ಸತ್ಯಕಾಮ ವಾರ್ತೆ ಶಹಾಪುರ :
ನಾಗರ ಪಂಚಮಿ ಹಬ್ಬದ ಅಂಗವಾಗಿ ಶಹಾಪುರ ತಾಲ್ಲೂಕಿನ ಇಟಗಾ (ಎಸ್) ಗ್ರಾಮದ ಯುವಕ ನಾಗರಾಜ ಈರಪ್ಪ ದೊಡ್ಡಮನಿ ಎಂಬವರು ತಮ್ಮ ವಿಶಿಷ್ಟ ಶಕ್ತಿ ಪ್ರದರ್ಶನದಿಂದ ಕೆಸರು ಗದ್ದೆಯಲ್ಲಿಯೇ ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು ಎಲ್ಲರ ಮನ ಗೆದ್ದಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಕೇವಲ ಸಂಪ್ರದಾಯ ಪಾಲನೆ ಮಾತ್ರವಲ್ಲ, ಶಕ್ತಿಯ ನಿದರ್ಶನವನ್ನೂ ನೀಡಿದ ಇವರು ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು, ಕಾಲ್ನಡಿಗೆ ಮೂಲಕ ಇಟಗಾ (ಎಸ್) ಗ್ರಾಮದಿಂದ ಶಹಾಪುರದ ಹನುಮಾನ ದೇವಾಲಯಕ್ಕೆ ತಲುಪಿಸುವುದು ಇತಿಹಾಸ ಕಾರ್ಯವಾಗಿದೆ ಎನ್ನಬಹುದು.
ಈ ಅಪರೂಪದ ಶಕ್ತಿ ಪ್ರದರ್ಶನ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ತವರು ಗ್ರಾಮದಿಂದ ಶಹಾಪುರ ನಗರದ ದೇವಾಲಯದವರೆಗೆ ಅವರ ಮನೋಬಲ, ಶಕ್ತಿಶಾಲಿತ್ವ ಹಾಗೂ ಧೈರ್ಯ ಎಲ್ಲರಿಗೂ ಪ್ರೇರಣೆಯಾಗುತ್ತಿದೆ. ಈತನೊಂದಿಗೆ ಗ್ರಾಮದಿಂದ ಬಂದ ಹಲವಾರು ಯುವಕರು ಸಂತೋಷ ವ್ಯಕ್ತಪಡಿಸಿ ನಾಗರಾಜನನ್ನು ಸನ್ಮಾನಿಸಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಅಭಿನಂದಿಸಿದರು.
ಗ್ರಾಮದ ಹಿರಿಯರು ಈ ಘಟನೆಯನ್ನು ಕೇವಲ ಶಕ್ತಿ ಪ್ರದರ್ಶನವೆಂದು ನೋಡದೆ, ಅದು ಯುವ ಪೀಳಿಗೆಗೆ ಪ್ರೇರಣೆಯ ಮಾದರಿಯೆಂದು ಅಭಿಪ್ರಾಯಪಟ್ಟರು. “ಇಂತಹ ಕಾರ್ಯಗಳು ಗ್ರಾಮೀಣ ಭಾವೈಕ್ಯತೆ ಹಾಗೂ ಭ್ರಾತೃತ್ವ ಬಲಪಡಿಸುತ್ತವೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಹಾಪುರದ ಯುವ ನಾಯಕ ಅವಿನಾಶ್ ಗುತ್ತೇದಾರ್ ಅವರು ನಾಗರಾಜನನ್ನು ಸನ್ಮಾನಿಸಿ ಗೌರವಿಸಿದರು. ಈ ಉತ್ಸವದಲ್ಲಿ ಇಟಗಾ ಹಾಗೂ ಶಹಾಪುರದ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ವಿಜೃಂಭಣೆಗೆ ಕಾರಣರಾದರು.

