ಬಿಗ್ ಬಾಸ್ ಕನ್ನಡ 11’ ಮೂಲಕ ಸಾಕಷ್ಟು ಗಮನ ಸೆಳೆದ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಇದೀಗ ಸರಳ ವಿವಾಹಕ್ಕೆ ಸಿದ್ಧರಾಗಿದ್ದಾರೆ. ಆಡಂಬರ ಇಲ್ಲದ, ಮನೆಯವರ ಆಶೀರ್ವಾದದೊಂದಿಗೆ ನಡೆಯುವ ಮದುವೆಯೇ ಇವರ ನಿರ್ಧಾರ.
ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ಪರಿಚಯ, ನಂತರ ಪ್ರೀತಿ, ಆಮೇಲೆ ಕುಟುಂಬದವರೊಂದಿಗೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಮದುವೆಯ ಹಂತಕ್ಕೆ ಬಂದಿದ್ದಾರೆ. ಪ್ರಪೋಸ್ ಮಾಡಿದ್ದು ನಾನೇ ಎಂದು ಹೇಳಿಕೊಂಡಿರುವ ಉಗ್ರಂ ಮಂಜು, ‘ನೇರವಾಗಿ ಮದುವೆ ಬಗ್ಗೆ ಮಾತನಾಡಿದೆ. ಎರಡು ಮೂರು ತಿಂಗಳಲ್ಲೇ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೆವು’ ಎಂದು ತಮ್ಮ ಪ್ರೀತಿಯ ಕಥೆಯನ್ನು ಹಂಚಿಕೊಂಡಿದ್ದಾರೆ.
ಮದುವೆ ಯಾವಾಗ, ಎಲ್ಲಿ ಅನ್ನೋ ಪ್ರಶ್ನೆಗೆ ಉಗ್ರಂ ಮಂಜು ತಾವೇ ಸ್ಪಷ್ಟ ಉತ್ತರ ನೀಡಿದ್ದಾರೆ. ಜನವರಿ 23ರಂದು ಹಂಸಗಿರಿ ಹೊಸೂರಿನ ಮನೆ ದೇವರಾದ ತಿಮ್ಮರಾಯಸ್ವಾಮಿ ಸನ್ನಿಧಿಯಲ್ಲಿ ಇವರ ವಿವಾಹ ನಡೆಯಲಿದೆ. ಗುರುವಿನ ಸಲಹೆ ಹಾಗೂ ತಮ್ಮ ಆಸೆಯಂತೆ ದೇವಾಲಯದಲ್ಲೇ ಮದುವೆಯಾಗಲು ನಿರ್ಧರಿಸಿದ್ದು, ಕುಟುಂಬದವರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಲಿದೆ.
ಆಡಂಬರ, ಅತಿಯಾದ ಖರ್ಚು ನಮಗೆ ಇಷ್ಟವಿಲ್ಲ ಎನ್ನುವ ಉಗ್ರಂ ಮಂಜು, ಮದುವೆಗಾಗಿ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಿ ನಂತರ ಅದರ ಒತ್ತಡ ಹೊರುವುದಕ್ಕಿಂತ ಶಾಂತವಾಗಿ ದೇವರ ಆಶೀರ್ವಾದದೊಂದಿಗೆ ಹೊಸ ಜೀವನ ಆರಂಭಿಸುವುದೇ ನಮ್ಮ ಯೋಚನೆ ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಸಾಯಿ ಸಂಧ್ಯಾ ಕೂಡ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಮದುವೆಗೆ ಸಜ್ಜಾಗಿದೆ. ಜನವರಿ 23ರಂದು ಮನೆ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಸರಳ ವಿವಾಹಕ್ಕೆ ಅಭಿಮಾನಿಗಳಿಂದ ಈಗಾಗಲೇ ಶುಭಾಶಯಗಳ ಸುರಿಮಳೆ ಆರಂಭವಾಗಿದೆ.
