ಭಾರತದ ಅತ್ಯಂತ ಜನಪ್ರಿಯ ಕ್ವಿಜ್ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯು ಅನೇಕ ಪ್ರತಿಭಾವಂತರನ್ನು ಪರಿಚಯಿಸಿದೆ. ಈ ಬಾರಿ ಆ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ವಿನಯ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಪ್ರೇಕ್ಷಕರ ಮನ ಗೆದ್ದಷ್ಟೇ ಅಲ್ಲ, ಒಂದು ಮಾದರಿಯನ್ನೂ ಸಹ ನಿರ್ಮಿಸಿದರು.
ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಜೀವನದ ಪಯಣ, ಕುಟುಂಬ, ಮತ್ತು ತಮ್ಮ ಸಾಮಾಜಿಕ ಸೇವಾ ಉದ್ದೇಶಗಳ ಕುರಿತು ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿದ ‘ರಿಷಬ್ ಫೌಂಡೇಶನ್’ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಹಾಗೂ ದೈವ ನರ್ತಕರ ಜೀವನೋಪಾಯಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವನ್ನು ವ್ಯಕ್ತಪಡಿಸಿದರು.
ಆಟದಲ್ಲಿ ಅವರು ಅತ್ಯಂತ ಶಾಂತ ಮತ್ತು ನಿಖರವಾಗಿ ಪ್ರಶ್ನೆಗಳಿಗೆ ಉತ್ತರಿಸಿದರು. ಆರಂಭದಲ್ಲಿ 50,000 ರೂ. ಮೌಲ್ಯದ ಪ್ರಶ್ನೆಯಿಂದ ಆರಂಭಿಸಿದ ಅವರು ಕ್ರಮೇಣ 12 ಪ್ರಶ್ನೆಗಳನ್ನು ಯಶಸ್ವಿಯಾಗಿ ಪೂರೈಸಿದರು. ವಿಶೇಷವಾಗಿ ಒಂದು ಕಠಿಣ ಪ್ರಶ್ನೆ “ಇಂಡೋನೇಷ್ಯಾದಲ್ಲಿರುವ ಜ್ವಾಲಾಮುಖಿಯ ಕೆಳಗೆ ಯಾವ ಹಿಂದೂ ದೇವರ ಪ್ರತಿಮೆ ಇದೆ?” ಎಂಬುದಕ್ಕೆ ಅವರು ಲೈಫ್ಲೈನ್ ಬಳಸಿಕೊಂಡು ಸರಿಯಾದ ಉತ್ತರವಾದ ‘ಗಣಪತಿ’ ಎಂದು ಹೇಳಿದರು.
ಈ ಪ್ರದರ್ಶನದ ಫಲವಾಗಿ ರಿಷಬ್ ಶೆಟ್ಟಿ ಅವರು ₹12,50,000 ಮೊತ್ತದ ಬಹುಮಾನವನ್ನು ಗೆದ್ದರು. ಆದರೆ, ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅದನ್ನು ಬಳಸದೇ, ಅದನ್ನೆಲ್ಲ ತಮ್ಮ ಫೌಂಡೇಶನ್‌ಗೆ ದಾನ ಮಾಡಿದರು. ಅವರ ಈ ನಡೆ ಎಲ್ಲರಿಗೂ ಪ್ರೇರಣೆಯಾಗಿತು.
ಅಮಿತಾಭ್ ಬಚ್ಚನ್ ಅವರ ಆತಿಥ್ಯದಲ್ಲಿ ನಡೆದ ಈ ಶೋ ವೇಳೆ, ಆಯೋಜಕರು ಮತ್ತು ಸ್ಪಾನ್ಸರ್‌ಗಳೂ ಕೂಡಾ ರಿಷಬ್ ಅವರ ಮಾನವೀಯ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಫೌಂಡೇಶನ್‌ಗೆ 1,500 ಕಿಲೋ ಅಕ್ಕಿ, 1,500 ಕಿಲೋ ಗೋಧಿ, 1,500 ಕಿಲೋ ತುಪ್ಪ, ಜೊತೆಗೆ ಹಿರೋ ಎಕ್ಸ್‌ಟ್ರೀಂ 125 ಬೈಕ್ ನೀಡುವುದಾಗಿ ಘೋಷಿಸಿದರು.
ಒಟ್ಟಿನಲ್ಲಿ, ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರ ಗೆಲುವು ಕೇವಲ ಹಣದ ಗೆಲುವಲ್ಲ ಅದು ಮಾನವೀಯತೆ ಮತ್ತು ಅದು ಸಾಮಾಜಿಕ ಜವಾಬ್ದಾರಿಯ ಗೆಲುವು.

