ಬೆಂಗಳೂರು ಮತ್ತೊಮ್ಮೆ ತಂತ್ರಜ್ಞಾನದ ಮೂಲಕ ವಿಶ್ವದ ಗಮನವನ್ನು ಸೆಳೆದಿದೆ. ಚಾಲಕರಿಲ್ಲ, ಸ್ಟೇರಿಂಗ್ ವೀಲ್ ಇಲ್ಲ ಸಂಪೂರ್ಣ ಸ್ವಯಂಚಾಲಿತ ಕಾರು ನಗರದಲ್ಲಿ ಓಡಾಡಿದೆ! ವಿಪ್ರೋ–ಐಐಎಸ್‌ಸಿ ರಿಸರ್ಚ್ ಅಂಡ್ ಇನ್ನೋವೇಶನ್ ನೆಟ್‌ವರ್ಕ್ (VAIRIN) ನಿರ್ಮಿಸಿದ ಈ ಡ್ರೈವರ್‌ಲೆಸ್ ವಾಹನವನ್ನು ಆರ್‌ವಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭವ್ಯವಾಗಿ ಅನಾವರಣಗೊಳಿಸಿ ಚಾಲನೆ ನೀಡಲಾಯಿತು.
ಈ ವಿಶೇಷ ಕ್ಷಣದಲ್ಲಿ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಕಾರಿನಲ್ಲಿ ಕುಳಿತು ಕ್ಯಾಂಪಸ್ ನಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದರು. ಕಾರಿನಲ್ಲಿ ಚಾಲಕನಿಲ್ಲದೆ, ಸ್ವಾಮೀಜಿಗಳು ಸುರಕ್ಷಿತವಾಗಿ ಸಂಚರಿಸುತ್ತಿರುವ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಡಿಲಿನಂತೆ ಹರಡುತ್ತಿದೆ. ಭಾರತದಲ್ಲೇ ತಯಾರಾದ ಸ್ವಯಂಚಾಲಿತ ತಂತ್ರಜ್ಞಾನಕ್ಕೆ ನೆಟ್ಟಿಗರು “ಇದು ನಮ್ಮ ಕೀರ್ತಿ!” ಎಂದು ಅಭಿನಂದನೆ ಸುರಿಸುತ್ತಿದ್ದಾರೆ.
ಟೆಸ್ಲಾ ಆಟೋಪೈಲಟ್ ತಂತ್ರಜ್ಞಾನವು ಈಗಾಗಲೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ದೇಶೀಯ ಸಂಶೋಧನೆ ಮತ್ತು ಭಾರತೀಯ ತಂತ್ರಜ್ಞರು ನಿರ್ಮಿಸಿದ ಈ ವಾಹನವು, “ಇನ್ನು ನಾವು ಕೂಡ ಯಾರಿಗೂ ಕಡಿಮೆಯಲ್ಲ” ಎಂಬುದನ್ನು ಸಾಬೀತುಪಡಿಸಿದೆ. ಇದು ಕೇವಲ ಒಂದು ಪ್ರದರ್ಶನವಷ್ಟೇ ಅಲ್ಲ ಭಾರತದಲ್ಲಿ ಸ್ವಯಂಚಾಲಿತ ವಾಹನಗಳ ಭವಿಷ್ಯದ ಬಾಗಿಲು ತೆರೆದ ಕ್ಷಣವಾಗಬಹುದು. ಸಂಶೋಧಕರು ಈಗ ರಸ್ತೆಗಳ ಭದ್ರತೆ, ಪ್ರಯಾಣಿಕರ ಸುರಕ್ಷತೆ ಮತ್ತು ಸಾಫ್ಟ್‌ವೇರ್ ನಿಖರತೆಯ ಪರೀಕ್ಷೆಗಳನ್ನು ಮುಂದುವರೆಸಲಿದ್ದಾರೆ.
ಈ ಕಾರಿನ ಯಶಸ್ಸು ಯುವ ಸಂಶೋಧಕರಿಗೆ ಪ್ರೇರಣೆ ನೀಡಿದಂತಾಗಿದೆ. “ಟೆಕ್ ನಗರ” ಎಂಬ ಹೆಸರು ಹೊಂದಿರುವ ಬೆಂಗಳೂರು ಮತ್ತೆ ತನ್ನ ಶಕ್ತಿ ತೋರಿಸಿದೆ. ಹೀಗಾಗಿ, ಭವಿಷ್ಯದಲ್ಲಿ ಭಾರತೀಯ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ದಿನಗಳು ಇನ್ನೂ ಸಮೀಪವಾಗಿವೆ ಎಂಬ ನಂಬಿಕೆಗಳು ಹೆಚ್ಚಾಗುತ್ತಿವೆ.
