Tag: yadagiri

  • ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    • ಐದನೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
      ಜೋಡಾಟ-ರಥೋತ್ಸವ ಸೇರಿ ಹಲವು ಆಕರ್ಷಣೆ
    ಸತ್ಯಕಾಮ ವಾರ್ತೆ ಬೆಂಗಳೂರು: 
    ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದು, ಈ ಸಲ ಬೆಂಗಳೂರಿನಲ್ಲಿ ಅದು ಎಂದಿಗಿಂತ ಅದ್ಧೂರಿಯಾಗಿ ನಡೆಯಲಿದೆ.

    ಈ ಬಾರಿ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನೆರವೇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

    ‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಮೂಲಕ ಆಯೋಜನೆ ಆಗುತ್ತಿರುವ ಈ ಆಚರಣೆಯ ದಿನ-ಸ್ಥಳ ಘೋಷಣೆ ಕುರಿತು ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ ‘ವಾಲ್ಗ’ ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಆರು ವರ್ಷಗಳ ಹಿಂದೆ ಈ ಆಚರಣೆ ಆರಂಭವಾಗಿದ್ದು, ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಗಿದೆ.

    Video: ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

    ಬೃಹತ್ ಮೆರವಣಿಗೆ: ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ ಎಂದರು.

    ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್.ಉಪೇಂದ್ರ ಶೆಟ್ಟಿ, ಹೋಟೆಲೋದ್ಯಮಿ ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
    ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.

    ಇದು ಸಣ್ಣ ಆಲೋಚನೆ ಅಲ್ಲ‌. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನ.
    – ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ.

    2 ದಿನಗಳ ಕಾರ್ಯಕ್ರಮಗಳ ಪಟ್ಟಿ
    * ‘ಹಂದಾಡ್ತ ನೆಗ್ಯಾಡಿ’: ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.
    * ‘ಬಯಲಾಟ’: ಗ್ರಾಮೀಣ ಕ್ರೀಡೋತ್ಸವ
    * ‘ರಥೋತ್ಸವ’: ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.
    * ‘ಪೆಟ್ಟ್ ಒಂದೇ, ಸ್ವರ ಬೇರೆ’: ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.
    * ‘ಭುಜಬಲದ ಪರಾಕ್ರಮ’ ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.
    * ‘ಯಬ್ಯಾ ಸೌಂಡೇ’: ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ
    * ‘ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್’: ವಿಶೇಷ ನೃತ್ಯ‌ ಪ್ರದರ್ಶನ
    * ‘ಗಂಡಿನ್ ಪಿಚ್ಚರ್ ಬಿಡ್ತ್’: ವಿಶೇಷ ಕಿರುಚಿತ್ರ ಪ್ರದರ್ಶನ
    * ‘ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್’: ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.
    * ‘ಕುಂದಾಪ್ರ ಸಂತಿ’: ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.
    * ‘ಹೊಟ್ಟಿ ಕಂಡದ್ ನಾವೇ ಸೈ’: ಕರಾವಳಿಯ ವಿಶೇಷ ಖಾದ್ಯ ಮೇಳ.

  • ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ

    ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ

    ಸತ್ಯಕಾಮ ವಾರ್ತೆ ಯಾದಗಿರಿ:
    ಆಧುನಿಕ ಯುಗದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ವಿಶೇಷವಾಗಿದೆ ಇಂತಹ ವಿವಾಹಗಳು ಹೆಚ್ಚಾಗಿ ನಡೆಯುವದರಿಂದ  ಬಡತನ ಕುಟುಂಬಗಳಿಗೆ ಹಣ ಉಳಿತಾಯವಾಗಿ  ಸಾಲದ ಹೊರೆ ತಪ್ಪುತ್ತದೆ ಎಂದು ಗಂಗಾಧರ ಮಹಾಸ್ವಾಮಿಗಳು ಸದ್ಗುರು ವಿಶ್ವಾರಾಧ್ಯ ಮಹಾ ಸಂಸ್ಥಾನ ಮಠ ಅಬ್ಬೆ ತುಮಕೂರು ಶ್ರೀಗಳು ನುಡಿದರು.
    ನಗರದ ಹೈದರಾಬಾದ್ ರಸ್ತೆ ಸಮೀಪದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಯುವ ಬ್ರಿಗೇಡ್ ಹಾಗೂ ಹರ್ಷವರ್ಧನ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಣಬಿ, ಇವರ ಸಂಯುಕ್ತಾಶ್ರಯದಲ್ಲಿ ನಡೆದ 21 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ಪೋಷಕರು ನಿಶ್ಚಯಿಸಿದ ಮದುವೆಗಳೇ ನಡೆಯುವುದೇ ಕಡಿಮೆಯಾಗಿದೆ ಅಂತದರಲ್ಲಿ ಸಾಮೂಹಿಕ ವಿವಾಹಗಳನ್ನು ಅದು ಉಚಿತವಾಗಿ ಏರ್ಪಡಿಸುವುದು ತುಂಬಾ ಜವಾಬ್ದಾರಿ ಕಾರ್ಯ ಮಾಡುವ ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ನುಡಿದರು.
    ವೇದಿಕೆಯ ಮೇಲೆ ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ  ಶಾಂತ ವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು  ಖಾಸ ಮಠ ಗುರುಮಠಕಲ್ ಸಾಮೂಹಿಕ ವಿವಾಹ ಎಂದರೆ ಅದು ಸಾಮರಸ್ಯ ಸಾರುವ ವಿವಾಹವಾಗಿವೆ, ಇಂತಹ ವಿವಾಹ ಏರ್ಪಾಟುಗಳು ವಿರಳಾತಿ ವಿರಳವಾಗಿವೆ ವಿವಾಹ ಏರ್ಪಾಟುಗಳು ಉಚಿತವಾಗಿ ಏರ್ಪಡಿಸುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ನುಡಿದರು.
    ಮತ್ತೊರ್ವ ಶ್ರೀಗಳಾದ  ಶ್ರೀ ಜ್ಞಾನ ಪ್ರಕಾಶ ಸ್ವಾಮಿ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮೈಸೂರು ಶ್ರೀಗಳು ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಪೈಕಿ ಯಾದಗಿರಿ ಜಿಲ್ಲೆಯೂ ಒಂದಾಗಿದ್ದು ಇಂತಹ ಜಿಲ್ಲೆಯಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಸಮಾನತೆ ಸಂದೇಶ ಸಾರುವ ಜೋತೆ ಜೋತೆಗೆ ಬಡತನ ನಿರ್ಮೂಲನೆ ಮಾಡುವ ಜೋತೆ ಜೋತೆಗೆ ಬಡ ಕುಟುಂಬಗಳಿಗೆ ಹಣದ ಉಳಿತಾಯವಾಗಿ ತಂದೆ ತಾಯಿಯರಿಗೆ ಇರುವ ಭಾರವನ್ನು ಇಳಿಸುವ ಮಹಾ ಕಾರ್ಯ  ಇಲ್ಲಿ ಆಯೋಜಿಸಿರುವ ತಂಡಕ್ಕೆ ಸಲ್ಲುತ್ತದೆ ಎಂದರು.
    ಶ್ರೀ ಸಿದ್ದರಾಮ ಶಿವಯೋಗಿಗಳು ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮುಡುಕುತೊರೆ ಶ್ರೀ ಗಳು ನವ ವಿವಾಹಿತ ವಧು ವರರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿ ಜೋಡಿಗಳಿಗೆ ಶುಭ ಹಾರೈಸಿ ಆಶೀರ್ವಾದ ನೀಡಿದರು.
    ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಚಲನಚಿತ್ರ ನಟ ಚೇತನ್ ಅಹಿಂಸಾ,ಡಿ ಎಸ್ ರಾಜಗೋಪಾಲ್, ರಾಜ್ಯಾಧ್ಯಕ್ಷ ಭೀಮ ಆರ್ಮಿ ಭಾರತ ಏಕ್ತಾ ಮಿಶನ್ ಬೆಂಗಳೂರು, ಜಿಲ್ಲಾ ಗೌರವ ಅಧ್ಯಕ್ಷ ಚಂದ್ರಕಾಂತ ಮಾಸ್ಟರ್,ಸವ್ಯಸಾಚಿ ಡಾ.ಜಿ, ಪರಮೇಶ್ವರ್ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಬಸ್ಸು ನಾಟೇಕರ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಪ್ರಭು ಬುಕ್ಕಲ್ ರಾಜು ಅಣಬಿ, ಹರ್ಷವರ್ಧನ್ ಗ್ರಾ,ಸೇ,ಸ. ಯುವ ಮುಖಂಡ ಅನೀಲ್ ಕುಮಾರ್ ಹೆಡಿಗಿಮದ್ರಾ, ಸೈದಪ್ಪ ಕೂಲುರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು:ಅಮೀನರಡ್ಡಿ ಯಾಳಗಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು:ಅಮೀನರಡ್ಡಿ ಯಾಳಗಿ

    • ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್‌ ಪ್ರತಿಭಟನೆ

     

    ಸತ್ಯಕಾಮ ವಾರ್ತೆ ಯಾದಗಿರಿ:-

    ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ನೈತಿಕ ಹೊಣೆ ಹೊತ್ತು, ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದು, ನವರ ತಲೆದಂಡವಾದರೆ ಸಾಲದು, ಈ ಹಗರಣದ ಕಿಂಗ್ ಪಿನ್ ಯಾರು ಎಂಬುದು ಬಯಲಾಗಬೇಕು, ಆತ್ಮಹತ್ಯೆ ಮಾಡಿಕೊಂಡ ಕಚೇರಿ ಅಧೀಕ್ಷಕ ಚಂದ್ರಶೇಖರ ಕುಟುಂಬಕ್ಕೆ ನ್ಯಾಯ ಸಿಗಬೇಕು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅನುಮಾನವಿದೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಕೇವಲ ಭ್ರಷ್ಟಾಚಾರ ಅಲ್ಲ ಇದು, ಬುಡಕಟ್ಟು ಸಮುದಾಯಗಳ ಹಣವನ್ನು ಕಳ್ಳತನ ಮಾಡಿದ ಸರ್ಕಾರವಿದು, ಇದರ ಕಿಂಗ್ ಪಿನ್ ಯಾರು ಎಂಬುದು ತನಿಖೆಯಾಗಬೇಕು ಎಂದಿದ್ದಾರೆ.

    ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಯಂಕ್ಷಿಂತಿ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಹೈದರಾಬಾದ್ ಮೂಲದ ವಿವಿಧ ಕಂಪೆನಿಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಹಣ ಡ್ರಾ ಮಾಡಿ, ಲೋಕಸಭೆ ಚುನಾವಣೆಗೆ ಬಳಸಿದ್ದು ಹಣ ದುರುಪಯೋಗ ಆಗಿದೆ ಹಾಗೂ ಬಾರ್‌ನಲ್ಲಿ ಕುಳಿತು ಕುಡಿದ ಬಿಲ್ ನಿಗಮದ ಹಣ ನೀಡಿ ದುರುಪಯೋಗ ಮಾಡಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ, ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ,ಪರುಶುರಾಮ ಕುರಕುಂದಿ,ಮೆಲಪ್ಪ ಗುಳಗಿ,ದೆವಿಂದ್ರನಾಥ ನಾದ,ವೆಂಕಟರಡ್ಡಿ ಅಬ್ಬೆತುಮಕೂರು,ಬಸವರಾಜ ವಿಭೂತಿಹಳ್ಳಿ,ದೇವರಾಜ ನಾಯಕ, ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸ್ವಾಮಿದೇವ ದಾಸನಕೇರಿ, ಶ್ರೀದೇವಿ ಶೆಟ್ಟಿಹಳ್ಳಿ,ಮಂಜುನಾಥ ಜಡಿ, ವೀಣಾ ಮೋದಿ, ಶಂಕರ್ ಕರಣಗಿ,

    ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಶಹಾಪುರ ಮಂಡಲ ಅಧ್ಯಕ್ಷ ಚಂದ್ರಶೇಖರ ಕಂಬಾರ, ಮಲ್ಲಿಕಾರ್ಜುನ ಕಟ್ಟಿಮನಿ,ಕರಬಸಪ್ಪ ಬಿಳಾರ, ಗೋವಿಂದಪ್ಪ ಖಾನಾಪುರ, ಶಿವು ಕೊಂಕಲ,ರಾಜು ಸ್ವಾಮಿ ಅಲಂಪಲ್ಲಿ, ಪ್ರಭಾವತಿ ಕಲಾಲ,ಭೀಮಬಾಯಿ ಶೆಂಡಿಗಿ, ಮಲ್ಲು ಕೋಲಿವಾಡ,ಸಾಬು ಚಂಡ್ರಕಿ ಸೇರಿದಂತೆ ಅನೇಕರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

  • ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ

    ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ

    ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ ನಗರಸಭೆ ಸದಸ್ಯ ಎಂ.ಡಿ ಮಹೆಬೂಬ ಅಲಿ

     

     

    ಸತ್ಯಕಾಮ ವಾರ್ತೆ ಯಾದಗಿರಿ:

    ವಸತಿ ರಹಿತರಿಗೆ ಇರುವ ಉಚಿತ ಆಶ್ರಯ ಕೇಂದ್ರದಲ್ಲಿ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದ್ದು ಈ ಕೇಂದ್ರಕ್ಕೆ ಮೂಲಸೌಕರ್ಯ ಒದಗಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ನಗರಸಭೆ ಸದಸ್ಯ ಎಂ.ಡಿ ಮಹೆಬೂಬ ಅಲಿ ಅವರು ಅಭಿಪ್ರಾಯಪಟ್ಟರು.

    ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ( ಡೇ- ನಲ್ಮಾ) ಅಭಿಯಾನದಡಿಯಲ್ಲಿ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ವಸತಿರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಸಸಿಗಳನ್ನು ನೆಟ್ಟು ಹಾಗೂ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಆರೋಗ್ಯವೇ ಭಾಗ್ಯ, ಆರೋಗ್ಯ ವಾಗಿದ್ದರೆ ಸುಖವಾಗಿ ಬಾಳಬಹುದ ಎಂದರು. ಎಲ್ಲರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದರು.

    ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ನಗರದಲ್ಲಿ ಕಾರ್ಮಿಕರಾಗಿದ್ದು, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉದ್ದೇಶದಿಂದ ಈ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ತಿಂಡಿಯ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಿಕೊಡಲಾಗುತ್ತದೆ ಎಂದರು. ಆಶ್ರಯದಲ್ಲಿ ಇರುವವರು ಸ್ವಯಂ ಉದ್ಯೋಗಿಗಳಾಗಲು ಸರ್ಕಾರದ ಹಲವು ಯೋಜನೆಗಳಿದ್ದು ಅವುಗಳ ಸದುಪಯೋಗ ಪಡೆಯಲು ಅಗತ್ಯ ಸಹಕಾರವನ್ನು ಇಲಾಖೆಯಿಂದ ನೀಡುತ್ತೇವೆ ಎಂದರು.

    ನಗರಸಭೆಯ ಮ್ಯಾನೇಜರ್ ಅಶ್ವಿನಿ ಅವರು ಮಾತನಾಡಿ, ವಸತಿರಹಿತ ನಿರಾಶ್ರಿತರಿಗೆ ಆಶ್ರಯ ನೀಡೋ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತಂದಿವೆ. ಇಂತಹ ನಿರಾಶ್ರಿತರ ರಕ್ಷಣೆ ನಮ್ಮ ಕರ್ತವ್ಯ ಆಗಿದೆ ಎಂದರು.

    ಡಾ.ಮಹೇಶ ಅವರು ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು

    ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ, ನಗರಠಾಣೆಯ ಎಎಸ್ಐ ಹಸನ್ ಪಟೇಲ್, ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ, ನಗರಸಭೆಯ ಸಿಬ್ಬಂದಿಗಳಾದ ಪದ್ಮಾ, ಮಂಜುನಾಥ, ಶಿವಪುತ್ರ, ಸಿಆರ್ಪಿ ಗಳಾದ ಅವ್ವಮ್ಮ, ಪ್ರೇಮಾ ಸಂಸ್ಥೆಯ ವ್ಯವಸ್ಥಾಪಕರಾದ ಮೌನೇಶ ಇಟಗಿ, ಭೀಮಾಶಂಕರ ಕಟ್ಟಿಮನಿ, ಸೇವಕರಾದ ಬೀರಲಿಂಗಪ್ಪ ಕಿಲ್ಲನಕೇರಾ, ಕೇರಟೇಕರಗಳಾದ ಮಲ್ಲು ನಾಟೇಕಾರ, ದೇವಮ್ಮ, ಕೃಷ್ಣ ಸೇರಿದಂತೆ ನಿರಾಶ್ರಿತರು ಉಪಸ್ಥಿತರಿದ್ದರು.