಡ ಎಂಬ ಗೌರವ ಭಾರತಕ್ಕೆ ದೊರಕಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಈ ಪಂದ್ಯದಲ್ಲಿ ಸಮರ್ಪಕ ತಿರುಗೇಟು ನೀಡಿದೆ.

    ನವೆಂಬರ್ 2ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪ್ರಸ್ತುತ ಆಟದ ಶೈಲಿ, ತಂಡದ ಆತ್ಮವಿಶ್ವಾಸ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಭಾರತ ಈ ಬಾರಿ ಟ್ರೋಫಿ ಗೆಲ್ಲಲು ಹಾಟ್ ಫೆವರೇಟ್ ತಂಡವಾಗಿದೆ.

    apvc-iconPost Views: 4
  • ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ನಮ್ಮ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಅನ್ನ ಅಂದರೆ ಅಕ್ಕಿ, ಜೀವನದ ಅವಿಭಾಜ್ಯ ಭಾಗವಾಗಿದೆ. ದಿನದ ಮೂರು ಹೊತ್ತು ಊಟದ ಮಾತು ಬಂದಾಗ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಅಥವಾ ರಾತ್ರಿ ಭೋಜನ ಎಲ್ಲವೂ ಅನ್ನವಿಲ್ಲದೆ ಅಪೂರ್ಣವೆನಿಸುತ್ತದೆ. ಅನೇಕರು ಅನ್ನವನ್ನು ದಿನದ ಮೂರೂ ಹೊತ್ತು ಸೇವಿಸುತ್ತಾರೆ. ಕೆಲವರಿಗೆ ಅನ್ನವಿಲ್ಲದ ಊಟವೇ ಊಟವಲ್ಲ ಅನ್ನಿಸುವ ಮಟ್ಟಿಗೆ ಅನಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಾದಂತೆ ಹಲವರು ಅನ್ನ ಸೇವನೆಯನ್ನು ಕಡಿಮೆ ಮಾಡುವುದಕ್ಕೋ ಅಥವಾ ಸಂಪೂರ್ಣ ನಿಲ್ಲಿಸುವುದಕ್ಕೋ ಮುಂದಾಗುತ್ತಿದ್ದಾರೆ.
    ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ? ಇದರಿಂದ ನಿಜವಾಗಿಯೂ ಆರೋಗ್ಯ ಸುಧಾರಿಸುತ್ತದೆಯೇ ಅಥವಾ ಪೌಷ್ಟಿಕಾಂಶದ ಕೊರತೆಯುಂಟಾಗುತ್ತದೆಯೇ? ತಿಳಿದುಕೊಳ್ಳೋಣ ಬನ್ನಿ.

    ಹಸಿವು, ದುರ್ಬಲತೆ ಮತ್ತು ಕಿರಿಕಿರಿ:

    ಅನ್ನವು ಕಾರ್ಬೋಹೈಡ್ರೇಟ್‌ನ ಪ್ರಮುಖ ಮೂಲ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಇದ್ದಕ್ಕಿದ್ದಂತೆ ಅನ್ನ ಸೇವನೆ ನಿಲ್ಲಿಸಿದರೆ, ದೇಹವು ಆ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಕೆಲವು ದಿನಗಳಲ್ಲಿ ಹಸಿವು ಹೆಚ್ಚಾಗುವುದು, ದುರ್ಬಲತೆ ಹಾಗೂ ಸ್ವಲ್ಪ ಕಿರಿಕಿರಿ ಅನುಭವವಾಗುವುದು ಸಹಜ. ಈ ಅವಧಿಯಲ್ಲಿ ರಾಗಿ, ಜೋಳ, ಬಾರ್ಲಿ, ಕ್ವಿನೋವಾ ಅಥವಾ ಕುಂಬಳಕಾಯಿ ಬೀಜಗಳಂತಹ ಪರ್ಯಾಯ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

    ತೂಕ ಇಳಿಕೆ:

    ಅಕ್ಕಿಯಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ಜೀರ್ಣವಾಗುತ್ತವೆ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಒದಗಿಸುತ್ತವೆ. ಅನ್ನ ಸೇವನೆ ನಿಲ್ಲಿಸಿದರೆ ದೇಹಕ್ಕೆ ಬರುವ ಕ್ಯಾಲೊರಿಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ತೂಕ ಸ್ವಲ್ಪ ಮಟ್ಟಿಗೆ ಇಳಿಯಬಹುದು. ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಿಗೆ ಇದು ಸಹಾಯಕ.

    ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗುತ್ತದೆ:

    ಬಿಳಿ ಅಕ್ಕಿ ಬೇಗನೆ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುತ್ತದೆ. ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಸಮತೋಲನದಲ್ಲಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

    ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು:

    ಅಕ್ಕಿ ಕೆಲವರಲ್ಲಿ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆ ಉಂಟುಮಾಡಬಹುದು. ಆದರೆ ಅನ್ನ ನಿಲ್ಲಿಸಿದ ನಂತರ ಆರಂಭದಲ್ಲಿ ದೇಹಕ್ಕೆ ಬದಲಾವಣೆ ಅಸಹಜವಾಗಿ ಕಾಣಬಹುದು — ಉದಾಹರಣೆಗೆ ಹೊಟ್ಟೆ ನೋವು ಅಥವಾ ಅಜೀರ್ಣ. ಆದರೆ ಹಣ್ಣು, ತರಕಾರಿ ಮತ್ತು ಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹವು ಹೊಸ ಆಹಾರ ಕ್ರಮಕ್ಕೆ ಹೊಂದಿಕೊಳ್ಳುತ್ತದೆ.

    ಪೌಷ್ಟಿಕಾಂಶ ಕೊರತೆಯ ಅಪಾಯ:

    ಅಕ್ಕಿಯಲ್ಲಿ ವಿಟಮಿನ್ ಬಿ (ವಿಶೇಷವಾಗಿ B1, B3, ಮತ್ತು B6)ಗಳು ಇದ್ದು, ದೇಹದ ಶಕ್ತಿ ಉತ್ಪಾದನೆಗೆ ಸಹಾಯಕವಾಗಿವೆ. ದೀರ್ಘಕಾಲ ಅನ್ನ ನಿಲ್ಲಿಸಿದರೆ ಈ ವಿಟಮಿನ್‌ಗಳ ಕೊರತೆಯಿಂದ ಆಯಾಸ, ಮಾನಸಿಕ ಒತ್ತಡ ಅಥವಾ ಶ್ರದ್ಧಾಭಾವದ ಕೊರತೆ ಉಂಟಾಗಬಹುದು. ಆದ್ದರಿಂದ ಅನ್ನ ಬಿಟ್ಟರೂ ಎಲೆ ತರಕಾರಿಗಳು, ಮೊಟ್ಟೆ, ಹಾಲು, ಬೇಳೆ ಹಾಗೂ ಇತರ ಧಾನ್ಯಗಳ ಮೂಲಕ ಪೌಷ್ಟಿಕಾಂಶವನ್ನು ಪೂರೈಸಿಕೊಳ್ಳಬೇಕು.

    ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸುವುದು ದೇಹಕ್ಕೆ ತಾತ್ಕಾಲಿಕ ಬದಲಾವಣೆಗಳನ್ನು ತರಬಹುದು. ತೂಕ ಕಡಿಮೆಯಾಗುವುದು, ರಕ್ತದ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ ಮುಂತಾದ ಪ್ರಯೋಜನಗಳಿದ್ದರೂ, ಪೌಷ್ಟಿಕಾಂಶ ಕೊರತೆಯ ಅಪಾಯವಿದೆ. ಆದ್ದರಿಂದ ಅನ್ನ ಸಂಪೂರ್ಣ ಬಿಟ್ಟುಬಿಡುವುದಕ್ಕಿಂತ, ಅದರ ಪ್ರಮಾಣವನ್ನು ನಿಯಂತ್ರಿಸಿ ಮತ್ತು ಪೌಷ್ಟಿಕ ಪರ್ಯಾಯ ಆಹಾರಗಳನ್ನು ಸೇರಿಸುವುದು ಹೆಚ್ಚು ಆರೋಗ್ಯಕರ ಮಾರ್ಗ.

    apvc-iconPost Views: 22
  • ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಗೆ ಬೆಳಗ್ಗೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮುದ್ದೇಬಿಹಾಳ ಬಸ್ ನಿಲ್ದಾಣ
    ಮುದ್ದೇಬಿಹಾಳ ಬಸ್ ನಿಲ್ದಾಣ

    ಹೌದು.. ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ನೂರಕ್ಕೆ ನೂರರಷ್ಟು ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಿಂದಿನ ಕೆಲಸಕ್ಕಾಗಿ ಬಂದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನದಟ್ಟಣೆ ಕಂಡು ಬಂದರೆ, ಶಾಲೆ-ಕಾಲೇಜು ಎಂದಿನಂತೆ ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾದ ಸನ್ನಿವೇಶಗಳು ಎದುರಾದವು.

    ಅಂಬೇಡ್ಕರ್ ವೃತ್ತ
    ಅಂಬೇಡ್ಕರ್ ವೃತ್ತ

    ಸರಕಾರಿ, ಖಾಸಗಿ ಶಾಲೆ, ಕಾಲೇಜುಗಳು ಕೆಲವೊತ್ತು ತೆಗೆದು ಮುಚ್ಚಿದರೆ. ಪೆಟ್ರೋಲ್ ಬಂಕ್ , ಔಷಧ ಅಂಗಡಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹೋರಾಟ ಕೇಂದ್ರ ಸ್ಥಳವಾದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ ಬಳಿಕ ಪ್ರತಿಭಟನೆ ಕಾವು ಜೋರಾಯಿತು.

    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಇಂದಿರಾ ಸರ್ಕಲ್
    ಇಂದಿರಾ ಸರ್ಕಲ್

    ಇಂದಿರಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದ್ಯಾಮವ್ವಣ ಕಟ್ಟೆ, ಬಜಾರ ರಸ್ತೆ ಯಲ್ಲಿ ಯಾವುದೇ ಅಂಗಡಿಗಳನ್ನು ತೆಗೆಯದೇ ಮುದ್ದೇಬಿಹಾಳ ಬಂದ್ ಗೆ ಬೆಂಬಲವನ್ನು ಭಾಗಶಃ ಸೂಚಿಸಿದವು.

    ಗ್ರಾಮದೇವತೆ(ದ್ಯಾಮವನ) ಕಟ್ಟೆ
    ಗ್ರಾಮದೇವತೆ(ದ್ಯಾಮವನ) ಕಟ್ಟೆ

    ಕರೆ ಸ್ವೀಕರಿಸದ ತಹಶಿಲ್ದಾರ ಕೀರ್ತಿ ಚಾಲಕ್

    ಇನ್ನು ಮುದ್ದೇಬಿಹಾಳ ಬಂದ್ ಗೆ ಬಗ್ಗೆ ತಹಶಿಲ್ದಾರರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸದೇ ಶಾಲಾ-ಕಾಲೇಜುಗಳ ರಜೆ ಬಗ್ಗೆ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡರು. ಶಾಲೆಗಳು ಆರಂಭ ಬಗ್ಗೆ ಬಿಇಒ ಬಿ ಎಸ್ ಸಾವಳಗಿ ಅವರಿಗೆ ಸಂಪರ್ಕಿಸಿದಾಗ ಶಾಲೆಗಳನ್ನು ರಜೆ ನೀಡಲು ನಮಗೆ ಯಾವುದೇ ಅನುಮತಿ ಇರುವುದಿಲ್ಲ. ಹೀಗಾಗಿ ತಾಲೂಕಿಗೆ ತಹಶಿಲ್ದಾರರೇ ಅಂತಿಮ ನಿರ್ಧಾರ ಕೈಗೊಳ್ಳುವರು. ಶಾಲಾ ರಜೆ ನೀಡಲು ಅವರೇ ಜವಬ್ದಾರರು. ಈಗಾಗಲೇ ಮುದ್ದೇಬಿಹಾಳ ಬಂದ್ ಬಗ್ಗೆ ಶಿಕ್ಷಣ ಇಲಾಖೆಯಿಂದ ತಹಶಿಲ್ದಾರರಿಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಹಶಿಲ್ದಾರರಿಂದ ಶಾಲಾ ಬಂದ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಹೀಗಾಗಿ ಶಾಲೆಗಳನ್ನು ರಜೆ ಘೋಷಣೆ ಮಾಡಿಲ್ಲ ಎಂದರು.

    apvc-iconPost Views: 344
  • ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಧ್ರುವ ಸರ್ಜಾ ವಿರುದ್ಧ ದೂರು ದಾಖಲು

    ಸದ್ಯ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಅಭಿಮಾನಿ ಬಳಗ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಈ ನಟನ ವಿರುದ್ಧ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಸುದ್ದಿಯಾಗಿದೆ.

    ಮಾಹಿತಿಯ ಪ್ರಕಾರ, ಮನೋಜ್ ಎಂಬ ನಿವಾಸಿಯವರು ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಕೆಲವು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ವಾಸಿಸುವ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಈ ಎಲ್ಲರಿಂದ ನಿರಂತರ ತೊಂದರೆ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನ ಪ್ರಕಾರ, ಪ್ರತಿದಿನವೂ ಧ್ರುವ ಸರ್ಜಾ ಅವರ ಮನೆಯನ್ನು ನೋಡುವುದಕ್ಕಾಗಿ ಅನೇಕ ಅಭಿಮಾನಿಗಳು ಬಂದು ಮನೆಯ ಮುಂದೆಯೇ ಬೈಕ್‌ಗಳನ್ನು ಪಾರ್ಕ್ ಮಾಡುತ್ತಾರೆ, ಧೂಮಪಾನ ಮಾಡುತ್ತಾರೆ, ಮತ್ತು ಗೋಡೆಗಳ ಮೇಲೆ ಉಗುಳುವಂತಹ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ. ಈ ಘಟನೆಗಳಿಂದ ಪ್ರದೇಶದ ಶಾಂತಿ ಭಂಗವಾಗಿದ್ದು, ಅಕ್ಕಪಕ್ಕದ ಜನರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ಮನೋಜ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

    ಅಷ್ಟೇ ಅಲ್ಲದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನೋಜ್ ಬೇಡಿಕೆ ಇಟ್ಟಿದ್ದಾರೆ.

    ಸದ್ಯ ಈ ದೂರಿನನ್ವಯ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non Cognizable Report) ದಾಖಲಾಗಿದ್ದು, ಪೊಲೀಸರು ವಿಷಯದ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

    ಧ್ರುವ ಸರ್ಜಾ ಅಥವಾ ಅವರ ತಂಡದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ. ಆದರೆ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕನ್ನಡ ಸಿನಿ ಲೋಕದ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಧ್ರುವ ಸರ್ಜಾ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರೀತಿಯ ವಿವಾದಾತ್ಮಕ ದೂರುಗಳು ಅವರ ಮೇಲೆ ಹೊಸ ಸವಾಲು ಎಸೆದಂತಾಗಿದೆ.

    apvc-iconPost Views: 29
  • ಬೆಂಗಳೂರಿನ ಸ್ವದೇಶಿ ಡ್ರೈವರ್‌ಲೆಸ್ ಕಾರಿಗೆ ಜನರು ಫುಲ್‌ ಫಿದಾ!

    ಬೆಂಗಳೂರಿನ ಸ್ವದೇಶಿ ಡ್ರೈವರ್‌ಲೆಸ್ ಕಾರಿಗೆ ಜನರು ಫುಲ್‌ ಫಿದಾ!

    ಬೆಂಗಳೂರು ಮತ್ತೊಮ್ಮೆ ತಂತ್ರಜ್ಞಾನದ ಮೂಲಕ ವಿಶ್ವದ ಗಮನವನ್ನು ಸೆಳೆದಿದೆ. ಚಾಲಕರಿಲ್ಲ, ಸ್ಟೇರಿಂಗ್‌ ವೀಲ್‌ ಇಲ್ಲ ಸಂಪೂರ್ಣ ಸ್ವಯಂಚಾಲಿತ ಕಾರು ನಗರದಲ್ಲಿ ಓಡಾಡಿದೆ! ವಿಪ್ರೋ–ಐಐಎಸ್‌ಸಿ ರಿಸರ್ಚ್ ಅಂಡ್‌ ಇನ್ನೋವೇಶನ್‌ ನೆಟ್‌ವರ್ಕ್‌ (VAIRIN) ನಿರ್ಮಿಸಿದ ಈ ಡ್ರೈವರ್‌ಲೆಸ್ ವಾಹನವನ್ನು ಆರ್‌ವಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭವ್ಯವಾಗಿ ಅನಾವರಣಗೊಳಿಸಿ ಚಾಲನೆ ನೀಡಲಾಯಿತು.

    ಈ ವಿಶೇಷ ಕ್ಷಣದಲ್ಲಿ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಕಾರಿನಲ್ಲಿ ಕುಳಿತು ಕ್ಯಾಂಪಸ್‌ ನಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದರು. ಕಾರಿನಲ್ಲಿ ಚಾಲಕನಿಲ್ಲದೆ, ಸ್ವಾಮೀಜಿಗಳು ಸುರಕ್ಷಿತವಾಗಿ ಸಂಚರಿಸುತ್ತಿರುವ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಡಿಲಿನಂತೆ ಹರಡುತ್ತಿದೆ. ಭಾರತದಲ್ಲೇ ತಯಾರಾದ ಸ್ವಯಂಚಾಲಿತ ತಂತ್ರಜ್ಞಾನಕ್ಕೆ ನೆಟ್ಟಿಗರು “ಇದು ನಮ್ಮ ಕೀರ್ತಿ!” ಎಂದು ಅಭಿನಂದನೆ ಸುರಿಸುತ್ತಿದ್ದಾರೆ.

    ಟೆಸ್ಲಾ ಆಟೋಪೈಲಟ್‌ ತಂತ್ರಜ್ಞಾನವು ಈಗಾಗಲೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ದೇಶೀಯ ಸಂಶೋಧನೆ ಮತ್ತು ಭಾರತೀಯ ತಂತ್ರಜ್ಞರು ನಿರ್ಮಿಸಿದ ಈ ವಾಹನವು, “ಇನ್ನು ನಾವು ಕೂಡ ಯಾರಿಗೂ ಕಡಿಮೆಯಲ್ಲ” ಎಂಬುದನ್ನು ಸಾಬೀತುಪಡಿಸಿದೆ. ಇದು ಕೇವಲ ಒಂದು ಪ್ರದರ್ಶನವಷ್ಟೇ ಅಲ್ಲ ಭಾರತದಲ್ಲಿ ಸ್ವಯಂಚಾಲಿತ ವಾಹನಗಳ ಭವಿಷ್ಯದ ಬಾಗಿಲು ತೆರೆದ ಕ್ಷಣವಾಗಬಹುದು. ಸಂಶೋಧಕರು ಈಗ ರಸ್ತೆಗಳ ಭದ್ರತೆ, ಪ್ರಯಾಣಿಕರ ಸುರಕ್ಷತೆ ಮತ್ತು ಸಾಫ್ಟ್‌ವೇರ್‌ ನಿಖರತೆಯ ಪರೀಕ್ಷೆಗಳನ್ನು ಮುಂದುವರೆಸಲಿದ್ದಾರೆ.

    ಈ ಕಾರಿನ ಯಶಸ್ಸು ಯುವ ಸಂಶೋಧಕರಿಗೆ ಪ್ರೇರಣೆ ನೀಡಿದಂತಾಗಿದೆ. “ಟೆಕ್ ನಗರ” ಎಂಬ ಹೆಸರು ಹೊಂದಿರುವ ಬೆಂಗಳೂರು ಮತ್ತೆ ತನ್ನ ಶಕ್ತಿ ತೋರಿಸಿದೆ. ಹೀಗಾಗಿ, ಭವಿಷ್ಯದಲ್ಲಿ ಭಾರತೀಯ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ದಿನಗಳು ಇನ್ನೂ ಸಮೀಪವಾಗಿವೆ ಎಂಬ ನಂಬಿಕೆಗಳು ಹೆಚ್ಚಾಗುತ್ತಿವೆ.

    apvc-iconPost Views: 102
  • ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ

    ಗುರುಮಠಕಲ್: ಸಮಾಜದ ಮಕ್ಕಳು ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಹಿರಿಯ ವಿಜ್ಞಾನಿ ಸಖಾರಾಮ ಶ್ರೀನಿವಾಸಲು ಕರೆ ನೀಡಿದರು.

    ಪಟ್ಟಣದ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,  ಗುರುಮಠಕಲ್ ಸಮಾಜ ಸಾಕಷ್ಟು ಪ್ರಭಾವಶಾಲಿಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ. ಸಮಾಜದ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಹೆಮ್ಮೆಯ ವಿಷಯ.

    ಜೀವನ ಶೈಲಿ ಸಾಕಷ್ಟು ಬದಲಾಗಿದೆ. ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುಂದೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಯಂತಿ ಶುಭ ಸಂದರ್ಭದಲ್ಲಿ ಐಎಎಸ್ ಮಾಡುವ ಸಂಕಲ್ಪ ಮಾಡೋಣ ಎಂದರು.

    ಪ್ರಗತಿ ಪಥದಲ್ಲಿ ಸಾಗುತ್ತಿರುವ ಯುವ ಸಮೂಹ ಇನ್ನು ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು, ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

    ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಪೌರಾಣಿಕ ಹಿನ್ನೆಲೆಯುಳ್ಳ ಮಹಾರಾಜರ ಜಯಂತಿಯು ಗುರುಮಠಕಲ್ ನಲ್ಲಿ 55 ವರ್ಷಗಳಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ‌, ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಅರಿಯಬೇಕು, ರಾಮಾಯಣ, ಮಹಾಭಾರತದಲ್ಲಿ ಕಾರ್ತವೀರಾರ್ಜುನರ ಉಲ್ಲೇಖವಿದೆ. ಸಹಸ್ರ ಬುಜಗಳ ವರ ಪಡೆದ ಹಿನ್ನೆಲೆ ಸಹಸ್ತ್ರಾರ್ಜುನ ಹೆಸರು ಬಂದಿದೆ.

    ಆಧ್ಯಾತ್ಮ ಶಕ್ತಿ ಯಿಂದ ದತ್ತಾತ್ರೇಯ ರಿಂದ ವರ ಪಡೆದಿದ್ದಾರೆ. ವೀರ ಪರಾಕ್ರಮಿ ರಾಜಾರಾಗಿದ್ದಾರೆ. ರಾವಣ ಶಿವ ಪೂಜೆಯಲ್ಲಿ ತೊಡಗಿದ್ದಾಗ ನದಿಯ ಪ್ರವಾಹ ಹೆಚ್ಚಾಗಿ ಯುದ್ದವಾಯಿತು. ಮಹಾರಾಜರು ರಾವಣನನ್ನು ಬಂಧಿಯಾಗಿ ಮಾಡಿದ್ದರು.

    ಮಹರ್ಷಿ ಜಮದಾಗ್ನಿ ಆಶ್ರಮದಿಂದ ಕಾಮಧೇನು ಗೋವು ತಂದಿದ್ದರು ಈ ಹಿನ್ನೆಲೆಯಲ್ಲಿ 21 ಬಾರಿ ಯುದ್ಧವಾಗಿತ್ತು ಎಂದರು, ನ್ಯಾಯಯುತ, ಪರಾಕ್ರಮಿ, ಶೌರ್ಯ ಮಹಾನ್ ರಾಜರ ವಂಶದಲ್ಲಿ ಜನಿಸಿದ ನಾವು ಪುಣ್ಯವಂತರು ಎಂದರು.

    ಅತಿಥಿಗಳಾಗಿ ಹಣಮಂತರಾವ ಗೊಂಗಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ. ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕ ಕ್ರಾಂತಿ ಯಾಗುತ್ತದೆ. ಐಎಎಸ್, ಐಪಿಎಸ್ ತರಬೇತಿಗೆ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು.

    ಎಂತಹ ಕಷ್ಟವೇ ಇರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

    ಪ್ರೊ. ಡಾ. ಯಶವಂತರಾವ ಮೇಂಗಜಿ ಮಾತನಾಡಿದರು. ಚಂದುಲಾಲ ಚೌಧರಿ ಅಧ್ಯಕ್ಷೀಯ ಮಾತನಾಡಿದರು.

    ಪ್ರಮುಖರಾದ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ ವೇದಿಕೆಯಲ್ಲಿದ್ದರು.

    ಈ ವೇಳೆ ಸಾಧಕ ಮಕ್ಕಳಿಗೆ ಸನ್ಮಾನ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಜಯಂತಿ ಹಿನ್ನೆಲೆ ದೇವಿಯ ಅಭಿಷೇಕ, ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ಬಳಿಕ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು. ಶಶಿಕಾಂತ ಜನಾರ್ಧನ ನಿರೂಪಿಸಿದರು.ಮಾಣಿಕಪ್ರಭು ಚೌಧರಿ ವಂದಿಸಿದರು.

    apvc-iconPost Views: 71
  • ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ವೇಳೆಗೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದು, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

    ಗೀತಾ ಜಯಂತಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾದ “ಲಕ್ಷ ಕಂಠ ಗೀತಾ ಪಾರಾಯಣ ಬೃಹತ್ ಗೀತೋತ್ಸವ” ಎಂಬ ಮಹಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳು ಗೀತೆಯ ಶ್ಲೋಕಗಳನ್ನು ಸಮೂಹವಾಗಿ ಪಠಿಸಲಿದ್ದಾರೆ.

    ಪ್ರಧಾನಮಂತ್ರಿಯವರ ಈ ಭೇಟಿಯ ಹಿನ್ನೆಲೆ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕಠಿಣಗೊಳಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಕೇಂದ್ರ ಭದ್ರತಾ ಪಡೆಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

    ಮಠದ ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಲಿದ್ದಾರೆ. ದೇವರ ದರ್ಶನದ ನಂತರ ಅವರು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಹಲವು ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

    ಈ ಭೇಟಿ ಪ್ರಧಾನಿಯಾಗಿದ್ದ ಬಳಿಕ ಮೋದಿಯವರ ಮೊದಲ ಉಡುಪಿ ಪ್ರವಾಸವಾಗಿದ್ದು, ಇದರಿಂದ ಶ್ರೀಕೃಷ್ಣ ಮಠದಲ್ಲಿ ವಿಶೇಷ ಚೈತನ್ಯ ಮೂಡಿದೆ. 2013ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾಗ ಪುತ್ತಿಗೆ ಪರ್ಯಾಯದ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿದ್ದರು. ಈಗ ಸುಮಾರು ಒಂದು ದಶಕದ ಬಳಿಕ ಅವರು ಮತ್ತೆ ಶ್ರೀಕೃಷ್ಣನ ನಾಡಿಗೆ ಕಾಲಿಡಲಿದ್ದಾರೆ.

    ವಿಶ್ವ ಗೀತಾ ಪರ್ಯಾಯದ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೈಗೊಂಡಿದ್ದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಪ್ರಚಾರ ಕಾರ್ಯವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡು, ಮೊದಲು ಅಭಿನಂದನಾ ಪತ್ರ ಕಳಿಸಿದ್ದರು. ಇದೀಗ ಅವರು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಠದ ಪರಂಪರೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಂತಾಗಿದೆ.

    ಪ್ರಧಾನಮಂತ್ರಿಯವರ ಆಗಮನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ಮಠದ ಅಧಿಕಾರಿಗಳು ಮತ್ತು ಭಕ್ತವೃಂದ ಈಗಾಗಲೇ ಸಜ್ಜಾಗಿದ್ದು, ಉಡುಪಿಯು ಧಾರ್ಮಿಕ ಉತ್ಸವದ ನೋಟ ಪಡೆದುಕೊಂಡಿದೆ. ಭದ್ರತಾ ಕ್ರಮಗಳು, ಸಂಚಾರ ನಿಯಂತ್ರಣ ಮತ್ತು ಅತಿಥಿಗಳ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳು ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

    ನವೆಂಬರ್ 28ರ ಈ ಭೇಟಿಯು ಕೇವಲ ರಾಜಕೀಯ ಅಥವಾ ಅಧಿಕೃತ ಪ್ರಯಾಣವಲ್ಲ, ಆತ್ಮೀಯ ಮತ್ತು ಧಾರ್ಮಿಕ ಭಾವನೆಯನ್ನು ಹೊತ್ತಿರುವ ವಿಶೇಷ ದಿನವಾಗಲಿದೆ ಎಂದು ಮಠದ ವೃತ್ತಪತ್ರಿಕೆಗಳು ತಿಳಿಸಿವೆ.

    apvc-iconPost Views: 12
  • “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    ಕ್ರಿಕೆಟ್ ಲೋಕದಲ್ಲಿ ಕೆಎಲ್ ರಾಹುಲ್ ಎಂಬ ಹೆಸರು ಅಷ್ಟೇ ಶಾಂತವಾಗಿ, ಅಷ್ಟೇ ಪ್ರಭಾವಶಾಲಿಯಾಗಿ ಬೆಳಗುತ್ತಿದೆ. ಮೈದಾನದಲ್ಲಿ ಗಂಭೀರವಾಗಿ, ದೃಢತೆಯಿಂದ ಆಟವಾಡುವ ಈ ಆಟಗಾರನ ಮತ್ತೊಂದು ಮುಖ ಹಾಸ್ಯ ಮತ್ತು ಸ್ನೇಹಭಾವದಿಂದ ಕೂಡಿದೆ. ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಸಣ್ಣ ಘಟನೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಗುವಿನ ಅಲೆ ಎಬ್ಬಿಸಿದೆ. ಅದು ಅವರ ಮೆಂಟರ್ ಆಗಿದ್ದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಬಗ್ಗೆ ಮತ್ತು ಅದರಲ್ಲಿ ಪ್ರಮುಖ ಪಾತ್ರದಲ್ಲಿ ಅವರ ಪತ್ನಿಯೂ ಕೂಡ ಇದ್ದಾರೆ.

    ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದ ಸಮಯದಲ್ಲಿ, ತಂಡದ ಮೆಂಟರ್ ಆಗಿದ್ದವರು ಕೆವಿನ್ ಪೀಟರ್ಸನ್. ಕಠಿಣ ಶಿಸ್ತು, ದೃಢ ಮಾರ್ಗದರ್ಶನ ಮತ್ತು ಕಟುವಾದ ವಿಶ್ಲೇಷಣೆಗಳು ಪೀಟರ್ಸನ್ ಅವರ ಕೋಚಿಂಗ್ ಶೈಲಿಯ ಮುಖ್ಯ ಅಂಶಗಳಾಗಿವೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದ ರಾಹುಲ್‌ಗೆ ಅನೇಕ ಪಾಠಗಳು ಕಲಿತರೂ, ಕೆಲವೊಮ್ಮೆ ಆ ಕಠಿಣತನ ತಾಳಲಾಗದಂತಾಗುತ್ತಿತ್ತು.

    ರಾಹುಲ್‌ನ ಪ್ರಕಾರ, “ಕೆವಿನ್ ಪೀಟರ್ಸನ್ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಆದರೆ ಅವರು ಕೆಲವೊಮ್ಮೆ ತುಂಬಾ ಗಂಭೀರವಾಗಿ ಮಾತಾಡುತ್ತಿದ್ದರು. ಅವರ ಪಾಠ ಕೇಳುವಾಗ ನಕ್ಕುಬಿಡಲು ಸಹ ಆಗುತ್ತಿರಲಿಲ್ಲ. ಅವರು ತುಂಬಾ ಏಕಾಗ್ರತೆಯಲ್ಲಿರುತ್ತಾರೆ, ನಾನು ಒಳಗೆ ನಕ್ಕುಕೊಂಡೇ ಇರ್ತೀನಿ.”

    ಈ ಘಟನೆಯ ಕುತೂಹಲಕರ ಭಾಗವೆಂದರೆ ರಾಹುಲ್ ಅವರು ಒಮ್ಮೆ ಕೆವಿನ್ ಪೀಟರ್ಸನ್ ಅವರ ಪತ್ನಿಗೇ ದೂರು ನೀಡಿಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

    “ನಾವು ಯೂರೋಪ್ ಪ್ರವಾಸದಲ್ಲಿದ್ದಾಗ ಒಮ್ಮೆ ಅವರ ಪತ್ನಿಯನ್ನು ಭೇಟಿ ಮಾಡಿದ್ದೆ. ಅಲ್ಲಿ ನಾನು ನಕ್ಕು ಅವರ ಬಳಿ ಹೇಳಿದೆ ‘ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ. ಅಭ್ಯಾಸದಲ್ಲಿ ತುಂಬಾ ಕಠಿಣವಾಗಿ ಮಾತನಾಡುತ್ತಾರೆ. ಸ್ವಲ್ಪ ಅವರಿಗೆ ಹೇಳಿ ಪ್ಲೀಸ್, ನನ್ನ ಮೇಲೆ ಮೃದುಧೋರಣೆಯಿಂದ ಕನಿಕರ ಇರಲಿ!’”

    ಅದನ್ನು ಕೇಳಿ ಪೀಟರ್ಸನ್ ಅವರ ಪತ್ನಿಯೂ ನಕ್ಕರಂತೆ. ಈ ಹಾಸ್ಯಭರಿತ ಕ್ಷಣವು ಪೀಟರ್ಸನ್ ಮತ್ತು ರಾಹುಲ್ ನಡುವಿನ ಸ್ನೇಹದ ನಿಜವಾದ ಹತ್ತಿರತನವನ್ನು ತೋರಿಸುತ್ತದೆ.

    ಈ ಘಟನೆ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ನಡೆಸಿದ 2 Sloggers ಎಂಬ ಯುಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಯಿತು. ಸಂಭಾಷಣೆಯ ವೇಳೆ ಅಥಿಯಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ರಾಹುಲ್ ತಮ್ಮ ಗುರು ಶಿಷ್ಯರ ನಡುವಿನ ಸಣ್ಣಪುಟ್ಟ ನೊಣಜಗಳ ಕುರಿತು ಹಾಸ್ಯಾತ್ಮಕವಾಗಿ ಹಂಚಿಕೊಂಡರು.

    “ಪ್ರತಿ ಬಾರಿ ಕೆವಿನ್ ಜೊತೆ ಜಗಳವಾದಾಗ, ನನ್ನ ಪತ್ನಿಯೇ ನನಗೆ ಬುದ್ಧಿ ಹೇಳುತ್ತಾಳೆ,” ಎಂದು ನಗುತ್ತಾ ಹೇಳಿದ್ದಾರೆ ರಾಹುಲ್. “ಆದರೂ ಕೆವಿನ್ ನನ್ನ ಜೀವನದಲ್ಲಿ ಒಬ್ಬ ಪ್ರೇರಕ. ಅವರಿಂದ ಕಲಿತ ಪಾಠಗಳು ಇಂದು ನನ್ನ ಆಟದ ಗುಣಮಟ್ಟವನ್ನು ರೂಪಿಸಿವೆ” ಎಂದು ಹೇಳಿಕೊಂಡಿದ್ದಾರೆ.

    apvc-iconPost Views: 6