ಸತ್ಯಕಾಮ ವಾರ್ತೆ ಯಾದಗಿರಿ:
ಮುಂಬರುವ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ವಾಹನಗಳನ್ನು ತಡೆದು ಬಲವಂತವಾಗಿ ದೇಣಿಗೆ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಹಬ್ಬದ ಸಂದರ್ಭಗಳಲ್ಲಿ ಕೆಲವು ಸಮಿತಿಗಳ ಸದಸ್ಯರು ರಸ್ತೆಗಳಲ್ಲಿ ಗುಂಪು ಸೇರಿ, ವಾಹನ ಸವಾರರಿಗೆ ಅಡಚಣೆ ಉಂಟುಮಾಡಿ ಬಲವಂತವಾಗಿ ಹಣ ಬೇಡುವ ಘಟನೆಗಳು ನಡೆಯುತ್ತಿರುವುದಾಗಿ ತಿಳಿಸಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ದೇಣಿಗೆಯನ್ನು ಸ್ವೀಕರಿಸಲು ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ತಡೆದು ಹಣ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.
ಗೌರಿ–ಗಣೇಶ ಹಬ್ಬವನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹಬ್ಬವನ್ನು ನೆರವೇರಿಸಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

