ಯಾದಗಿರಿ: 2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯಾಧ್ಯಕ್ಷ ಚನ್ನಪಟ್ಟಣ ಶಾಂತಗೌಡ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂಗಯ್ಯ ಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಪ್ರಭಾವಿಶಾಲಿ ಜೈನ್ ಸಹೋದರರಿಗೆ 25 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಗ್ಯಾನಚಂದ್ ಜೈನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ, ಜೈನ್ ಸಹೋದರರು ಸುಪಾರಿ ಕೊಟ್ಟು ಸೂಗಯ್ಯನನ್ನು ಕೊಲ್ಲಿಸಿದ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಾಗಿ ಮೂರು ವರ್ಷವಾದರೂ, ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಶಾಂತಗೌಡ ಅವರ ದೂರಿನ ಪ್ರಕಾರ, ಇದೇ ಜೈನ್ ಸಹೋದರರ ವಿರುದ್ಧ 2019ರಲ್ಲಿ ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ (ಕ್ರೈಂ. ನಂ. 83/2019) ದಾಖಲಾದರೂ, ಕೇವಲ ಒಂದು ತಿಂಗಳಲ್ಲಿ ‘ಬಿ ಅಂತಿಮ ತರದಿ’ ಸಲ್ಲಿಸಿ ಮುಚ್ಚಲಾಗಿದೆ ಎಂದರು.
ಇದಲ್ಲದೆ, ಸೂಗಯ್ಯ ಸ್ವಾಮಿಯ ಪತ್ನಿ ಅವರ ಹೆಸರಿನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟಕ್ಕೆ ಮುಂದಾಗಿರುವುದು, ಕುಟುಂಬದವರು ನಾಪತ್ತೆ ಪ್ರಕರಣದ ವಿಚಾರದಲ್ಲಿ ಆಸಕ್ತಿ ತೋರದಿರುವುದು — ಇವೆಲ್ಲವೂ ಹಣಬಲ ಮತ್ತು ರಾಜಕೀಯ ಬಲದ ಪ್ರಭಾವದ ಸೂಚನೆ ಎಂದು ಶಾಂತಗೌಡ ಆರೋಪಿಸಿದ್ದಾರೆ.
ಸತ್ಯವನ್ನು ಬೆಳಕಿಗೆ ತರುವುದೇ ನನ್ನ ನೈತಿಕ ಕರ್ತವ್ಯ ಎಂದು ಶಾಂತಗೌಡ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪುನರ್ ತನಿಖೆ ಮಾಡಲು ಪೊಲೀಸರು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಕಾಂತ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ನಡುವಿನಕೇರಿ, ತಾಲೂಕು ಅಧ್ಯಕ್ಷ ಮಹಿಪಾಲ ರೆಡ್ಡಿ ಕಟಗಿ ಶಹಾಪುರ, ಅಶೋಕ್ ನಾಯಕ, ಭಾಷಾ ಕುರಕುಂಧಿ, ಮಲ್ಲಿಕಾರ್ಜುನ, ರೆಡ್ಡಿ ಖಾನಾಪುರ ಸೇರಿದಂತೆ ಇನ್ನಿತರರು ಇದ್ದರು.

