ಸತ್ಯಕಾಮ ವಾರ್ತೆ ಯಾದಗಿರಿ:
ಆಯುರ್ವೇದ ಚಿಕಿತ್ಸೆ ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಪ್ರಕಾರ ಹೊಟ್ಟೆನೋವಿನ ಚಿಕಿತ್ಸೆಗಾಗಿ ತಾಯಿ ಹಾಗೂ ಅತ್ತೆಯೊಂದಿಗೆ ಗೋಗಿ(ಕೆ) ಗ್ರಾಮದ ಮುರ್ಸಿದ್ ಮುತ್ಯಾ ಅಲಿಯಾಸ್ ಸಯ್ಯದ ಮುರಾನ್ ಹುಸೇನಿ ಎಂಬಾತನ ಮನೆಗೆ ಅಕ್ಟೋಬರ್ 8ರಂದು ಮಹಿಳೆ ತೆರಳಿದ್ದಳು. ಈ ವೇಳೆ ಚಿಕಿತ್ಸೆ ನೆಪದಲ್ಲಿ ಆರೋಪಿ ಯುವತಿಯನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಒಳಗಿನಿಂದ ಹಾಕಿಕೊಂಡು, ಮೂಗಿಗೆ ಏನೋ ಔಷಧಿ ಹಚ್ಚಿ ಸುಂದಾಗುವಂತೆ ಮಾಡಿ, ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಮಹಿಳೆ ಚೀರಿದಾಗ ಆಕೆಯ ತಾಯಿ ಬಾಗಿಲು ಬಡಿದು ಒಳಗೆ ಬಂದಿದ್ದು, ಆರೋಪಿ ತನ್ನ ತಪ್ಪನ್ನು ಮುಚ್ಚಿಹಾಕಲು ಆಕೆಗೆ ಚಿಕಿತ್ಸೆ ಮುಗಿದಿದೆ ಎಂದು ಹೇಳಿದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಮಹಿಳೆ ಮನೆಗೆ ಹೋದ ನಂತರ ತಾಯಿ ಮತ್ತು ಅತ್ತೆಗೆ ವಿಷಯ ತಿಳಿಸಿದ್ದು, ನಂತರ ಗೋಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.

