Tag: Dk shivakumar

  • ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ಕಾಣುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಕೀಯದ ಕೇಂದ್ರಬಿಂದು ಆಗಿರುವ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬಿಕ್ಕಟ್ಟುಗಳು, ಸರ್ಕಾರಿ ಭರವಸೆಗಳ ಅನುಷ್ಠಾನ, ಹಾಗೂ ಸಿಎಂ ಕುರ್ಚಿ ಸುತ್ತಲಿನ ಹಗ್ಗಜಗ್ಗಾಟ ಎಲ್ಲವೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮನೋವೈಜ್ಞಾನಿಕ ಆಟ ಈಗ ಮತ್ತಷ್ಟು ಹೆಚ್ಚಾಗಿದೆ!

    10 ದಿನಗಳ ಈ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಯ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಬಿಜೆಪಿ–ಜೆಡಿಎಸ್ ದೋಸ್ತಿ ದಾಳಿ ಸರ್ಕಾರದ ರಕ್ಷಣಾ ಕೌಶಲ್ಯಕ್ಕೆ ಪರೀಕ್ಷೆ:

    ವಿಪಕ್ಷ ಬಿಜೆಪಿ–ಜೆಡಿಎಸ್ ಜಂಟಿ ದಾಳಿ ನಡೆಸಲು ತಂತ್ರ ರೂಪಿಸಿವೆ. ಸರ್ಕಾರವನ್ನು ಮೂಲೆಗೆ ತಳ್ಳಲು ಒಳಗಿನ ಅಸಮಾಧಾನ, ಬಣಗಾರಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳನ್ನು ಆಯುಧವಾಗಿ ಬಳಸಿಕೊಳ್ಳಲಿವೆ.

    ಮುಂದುವರಿದ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ತರಲು ಚಿಂತನೆ ನಡೆದರೂ ಕಮಲಪಡೆ ಈಗ ಹಿಂದೆ ಸರಿದಿದೆ.

    ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ. ನಂತರದಿಂದ ಪ್ರತಿಯೊಂದು ವಿಚಾರವೂ ಸರ್ಕಾರಕ್ಕೆ ಸವಾಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

    ಉತ್ತರ ಕರ್ನಾಟಕ ಪ್ರಮುಖ ಅಸ್ತ್ರ:

    ಕಳೆದ ಅಧಿವೇಶನದಲ್ಲಿ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ವಿಪಕ್ಷಗಳು ಕಿಡಿಗೇಡಿಯಾಗಿ ಪ್ರಶ್ನೆ ಎತ್ತಲಿವೆ. ನೀರಾವರಿ, ಬೆಳೆ ಬೆಲೆ ಹಾಗೂ ಮೂಲಭೂತ ಸೌಕರ್ಯಗಳ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

    ಪ್ರತಿಭಟನೆಯ ಬಿಸಿ ಬೆಳಗಾವಿಯ ಬೀದಿಗಳೂ ಕದನಭೂಮಿ:

    ಅಧಿವೇಶನಕ್ಕೆ ಸಮೀಪಿಸುತ್ತಿರುವಾಗಲೇ ವಿವಿಧ ಸಂಘಟನೆಗಳು ಪ್ರತಿಭಟನೆಯ ಸಿದ್ಧತೆಯಲ್ಲಿ ಇವೆ.

    • ಕಬ್ಬು ಬೆಲೆ — ರೈತರ ಆಕ್ರೋಶ
    • ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಲೆ ಕುಸಿತ
    • 2.5 ಲಕ್ಷ ಹುದ್ದೆಗಳ ನೇಮಕಾತಿ ಬೇಡಿಕೆ

    ಒಳ ಮೀಸಲಾತಿ ವಿವಾದ ಪರಿಶಿಷ್ಟ ಸಮುದಾಯಗಳ ಪ್ರತಿಭಟನೆ:

    ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರ ವೇತನ ಪರಿಷ್ಕರಣೆ.

    ಮಹಾರಾಷ್ಟ್ರ ಪರ ಸಂಘಟನೆಗಳ ತಗಾದೆ ಆತಂಕ.

    ಬೆಳಗಾವಿ ಅಧಿವೇಶನವೆಂದರೆ ರಾಜಕೀಯದಷ್ಟೇ ಜನಾಆಸೆಯ ವಿಷಯ! ಈ ಬಾರಿ ಕೂಡ ಆಡಳಿತ–ವಿಪಕ್ಷಗಳ ರಾಜಕೀಯ ಕಾದಾಟದ ನಡುವೆ ಜನರ ಸಮಸ್ಯೆಗಳು ಯಾವ ಮಟ್ಟಿಗೆ ಆಲಿಸಿಕೊಳ್ಳಲಾಗುತ್ತವೆ ಎಂಬುದೇ ದೊಡ್ಡ ಪ್ರಶ್ನೆ

  • ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಕರ್ನಾಟಕ ರಾಜಕೀಯದಲ್ಲಿ ಸಚಿವ ಸ್ಥಾನ ಹಂಚಿಕೆ, ನಾಯಕತ್ವದ ಅಸಮಾಧಾನ, ಮತ್ತು ಭವಿಷ್ಯದ ರಾಜಕೀಯ ಕುರಿತು ಚರ್ಚೆಗಳು ಮರುಕಳಿಸುತ್ತಿರುವ ಸಮಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಮ್ಮನ್ನು ಒಳಪಡಿಸುವ ವಿಚಾರದ ಬಗ್ಗೆ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗ ಶಾಸಕರು ಪುನಃ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿರುವ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮಂತ್ರಿಯಾಗಿರಲು ಇಷ್ಟಪಡುವುದಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ನೇರವಾಗಿ ತಿಳಿಸಿದ್ದಾರೆ.

    ಅಲ್ಲದೆ, ರಾಜಣ್ಣ ಅವರು ಈ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿದ್ದು, ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ದಾರಿಗೆ ಸಂಬಂಧಿಸಿದಂತೆ ಪ್ರಶ್ನೆ ಎತ್ತಿ ಅವರೇನು ಸಿಎಂ ಆಗಿಯೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂದು ತಿರುಗೇಟು ನೀಡಿದರು.

    ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಮತ್ತೇ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸುತ್ತಿರುವ ಎಲ್ಲ ಬೆಂಬಲಿಗರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜಣ್ಣ ಅವರ ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಉಂಟಾಗುತ್ತಿರುವ ಅಸಮಾಧಾನದ ಧ್ವನಿಯನ್ನು ಮತ್ತಷ್ಟು ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪಕ್ಷದ ಹಿರಿಯ ನಾಯಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದರ ಕುರಿತ ಕುತೂಹಲ ಹೆಚ್ಚಿಸಿದೆ.

  • “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ರಸ್ತೆ, ಬೀದಿ ಎಲ್ಲ ಕಡೆ ಕ್ಯಾಮೆರಾ ಹಾಕ್ತಿದ್ದೇವೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ರೆ, ಆ ದೃಶ್ಯ ನೋಡಿ ಅವರ ಮನೆ ಮುಂದೆ ಕಸ ತಂದು ಹಾಕ್ತೀನಿ!” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಬಗ್ಗೆ ನಿರಂತರ ಟೀಕೆ ಮಾಡುತ್ತಿರುವ ನಾಗರಿಕರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ ಮಾತನಾಡಿದರು. “ಈ ಸಮಸ್ಯೆ ಬೆಂಗಳೂರು ಮಾತ್ರದಲ್ಲ, ಇನ್ನೂ ಅನೇಕ ನಗರಗಳಲ್ಲಿ ಇದೆ. ಆದ್ರೆ ಮಾಧ್ಯಮಗಳು ಇಲ್ಲಿ ಮಾತ್ರ ಹೆಚ್ಚು ತೋರಿಸ್ತಾರೆ. ಈಗ ಇದಕ್ಕೆ ಸ್ಪಷ್ಟ ಪರಿಹಾರ ಕೊಡ್ತಿದ್ದೀವಿ ನಗರಪಾಲಿಕೆಯಿಂದ ಹೊಸ ಕ್ಯಾಮೆರಾ ಜಾಲ ಹಾಕಲಾಗುತ್ತದೆ. ಯಾರೂ ಸಹ ರಸ್ತೆ, ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕಬಾರದು” ಎಂದು ಹೇಳಿದರು.

    ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದ ಘಟನೆ ಒಂದನ್ನು ಹಂಚಿಕೊಂಡು, “ಅಲ್ಲೂ ಕೆಲವರು ರಸ್ತೆಗೆ ಕಸ ಹಾಕಿದ್ದರು, ನಾವು ಹಿಂಬಾಲಿಸಿ ಅವರ ಮನೆ ಮುಂದೆಯೇ ಕಸ ಬಿಟ್ಟು ಬಂದಿದ್ದೇವೆ” ಎಂದು ಉದಾಹರಣೆ ನೀಡಿದ್ದಾರೆ. “ಕಸವನ್ನು ವಾಹನಗಳಲ್ಲಿ ಹಾಕಿ ಬೇರೆಡೆ ಬಿಸಾಡುವ ಏಜೆಂಟರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

    ಡಿಕೆಶಿ ನಾಗರಿಕರಿಗೆ ಕರೆ ನೀಡಿ, “ಪ್ರತಿ ಮನೆಯಲ್ಲೂ ಕಸದ ಡಬ್ಬಿ ಇಡಿ. ನಮ್ಮ ವಾಹನ ಮನೆ ಮನೆಗೆ ಬರುತ್ತದೆ, ಕಸವನ್ನು ಅದಕ್ಕೆ ನೀಡಿ. ಚಿತ್ರ ತೆಗೆದು ಟೀಕೆ ಮಾಡುವುದಕ್ಕಿಂತ ಸ್ವಚ್ಛತೆಗೆ ಸಹಕರಿಸಿ” ಎಂದು ಮನವಿ ಮಾಡಿದರು.

    ಕಾಂಟ್ರ್ಯಾಕ್ಟರ್‌ ಮಾದರಿ ನಿರ್ವಹಣೆ ನಗರದ ಮುಖ್ಯರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಸದ ನಿರ್ವಹಣೆ ಕಾಂಟ್ರ್ಯಾಕ್ಟರ್‌ಗಳಿಗೆ ಹಸ್ತಾಂತರಿಸುವ ಆಲೋಚನೆಯೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರರೆ. ಸ್ವಚ್ಛ ನಗರ ನಿರ್ಮಾಣಕ್ಕಾಗಿ ಕಠಿಣ ಕ್ರಮ ಕೈಗೆತ್ತಿಕೊಳ್ಳಲಿರುವುದಾಗಿ ಡಿಕೆಶಿ ಹೇಳಿದ್ದು, “ನಿಯಮ ಉಲ್ಲಂಘನೆ ಮಾಡಿದರೆ ಯಾರನ್ನೂ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.

  • ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯಲ್ಲಿ ಸೋಮವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದ ಉದ್ದೇಶ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಕ್ರಿಯೆ ಕುರಿತು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಎಂಎಲ್ಸಿ ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಓ ದಿಗ್ವಿಜಯ್ ಸಿಂಗ್ ಬೋಡಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

     

    ಭೂಮಿ, ಮನೆ, ನಿವೇಶನ ರಹಿತರು, ರೈತರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ; ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಚನ್ನಪಟ್ಟಣ, ಜೂನ್ 24: 

    “ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ. ರೈತರ ಜಮೀನುಗಳಿಗೆ ಖಾತೆ ಮಾಡಿಕೊಡಲು ಒಂದು ರೂಪಾಯಿ ಲಂಚ ಮುಟ್ಟುವಂತಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ” – ಇದು ಚನ್ನಪಟ್ಟಣದ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ಒಟ್ಟು ಚಿತ್ರಣ.

    ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವ್ಯಕ್ತವಾದ ಪ್ರಮುಖ ಸಮಸ್ಯೆಗಳಿಗೆ ಶಿವಕುಮಾರ್ ಅವರು ಸ್ಪಂದಿಸಿದ ರೀತಿ ಹೀಗಿತ್ತು:

    ಜೆ. ಬ್ಯಾಡರಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಖಾತೆ ಮಾಡಿಕೊಡಲು 15- 20 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಅವರು ದೂರು ನೀಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಲಂಚ ಪಡೆಯುವ ಪಿಡಿಓ, ಗ್ರಾಮ ಲೆಕ್ಕಿಗರು ಬೇರೆ ಜಾಗ ಹುಡುಕಿಕೊಳ್ಳಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು” ಎಂದರು.

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    “ಮುಂದಿನ 15 ದಿನಗಳಲ್ಲಿ ಲಂಚ ಪಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬರಬಾರದು” ಎಂದು ಜಿಲ್ಲಾ ಪಂಚಾಯತಿ ಸಿಇಓ ದಿಗ್ವಿಜಯ ಬೋಡಕೆ ಅವರಿಗೆ ಖಡಕ್ ಸೂಚನೆ ನೀಡಿದರು.

    ಶ್ರವಣಯ್ಯನ ತೋಪಿನ ಸುಶೀಲ, ರತ್ನಮ್ಮ, ರಾಜಮ್ಮ, ಚಿಕ್ಕತಾಯಮ್ಮ ಸೇರಿದಂತೆ 21 ಕ್ಕೂ ಹೆಚ್ಚು ಜನ ಕಳೆದ 10 ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದಾಗ, “ಮುಂದಿನವಾರದೊಳಗೆ ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಹೇಳಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಮುಂದಿನವಾರ ಖುದ್ದಾಗಿ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

    ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ

    “ಅರ್ಜಿ ಎಲ್ಲಿ, ಏನು ಸಮಸ್ಯೆ” ಎಂದು ಡಿಸಿಎಂ ಅವರ ಪ್ರಶ್ನೆಗೆ ಉತ್ತರಿಸಿದ ಚನ್ನಪಟ್ಟಣದ ನಿವಾಸಿ ಶಿವಗಂಗಮ್ಮ, “ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯಿಂದ ನನಗೆ ತುಂಬಾ ಒಳ್ಳೆಯದಾಗಿದೆ, ನನ್ನದು ಏನೂ ಸಮಸ್ಯೆ ಇಲ್ಲ. ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ” ಎಂದಾಗ ಡಿಸಿಎಂ ನಕ್ಕು ಹಿರಿಯ ಜೀವದ ಆಶೀರ್ವಾದ ಪಡೆದು “ನಿನ್ನಂತೆ ಎಲ್ಲರ ಸಮಸ್ಯೆಯು ಇಲ್ಲದಂತೆ ಆಗಲಿ ಕಣವ್ವ” ಎಂದರು.

    ಹುಣಸನಹಳ್ಳಿಯ ಬಿಸಿಲಮ್ಮ ದೇವಿ ದೇವಸ್ಥಾನದ ಮಾಳಿಗೆ ಸೋರುತ್ತಿದೆ, ಸೇವಾ ಸಮಿತಿಯನ್ನು ಅಭಿವೃದ್ಧಿ ಸಮಿತಿಯನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಗೆ, ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಕಟ್ಟಿರುವ ತೆಂಗಿನ ನಾರಿನ ಕಾರ್ಖಾನೆಗೆ ಪರ್ಯಾಯ ಜಾಗ ಕಲ್ಪಿಸಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಹಾಗೂ ನಿಮ್ಮ ಎಲ್ಲಾ ಮನವಿಗಳಿಗೆ ಪರಿಹಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

    ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕರಲಹಳ್ಳಿಯ ವಿಕಲಚೇತನ ಪುಟ್ಟರಾಜು ಅವರಿಗೆ “ಸ್ವಂತ ಉದ್ಯೋಗ ಮಾಡಲು 1 ಲಕ್ಷ ಹಣ ಬರುವಂತೆ ಮಾಡುತ್ತೇನೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗು, ಅವರು ನನ್ನ ಪರವಾಗಿ ನಿನಗೆ ಸಹಾಯ ಮಾಡುತ್ತಾರೆ” ಎಂದರು. ಪುಟ್ಟರಾಜುವಿಗೆ ಸಹಾಯ ಮಾಡಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚನೆ ನೀಡಿದರು.

    ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ

    ಸರ್ಕಾರಿ ಕೆಲಸ ಕೊಡಿಸಿ ಎಂಬ ವೈ.ಟಿ. ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಮನವಿಗೆ, “ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ. ಏನಾದರೂ ಸ್ವಯಂ ಉದ್ಯೋಗ ಮಾಡು” ಎಂದು ಹೇಳಿದರು.

    ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಕರೆ ಮಾಡಿ ಪರಿಹಾರ ಸೂಚನೆ

    ಕೊಂಡಾಪುರ ಕೃಷ್ಣ, ಜಮೀನು ನನ್ನ ಹೆಸರಿಗೆ ಆಗಿ 5 ವರ್ಷಗಳು ಕಳೆದರೂ ಖಾತೆ ನೀಡುತ್ತಿಲ್ಲ ಎಂದು ಹೇಳಿದಾಗ, ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಡಿಸಿಎಂ ಸೂಚನೆ ಮೇರೆಗೆ ತಕ್ಷಣ ಕಂದಾಯ ಅಧಿಕಾರಿಗೆ ಕರೆ ಮಾಡಿ ಕೂಡಲೇ ದಾಖಲೆ ನೀಡುವಂತೆ ತಿಳಿಸಿದರು.

    ಚನ್ನಪಟ್ಟಣ ತಾಲ್ಲೂಕಿನ ಅಂಗನವಾಡಿ ಕಾರ್ಯಕಾರ್ಯಕರ್ತೆಯರು ಎಲ್ ಕೆಜಿ, ಯುಕೆಜಿ ಶಿಕ್ಷಕರಾಗಿ ನಮ್ಮನ್ನೇ ಮುಂದುವರೆಸಿ ಎಂದು ಮನವಿ ಮಾಡಿದಾಗ, “ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು” ಎಂದರು.

    ಅಂಬಾಡಳ್ಳಿಯ ರೇಣುಕಮ್ಮ, ಮಾದಾಪುರ ಗ್ರಾಮದ ಚಿಕ್ಕಮ್ಮ ಒಂದು ವರ್ಷ ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾಗ “ಮುಂದಿನ ತಿಂಗಳು ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

    ಪೋಡಿ, ಪಹಣಿ, ಬಗರ್ ಹುಕುಂ, ವಸತಿ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮನವಿಗಳು ಸಲ್ಲಿಕೆಯಾದವು.