ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.
ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
