ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾ ಗದ್ದಲಗೊಂಡಿದೆ. ಆದರೆ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ಒಂದೇ ‘ಬಿಗ್ ಬಾಸ್ ಕನ್ನಡ 12’ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ತಕ್ಷಣದ ಹಾಸ್ಯಭರಿತ ಎಂಟ್ರಿ.
ಟ್ರೇಲರ್‌ನಲ್ಲೊಂದು ಸಣ್ಣ ಸನ್ನಿವೇಶ. ಪೊಲೀಸ್ ಮುಂದೆ ಕುಳಿತಿರುವ ಗಿಲ್ಲಿ ನಟ, ತಮ್ಮದೇ ಶೈಲಿಯಲ್ಲಿ “ಎಕ್ಸ್‌ಕ್ಯೂಸ್ ಮಿ ಪಿಸಿ… ಸ್ವಲ್ಪ ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ!” ಎನ್ನುವ ಡೈಲಾಗ್ ಹೇಳುತ್ತಾರೇನು, ಕ್ಷಣಾರ್ಧದಲ್ಲೇ ಆ ದೃಶ್ಯಕ್ಕೇ ಬಣ್ಣ ಬದಲಾಗುತ್ತದೆ. ಅವರ ಡೆಲಿವರಿ, ಟೈಮಿಂಗ್ ಎರಡೂ ಸೇರಿ ಟ್ರೇಲರ್‌ನಲ್ಲಿರುವ ಗಂಭೀರತೆಯಲ್ಲಿ ಕ್ಷಣಿಕ ನಗುವಿನ ಗಾಳಿ ಹರಿಸುತ್ತವೆ.
‘ಬಿಗ್ ಬಾಸ್’ ಮನೆಯಲ್ಲಿ ಈಗಾಗಲೇ ಗಿಲ್ಲಿ ನಟ ಹಾಸ್ಯದಿಂದ ಜನರ ಮನ ಗೆದ್ದಿದ್ದಾರೆ. ಡಬಲ್ ಮೀನಿಂಗ್ ಬೇಡ, ಅಸಭ್ಯ ಪದ ಬೇಡ… ಮನೆಯಲ್ಲೇ ನಡೆಯುವ ಚಿಕ್ಕ ಘಟನೆಗಳಿಗೆ ಸನ್ನಿವೇಶ, ಚಿತ್ರ ರೆಫರೆನ್ಸ್ ಜೋಡಿಸಿ, ತಕ್ಷಣ ಕಾಮಿಡಿ ಸಿಡಿಸುವುದು ಅವರ ಸ್ಟೈಲ್. ಅದೇ ಶೈಲಿ ಟ್ರೇಲರ್‌ನಲ್ಲೂ ಕಂಡುಬಂದಿದ್ದು, ವೀಕ್ಷಕರಿಗೆ “ಇವರ ಪಾತ್ರ ಸಿನಿಮಾದಲ್ಲೂ ಮುಖ್ಯವೇನೋ” ಎಂಬ ಅಂದಾಜು ಮೂಡಿಸಿದೆ.
ಈಗಾಗಲೇ ಶೋ ಮೂಲಕ ಜನರಿಗೆ ಕನೆಕ್ಟ್ ಆಗಿರುವ ಅವರು, ದೊಡ್ಡ ಪರದೆ ಮೇಲೂ ತಮ್ಮದೇ ರೀತಿಯ ಗುರುತು ಮೂಡಿಸಿಕೊಳ್ಳಬಹುದು ಅನ್ನೋ ಆಸೆ ಅಭಿಮಾನಿಗಳಲ್ಲಿದೆ. ‘ಮ್ಯಾಕ್ಸ್ ಮಂಜು’ ಹೇಗೆ ಒಂದು ಚಿತ್ರದ ಮೂಲಕ ಹೊಸ ಇಮೇಜ್ ಪಡೆದುಕೊಂಡರೋ, ಗಿಲ್ಲಿ ನಟನಿಗೂ ‘ದಿ ಡೆವಿಲ್’ ಅದೇ ಅವಕಾಶ ಕೊಡುವ ಸಾಧ್ಯತೆ ದೊಡ್ಡದು.
ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಟ್ರೇಲರ್‌ನಲ್ಲಿ ಕೇವಲ ಕೆಲವು ಸೆಕೆಂಡ್‌ನಲ್ಲಿಲೇ ಸದ್ದು ಮಾಡಿದ ಗಿಲ್ಲಿ ನಟ, ಚಿತ್ರ ಬಂದ ಮೇಲೆ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ದರ್ಶನ್ ಅಭಿನಯದ ಭಾರೀ ಚಿತ್ರದಲ್ಲಿ ಅವರು ಯಾವ ರೀತಿಯಲ್ಲಿ ಮೆರುಗು ತರುತ್ತಾರೆ ಅನ್ನೋದನ್ನು ಈಗ ಎಲ್ಲರೂ ಕಾತರದಿಂದ ಕಾದಿದ್ದಾರೆ.
