ಸತ್ಯಕಾಮ ವಾರ್ತೆ ಯಾದಗಿರಿ:
ಯಾದಗಿರಿ ಜಿಲ್ಲಾಧಿಕಾರಿಯವರ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು ವಾಟ್ಸಪ್‌ನಲ್ಲಿ ನಕಲಿ ಖಾತೆ ತೆರೆದು ಆರೋಗ್ಯ ಇಲಾಖೆಯ ಮಹಿಳಾ ಸರ್ಕಾರಿ ಸಿಬ್ಬಂದಿಗೆ ₹50 ಸಾವಿರ ಹಣ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ 7.30ರ ಸುಮಾರಿಗೆ ಮೊಬೈಲ್‌ಗೆ +84886912413 ಎಂಬ ವಾಟ್ಸಪ್ ನಂಬರ್‌ನಿಂದ “ಹಲೋ ಜ್ಯೋತಿ, ಕೆಲಸ ಹೇಗೆ ನಡೆದಿದೆ? ನನ್ನಿಂದ ಏನಾದರೂ ಸಹಾಯ ಬೇಕೆ?” ಎಂಬ ಸಂದೇಶ ಬಂದಿತ್ತು. ನಂಬರ್‌ನ ಪ್ರೊಫೈಲ್‌ನಲ್ಲಿ ಜಿಲ್ಲಾಧಿಕಾರಿಯವರ ಚಿತ್ರ ಇರುವುದರಿಂದ ನಿಜವಾದ ಅಧಿಕಾರಿಯೇ ಎಂದು ಭಾವಿಸಿದ ಮಹಿಳಾ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.
ಅದಾದ ಬಳಿಕ ಅದೇ ನಂಬರ್‌ನಿಂದ ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿ ಸಮಸ್ಯೆ ಇದೆ, ತಕ್ಷಣ ₹50,000 ಹಾಕಿ ಎಂಬ ಸಂದೇಶ ಬಂದಿದ್ದು, ನಿಜವಾದ ಜಿಲ್ಲಾಧಿಕಾರಿಯೇ ಕೇಳುತ್ತಿದ್ದಾರೆಂದು ನಂಬಿ ಗೂಗಲ್ ಪೇ ಮುಖಾಂತರ ಹಣ ವರ್ಗಾಯಿಸಲಾಯಿತು. ನಂತರ ಇನ್ನೂ ₹20,000 ಹಾಕುವಂತೆ ಸೂಚನೆ ಬಂದಾಗ ಅನುಮಾನಗೊಂಡ ಅವರು ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಬಳಿಕ ಜಿಲ್ಲಾಧಿಕಾರಿಗಳಿಗೆ ವಿಚಾರಿಸಿದಾಗ ಇದು ವಂಚನೆ ಎಂದು ತಿಳಿದುಬಂದಿದೆ. ಅಪರಿಚಿತರು ಜಿಲ್ಲಾಧಿಕಾರಿಯವರ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಿ ಹಣ ವಂಚಿಸಿರುವುದು ದೃಢಪಟ್ಟಿದೆ. ಈ ಕುರಿತು ಮಹಿಳಾ ಸಿಬ್ಬಂದಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಕೈಗೊಂಡಿದ್ದಾರೆ ಪೊಲೀಸ್ ಮೂಲಗಳು ಸತ್ಯಕಾಮಗೆ ತಿಳಿಸಿವೆ.
