ಕರ್ನಾಟಕ ರಾಜಕೀಯದ ವಾತಾವರಣ ಕಳೆದ ಕೆಲವು ವಾರಗಳಿಂದ ನಾಯಕತ್ವ ಬದಲಾವಣೆಯ ಚರ್ಚೆಯಿಂದ ಗದ್ದಲಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದ ಪ್ರಶ್ನೆ ಹಲವು ಬಾರಿ ಸುದ್ದಿಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಎರಡೂ ನಾಯಕರು ಈ ವಿಚಾರವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಹೈಕಮಾಂಡ್‌ನಿಂದಲೂ ಸ್ಪಷ್ಟ ಸೂಚನೆಗಳು ಬಂದ ನಂತರ ಗಾಸಿಪ್‌ಗಳಿಗೆ ಕಡಿವಾಣಬಿದ್ದಂತೆ ಕಂಡಿತ್ತು. ಆದರೆ ಇದೀಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ನಾಯಕತ್ವ ಬದಲಾವಣೆ ಇಲ್ಲ ಹೈಕಮಾಂಡ್ ಹೇಳಿಕೆ ಸ್ಪಷ್ಟ: ಯತೀಂದ್ರ
ಮಾಧ್ಯಮಗಳೊಂದಿಗೆ ಮಾತನಾಡಿದ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಹೈಕಮಾಂಡ್ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ನನ್ನ ತಂದೆಯೇ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ವತಃ ಪಕ್ಷದ ಒಳಗಿನ ನಾಯಕರಿಗೆ ಹೈಕಮಾಂಡ್ ಹೇಳುವವರೆಗೆ ನಾನೇ ಸಿಎಂ ಎಂದು ಸೂಚನೆ ನೀಡಿದ್ದರೂ, ಈ ವಿಷಯದ ಮೇಲೆ ಮಾತನಾಡಬಾರದು ಎಂಬ ನಿರ್ದೇಶನ ನೀಡಲಾಗಿತ್ತು. ಆದರೆ ಪುತ್ರ ಯತೀಂದ್ರ ಅವರ ನೇರ ಹೇಳಿಕೆ ಮತ್ತೆ ರಾಜಕೀಯ ಚರ್ಚೆಗೆ ಹೊಸ ಆಯಾಮ ತಂದಿದೆ.
ಬ್ರೇಕ್‌ಫಾಸ್ಟ್ ರಾಜಕೀಯ ಸಿಎಂ ಡಿಕೆಶಿ ಭೇಟಿ ಬಳಿಕ ಶಾಂತಿ ಕಂಡ ರಾಜಕೀಯ:
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಎರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿತ್ತು. ಈ ಭೇಟಿಯ ಬಳಿಕ ಇಬ್ಬರೂ ನಾಯಕರೂ ಒಂದೇ ವೇದಿಕೆಯಲ್ಲಿ ಬಂದು, ಸರ್ಕಾರ ಸ್ಥಿರವಾಗಿದೆ, ಹೈಕಮಾಂಡ್ ಹೇಳಿಕೆಯ ಮೇರೆಗೆ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಯತೀಂದ್ರ ಅವರ ಹೊಸ ಹೇಳಿಕೆ ಮತ್ತೆ ಕೋಲಾಹಲಕ್ಕೆ ಕಾರಣವಾಗಿದ್ದು, ಕುರ್ಚಿ ಕಿತ್ತಾಟ ವಿಚಾರವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಳ್ಳಿದೆ.
