Tag: India

  • IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್‌ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ  ಬೌಲಿಂಗ್‌ನ ಪ್ರತಿ ತಪ್ಪನ್ನೂ  ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್‌ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ  ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.

    ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್​ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.

    ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.

    ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.

    ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ  ಭಾರತ ತಂಡದ 11ರ ಬಳಗ ಹೇಗಿರಲಿದೆ?

    IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ ಭಾರತ ತಂಡದ 11ರ ಬಳಗ ಹೇಗಿರಲಿದೆ?

    ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭಕ್ಕೆ ಗಂಟೆಗಳು ಮಾತ್ರ ಬಾಕಿ. ಕಟಕ್‌ನ ಕ್ರೀಡಾಂಗಣದಲ್ಲಿ ಇಂದು ನೆಡೆಯಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಗೆ ಯಾವ 11 ಮಂದಿ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಈಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯಾಗಿದೆ. ಕಾರಣ ಟೀಂ ಇಂಡಿಯಾ ಶಿಬಿರದಲ್ಲಿ ಅನೇಕರು ಫಾರ್ಮ್ನಲ್ಲಿರುವುದು.

    ಮೊದಲನೆಯದಾಗಿ, ಆರಂಭಿಕ ಜೋಡಿಯೇ ಈಗ ಕುತೂಹಲ. ಕುತ್ತಿಗೆ ನೋವಿನಿಂದ ಹೊರ ಬಂದಿರುವ ಉಪನಾಯಕ ಶುಭ್‌ಮನ್ ಗಿಲ್ ಮತ್ತೆ ತಂಡಕ್ಕೆ ಸೇರಿದ ಸುದ್ದಿ ಶಿಬಿರಕ್ಕೆ ಹೊಸ ಚೈತನ್ಯ ತಂದಿದೆ. ಗಿಲ್ ಜೊತೆಗೆ ಅಭಿಷೇಕ್ ಶರ್ಮಾ ಇನಿಂಗ್ಸ್‌‌ಗೆ ಸ್ಫೋಟಕ ಆರಂಭ ಕೊಡುವ ಸಾಧ್ಯತೆ ಬಲವಾಗಿದೆ. ಇವರಿಬ್ಬರ ಆಟದ ಶೈಲಿ ಕಟಕ್ ಪಿಚ್‌ಗೆ ಚೆನ್ನಾಗಿ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.

    ಮೂರನೇ ಕ್ರಮಾಂಕಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ ಆಗಮಿಸುತ್ತಾರೆ. ಅಬ್ಬರದ ಸ್ಟ್ರೈಕ್‌ರೇಟ್ ಮೂಲಕ ತೀವ್ರ ಒತ್ತಡದಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಿಗೆ ಇದೆ. ಅವರ ನಂತರ ತಿಲಕ್ ವರ್ಮಾ ನಡೆಯುವ ವೇಗ ಬದಲಾಯಿಸುವ ಗುಣವಿರುವ ಯುವ ಮುಖ. ಮಧ್ಯ ಕ್ರಮಾಂಕದ ಹೊಣೆಗಾರಿಕೆಯ ಬಹುತೇಕ ಭಾಗ ಇವರಿಬ್ಬರ ಮೇಲೆ ಇರುತ್ತದೆ.

    ಆಲ್‌ರೌಂಡ್ ವಿಭಾಗದಲ್ಲಿ ದೊಡ್ಡ ಹೆಸರು ಹಾರ್ದಿಕ್ ಪಾಂಡ್ಯ. ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಹಾರ್ದಿಕ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಮತೋಲನ ತರುತ್ತಾರೆ. ಇವರೊಂದಿಗೆ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಅಕ್ಷರ್‌ರ ಸ್ಪಿನ್, ದುಬೆರ ಶಕ್ತಿಶಾಲಿ ಹಿಟಿಂಗ್ಇವೆರಡೂ ತಂಡಕ್ಕೆ ಉಪಯೋಗ.

    ವಿಕೆಟ್ ಕೀಪರ್ ಸ್ಥಾನ ಮಾತ್ರ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಜಿತೇಶ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಅವಕಾಶ ಬಳಸಿಕೊಂಡಿದ್ದರೆ, ಅನುಭವದ ಮೈಲಿಗಲ್ಲು ಹೊಂದಿರುವ ಸಂಜು ಸ್ಯಾಮ್ಸನ್ ಕೂಡ ಬಾಗಿಲಲ್ಲೇ ನಿಂತಿದ್ದಾರೆ. ನಿರ್ಧಾರ ಯಾವತ್ತಕ್ಕೆ ಬದಲಾಗುತ್ತದೆ ಎಂಬ ಕುತೂಹಲವಿದೆ. ಆದರೆ ತಂಡದ ಒಳಗಿನ ಚಲನವಲನ ನೋಡಿದರೆ, ಜಿತೇಶ್‌ಗೆ ಸ್ವಲ್ಪ ಹೆಚ್ಚು ಬಲವಿದೆ.

    ಬೌಲಿಂಗ್ ಹೆಗ್ಗಳಿಕೆಗೆ ಬಂದರೆ ಬುಮ್ರಾ ಇದ್ದಂತೆಯೇ ಭದ್ರತೆ. ಅರ್ಷದೀಪ್ ಸಿಂಗ್ ಆರಂಭದ ಓವರ್‌ಗಳಲ್ಲಿ ಸ್ವಿಂಗ್‌ನಿಂದ ಸವಾಲು ಹಾಕಬಹುದು. ಮೂರನೇ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ರಂಗಿನ ವೈವಿಧ್ಯಮಯ ಸ್ಪಿನ್‌ಗಳು ಟಿ20 ಕ್ರಿಕೆಟ್‌ಗೆ ನೀಡುವ ರಹಸ್ಯ ಅಸ್ತ್ರ. ಜೊತೆಗೂಡಿ ಅಕ್ಷರ್ ಹಾಗೂ ಹಾರ್ದಿಕ್ ಸಹಾಯಕ ಬೌಲರ್‌ಗಳಾಗಿ ತಮ್ಮ ಪಾತ್ರ ನಿಭಾಯಿಸುತ್ತಾರೆ.

    ಕಟಕ್‌ನ ಮೊದಲ ಟಿ20ಗಾಗಿ ಭಾರತದ ಸಂಭಾವ್ಯ 11 ಹೀಗಿದೆ:

    ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

    ಸರಣಿ ಆರಂಭವಾಗುವುದಕ್ಕೂ ಮುನ್ನವೇ ಉತ್ಸಾಹ ಶ್ರೇಷ್ಟ ಮಟ್ಟಕ್ಕೆ ತಲುಪಿದೆ. ಭಾರತದ ಈ ಹೊಸ ಸಂಯೋಜನೆ ಮೈದಾನದಲ್ಲಿ ಎಷ್ಟು ಫಲ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆಯನ್ನು ಗೈದು ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಹಾಲಿ ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ವಿಶ್ವದಾಖಲೆಯ ಗುರಿ ಬೆನ್ನತ್ತುವುದರ ಮೂಲಕ ಸಾಧನೆ ಮಾಡಿತು. 338 ರನ್‌ಗಳ ಗುರಿ ಎದುರಿಸಿದ ಭಾರತ, ಒತ್ತಡದ ಸಂದರ್ಭದಲ್ಲೂ ಶಾಂತಿ ಕಳೆದುಕೊಳ್ಳದೇ, ನಿರ್ಧಾರಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಕ್ಕಿದ್ದರೂ, ಮಧ್ಯ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ನಿರೀಕ್ಷಿತ ಅಂತ್ಯ ಪಡೆಯುವಲ್ಲಿ ವಿಫಲವಾಯಿತು. ಭಾರತೀಯ ಬೌಲರ್‌ಗಳು ಪ್ರಮುಖ ಕ್ಷಣಗಳಲ್ಲಿ ವಿಕೆಟ್‌ ತೆಗೆಯುವ ಮೂಲಕ ಪಂದ್ಯವನ್ನು ಹಿಡಿತದಲ್ಲಿಟ್ಟರು.

    ಭಾರತದ ಇನ್ನಿಂಗ್ಸ್‌ಗೆ ಚಾಲನೆ ಸಿಕ್ಕ ತಕ್ಷಣವೇ, ಆರಂಭಿಕ ಆಟಗಾರ್ತಿಯರು ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಬೇಗನೆ ಪೆವಿಲಿಯನ್ ಸೇರುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಥಳೀಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಪಂದ್ಯದ ಭವಿಷ್ಯವನ್ನು ಬದಲಾಯಿಸಿ ಜತೆಯಾಟ ಪ್ರದರ್ಶಿಸಿದರು. ಇಬ್ಬರು ತಾಳ್ಮೆಯ ಜೊತೆಗೆ ಆಕ್ರಮಣಾತ್ಮಕ ಆಟ ತೋರಿಸಿ 165 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು.

    ಹರ್ಮನ್‌ಪ್ರೀತ್ ಕೌರ್ 89 ರನ್ ಗಳಿಸಿ ಔಟಾದರೂ, ಜೆಮಿಮಾ ರೋಡ್ರಿಗಸ್ ಕ್ರೀಸ್‌ ಕಚ್ಚಿ ನಿಂತಿದ್ದು ತಂಡಕ್ಕೆ ದೊಡ್ಡ ಸಹಾಯವಾಯ್ತು. ಒತ್ತಡದ ಸಂದರ್ಭದಲ್ಲೂ ಶಾಂತ ಮನೋಭಾವದಿಂದ ಆಡಿದ ಜೆಮಿಮಾ 127 ರನ್‌ಗಳ ಅಜೇಯ ಇನ್ನಿಂಗ್ಸ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ, ರಿಚಾ ಘೋಷ್ ಹಾಗೂ ಅಮನ್‌ಜೋತ್ ಕೌರ್ ಅಗತ್ಯ ರನ್‌ಗಳನ್ನು ಸೇರಿಸಿ ಭಾರತ ಗುರಿ ತಲುಪುವಲ್ಲಿ ಯಶಸ್ವಿಯಾದರು.

    ಈ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಅತಿ ದೊಡ್ಡ ಗುರಿ ಬೆನ್ನತ್ತಿದ ತಂಡ ಎಂಬ ಗೌರವ ಭಾರತಕ್ಕೆ ದೊರಕಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಈ ಪಂದ್ಯದಲ್ಲಿ ಸಮರ್ಪಕ ತಿರುಗೇಟು ನೀಡಿದೆ.

    ನವೆಂಬರ್ 2ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪ್ರಸ್ತುತ ಆಟದ ಶೈಲಿ, ತಂಡದ ಆತ್ಮವಿಶ್ವಾಸ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಭಾರತ ಈ ಬಾರಿ ಟ್ರೋಫಿ ಗೆಲ್ಲಲು ಹಾಟ್ ಫೆವರೇಟ್ ತಂಡವಾಗಿದೆ.

  • ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸತ್ಯಪರೀಕ್ಷೆಗೆ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೆ ಕಣಕ್ಕಿಳಿಯಲು ಸಜ್ಜಾಗಿವೆ. ಕಳೆದ ವರ್ಷದ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ ಭಾರತಕ್ಕೆ, ಈ ಸರಣಿ ಒಂದು ರೀತಿಯ ಪ್ರತೀಕಾರದ ವೇದಿಕೆಯಾಗಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ನೆನಪು ಇದ್ದರೂ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಸ್ಥಳ, ಪಿಚ್, ತಂಡದ ಸಂಯೋಜನೆ ಎಲ್ಲವೂ ಭಾರತಕ್ಕೆ ಹೊಸ ಸವಾಲುಗಳು.

    ಪರ್ತ್‌ನ ವಾಕಾ ಮೈದಾನ ಎಂದರೆ ಬೌನ್ಸಿಗೆ ಪ್ರಸಿದ್ಧ ಅಲ್ಲಿ ವೇಗಿಗಳೇ ಮೇಲುಗೈ ಅದಕ್ಕಾಗಿಯೇ ಎಷ್ಟು ಪೇಸರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಪ್ರಶ್ನೆ ಈಗ ತಂಡದ ಮುಂದಿದೆ.

    ಈ ಹಿನ್ನೆಲೆಯಲ್ಲಿ ಕನ್ನಡಿಗರ ಹೆಸರುಗಳೂ ಚರ್ಚೆಯಲ್ಲಿವೆ

    ಕೆಎಲ್ ರಾಹುಲ್, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅನುಭವ, ತಾಳ್ಮೆ ಮತ್ತು ಮಧ್ಯ ಕ್ರಮದಲ್ಲಿ ನಿಲ್ಲುವ ಶಕ್ತಿ ಭಾರತಕ್ಕೆ ಅಗತ್ಯವಾದ ಅಂಶಗಳಾಗಿವೆ.

    ಮತ್ತೊಂದು ಹೆಸರು ಪ್ರಸಿದ್ಧ ಕೃಷ್ಣ ವೇಗದ ಬೌಲರ್. ವಾಕಾದಂತಹ ಪಿಚ್‌ನಲ್ಲಿ ಅವರ ಉದ್ದದ ಬೌನ್ಸ್ ಎದುರಾಳಿಗಳಿಗೆ ಕಠಿಣ ಪರೀಕ್ಷೆಯಾಗಬಹುದು. ಆದರೂ ಅವರ ಸ್ಥಾನ ಖಚಿತವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಯುವ ವೇಗಿ ಹರ್ಷಿತ್ ರಾಣಾ ಅವರ ಪ್ರದರ್ಶನವೂ ಆಯ್ಕೆದಾರರ ಗಮನ ಸೆಳೆದಿದೆ.

    ಇತ್ತ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ತಂಡದತ್ತ ಎಲ್ಲರ ಕಣ್ಣು, ಏಷ್ಯಾ ಕಪ್ ಗೆಲುವಿನ ನಂತರ, ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮಾಡಿ ಈ ಎಲ್ಲ ಯಶಸ್ಸುಗಳ ನಡುವೆ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ಮುಂದೆ ಅದು ಸಾಕಾಗುತ್ತದೆಯಾ ಎಂಬುದು ಈಗಿನ ಪ್ರಶ್ನೆ.

    ಅಕ್ಟೋಬರ್ 19ರಂದು ಭಾನುವಾರ ನಡೆಯಲಿರುವ ಈ ಮೊದಲ ಏಕದಿನ ಪಂದ್ಯ ಕೇವಲ ಪಂದ್ಯವಲ್ಲ ಅದು ಗೌರವ, ಆತ್ಮಗೌರವ ಮತ್ತು ಪ್ರತೀಕಾರದ ಪರ್ತ್‌ನ ಬೌನ್ಸಿ ಪಿಚ್‌ನಲ್ಲಿ ವೇಗಿಗಳ ರಣಭೂಮಿ ಸಜ್ಜಾಗಿದೆ.