ಗುರುಮಠಕಲ್ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇಂದು ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ರಾಜ್ಯದ ಜನತೆ ಲಾಭ ಪಡೆಯುತ್ತಿದ್ದಾರೆ, ಇದರಿಂದ ಜನ ಸಂತೃಪ್ತರಾಗಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ, 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಡವರ ಪಾಲಿನ ಅನ್ನರಾಮಯ್ಯರಾಗಿದ್ದಾರೆ.
ಗುರುಮಠಕಲ್ ಮತಕ್ಷೇತ್ರದ ಕುರಿತು ರಾಷ್ಟ್ರೀಯ ನಾಯಕರು ನಿರಂತರ ಮಾಹಿತಿ ಪಡೆಯುತ್ತಲೇ ಇದ್ದಾರೆ, ಇಂದು ಹೊಟ್ಟೆಕಿಚ್ಚಿಗೆ ಈ ರೀತಿ ಘಟನೆ ಜರುಗಿದ್ದು ಜನರ ಅಭಿವೃದ್ಧಿಯೆ ನನ್ನ ಕರ್ತವ್ಯ, ಇಂದಿನಿಂದ ಶಿಷ್ಠಚಾರದ ಪ್ರಕಾರ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ ಹಾಗೂ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸೇವೆ ಮಾಡುವೆ ಎಂದರು.
ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಮನೆಗಾರ ಮಾತನಾಡಿ, ಇಂದು ಜೆಡಿಎಸ್ ಶಾಸಕರು ಸರಕಾರದ ಕಾರ್ಯಕ್ರಮಗಳಲ್ಲಿ ತಮ್ಮ ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಕೂರಿಸಿಕೊಂಡು ಕಾರ್ಯಕ್ರಮ ಜರುಗಿಸಿ ಶಿಷ್ಟಚಾರ ಉಲ್ಲಂಘಿಸುತ್ತಾ ಬಂದಿದ್ದಾರೆ, ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ರಾಜ್ಯ ಸರಕಾರ ಇಂದು ಬಾಬುರಾವ ಚಿಂಚನಸೂರು ಅವರ ಮೇಲಿನ ಗೌರವ, ಅನುಭವ ಹಾಗೂ ಹಿರಿಯ ನಾಯಕತ್ವ ಕಂಡು ಸಂಪುಟ ಸ್ಥಾನಮಾನ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದಾರೆ ಆದರೆ ಇಂದು ಅಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಉಪಸ್ಥಿತರಿದ್ದರು.

