
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ, ಅವು ನಮ್ಮ ಜೀವನ ಶೈಲಿ, ಕೃಷಿ ಪರಂಪರೆ ಮತ್ತು ಕುಟುಂಬದ ಒಗ್ಗಟ್ಟಿನ ಪ್ರತೀಕವಾಗಿವೆ. ಅವುಗಳಲ್ಲಿ ವರ್ಷದ ಮೊದಲ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿ ವಿಶೇಷ ಸ್ಥಾನ ಹೊಂದಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ ಎಂಬ ನಂಬಿಕೆಯಿದ್ದು, ಹೊಸ ಬೆಳಕು, ಹೊಸ ಆಶೆ ಮತ್ತು ಹೊಸ ಆರಂಭಗಳ ಸಂಕೇತವಾಗಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಗ್ರಾಮೀಣ ಬದುಕಿನಲ್ಲಿ ಬೆಳೆ ಕಟಾವು ಮುಗಿದ ಸಂತೋಷ, ರೈತನ ಶ್ರಮದ ಫಲದ ಸಂಭ್ರಮ ಹಾಗೂ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಈ ಹಬ್ಬದಲ್ಲಿ ತಿನಿಸುಗಳಿಗೆ ವಿಶೇಷ ಮಹತ್ವವಿದ್ದು, ಹೊಸ ಅಕ್ಕಿ, ಹೊಸ ಬೆಲ್ಲ, ಹಾಲು ಮತ್ತು ತುಪ್ಪದಿಂದ ತಯಾರಿಸುವ ಸಿಹಿ ಪೊಂಗಲ್ ಹಬ್ಬದ ಸಿಹಿತನವನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇವರಿಗೆ ನೈವೇದ್ಯವಾಗಿ ಅರ್ಪಿಸಿ, ಮನೆಮಂದಿಯೆಲ್ಲರೂ ಒಟ್ಟಾಗಿ ಸವಿಯುವ ಈ ಪೊಂಗಲ್ ಸಂಕ್ರಾಂತಿಯ ಅವಿಭಾಜ್ಯ ಭಾಗ.
ಇಂದು ನಮ್ಮ ರೆಸಿಪಿ ವಿಭಾಗದಲ್ಲಿ, ಹೆಚ್ಚು ಸಮಯ ಹಿಡಿಯದೇ, ಮನೆದಲ್ಲೇ ಸುಲಭವಾಗಿ ಮಾಡಬಹುದಾದ ಸಿಂಪಲ್ ಸಿಹಿ ಪೊಂಗಲ್ ಮಾಡುವ ವಿಧಾನವನ್ನು ನಿಮಗೆ ತಿಳಿಸುತ್ತಿದ್ದೇವೆ. ಹಬ್ಬದ ದಿನ ನಿಮ್ಮ ಮನೆಯಲ್ಲೂ ಈ ಪರಂಪರೆಯ ಸಿಹಿಯನ್ನು ತಯಾರಿಸಿ ಸಂಭ್ರಮವನ್ನು ಮತ್ತಷ್ಟು ಮಧುರಗೊಳಿಸಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಹೆಸರುಬೇಳೆ – 1 ಕಪ್
ಬೆಲ್ಲ – ಒಂದೂವರೆ ಕಪ್
ಒಣದ್ರಾಕ್ಷಿ – 10
ಗೋಡಂಬಿ – 10
ಲವಂಗ – 1
ಏಲಕ್ಕಿ ಪುಡಿ – ಕಾಲು ಚಮಚ
ತುಪ್ಪ – ಕಾಲು ಚಮಚ
ಖಾದ್ಯ ಕರ್ಪೂರ / ಪಚ್ಚೆ ಕರ್ಪೂರ – ಸಣ್ಣ ಪೀಸ್
ಕಾಯಿತುರಿ – ಕಾಲು ಕಪ್
ಹಾಲು – 1 ಕಪ್
ಮಾಡುವ ವಿಧಾನ:
ಮೊದಲಿಗೆ ಅಕ್ಕಿ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ. ಇದಕ್ಕೆ 3 ಕಪ್ ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 4–5 ಸೀಟಿ ಕೂಗಿಸಿಕೊಳ್ಳಿ.
ನಂತರ ಒಂದು ಪಾತ್ರೆಯಲ್ಲಿ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಸ್ಟವ್ ಮೇಲೆ ಕುದಿಯಲು ಬಿಡಿ. ಇದಕ್ಕೆ ಸಣ್ಣ ಪೀಸ್ ಖಾದ್ಯ ಕರ್ಪೂರ ಸೇರಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿದ ಬಳಿಕ ಈ ಪಾಕವನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ಅನ್ನ–ಬೇಳೆ ಮಿಶ್ರಣಕ್ಕೆ ಸೇರಿಸಿ.
ಈಗ ಕಾಯಿತುರಿ, ಏಲಕ್ಕಿ ಪುಡಿ ಮತ್ತು 1 ಕಪ್ ಹಾಲು ಸೇರಿಸಿ ಚೆನ್ನಾಗಿ ಕಲಸಿ.
ಮತ್ತೊಂದೆಡೆ ಬಾಣಲೆಗೆ ತುಪ್ಪ ಹಾಕಿ ಕಾದ ಬಳಿಕ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.
ಹುರಿದ ಡ್ರೈಫ್ರೂಟ್ಸ್ ಅನ್ನು ಪೊಂಗಲ್‌ಗೆ ಸೇರಿಸಿ, 5 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.
ಈ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿದ ಸಿಹಿ ಪೊಂಗಲ್‌ನೊಂದಿಗೆ ಹಬ್ಬದ ಸಡಗರವನ್ನು ಕುಟುಂಬದ ಜೊತೆ ಹಂಚಿಕೊಳ್ಳಿ.
