ವರದಿ; ಶ್ರೀಶೈಲ್ ಪೂಜಾರಿ
ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ಹೌದು.. ತಾಲೂಕಿನ ಮೈಬೂಬನಗರದ ಶಿರೋಳ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಣೆ ಪಡಿತರ ಅಕ್ಕಿ ವಾಹನವನ್ನು ಸಾರ್ವಜನಿಕರು ಹಿಡಿದು ಮಾಹಿತಿ ನೀಡಿದರು ಕೂಡ ಆಹಾರ ಇಲಾಖೆ ಅಧಿಕಾರಿಗಳು ಬರದೇ ಇರುವುದರಿಂದ ಸೋಮವಾರ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುವುದಲ್ಲದೇ ತಹಶಿಲ್ದಾರರಿಗೆ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಅವರ ವಿರುದ್ಧ ದೂರು ನೀಡಲಾಗಿದೆ.
ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಮುದ್ದೇಬಿಹಾಳ ಹಾಗೂ ಸುತ್ತಲಿನ ಗ್ರಾಮದಲ್ಲಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಕಾಳಸಂತೆಯಲ್ಲಿ ಅಕ್ರಮ ಪಡಿತರ ಮಾರಾಟಕ್ಕೆ ಬ್ರೇಕ್ ಹಾಕಲು ಶ್ರಮ ವಹಿಸುತ್ತಿದ್ದರೆ, ಆದರೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ವ್ಯವಹಾರ ಎಗ್ಗಿಲ್ಲದೆ ಸಾಗಿರುವುದು ಜನ ಹುಬ್ಬೆರಿಸುವಂತೆ ಮಾಡುವುದಲ್ಲದೇ ಆಹಾರ ಇಲಾಖೆ ವಿರುದ್ಧ ಸಂಶಯ ವ್ಯಕ್ತವಾಗಿದೆ.
ಅನ್ನಭಾಗ್ಯ ದಲ್ಲಾಳಿಗಳಿಗೆ ಮಾರಾಟ
ತಾಲೂಕಿನ ವಿವಿಧ ಗ್ರಾಮಗಳ ಮನೆಗೆ ತೆರಳುವ ಈ ಗುಂಪು, ರೇಷನ್ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಅಧಿಕ ಹಣಕ್ಕೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್ ಗಳ ಮೂಲಕ ಲಾರಿಗಳಲ್ಲಿ ಬೇರೆ ರಾಜ್ಯಕ್ಕೆ ಸಾಗಿಸುತ್ತಾರೆ ಎಂಬ ಗುಮಾನಿ ಇದೆ.
ಅಕ್ರಮ ಸಾಗಣೆ ವಾಹನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರು ಕೂಡ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಸ್ಥಳಕ್ಕೆ ಬರದೇ ಸಮಯ ಕಳೆಯುತ್ತಾ ಕುಂಟುನೆಪ ಹೇಳಿ ಜಾರಿಕೊಂಡ ಸನ್ನೀವೇಶ ನಡೆದರೆ, ಅಕ್ರಮ ಸಾಗಣೆ ವಾಹನ ಪರ ಕೆಲವರು ಪರೋಕ್ಷವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವೆ ಎಂದು ಬಿಂಬಿಸಿ ಪರೋಕ್ಷವಾಗಿ ಅಕ್ರಮ ಅಕ್ಕಿ ವಾಹನವನ್ನು ಎಸ್ಕೇಪ್ ಮಾಡಿದ ಸನ್ನಿವೇಶ ಜರುಗಿತು.
ಇನ್ನು ಯಾವುದೇ ಭಯವಿಲ್ಲದೇ ಅಕ್ರಮವಾಗಿ ಅಕ್ಕಿ ಖರೀದಿ ಹಾಗೂ ಸಾಗಣೆ ಮಾಡುತ್ತಿದ್ದರೂ ತಾಲೂಕಿನಲ್ಲಿ ಯಾವುದೇ ಕ್ರಮ ಇಲ್ಲದಂತಾಗಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಅಕ್ಕಿ ನೀಡಿದರೆ ಅದು ಅಕ್ರಮ ದಂಧೆಗೆ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅನ್ನಭಾಗ್ಯ ಯೋಜನೆಯನ್ನು ಕಾಪಾಡಬೇಕಿದೆ.
ಏನೇ ಆಗಲಿ ಅನ್ನಭಾಗ್ಯ ಯೊಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಅವ್ಯಾಹತವಾಗಿ ನಡೆದಿರುವುದಕ್ಕೆ ಕಡಿವಾಣ ಹಾಕಲು ಒಂದು ಕಡೆ ಅಧಿಕಾರಿಗಳು ಹೆಣಗಾಡುತ್ತಿದ್ದರೆ, ಮತ್ತೊಂದು ಕಡೆ ಅನ್ನಭಾಗ್ಯ ಅಕ್ರಮ ಸಾಗಾಟಕ್ಕೆ ತಂಡಪೋ ತಂಡಗಳು ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿವೆ. ಇದಕ್ಕೆ ಪುಷ್ಟಿಕರಿಸುವಂತೆ ಮಾಹಿತಿ ನೀಡಿದರೂ ಕೂಡ ಭಾನುವಾರ ಅಕ್ರಮ ಸಾಗಣೆ ವಾಹನ ವಶಪಡಿಸಿಕೊಳ್ಳದೇ ಬಿಟ್ಟಿದ್ದು ಸಾರ್ವಜನಿಕರಲ್ಲಿ ಅಧಿಕಾರಿಗಳು ಕೂಡ ಅಕ್ಕಿ ಅಕ್ರಮ ಸಾಗಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ರಾ ಎಂಬ ಮಾತುಗಳು ಕೇಳಿಬಂದವು.

