ಯಾದಗಿರಿ, ಜುಲೈ 3 (ಸತ್ಯಕಾಮ ವಾರ್ತೆ):
ರಾಕ್ ಸ್ಟಾರ್ ಹಾಗೂ ನಿಮ್ಮ ಲೀಗಲ್ ಅಡ್ವೈಸರ್ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿಯಾಗಿರುವ ಪುನೀತ್ ರಾಜ್ ವಿರುದ್ಧ ಯುವತಿಯೊಬ್ಬರು ಭಾರೀ ಆರೋಪ ಹೇರಿದ್ದು, ಯೂಟ್ಯೂಬ್ ಶಾರ್ಟ್ ಫಿಲ್ಮ್ ನೆಪದಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ, ಮದುವೆ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ದೂರುದಾರೆಯು ನೀಡಿರುವ ದೂರಿನಂತೆ, ಇನ್‌ಸ್ಟಾಗ್ರಾಂ ಮೂಲಕ ಪುನೀತ್ ರಾಜ್ ಪರಿಚಿತನಾಗಿದ್ದ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಸ್ನೇಹ ಬೆಳೆದಿತ್ತು, ಪುನೀತ್ ರಾಜ್ ತನ್ನನ್ನು ನಿರ್ದೇಶಕ ಎಂದು ಪರಿಚಯಿಸಿಕೊಂಡು ಯುವತಿಗೆ ತನ್ನ ಶಾರ್ಟ್ ಫಿಲ್ಮ್‌ನಲ್ಲಿ ನಾಯಕಿಯಾಗಿ ನಟಿಸುವಂತೆ ಹೇಳಿದ್ದ ಇದಕ್ಕೆ ಮನೆಯವರು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆದರೂ ಪುನೀತ್, “ಇದು ಕೇವಲ ಒಂದು ದಿನದ ಚಿತ್ರೀಕರಣ,” “ನನ್ನ ಕುಟುಂಬಸ್ಥರು ಇರುತ್ತಾರೆ,” ಎಂದು ಭರವಸೆ ನೀಡಿ ಫೆಬ್ರವರಿ 16 ರಂದು ಪುನೀತ್ ರಾಜ್ ಹಾಗೂ ಆತನ ಕುಟುಂಬದವರು ಮತ್ತು ಯುವತಿ ಬಾದಾಮಿ ಮಹಾಕೂಟಕ್ಕೆ ತೆರಳಿದ್ದು, ಬಾಡಿಗೆ ರೂಮ್‌ನಲ್ಲಿ ಉಳಿದಿದ್ದರು. ಅಲ್ಲಿಯೇ ಫೆಬ್ರವರಿ 17 ಹಾಗೂ 18 ರಂದು ಮದುವೆ ನಾಟಕವಾಡಿ, ಹಿಂದೂ ಸಂಪ್ರದಾಯದಂತೆ ಪುನೀತ್ ಯುವತಿಗೆ ಮದುವೆ ಮಾಡಿಕೊಂಡಂತೆ ಕಾರ್ಯಕ್ರಮಗಳ ಎಲ್ಲಾ ದೃಶ್ಯಗಳನ್ನು ಚಿತ್ರಿಕರಿಸಿದ್ದಾನಂತೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.
- Advertisement -
ದಿನಾಂಕ 18 ರಂದು ರಾತ್ರಿ ಯುವತಿಯ ವಿರೋಧದ ನಡುವೆಯೂ ಪುನೀತ್ ಬಲವಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪುನೀತ್ ಪೋಷಕರಿಗೂ ತಿಳಿಸಿದಾಗ ಅವರು ಸಹ “ನಿನ್ನನ್ನು ನನ್ನ ಮಗನೊಂದಿಗೆ ಮದುವೆ ಮಾಡಲೆಂದು ಇದೆಲ್ಲಾ ಮಾಡಿದ್ದೇವೆ” ಎಂದು ಅವರ ಪೋಷಕರು ಉತ್ತರಿಸಿದ್ದಾರೆಂದು ಯುವತಿಯ ಆರೋಪವಾಗಿದೆ.
ಬಳಿಕ ಯಾದಗಿರಿಗೆ ಬಂದ ಇವರು ಯುವತಿ ತನ್ನ ಮನೆಗೆ ಹೋಗುವುದಾಗಿ ತಿಳಿಸಿದಾಗ ನಿನಗೆ ಮದುವೆಯಾಗಿದೆ ನೀನು ಇಲ್ಲೇ ಇರಬೇಕು, ನಮ್ಮ ಮನೆ ಬಿಟ್ಟು ಹೋದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಯುವತಿ ಎರಡು ದಿನ ಅಲ್ಲೇ ಉಳಿದುಕೊಂಡು, ದಿನಾಂಕ 22.02.2025 ರಂದು ತನ್ನ ಮನೆಗೆ ಮರಳಿದ್ದಾಳೆ. ಬಳಿಕ ಏಪ್ರಿಲ್ 12 ರಂದು ಪುನೀತ್ ರಾಜ್ ಯುವತಿಯ ಮನೆಯ ಬಳಿ ಬಂದು ಅವರ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೇ ನಮ್ಮ ಮದುವೆಯ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಹೇಳಿರುತ್ತಾನೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.
ಈ ಸಂಬಂಧ ಯುವತಿ ಹೇಳಿಕೆಯಂತೆ ಪುನೀತ್ ಹಾಗೂ ಆತನ ತಂದೆ – ತಾಯಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

