Tag: Kannada news

  • ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು; ಗಬಸಾವಳಗಿ

    ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು; ಗಬಸಾವಳಗಿ

    ಸತ್ಯಕಾಮ ವಾರ್ತೆ ತಾಳಿಕೋಟೆ :

    ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು. ಹೊರಗಿನ ಆಕರ್ಷಣೆಗೆ ಮತ್ತು ಒತ್ತಡಗಳಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಶಿಸ್ತಿನಡಿ ತರಬೇಕಾದರೆ ಶಾಲೆ ಮತ್ತು ಮನೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಗಬಸಾವಳಗಿ ಹೇಳಿದರು.

    ತಾಲೂಕಿನ ಕೊಡಗಾನೂರ ಗ್ರಾಮದ ಬೇಲೂರು ಕ್ರಾಸ್ ಹತ್ತಿರ ಇರುವ ಜೆ ಎಸ್ ಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ “ಪಾಲಕರ ನಮನ” ಎಂಬ ಪಾಲಕರ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಪೂರ್ವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಈ ಎರಡು ಹಂತಗಳು ವಿದ್ಯಾರ್ಥಿಯ ಕಲಿಕಾ ಜೀವನದಲ್ಲಿ ಪ್ರಮುಖವಾದ ಘಟ್ಟ. ಈ ಹೊತ್ತಿನಲ್ಲಿ ಪಾಲಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಒಟ್ಟಿಗೆ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಜತೆಗೆ ಒಳ್ಳೆಯ ಸಂಸ್ಕಾರ ನೀಡುವದು ಅನಿವಾರ್ಯತೆ ಇದೆ. ತಂದೆ ತಾಯಿ ಮಕ್ಕಳಿಗೆ ಜನ್ಮ ಕೊಟ್ಟರೆ,ಶಿಕ್ಷಕರು ಮಕ್ಕಳ ಜೀವನದಲ್ಲಿ ದಿಕ್ಕು ತೋರಿಸುವ ದೀಪದಂತೆ. ಅವರು ಮಕ್ಕಳಿಗೆ ಕೇವಲ ಪಾಠಗಳನ್ನು ಮಾತ್ರ ಕಲಿಸುವುದಿಲ್ಲ, ಬದಲಾಗಿ ಅವರ ಭವಿಷ್ಯವನ್ನು ರೂಪಿಸು ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಿದ್ದನಗೌಡ ಗಬಸಾವಳಗಿ, ವಿಜಯಲಕ್ಷ್ಮಿ ಸಾಗಬಸಾವಳಗಿ, ಮಹದೇವ ತಳವಾರ,ವಿನಾಯಕ ಪಟಗಾರ,ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಅನೇಕ ಪಾಲಕರು ಉಪಸ್ಥಿತರಿದ್ದರು.

  • ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಸತ್ಯಕಾಮ ವಾರ್ತೆ ಹುಣಸಗಿ:
    ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರದಾರರ ಸಂಘದಿಂದ ಕೇಂದ್ರ ಸರಕಾರವು ನಿವೃತ್ತ ನೌಕರದಾರರ ಪಿಂಚಣಿಯ ಕುರಿತ ನಿಲುವನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹಾಗೂ ಪದಾಧಿಕಾರಿ ಆರ್.ಎಲ್ ಸುಣಗಾರ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆರ್ಥಿಕ ಬಿಲ್‌ನ್ನು ಮಂಡಿಸುವ ವೇಳೆ ೮ನೇ ವೇತನ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಮೇಲೆ ದಿ.೧-೪-೨೦೨೬ ರ ನಂತರ ನಿವೃತ್ತಿಯಾಗುವವರಿಗೆ ಮಾತ್ರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗುವುದು.

    ಆದರೆ ೧-೪-೨೦೨೬ರ ಪೂರ್ವದಲ್ಲಿ ನಿವೃತ್ತಿಯಾದವರಿಗೆ ಪರಿಷ್ಕರಿಸುವುದು ಕಷ್ಟಕರ ಎಂದು ಹೇಳಿರುವ ಮಾತಿನ ವಿಚಾರವು ದೇಶದ ಎಲ್ಲ ರಾಜ್ಯಗಳ ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

    ಒಂದು ವೇಳೆ ಈ ಮಾತಿನಂತೆ ಕೇಂದ್ರ ಸರಕಾರವು ನಿರ್ಣಯ ಅಂಗೀಕರಿಸಿದಲ್ಲಿ ನಿವೃತ್ತ ನೌಕರದಾರರಿಗೆ ತುಂಬ ತೊಂದರೆಯಾಗಲಿದೆ. ವೃದ್ದಾಪ್ಯದಲ್ಲಿರುವ ಇವರಿಗೆ ಈ ಸರಕಾರದ ನಿಲುವು ವಿವಿಧ ರೀತಿಯ ಸಂಕಷ್ಟ ತರಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಸರಕಾರವು ಕೂಡಲೆ ಈ ವಿಚಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ನಂತರ ದೇಶದ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಹುಣಸಗಿಯ ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.

    ಇದಕ್ಕೂ ಮುಂಚೆ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೂ ನಿವೃತ್ತನೌಕರರು ಮೌನವಾಗಿ ಮೆರವಣಿಗೆ ನಡೆಸಿದರು.

    ಈ ಸಂದರ್ಭ ನಿವೃತ್ತ ನೌಕರದಾರರ ಸಂಘದ ಧನೇಶನಾಯಕ ರಾಠೋಡ್, ಬಸಣ್ಣ ಗೊಡ್ರಿ, ಶಿವಪ್ಪ ಅಂಗಡಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಪಾಟೀಲ್, ಜಗದೀಶ ಶಹಪುರ, ಪ್ರಾಣೇಶ ಕುಲಕರ್ಣಿ, ಹುಸೇನಸಾಬ್, ಬಸಣ್ಣ ಚಿಂಚೋಳಿ, ಈಶ್ವರ ಬಡಿಗೇರ, ಬಿ.ಎಸ್. ಗೂಡಲಮನಿ ಸೇರಿದಂತೆ ಇತರರಿದ್ದರು.

  • ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:

    ಶಹಾಪೂರ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಡಂಗೇರಾ)ಬಿ) ಗ್ರಾಮದ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನುಶ್ರೀ ತಂದೆ ಕಾಂತಿಲಾಲ್ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

    ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿನಿ ಕು.ತನುಶ್ರೀ ಅವರು ಶಾಲೆಗೆ ಕೀರ್ತಿ ತಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಹಾಗೂ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ್ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿಯೂ ವಿಜೇತರಾಗಲಿ ಎಂದು ಹಾರೈಸಿದ್ದಾರೆ.