*ಸತ್ಯಕಾಮ ವಾರ್ತೆ ಯಾದಗಿರಿ:*
ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14 ಸಾವಿರ ರೂ ಹಣ ಪಡೆದಿರುವ ಬಗ್ಗೆ ಸತ್ಯಕಾಮ ವೆಬ್ ಮತ್ತು ಪತ್ರಿಕೆಯಲ್ಲಿ ವರದಿ ಪ್ರಕಟಿಸಿಲಾಗಿತ್ತು, ವರದಿ ಪ್ರಕಟವಾದ ಬೆನ್ನಲೇ ಜಿಲ್ಲಾಪಂಚಾಯತ್ ಸಿಇಒ ಗರಿಮಾ ಪನ್ವಾರ್ ಕಿರಿಯ ಲೆಕ್ಕ ಸಹಾಯಕಿ ಮೀನಾಕ್ಷಿಯವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಪ್ರಸ್ತುತ ತಾಲ್ಲೂಕು ಪಂಚಾಯತ ಕಾರ್ಯಾಲಯ ಶಹಾಪೂರನಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಮೀನಾಕ್ಷಿಯವರು ಗುತ್ತಿಗೆದಾರರಿಂದ ಹಣ ಪಡೆದಿರುವುದು ಸರ್ಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ದುರ್ನಡತೆಯನ್ನು ಎಸಗಿರುವುದರಿಂದ ಹಾಗೂ ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮಗಳು 2021, ನಿಯಮ 3ರ ನಿಯಮ (i) (ii) (iii) ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು * ಮೇಲ್ಮನವಿ) ನಿಯಮಗಳು, 1957 ರ ನಿಯಮ 10(1)(ಡಿ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಸದರಿಯವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1957 ರ ನಿಯಮ 98 ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಸಿಇಒ ಗರಿಮಾ ಪನ್ವಾರ್ ಅವರು ಆದೇಶಿಸಿದ್ದಾರೆ.

