ಸತ್ಯಕಾಮ ವಾರ್ತೆ ಹುಣಸಗಿ:
ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರದಾರರ ಸಂಘದಿಂದ ಕೇಂದ್ರ ಸರಕಾರವು ನಿವೃತ್ತ ನೌಕರದಾರರ ಪಿಂಚಣಿಯ ಕುರಿತ ನಿಲುವನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹಾಗೂ ಪದಾಧಿಕಾರಿ ಆರ್.ಎಲ್ ಸುಣಗಾರ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆರ್ಥಿಕ ಬಿಲ್‌ನ್ನು ಮಂಡಿಸುವ ವೇಳೆ ೮ನೇ ವೇತನ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಮೇಲೆ ದಿ.೧-೪-೨೦೨೬ ರ ನಂತರ ನಿವೃತ್ತಿಯಾಗುವವರಿಗೆ ಮಾತ್ರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗುವುದು.
ಆದರೆ ೧-೪-೨೦೨೬ರ ಪೂರ್ವದಲ್ಲಿ ನಿವೃತ್ತಿಯಾದವರಿಗೆ ಪರಿಷ್ಕರಿಸುವುದು ಕಷ್ಟಕರ ಎಂದು ಹೇಳಿರುವ ಮಾತಿನ ವಿಚಾರವು ದೇಶದ ಎಲ್ಲ ರಾಜ್ಯಗಳ ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ಒಂದು ವೇಳೆ ಈ ಮಾತಿನಂತೆ ಕೇಂದ್ರ ಸರಕಾರವು ನಿರ್ಣಯ ಅಂಗೀಕರಿಸಿದಲ್ಲಿ ನಿವೃತ್ತ ನೌಕರದಾರರಿಗೆ ತುಂಬ ತೊಂದರೆಯಾಗಲಿದೆ. ವೃದ್ದಾಪ್ಯದಲ್ಲಿರುವ ಇವರಿಗೆ ಈ ಸರಕಾರದ ನಿಲುವು ವಿವಿಧ ರೀತಿಯ ಸಂಕಷ್ಟ ತರಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಸರಕಾರವು ಕೂಡಲೆ ಈ ವಿಚಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
- Advertisement -
ನಂತರ ದೇಶದ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಹುಣಸಗಿಯ ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.
ಇದಕ್ಕೂ ಮುಂಚೆ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೂ ನಿವೃತ್ತನೌಕರರು ಮೌನವಾಗಿ ಮೆರವಣಿಗೆ ನಡೆಸಿದರು.
ಈ ಸಂದರ್ಭ ನಿವೃತ್ತ ನೌಕರದಾರರ ಸಂಘದ ಧನೇಶನಾಯಕ ರಾಠೋಡ್, ಬಸಣ್ಣ ಗೊಡ್ರಿ, ಶಿವಪ್ಪ ಅಂಗಡಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಪಾಟೀಲ್, ಜಗದೀಶ ಶಹಪುರ, ಪ್ರಾಣೇಶ ಕುಲಕರ್ಣಿ, ಹುಸೇನಸಾಬ್, ಬಸಣ್ಣ ಚಿಂಚೋಳಿ, ಈಶ್ವರ ಬಡಿಗೇರ, ಬಿ.ಎಸ್. ಗೂಡಲಮನಿ ಸೇರಿದಂತೆ ಇತರರಿದ್ದರು.

