ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿ–ಪಂಢರಪುರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಹಮ್ಮಿಕೊಂಡಿದೆ. ಈ ವೇಳೆ ಭಕ್ತರ ಅನುಕೂಲಕ್ಕಾಗಿ ನಾಲ್ಕು ದಿನಗಳ ಕಾಲ ಕಾಯ್ದಿರಿಸದ ವಿಶೇಷ ರೈಲು ಓಡಿಸಲಿದ್ದು, ಭಕ್ತರ ಯಾತ್ರೆಗೆ ಸುಲಭ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ವಿಶೇಷ ರೈಲು ಅಕ್ಟೋಬರ್ 30, 31 ಮತ್ತು ನವೆಂಬರ್ 2, 3 ರಂದು ಸಂಚರಿಸಲಿದೆ. ಪ್ರತಿ ಪ್ರಯಾಣದ ದಿನದಲ್ಲಿ ಹುಬ್ಬಳ್ಳಿಯಿಂದ ಬೆಳಿಗ್ಗೆ 5.10ಕ್ಕೆ ರೈಲು ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಪವಿತ್ರ ಪಂಢರಪುರ ತಲುಪಲಿದೆ. ಮರಳಿ ಪಂಢರಪುರದಿಂದ ಸಂಜೆ 6 ಗಂಟೆಗೆ ರೈಲು ಹೊರಟು, ಮರುದಿನ ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ನಾಲ್ಕು ದಿನಗಳ ಸಂಚಾರವು ಕಾರ್ತಿಕ ಏಕಾದಶಿ ಸಂದರ್ಭಕ್ಕೆ ಯೋಜಿಸಲಾಗಿದ್ದು, ಪಂಢರಪುರದ ವಿಠೋಬ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ಪ್ರಯಾಣ ಮಾಡುವ ಹಿನ್ನೆಲೆ ರೈಲ್ವೆ ಈ ವಿಶೇಷ ರೈಲು ಸೇವೆ ನೀಡಲಾಗಿದೆ. ಭಕ್ತರಿಗೆ ಹಿತಕರ ಸಮಯದಲ್ಲಿ ರೈಲು ಹೊರಡುವಂತೆ ಹಾಗೂ ತಲುಪುವಂತೆ ಸಮಯ ನಿಗದಿಪಡಿಸಲಾಗಿದೆ.
ಹುಬ್ಬಳ್ಳಿ–ಪಂಢರಪುರ ನಡುವಿನ ಈ ಸೇವೆ ರೈಲು ಸಂಖ್ಯೆ 07367/07368 ಅಡಿಯಲ್ಲಿ ಸಂಚರಿಸಲಿದೆ. ಬೆಳಗ್ಗೆ ಹೊರಡುವ ರೈಲು ಪಂಢರಪುರ ತಲುಪಿದ ಬಳಿಕ, ಅಂದೇ ಸಂಜೆ ಮರಳಿ ಪ್ರಯಾಣ ಆರಂಭಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರೊಂದಿಗೆ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ರೈಲ್ವೆ ಮಂಡಳಿಯು ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಯಶವಂತಪುರ–ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ (06261/06262) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ಮೊದಲು ಅಕ್ಟೋಬರ್ 2025ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿದ್ದ ಈ ರೈಲುಗಳು ಈಗ ನವೆಂಬರ್ ಅಂತ್ಯದವರೆಗೆ ಮುಂದುವರಿಯಲಿವೆ.
ರೈಲು ಸಂಖ್ಯೆ 06261 ಯಶವಂತಪುರ–ಮುಜಫ್ಫರಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಅಕ್ಟೋಬರ್ 29ರಿಂದ ನವೆಂಬರ್ 26ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಅದೇ ರೀತಿಯಾಗಿ 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ರೈಲು ಅಕ್ಟೋಬರ್ 31ರಿಂದ ನವೆಂಬರ್ 28ರವರೆಗೆ ಪ್ರತಿ ಶುಕ್ರವಾರ ಓಡಲಿದೆ.
ಈ ಎರಡು ವಿಶೇಷ ರೈಲುಗಳು ತಮ್ಮ ಹಳೆಯ ನಿಲುಗಡೆಗಳು ಹಾಗೂ ಬೋಗಿಗಳ ವಿನ್ಯಾಸದಲ್ಲೇ ಮುಂದುವರಿಯಲಿವೆ. ಆದರೆ, ಒಂದು ಸಣ್ಣ ಬದಲಾವಣೆ ಪ್ರಯಾಣಿಕರು ಗಮನಿಸಬೇಕಾದದ್ದು 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ರೈಲು ಈಗ ಮುಂಚೆ ಇದ್ದಂತೆ ಬೆಳಿಗ್ಗೆ 6:30ಕ್ಕೆ ಅಲ್ಲ, ಬೆಳಿಗ್ಗೆ 7:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.
ಸಮಯದಲ್ಲಿ ಈ ಬದಲಾವಣೆ ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದ್ದು, ರೈಲುಗಳು ಸರಾಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕಾರ್ತಿಕ ಮಾಸದ ಈ ವಿಶೇಷ ಸಂದರ್ಭದಲ್ಲಿ ಭಕ್ತರು ಸುಗಮವಾಗಿ ಪಂಢರಪುರ ದರ್ಶನಕ್ಕೆ ತೆರಳಲು ಹಾಗೂ ಉತ್ತರ ಭಾರತದ ದೀರ್ಘ ಪ್ರಯಾಣಿಕರಿಗೆ ಸಹಾಯವಾಗುವಂತೆ ಈ ಹೊಸ ವೇಳಾಪಟ್ಟಿ ಜಾರಿಯಾಗಿದೆ.
