ರಾಜ್ಯದ ಜನಸಂಖ್ಯೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಅರಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಅಂತಿಮ ಹಂತ ತಲುಪಿದೆ. ಈ ಸಮೀಕ್ಷೆಯು ಕೇವಲ ಅಂಕಿ-ಅಂಶಗಳ ಸಂಗ್ರಹಣೆಯಷ್ಟೇ ಅಲ್ಲ, ಮುಂದಿನ ದಶಕಗಳಲ್ಲಿ ರಾಜ್ಯದ ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳ ರೂಪರೇಖೆ ನಿರ್ಧರಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಸಮಗ್ರ ಮಾಹಿತಿಯ ಆಧಾರದ ಮೇಲೆ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ನೀಡಲು ಈ ಸಮೀಕ್ಷೆಯು ಪೂರಕವಾಗಲಿದೆ.
ಸಮೀಕ್ಷೆಯ ವೇಳೆ ಕೆಲ ಮನೆಗಳು ಬಿಟ್ಟುಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ನಿಮ್ಮ ಮನೆಗೆ ಸಮೀಕ್ಷಾಧಿಕಾರಿಗಳು ಭೇಟಿ ನೀಡದಿದ್ದರೆ ತಕ್ಷಣವೇ 8050770004 ಗೆ ಕರೆ ಮಾಡಿ, ನಿಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸರ್ಕಾರ ನಾಗರಿಕರನ್ನು ವಿನಂತಿಸಿದೆ. ನಾಗರಿಕರ ಸಹಕಾರದಿಂದ ಮಾತ್ರ ಈ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.
ಸಮೀಕ್ಷಾ ಅವಧಿ ವಿಸ್ತರಣೆ ಯಾಕೆ?:
ಸಮೀಕ್ಷಾ ಕಾರ್ಯ ಆರಂಭವಾದ ನಂತರ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳು ಎದುರಾಗಿದ್ದವು. ವಿವರಗಳನ್ನು ನೇರವಾಗಿ ಮೊಬೈಲ್ ಆಪ್‌ಗಳ ಮೂಲಕ ದಾಖಲಿಸುವ ವ್ಯವಸ್ಥೆ ಇರಲಿದ್ದು, ಕೆಲವೆಡೆ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಾದ ಕಾರಣ ಪ್ರಾರಂಭಿಕ ಹಂತ ನಿಧಾನಗತಿಯಲ್ಲಿ ನಡೆಯಿತು.
ಅದೇ ರೀತಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಬಾರಿ ಶಿಕ್ಷಕರ ಬದಲು ಸರ್ಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ದೀಪಾವಳಿ ರಜಾ ಅವಧಿಯಲ್ಲಿ ಅವರು ಲಭ್ಯರಾಗದ ಕಾರಣದಿಂದ ಸಮೀಕ್ಷಾ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹೆಚ್ಚು ಕುಟುಂಬಗಳನ್ನು ಒಳಗೊಂಡಂತೆ ಸಮೀಕ್ಷೆಯನ್ನು ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಸಲಾಗುತ್ತಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಗಳು ಇವೆ.
ಆತುರದಲ್ಲಿ ಸಮೀಕ್ಷೆ ನಡೆಯುತ್ತಿದೆಯೇ? ಸರ್ಕಾರದ ಸ್ಪಷ್ಟನೆ:
ಸಮೀಕ್ಷೆ ಕಾರ್ಯವನ್ನು ವೇಗಗೊಳಿಸಲು ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಆರಂಭಿಕ ಹಂತದಲ್ಲಿ 3–4 ವಿಭಿನ್ನ ಆಪ್‌ಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲಾಯಿತು. ಅವುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೆಲವು ದಿನಗಳು ಬೇಕಾದ್ದರಿಂದ ಪ್ರಾರಂಭದಲ್ಲಿ ವಿಳಂಬ ಉಂಟಾಯಿತು.
ಇದಲ್ಲದೆ, ಶಿಕ್ಷಕರಿಗೆ ಸಮೀಕ್ಷೆಯ ಜವಾಬ್ದಾರಿಯನ್ನು ನೀಡಿದಾಗ, ಅವರಿಗೆ ಮೊದಲಿನಿಂದಲೇ ಅಗತ್ಯ ತರಬೇತಿ ಮತ್ತು ಉತ್ಸಾಹದ ಕೊರತೆ ಇತ್ತು. ನಂತರ ಸರ್ಕಾರವು ಅವರಿಗೆ ತರಬೇತಿ ನೀಡಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿತು. ಇದೇ ವೇಳೆ, ಕೆಲವು ಮಾಧ್ಯಮಗಳಲ್ಲಿ ಸಮೀಕ್ಷೆ ನಡೆಯುತ್ತಿಲ್ಲ ಎಂಬ ತಪ್ಪು ಮಾಹಿತಿಗಳು ಹರಡಿದ್ದರಿಂದ ಪ್ರಾರಂಭಿಕ ಹಂತದಲ್ಲಿ ಗೊಂದಲ ಉಂಟಾಯಿತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನಿಮ್ಮ ಸಹಕಾರವೇ ಸಮೀಕ್ಷೆಯ ಯಶಸ್ಸು:
ಈ ಸಮೀಕ್ಷೆ ಕೇವಲ ಒಂದು ಸರ್ಕಾರಿ ಪ್ರಕ್ರಿಯೆಯಲ್ಲ, ಅದು ಭವಿಷ್ಯದ ಪೀಳಿಗೆಯ ಶಿಕ್ಷಣ, ಉದ್ಯೋಗ ಹಾಗೂ ಕಲ್ಯಾಣದ ದಿಕ್ಕನ್ನು ನಿಗದಿಪಡಿಸುವ ಪ್ರಮುಖ ಹಂತ. ನಿಮ್ಮ ಮನೆಯಲ್ಲಿ ಸಮೀಕ್ಷಾಧಿಕಾರಿಗಳು ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ನೀಡುವುದು ನಾಗರಿಕರ ಕರ್ತವ್ಯ. ಮನೆಯನ್ನು ಬಿಟ್ಟು ಹೋಗಿದ್ದರೆ 8050770004 ಈ ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ.

