Tag: Satyakam

  • ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:

    ಶಹಾಪೂರ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಡಂಗೇರಾ)ಬಿ) ಗ್ರಾಮದ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನುಶ್ರೀ ತಂದೆ ಕಾಂತಿಲಾಲ್ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

    ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿನಿ ಕು.ತನುಶ್ರೀ ಅವರು ಶಾಲೆಗೆ ಕೀರ್ತಿ ತಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಹಾಗೂ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ್ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿಯೂ ವಿಜೇತರಾಗಲಿ ಎಂದು ಹಾರೈಸಿದ್ದಾರೆ.

  • 2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ

    2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ

    ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ದಾಖಲೆ ವಿದ್ಯುತ್ ಉತ್ಪಾದನೆ

    ಸತ್ಯಕಾಮ ವಾರ್ತೆ ರಾಯಚೂರು:

    ಇಂಧನ ಇಲಾಖೆಗೆ ಸದ್ಯದಲ್ಲೇ 2000 ಲೈನ್‌ಮೆನ್‌ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

    ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಇಂಧನ ಸಚಿವರು, “ಲೈನ್‌ಮೆನಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು,ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ,” ಎಂದರು.

    “ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾವಾಗ ಸ್ಥಳಿಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ,” ಎಂದು ತಿಳಿಸಿದರು.

    “ಈಗಾಗಲೇ 1000 ಸಹಾಯಕ ಇಂಜಿನಿಯರ್‌ಗಳ (ಎಇ), ಕಿರಿಯ ಇಂಜಿನಿಯರ್‌ಗಳ (ಜೆಇ) ನೇಮಕ ಮಾಡಿ ಕಾರ್ಯಾದೇಶವನ್ನೂ ನೀಡಿದ್ದೇವೆ. ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ಗಳಿಗೆ ಇತ್ತೀಚೆಗೆ ಕಾರ್ಯಾನುಭವ ತರಬೇತಿ ನೀಡಲಾಗಿದೆ. ತ್ವರಿತ ನೇಮಕಾತಿಗಾಗಿ ಈ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ,” ಎಂದು ಅವರು ಹೇಳಿದರು.

    ದಾಖಲೆ ಉತ್ಪಾದನೆ

    “ಈ ಬಾರಿ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್‌ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಅಧಿಕಾರಿಗಳ ಶ್ರಮವನ್ನು ಪ್ರಶಂಸನೀಯ. ಅವರೆಲ್ಲನ್ನೂ ಅಭಿನಂದಿಸಲೆಂದೇ ಇಲ್ಲಿಗೆ ಬಂದಿದ್ದೇನೆ,”ಎಂದರು.

    “ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ,”

    “ಅದರಲ್ಲೂ ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವ್ಯಾಟ್‌ ಸಾಮರ್ಥ್ಯದ 3ನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4ರಂದು 216 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗಿದ್ದು, ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ ಏಳು ವಿದ್ಯುತ್‌ ಘಟಕಗಳು ಸೇರಿ ಶೇ. 85ರಷ್ಟು ವಿದ್ಯುತ್‌ ಉತ್ಪಾದಿಸಿವೆ,”

    “ಅದೇರೀತಿ, ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023-24 ಹಣಕಾಸು ವರ್ಷದಲ್ಲಿ 6229.250 ಮಿ.ಯೂ. ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6000 ಮಿ.ಯೂ. ಗುರಿಯನ್ನು ವೈಟಿಪಿಎಸ್‌ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 8208.476 ಮಿ.ಯೂ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ,”

    “ಆರ್‌ಟಿಪಿಎಸ್, ಒಂದನೇ ಘಟಕ ತೀರಾ ಹಳೆಯದು ಎಂಬ ಕಾರಣಕ್ಕೆ ಮುಚ್ಚುವುದಿಲ್ಲ. ಈ ಕುರಿತು ಊಹಾಪೋಹ ಅಷ್ಟ. ಆದರೆ ನಾವು ಈಗಾಗಲೇ ಕೆಪಿಸಿ ಬೋರ್ಡ್ ಮೀಟಿಂಗಲ್ಲಿ ತೀರ್ಮಾನ ತಗೊಂಡಿದೀವಿ‌ ಅದನ್ನ ಸರಿ ಮಾಡಲು ಅಗತ್ಯಹಣ ಬಿಡುಗಡೆಗೂ ನಿರ್ಧರಿಸಲಾಗಿದೆ,”ಎಂದು ಹೇಳಿದರು.

    ಕಲ್ಲಿದ್ದಲು ಕೊರತೆ ಇಲ್ಲ

    “ನಮ್ಮ ಸರ್ಕಾರ ಬಂದ ಮೇಲೆ ಕಲ್ಲಿದ್ದಲು ಸಮಸ್ಯೆ ಇಲ್ಲದಂತೆ ನೋಡಕೊಂಡಿದ್ದೇವೆ. ಒಂದು ತಿಂಗಳಿಗೆ ಬೇಕಾದ ಕಲ್ಲಿದ್ದಲು ಸಂಗ್ರಹದಲ್ಲಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ 3 ಕಲ್ಲಿದ್ದಲು ಘಟಕಗಳಿಂದ ಕಲ್ಲಿದ್ದಲು ಬರುತ್ತಿದೆ. ಕ್ಯಾಪ್ಟಿವ್ ಮೈನಿಂಗ್‌ನಿಂದಲೂ ಕಲ್ಲಿದ್ದಲು ಬರ್ತಿದೆ. ಪ್ರಸ್ತುತ 14 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ,”ಎಂದು ಸಚಿವರು ವಿವರ ನೀಡಿದರು.

    ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಹಂಪಯ್ಯ‌ ನಾಯಕ್, ಮಾನಪ್ಪ ವಜ್ಜಲ್, ಬಸವರಾಜ್ ತುರುವಿನಹಾಳ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    • ಐದನೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
      ಜೋಡಾಟ-ರಥೋತ್ಸವ ಸೇರಿ ಹಲವು ಆಕರ್ಷಣೆ
    ಸತ್ಯಕಾಮ ವಾರ್ತೆ ಬೆಂಗಳೂರು: 
    ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದು, ಈ ಸಲ ಬೆಂಗಳೂರಿನಲ್ಲಿ ಅದು ಎಂದಿಗಿಂತ ಅದ್ಧೂರಿಯಾಗಿ ನಡೆಯಲಿದೆ.

    ಈ ಬಾರಿ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನೆರವೇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

    ‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಮೂಲಕ ಆಯೋಜನೆ ಆಗುತ್ತಿರುವ ಈ ಆಚರಣೆಯ ದಿನ-ಸ್ಥಳ ಘೋಷಣೆ ಕುರಿತು ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ ‘ವಾಲ್ಗ’ ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಆರು ವರ್ಷಗಳ ಹಿಂದೆ ಈ ಆಚರಣೆ ಆರಂಭವಾಗಿದ್ದು, ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಗಿದೆ.

    Video: ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

    ಬೃಹತ್ ಮೆರವಣಿಗೆ: ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ ಎಂದರು.

    ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್.ಉಪೇಂದ್ರ ಶೆಟ್ಟಿ, ಹೋಟೆಲೋದ್ಯಮಿ ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
    ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.

    ಇದು ಸಣ್ಣ ಆಲೋಚನೆ ಅಲ್ಲ‌. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನ.
    – ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ.

    2 ದಿನಗಳ ಕಾರ್ಯಕ್ರಮಗಳ ಪಟ್ಟಿ
    * ‘ಹಂದಾಡ್ತ ನೆಗ್ಯಾಡಿ’: ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.
    * ‘ಬಯಲಾಟ’: ಗ್ರಾಮೀಣ ಕ್ರೀಡೋತ್ಸವ
    * ‘ರಥೋತ್ಸವ’: ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.
    * ‘ಪೆಟ್ಟ್ ಒಂದೇ, ಸ್ವರ ಬೇರೆ’: ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.
    * ‘ಭುಜಬಲದ ಪರಾಕ್ರಮ’ ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.
    * ‘ಯಬ್ಯಾ ಸೌಂಡೇ’: ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ
    * ‘ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್’: ವಿಶೇಷ ನೃತ್ಯ‌ ಪ್ರದರ್ಶನ
    * ‘ಗಂಡಿನ್ ಪಿಚ್ಚರ್ ಬಿಡ್ತ್’: ವಿಶೇಷ ಕಿರುಚಿತ್ರ ಪ್ರದರ್ಶನ
    * ‘ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್’: ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.
    * ‘ಕುಂದಾಪ್ರ ಸಂತಿ’: ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.
    * ‘ಹೊಟ್ಟಿ ಕಂಡದ್ ನಾವೇ ಸೈ’: ಕರಾವಳಿಯ ವಿಶೇಷ ಖಾದ್ಯ ಮೇಳ.

  • ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಪತ್ರಕರ್ತ ಪಿ ಎಂ ಮಣ್ಣೂರ್ ಈಗ ನೆನಪು ಮಾತ್ರ

    ವಿಶೇಷ ಲೇಖನ : ಸುರೇಶ ಕೊಟಗಿ.

    ಪತ್ರಿಕಾರಂಗದ ಅಪ್ರತಿಮ ವ್ಯಕ್ತಿತ್ವ, ಮಹಾನಚೇತನ ಶ್ರೀ ಪಿ ಎಂ ಮಣ್ಣೂರರವರು ಜುಲೈ 1 ಪತ್ರಿಕಾ ದಿನಾಚರಣೆಯಂದು ಜನಿಸಿದರು. ಅವರ ಬದುಕು ಎಲ್ಲರಿಗೂ ಆದರ್ಶಮಯವಾಗಿತ್ತು. 2023 ಜೂಲೈ 1 ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತುಂಬಾ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗಿತ್ತು, ಇಂದು ಅದು ಇತಿಹಾಸ ಮಾತ್ರ.ಅನೇಕ ಗಣ್ಯರು, ಪತ್ರಕರ್ತರು, ಆಪ್ತರು ಹಾಗೂ ಮಿತ್ರರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮಣ್ಣೂರ್ ರವರ ಮಾತುಗಳು ಯುವ ಜನಾಂಗಕ್ಕೆ ಪತ್ರಕರ್ತರಿಗೆ ಧೈರ್ಯ, ಸಾಮರ್ಥ್ಯ ಮತ್ತು ಸ್ಪೂರ್ತಿ ತುಂಬುವ ಅವರ ಮನದಾಳದ ಮಾತುಗಳು ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚು ಹಸಿರಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು ಪತ್ರಿಕಾ ಮಿತ್ರರಿಗೆ ಟಾನಿಕ್ ನೀಡಿದಂತೆ ಪರಿಣಮಿಸಿತು ಆ ದಿನ.

    ಆದರೆ ದುರಾದುಷ್ಟಕರ ಜುಲೈ 1, 2024ರ ಜನ್ಮದಿನಕ್ಕೆ ಅವರಿಲ್ಲ, ಅವರ ನೆನಪು ಮಾತ್ರ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ನಮ್ಮಿಂದ ದೂರ ಹೋದ ಮೇಲೆ ಅರ್ಥವಾಗುತ್ತದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಸತ್ಯಕಾಮ ಕಾರ್ಯಾಲಯಕ್ಕೆ ಬಂದು ಒಂದೆರಡು ಗಂಟೆ ಕಾರ್ಯಾಲಯದ ಕಾರ್ಯವನ್ನು ನೋಡಿಕೊಂಡು ಅವರ ಪುತ್ರ ಆನಂದರಿಗೆ ಪತ್ರಿಕೆಯತ್ತ ವಿಶೇಷ ಗಮನ ಹರಿಸಲು ಸೂಚಿಸುತ್ತಿದ್ದರು. ಅವರನ್ನು ಭೇಟಿಯಾಗಲು ಅವರ ಮಿತ್ರರು ಪತ್ರಕರ್ತರು ಬಂದು ಹೋಗುವ ವಾಡಿಕೆ, ಆ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಎಂಥ ಮನುಷ್ಯರಿದ್ದರೆಂದರೆ, ಅವರ ಎದುರು ತಪ್ಪು ಮಾಡಿದ ಎಂತಹ ವ್ಯಕ್ತಿಯನ್ನು ಕ್ಷಮಿಸಿ ತಿಳಿ ಹೇಳುವ ದೊಡ್ಡ ಗುಣ ಅವರಲ್ಲಿತ್ತು. ಸತ್ಯಕಾಮ ಪತ್ರಿಕೆಯ ಸಿಬ್ಬಂದಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಆದ ಕಾರಣ ಇಂದಿಗೂ ಸಿಬ್ಬಂದಿ ವರ್ಗ ಅವರೊಂದಿಗಿನ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಳವಳ ಪಡುತ್ತಾರೆ.

    ಇದು ಪಿ ಎಂ ಮಣ್ಣೂರ್ ರವರು ನಡೆದು ಬಂದ ದಾರಿ. ಪತ್ರಿಕೆಯ ಜವಾಬ್ದಾರಿ ಹೊರೆ ಹೊತ್ತ ಅವರ ಪುತ್ರ ಶ್ರೀ ಆನಂದ ಮಣ್ಣೂರ ರವರು ತಂದೆಯವರ ಆಶೋತ್ತರ ಗಳ ಕಡೆಗೆ ಕಾಳಜಿ ವಹಿಸುತ್ತಾ ಅಪ್ಪಾಜಿಯವರು ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವ ಹಿರಿಯ ಗುರಿಯಾಗಿತ್ತು. ಇದು ಅನೇಕ ಸಲ ಚರ್ಚೆಗೂ ಬಂದಿದೆ. ಅವರ ಈ ಕನಸಿನ ಸಂಕಲ್ಪ, ಜವಾಬ್ದಾರಿಯಿಂದ ನಿಭಾಯಿಸಿ ನನಗೆ ಎಷ್ಟೇ ತೊಂದರೆ ಬಂದರೂ ನನಸಾಗಿ ಮಾಡುವ ಧ್ಯೇಯ ಹೊಂದಿದ್ದೇನೆ. ಅವರು ತೀರಿ ಹೋದಾಗಿನಿಂದ ಇಲ್ಲಿಯವರೆಗೆ ಅನೇಕ ಸಮಸ್ಯೆಗಳು ಎದುರಾಗಿವೆ ಕೆಲವು ಕಾಣದ ಕೈಗಳಿಂದ ತೊಂದರೆಗಳು ಎದುರಾಗುತ್ತಿವೆ. ಪರವಾಗಿಲ್ಲ, ಅಪ್ಪಾಜಿ ಅವರು ಭೌತಿಕವಾಗಿ ನನ್ನೊಂದಿಲ್ಲದಿದ್ದರೂ ಅವರ ಕೃಪಾಶೀರ್ವಾದ ದಿವ್ಯ ಚೇತನ ಶಕ್ತಿ ನನ್ನೊಂದಿಗೆ ಇದೆ ಬರುವ ಎಲ್ಲಾ ಸಮಸ್ಯೆಗಳಿಗೂ ಎದೆ ತಟ್ಟಿ ನಿಂತು ಪರಿಹಾರ ಕಂಡುಕೊಳ್ಳುವೆ. ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾ ನನಗೆ ಬೆನ್ನೆಲುಬಾಗಿ ಸಮಾಜದ ಶಕ್ತಿ, ಸ್ವತಹ ಜನರೇ ಬೆಂಬಲಕ್ಕೆ ನಿಂತಿದ್ದಾರೆ.

    ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಸಾಧನೆ ಮಾಡಿದ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲೂ, ಸಾಮಾಜಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸತ್ಯ ಸುದ್ದಿಗಳನ್ನು ಬಯಲಿಗೆಳೆದು ಗುಣಮಟ್ಟದ ಲೇಖನಗಳು ಹಾಗೂ ಸುದ್ದಿಗಳನ್ನು ಪ್ರಕಟಗೊಳಿಸುತ್ತಿರುವುದು ವಿಸ್ಮಯ. ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಾಗರಕ್ಕೆ ಕನ್ನಡಿ ಹಿಡಿದಂತಾಗಿದೆ. ಸಮಾಜದ ಜಾಗೃತಿಗೆ ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಶ್ರಮಿಸುವೆ, ಇದೇ ನನ್ನ ದೃಢ ವಿಶ್ವಾಸ ವೀರ ಸಂಕಲ್ಪ ಎಂದು ಹೇಳಿದರು.