Tag: India vs Australia

  • ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ಭಾರತ ತಂಡ ಹೋಬರ್ಟ್‌ನಲ್ಲಿ ಅದ್ಭುತ ತಿರುಗೇಟು ನೀಡಿದೆ. ಐದು ಪಂದ್ಯಗಳ ಟಿ20 ಐ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು 186 ರನ್‌ಗಳೊಳಗೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

    ಹರ್ಷಿತ್ ರಾಣಾ ಅವರ ಬದಲಿಗೆ ತಂಡದಲ್ಲಿ ಅವಕಾಶ ಪಡೆದುಕೊಂಡ ಅರ್ಶದೀಪ್ ಸಿಂಗ್ ತಮ್ಮ ಆಯ್ಕೆಯೇ ಶತಪಾಲು ಲೇಸೆಂದು ಸಾಬೀತುಪಡಿಸಿದರು. ಆರಂಭದಲ್ಲೇ  ವೇಗ ಮತ್ತು  ಸ್ವಿಂಗ್‌ನಿಂದ ಆಸ್ಟ್ರೇಲಿಯಾ ಟಾಪ್ ಆರ್ಡರ್‌ನ್ನು ಪೆವಿಲಿಯನ್ ಸೇರುವಂತೆ ಮಾಡಿದರು. ತಮ್ಮ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಟಿಂ ಡೇವಿಡ್ (38 ಎಸೆತಗಳಲ್ಲಿ 74) ಹಾಗೂ ಮಾರ್ಕಸ್ ಸ್ಟೋಯ್ನಿಸ್ (42 ರನ್) ಮಾತ್ರ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದರು ಇತರರು ಯಾವುದೇ ಪ್ರಭಾವ ಬೀರಲಿಲ್ಲ. ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.

    187 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 16 ಎಸೆತಗಳಲ್ಲಿ 25 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿದ ಅವರು ಆಸ್ಟ್ರೇಲಿಯಾ ತಂಡದ ಬೌಲಿಂಗ್‌ನ್ನು ಮೊದಲ ಕ್ಷಣದಿಂದಲೇ ಒತ್ತಡಕ್ಕೆ ಸಿಲುಕಿಸಿದರು. ಆದರೆ ನೇಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಸೇರಿದರು. ಆ ಬಳಿಕ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇನಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಮೊತ್ತವನ್ನು ಹೆಚ್ಚಿಸಿದರು. ಸೂರ್ಯಕುಮಾರ್ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿ ತಂಡಕ್ಕೆ ಹಿನ್ನಡೆ ಆಗದಂತೆ ನೋಡಿಕೊಂಡರು.

    ಮಧ್ಯ ಕ್ರಮಾಂಕದಲ್ಲಿ ತಿಲಕ್ ವರ್ಮಾ (26 ಎಸೆತಗಳಲ್ಲಿ 29) ಮತ್ತು ಅಕ್ಷರ್ ಪಟೇಲ್ (12 ಎಸೆತಗಳಲ್ಲಿ 17) ಇಬ್ಬರೂ ಕೂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಭಾರತ ತಂಡ ಮಧ್ಯದ ಹಂತದಲ್ಲಿ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿದರೂ, ಆ ವೇಳೆ ವಾಶಿಂಗ್ಟನ್ ಸುಂದರ್ ತಂಡದ ನಂಬಿಗಸ್ತರಾಗಿ ಆಟವಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸುಂದರ್ ತಮ್ಮ ಸಮತೋಲನ ಮತ್ತು ಶಾಂತ ಬ್ಯಾಟಿಂಗ್‌ನಿಂದ ಪಂದ್ಯದ ಗತಿ ಸಂಪೂರ್ಣವಾಗಿ ಭಾರತ ಪರ ತಿರುಗಿಸಿದರು. ಅವರಿಗೆ ಜಿತೇಶ್ ಶರ್ಮಾ ತಕ್ಕ ಬೆಂಬಲ ನೀಡಿದರು. ಈ ಜೋಡಿ ಆಸ್ಟ್ರೇಲಿಯಾದ ಗೆಲುವಿನಾಸೆಗೆ ತಣ್ಣೀರೆರಚಿ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿತು.

    ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಎಲ್ಲಿಸ್ ಮತ್ತು ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದರೂ, ಭಾರತದ ದೃಢ ಮನೋಭಾವದ ಮುಂದೆ ಅವರು ಅಸಹಾಯಕರಾದರು. ಪಂದ್ಯದಲ್ಲಿನ ಅತೀ ಪ್ರಮುಖ ಪಾತ್ರ ವಹಿಸಿದ ಅರ್ಶದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     

    ಈ ಜಯದೊಂದಿಗೆ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಪರೂಪದ ಸಾಧನೆ ಭಾರತ ಮಾಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ಕಳೆದ ಐದು ಪಂದ್ಯಗಳಲ್ಲೂ ಗೆಲುವು ಕಂಡಿದ್ದ ಆಸ್ಟ್ರೇಲಿಯಾ ಈ ಬಾರಿ ಸೋಲಿನ ರುಚಿ ಕಂಡಿದೆ.

  • ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಪರ್ಥ್‌ನ ವಾಕಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮಳೆಯ ಅಡಚಣೆಯಿಂದ 26 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ಕೇವಲ 136 ರನ್‌ಗಳಿಗೆಯೇ ಸಿಮಿತವಾಯಿತು.

    ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು, ವೇಗ ಮತ್ತು ಬೌನ್ಸ್‌ನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಂಕಷ್ಟ ಅನುಭವಿಸಿದರು. ನಾಯಕ ಶುಭಮನ್ ಗಿಲ್ (12), ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0), ಹಾಗೂ ಶ್ರೇಯಸ್ ಅಯ್ಯರ್ (6) ಇವರೆಲ್ಲರೂ ಕೂಡ ಮೈದಾನಕ್ಕೆ ಇಳಿದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ (32) ಮತ್ತು ಅಕ್ಷರ್ ಪಟೇಲ್ (28) ಇವರು ಮಾತ್ರ ಸ್ವಲ್ಪ ಹೋರಾಟ ನೀಡಿದರೂ ತಂಡ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು.

    ಆಸ್ಟ್ರೇಲಿಯಾ ಪರ ವೇಗದ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್ ಮತ್ತು ಅಬ್ಬಾಟ್ ತೀವ್ರ ಆಕ್ರಮಣ ನಡೆಸಿದರು.

    ಭಾರತ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 21.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ಟ್ರಾವಿಸ್ ಹೆಡ್ (8) ಮತ್ತು ಮ್ಯಾಥ್ಯೂ ಶಾರ್ಟ್ (10) ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರೂ ನಾಯಕ ಮಿಚೆಲ್ ಮಾರ್ಶ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡವನ್ನು ತಲುಪಿಸಿದರು. ಅವರು 51 ಎಸೆತಗಳಲ್ಲಿ 46 ಅಜೇಯ ರನ್‌ಗಳನ್ನು ಬಾರಿಸಿದರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಟ್ ರೆನ್ಶಾ (21) ರನ್ ಗಳಿಸಿ ಗೆಲವು ಸುಲಭಗೊಳಿಸಿದರು.

    ಭಾರತ ಪರ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕದ ಮೊದಲ ಏಕದಿನದಲ್ಲಿ ಭಾರತಕ್ಕೆ ಈ ಸೋಲು ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಅಗ್ರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮಳೆ ಅಡಚಣೆ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

  • ಭಾರತ ವಿರುದ್ಧದ ಸರಣಿಗೂ ಮೊದಲು ಆಸ್ಟ್ರೇಲಿಯಾಗೆ ದೊಡ್ಡ ಆಘಾತ!

    ಭಾರತ ವಿರುದ್ಧದ ಸರಣಿಗೂ ಮೊದಲು ಆಸ್ಟ್ರೇಲಿಯಾಗೆ ದೊಡ್ಡ ಆಘಾತ!

    ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಅಘಾತ ಎದುರಾಗಿದೆ. ಸರಣಿಯ ಮೊದಲ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ, ತಂಡದ ಪ್ರಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

    ಆಸ್ಟ್ರೇಲಿಯಾ ತಂಡ ಈಗಾಗಲೇ ಗಾಯಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಇನ್ನಷ್ಟು ಚಿಂತೆಗೀಡಾಗುವ ವಿಷಯವಾಗಿದೆ. ಗ್ರೀನ್‌ ಬದಲಿಗೆ ಅನುಭವಿಯ ಆಟಗಾರ ಮಾರ್‌ನಸ್ ಲ್ಯಾಬುಶೇನ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಲ್ಯಾಬುಶೇನ್ ಇತ್ತೀಚೆಗೆ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಶತಕ ಬಾರಿಸಿ ಚರ್ಚೆಗೆ ಗ್ರಾಸರಾಗಿದ್ದರು, ಹೀಗಾಗಿ ಅವರ ಆಯ್ಕೆ ತಂಡಕ್ಕೆ ಹೊಸ ಬಲ ನೀಡಲಿದೆ.

    ಗ್ರೀನ್‌ ಗಾಯದ ನಿಖರ ವಿವರ ಬಹಿರಂಗಪಡಿಸದಿದ್ದರೂ, ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ತೊಡೆ ನೋವು ಕಾರಣದಿಂದ ಕಳೆದ ಕೆಲವು ಪಂದ್ಯಗಳಲ್ಲಿ ಹೊರಗುಳಿದಿದ್ದರು. ಇದರ ಜೊತೆಗೆ ಸೀನ್ ಅಬಾಟ್ ಮತ್ತು ಬ್ರೆಂಡನ್ ಡಾಗೆಟ್ ಅವರಿಗೂ ಗಾಯದ ತೊಂದರೆ ಇದೆ.

    ಇಷ್ಟಾದರೂ, ಆಸ್ಟ್ರೇಲಿಯಾ ತಂಡ ತಮ್ಮ ಯುವ ಆಟಗಾರರ ಮೇಲೆ ಭರವಸೆ ಇಟ್ಟು ಆಟದ ತಯಾರಿಯಲ್ಲಿದೆ. ತಂಡದ ಕೋಚ್ ಗಳು “ನಾವು ಹೊಸ ಆಟಗಾರರಿಗೆ ಅವಕಾಶ ನೀಡಿ ತಂಡದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

    ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಪೈಪೋಟಿಗೆ ದೊಡ್ಡ ನಿರೀಕ್ಷೆ ಇದೆ. ಗಾಯಗಳಿಂದ ಉಂಟಾದ ಸವಾಲುಗಳ ನಡುವೆಯೂ ಆಸ್ಟ್ರೇಲಿಯಾ ತಂಡ ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಿದೆ.