ಲಿಂಗಸುಗೂರು: ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜಮೀನಿಗೆ ಹೋಗುವ ದಾರಿಗಳು ಸಂಪೂರ್ಣ ಹದಗೆಟ್ಟಿವೆ. ಈ ಹಿನ್ನೆಲೆ ‘ನಮ್ಮ ಹೊಲ, ನಮ್ಮ ದಾರಿ’ ಎಂಬ ರಾಜ್ಯ ಸರ್ಕಾರದ ಯೋಜನೆ ಹೆಸರಿಗಷ್ಟೇ ಉಳಿದಿದೆಯೆಂಬ ಆರೋಪ ರೈತ ಸಮುದಾಯದಿಂದ ಕೇಳಿಬರುತ್ತಿದೆ.
ನಾಗರಹಾಳ ಗ್ರಾಮದ ಲ್ಯಾಟ್ರಲ್ 8ರ ಸಬ್ ಲ್ಯಾಟ್ರಲ್ 1 ಕಾಲುವೆ ಪಕ್ಕದ ದಾರಿಯಲ್ಲಿ ಸ್ಥಳೀಯ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿದಿನವೂ ಪರದಾಡುವಂತಾಗಿದೆ. ಈ ರಸ್ತೆಗೆ ಮರಂ ಹಾಕಿ ದುರಸ್ತಿಗೆ 10 ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದ್ದರೂ ಕಾರ್ಯವಿಲ್ಲ.
ಗ್ರಾ.ಪಂ ಪಿಡಿಒ ಪ್ರವೀಣ್ ಪಾಟೀಲ ಅವರ ಮಾತಿನಂತೆ, ಈ ರಸ್ತೆಗಾಗಿ ₹5 ಲಕ್ಷ ರೂ. ಯೋಜನೆ ರೂಪಿಸಲಾಗಿತ್ತು, ಆದರೆ ಕಾಮಗಾರಿ ಕೋಲಾಪ್ಸ್ ಆಗಿದೆ ಎಂಬ ಉತ್ತರ ಕೇಳಿಬಂದಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಿಂಗಸುಗೂರು ತಾಲೂಕ ಉಪಾಧ್ಯಕ್ಷ ಭೀಮಪ್ಪ ಎನ್. ಪವಾರ್, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗದಿದ್ದರೆ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

