ಬೆಂಗಳೂರು ಸುತ್ತಮುತ್ತಲಿನ ಆರು ಪ್ರಮುಖ ತಾಲೂಕುಗಳನ್ನು ಸೇರಿಸಿಕೊಂಡು ಹೊಸ ಬೆಂಗಳೂರನ್ನು ರೂಪಿಸುವ ಮಹತ್ವದ ನಿರ್ಧಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ ಹಾಗೂ ಮಾಗಡಿ ತಾಲೂಕಿನ ಬಿಡದಿ ಪ್ರದೇಶಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಭಾಗವಾಗಲಿವೆ ಎಂಬುದು ಈ ಘೋಷಣೆಯ ಮುಖ್ಯ ಅಂಶವಾಗಿದೆ.
ಶನಿವಾರ ದೇವನಹಳ್ಳಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಯಪ್ಪ) ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಉದ್ದೇಶ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದರು. ಈಗಿರುವ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಜೊತೆಗೆ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ವಿಸ್ತಾರವಾದ ಹೊಸ ಬೆಂಗಳೂರು ನಿರ್ಮಿಸುವ ದೃಷ್ಟಿಕೋಣವನ್ನು ಸರ್ಕಾರ ಹೊಂದಿದೆ ಎಂದರು.
ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಈ ಭಾಗಗಳ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇರುವ ಆಸ್ತಿಯನ್ನು ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾಗಿದ್ದು, ಸರ್ಕಾರ ಆಸ್ತಿ ಮೌಲ್ಯಕ್ಕೆ ಗೌರವ ತರುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ‘ಬೆಂಗಳೂರು ಉತ್ತರ’ ಎಂಬ ಹೊಸ ಗುರುತನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗಗಳು ನಗರಾಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಲಿವೆ ಎಂದು ತಿಳಿಸಿದರು.
ನಂದಗುಡಿ, ಸೋಲೂರು ಮತ್ತು ಬಿಡದಿ ಭಾಗದ ರೈತರಿಗೆ ಅವರ ಜಮೀನಿಗೆ ಉತ್ತಮ ಬೆಲೆ ಸಿಗುವಂತೆ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಿದರೆ ಮಾತ್ರ ವಿಶ್ವದ ಗಮನ ಸೆಳೆಯುವ ಹೊಸ ಬೆಂಗಳೂರು ನಿರ್ಮಾಣ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಎಂಎಲ್‌ಸಿ ಎಸ್. ರವಿ ಹಾಗೂ ಬಯಪ್ಪ ಅಧ್ಯಕ್ಷ ಶಾಂತಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹೊಸ ಬೆಂಗಳೂರು ಕನಸಿನೊಂದಿಗೆ ರಾಜ್ಯ ರಾಜಧಾನಿಯ ವಿಸ್ತರಣೆ ಈಗ ಅಧಿಕೃತವಾಗಿ ಹೊಸ ಹಾದಿ ಹಿಡಿದಂತಾಗಿದೆ.
