ಕರ್ನಾಟಕ ರಾಜಕೀಯದಲ್ಲಿ ಸಚಿವ ಸ್ಥಾನ ಹಂಚಿಕೆ, ನಾಯಕತ್ವದ ಅಸಮಾಧಾನ, ಮತ್ತು ಭವಿಷ್ಯದ ರಾಜಕೀಯ ಕುರಿತು ಚರ್ಚೆಗಳು ಮರುಕಳಿಸುತ್ತಿರುವ ಸಮಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಮ್ಮನ್ನು ಒಳಪಡಿಸುವ ವಿಚಾರದ ಬಗ್ಗೆ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗ ಶಾಸಕರು ಪುನಃ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿರುವ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮಂತ್ರಿಯಾಗಿರಲು ಇಷ್ಟಪಡುವುದಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ನೇರವಾಗಿ ತಿಳಿಸಿದ್ದಾರೆ.
ಅಲ್ಲದೆ, ರಾಜಣ್ಣ ಅವರು ಈ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿದ್ದು, ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ದಾರಿಗೆ ಸಂಬಂಧಿಸಿದಂತೆ ಪ್ರಶ್ನೆ ಎತ್ತಿ ಅವರೇನು ಸಿಎಂ ಆಗಿಯೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂದು ತಿರುಗೇಟು ನೀಡಿದರು.
ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಮತ್ತೇ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸುತ್ತಿರುವ ಎಲ್ಲ ಬೆಂಬಲಿಗರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜಣ್ಣ ಅವರ ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಉಂಟಾಗುತ್ತಿರುವ ಅಸಮಾಧಾನದ ಧ್ವನಿಯನ್ನು ಮತ್ತಷ್ಟು ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪಕ್ಷದ ಹಿರಿಯ ನಾಯಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದರ ಕುರಿತ ಕುತೂಹಲ ಹೆಚ್ಚಿಸಿದೆ.
