ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ ಬೌಲಿಂಗ್‌ನ ಪ್ರತಿ ತಪ್ಪನ್ನೂ ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.
ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.
ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.
ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.
ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.
