ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ತಾಲ್ಲೂಕಿನ ಬನೋಶಿ ಗ್ರಾಮದ ದಲಿತ ಸಮಾಜದ ಅಪ್ರಾಪ್ತೆ ಯುವತಿಯನ್ನ ಅತ್ಯಾಚಾರ ಎಸಗಿ ನೇಣು ಹಾಕಲಾಗಿದೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಂಕಿಸಿ ದೂರು ದಾಖಲಾಗಿದೆ.
ಬನೋಶಿ ಗ್ರಾಮದ 16 ವರ್ಷದ ಬಸಮ್ಮಳ ಅತ್ಯಾಚಾರ ಏಸಗಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಅನುಮಾನಿತ ಮೂವರ ವಿರುದ್ದ ಯುವತಿಯ ತಂದೆಯಾದ ಮಾನಪ್ಪ ಚಲವಾದಿ ದೂರು ನೀಡಿದ್ದಾರೆ.
ನನ್ನ ಮಗಳು ಬಸಮ್ಮ ಇವಳಿಗೆ ಶಾಲೆ ಬಿಡಿಸಿದ್ದು ಸದ್ಯ ಮನೆಯಲ್ಲಿಯೇ ಇರುತ್ತಿದ್ದಳು. ಈಗ ಸುಮಾರು 2-3 ತಿಂಗಳಿಂದ ಬನೋಶಿ ಗ್ರಾಮದ ಮಾಳಿಂಗರಾಯ ದಂಡೋಜಿ ಇವನು ನನ್ನ ಮಗಳು ಬಸಮ್ಮ ಇವಳಿಗೆ ಹಿಂದೆ ಬಿದ್ದು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತಾ ಅನ್ನುತ್ತಾ ನನ್ನ ಮಗಳಿಗೆ ಕಾಡಿಸುತ್ತಿದ್ದು ಈ ಬಗ್ಗೆ ನಮಗೆ ಗೊತ್ತಾಗಿ ನಾವು ನಮ್ಮ ಮಗಳಿಗೆ ಬುದ್ದಿ ಹೇಳಿ ನಮ್ಮ ಮನೆಯಲ್ಲಿ ಇರಿಸಿಕೊಂಡಿದ್ದೇವು. ಇತ್ತಿತ್ತಲಾಗಿ ನನ್ನ ಮಗಳು ಬಸಮ್ಮ ಇವಳಿಗೆ ನಮ್ಮ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡುವ ಬಗ್ಗೆ ನಾವು ಮನೆಯ ಜನರು ಮಾತನಾಡಿರುವ ಸಂಗತಿಯೂ ಮಾಳಿಂಗರಾಯ ದಂಡೋಜಿ ಇವನಿಗೆ ಗೊತ್ತಾದ ಮೇಲೆ ನನ್ನ ಮಗಳಿಗೆ ನನ್ನ ಬಿಟ್ಟು ನೀನು ಹೇಗೆ ಬೇರೆಯವನ ಸಂಗಡ ಮದುವೆ ಮಾಡಿಕೊಳ್ಳುತ್ತಿ ಅಂತಾ ನನ್ನ ಮಗಳಿಗೆ ಅವನನ್ನು ಪ್ರೀತಿಸಬೇಕು ಅಂತಾ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ, ನಮ್ಮ ಮಗಳಿಂದ ಸಂಗತಿ ಕೇಳಿ ಗೊತ್ತಾಗಿದ್ದು ಇರುತ್ತದೆ, ಹಾಗೂ ಶಿವನಗೌಡ ಬಿರಾದಾರ ಇವನು ಮಾಳಿಂಗರಾಯ ಇವನಿಗೆ ನನ್ನ ಮಗಳಿಗೆ ಕಿರುಕುಳ ನೀಡಲು ಕುಮ್ಮಕ್ಕು ನೀಡುತ್ತಿದ್ದನು ಎಂದು ಯುವತಿಯ ತಂದೆಯಾದ ಮಾನಪ್ಪ ಚಲವಾದಿ ಎಫ್ಐಆರ್ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ(ಅ.13) ನಮ್ಮ ಕುಟುಂಬ ಸಂತೆಗೆ ಮುದ್ದೇಬಿಹಾಳಕ್ಕೆ ಹೋಗುವಾಗ ಬಸಮ್ಮ ಇವಳು ನಮ್ಮ ಮನೆಯಲ್ಲಿಯೇ ಇದ್ದಳು. ಸಂಜೆ 5 ಗಂಟೆ ಸುಮಾರಿಗೆ ನಾವು ಮುದ್ದೇಬಿಹಾಳದಿಂದ ವಾಪಸ್ ನಮ್ಮ ಮನೆಗೆ ಹೋಗಿ ನೋಡಲು ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ರಾತ್ರಿ ಇಡೀ ದಿನ ಹುಡುಕಿದರು ನಮ್ಮ ಮಗಳು ಸಿಗಲಿಲ್ಲ. ಮರುದಿನ ಮಂಗಳವಾರ(ಅ.14) ಬೆಳಿಗ್ಗೆ ಗ್ರಾಮದ ಜಮೀನುಯೊಂದರಲ್ಲಿ ನನ್ನ ಮಗಳ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಅನುಮಾನಿತರ ವಿರುದ್ಧ ದೂರಿದ್ದಾರೆ.
ಯುವತಿ ಅತ್ಯಾಚಾರ ಕೊಲೆ ಶಂಕೆ ಬಗ್ಗೆ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಯುವತಿಯ ಶವವಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಗಲ್ಲಿಗೇರಿಸಿ ಎಂಬ ಕೂಗು ಸಾರ್ವಜನಿಕವಾಗಿ ಕೇಳಿಬಂದವು.
ಬನೋಶಿ ಗ್ರಾಮದಲ್ಲಿ ಯುವತಿ ಅತ್ಯಾಚಾರ ಶಂಕೆ ಬಗ್ಗೆ ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹಾಗೂ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದು, ಶಂಕಿಸಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ತನಿಖೆ ಮುಂದುವರೆದಿದೆ. ಯುವತಿಯ ಮರಣೋತ್ತರ ಪರೀಕ್ಷೆ ಬರುವವರೆಗೂ ಏನು ಹೇಳಾಗದು ಎಂದು ತಿಳಿಸಿದರು.
ಸಂತ್ರಸ್ತೆ ಯುವತಿ ಕುಟುಂಬಕ್ಕೆ ಪರಿಹಾರ
ಎಫ್ಐಆರ್ ಆಧರಿಸಿ ಪ್ರಾಥಮಿಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ ಮಾಡಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಇನ್ನುಳಿದ 50% ರಷ್ಟು ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುವುದು. ಈಗಾಗಲೇ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಲಾಗಿದ್ದು, ಇನ್ನುಳಿದ ಸರ್ಕಾರದ ಸೌಲಭ್ಯಗಳನ್ನು ಕುಟುಂಬಕ್ಕೆ ಇಲಾಖೆಯಿಂದ ನೀಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ ಮಠ ಹೇಳಿದ್ದಾರೆ.

