ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಗಾಲ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದ್ದು, ಶೀತಗಾಳಿಯ ಎಫೆಕ್ಟ್ ಜನಜೀವನದ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ತಾಪಮಾನವು ಕೇವಲ ಹವಾಮಾನ ಬದಲಾವಣೆಗೂ ಸೀಮಿತವಾಗದೇ, ನಾಗರಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಚಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ.
ನಗರದಲ್ಲಿ ಕಳೆದ ಎರಡ್ಮೂರು ವಾರಗಳಿಂದ ಕನಿಷ್ಠ ತಾಪಮಾನ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಕೆಲ ಪ್ರದೇಶಗಳಲ್ಲಿ 14 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೂ ತಲುಪಿದೆ. ಈ ತೀವ್ರ ಚಳಿಯಿಂದಾಗಿ ಜನರು ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವುದಕ್ಕೂ ಹಿಂಜರಿಯುತ್ತಿದ್ದಾರೆ. ಶೀತಗಾಳಿಯ ಪರಿಣಾಮವಾಗಿ ಶೀತ, ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಹೆಚ್ಚಾಗಿದೆ.
ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಶೀತ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳು, ವಯಸ್ಕರು ಹಾಗೂ ವೃದ್ಧರು ಶೀತ, ಕೆಮ್ಮು, ಉಸಿರಾಟದ ತೊಂದರೆಗಳೊಂದಿಗೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳಲ್ಲಿ ಆರೋಗ್ಯ ಏರುಪೇರು ಕಂಡುಬರುತ್ತಿದ್ದು, ವೈದ್ಯರು ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳ ವಿಭಾಗದಲ್ಲಿ ಹಾಸಿಗೆಗಳ ಭರ್ತಿ ಪ್ರಮಾಣವೂ ಹೆಚ್ಚಾಗಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಸಮಸ್ಯೆಗಳು ಕಂಡುಬರುವುದು ಸಹಜವಾದರೂ, ಈ ಬಾರಿ ಚಳಿ ಹೆಚ್ಚಿರುವುದರಿಂದ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಕೆಲವರು ತಪಾಸಣೆ ಪಡೆದು ಔಷಧಿ ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯದ ತೀವ್ರತೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಹವಾಮಾನ ಇಲಾಖೆ ಸೂಚನೆಯಂತೆ ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಹೆಚ್ಚಿನ ಚಳಿ ಬೀಳುವ ಸಾಧ್ಯತೆ ಇದ್ದು, ತಾಪಮಾನ ದಾಖಲೆ ಮಟ್ಟದಲ್ಲಿ ಕುಸಿಯುವ ಅಂದಾಜು ಇದೆ. ಹೀಗಾಗಿ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಬೆಚ್ಚನೆಯ ಉಡುಪುಗಳನ್ನು ಧರಿಸುವುದು, ತಂಪಾದ ಗಾಳಿಯಿಂದ ದೂರವಿರುವುದು, ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗಾಲದ ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದರೆ ಮಾತ್ರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯ.
