ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಗೆ ಬೆಳಗ್ಗೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೌದು.. ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ನೂರಕ್ಕೆ ನೂರರಷ್ಟು ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಿಂದಿನ ಕೆಲಸಕ್ಕಾಗಿ ಬಂದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನದಟ್ಟಣೆ ಕಂಡು ಬಂದರೆ, ಶಾಲೆ-ಕಾಲೇಜು ಎಂದಿನಂತೆ ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾದ ಸನ್ನಿವೇಶಗಳು ಎದುರಾದವು.

ಸರಕಾರಿ, ಖಾಸಗಿ ಶಾಲೆ, ಕಾಲೇಜುಗಳು ಕೆಲವೊತ್ತು ತೆಗೆದು ಮುಚ್ಚಿದರೆ. ಪೆಟ್ರೋಲ್ ಬಂಕ್ , ಔಷಧ ಅಂಗಡಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹೋರಾಟ ಕೇಂದ್ರ ಸ್ಥಳವಾದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ ಬಳಿಕ ಪ್ರತಿಭಟನೆ ಕಾವು ಜೋರಾಯಿತು.


ಇಂದಿರಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದ್ಯಾಮವ್ವಣ ಕಟ್ಟೆ, ಬಜಾರ ರಸ್ತೆ ಯಲ್ಲಿ ಯಾವುದೇ ಅಂಗಡಿಗಳನ್ನು ತೆಗೆಯದೇ ಮುದ್ದೇಬಿಹಾಳ ಬಂದ್ ಗೆ ಬೆಂಬಲವನ್ನು ಭಾಗಶಃ ಸೂಚಿಸಿದವು.

ಕರೆ ಸ್ವೀಕರಿಸದ ತಹಶಿಲ್ದಾರ ಕೀರ್ತಿ ಚಾಲಕ್
ಇನ್ನು ಮುದ್ದೇಬಿಹಾಳ ಬಂದ್ ಗೆ ಬಗ್ಗೆ ತಹಶಿಲ್ದಾರರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸದೇ ಶಾಲಾ-ಕಾಲೇಜುಗಳ ರಜೆ ಬಗ್ಗೆ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡರು. ಶಾಲೆಗಳು ಆರಂಭ ಬಗ್ಗೆ ಬಿಇಒ ಬಿ ಎಸ್ ಸಾವಳಗಿ ಅವರಿಗೆ ಸಂಪರ್ಕಿಸಿದಾಗ ಶಾಲೆಗಳನ್ನು ರಜೆ ನೀಡಲು ನಮಗೆ ಯಾವುದೇ ಅನುಮತಿ ಇರುವುದಿಲ್ಲ. ಹೀಗಾಗಿ ತಾಲೂಕಿಗೆ ತಹಶಿಲ್ದಾರರೇ ಅಂತಿಮ ನಿರ್ಧಾರ ಕೈಗೊಳ್ಳುವರು. ಶಾಲಾ ರಜೆ ನೀಡಲು ಅವರೇ ಜವಬ್ದಾರರು. ಈಗಾಗಲೇ ಮುದ್ದೇಬಿಹಾಳ ಬಂದ್ ಬಗ್ಗೆ ಶಿಕ್ಷಣ ಇಲಾಖೆಯಿಂದ ತಹಶಿಲ್ದಾರರಿಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಹಶಿಲ್ದಾರರಿಂದ ಶಾಲಾ ಬಂದ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಹೀಗಾಗಿ ಶಾಲೆಗಳನ್ನು ರಜೆ ಘೋಷಣೆ ಮಾಡಿಲ್ಲ ಎಂದರು.
