ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದು, ಇದರ ಪ್ರಮುಖ ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಕ್ಕಳಿಗೆ ಸೂಕ್ತ ತರಗತಿ ಕೋಣೆಗಳು ಇಲ್ಲ, ಶೌಚಾಲಯಗಳಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ – ಈ ಎಲ್ಲಾ ಸಮಸ್ಯೆಗಳು ಇನ್ನೂ ದೂರವಾಗಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕೆಲವು ಶಾಲೆಗಳ ಮೇಲ್ಛಾವಣಿಗಳು ಕುಸಿಯುವ ಸ್ಥಿತಿಯಲ್ಲಿವೆ. ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಲೆಗಳ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ತಲೆಕೆಡಿಸಿಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಭವಿಷ್ಯಕ್ಕೆ ನೇರ ಧಕ್ಕೆಯಾಗಿದೆ, ಎಂದು ಗುಡುಗಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಬರುವ ತನಕ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬರುವುದಿಲ್ಲ. ಮಕ್ಕಳಿಗಾಗಿ ಪೋಷಕರ ಆತಂಕ, ಕಣ್ಣೀರು, ಇದ್ಯಾವುದೂ ಇವರಿಗೆ ಕಾಣುವುದಿಲ್ಲ, ನೆಪ ಮಾತ್ರಕ್ಕೆ ಸುದ್ದಿಯಾದಾಗ ಮಾತ್ರ ವೀಕ್ಷಣಾ ಭೇಟಿ – ಇದು ಕೇವಲ ನಾಟಕ ಮಾತ್ರ? ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಹಲವಾರು ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆಯಿಂದ ಪಾಠಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವಿಷಯ ಶಿಕ್ಷಕರಿಲ್ಲದೆ ಶಾಲೆ ಹೋದ ಮಕ್ಕಳು ಏನು ಕಲಿತು ಬರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪ್ರಾಥಮಿಕ ಶಿಕ್ಷಣವೇ ಭವಿಷ್ಯದ ಅಡಿಪಾಯ. ಅದು ಬಲವಾಗಿಲ್ಲದಿದ್ದರೆ, ವಿದ್ಯಾರ್ಥಿಗಳು ಮುಂದಿನ ಹಂತ ತಲುಪುವುದು ಹೇಗೆ? ಎಂದಿದ್ದಾರೆ, ಇದು ರಾಜ್ಯದ ಶಿಕ್ಷಣ ಇಲಾಖೆಯ ಸಂಪೂರ್ಣ ವೈಫಲ್ಯ. ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವುದು ಜಿಲ್ಲೆಯ ಮಕ್ಕಳ ಭವಿಷ್ಯವೇ ಅಪಾಯದಲ್ಲಿ ಸಿಲುಕಿದೆ ಎಂದರು.
ಚುನಾವಣೆಯ ವೇಳೆ ಮನೆ ಮನೆಗೆ ಭೇಟಿ ನೀಡಿ ಮತ ಕೇಳಿದವರು, ಶಾಲೆಗಳ ದುಸ್ಥಿತಿಯ ಕುರಿತಾಗಿ ಎಷ್ಟು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ?,ಎಂದು ಪ್ರಶ್ನಿಸಿದ್ದಾರೆ.

