ಸತ್ಯಕಾಮ ವಾರ್ತೆ ಯಾದಗಿರಿ:
ನಾಯ್ಕಲ್ ಗ್ರಾಮದ ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದೂ, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಐವರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಯ್ಕಲ್ ಗ್ರಾಮದ 1500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ (FHTC) ನೀಡುವ ಕಾಮಗಾರಿಗೆ ₹411 ಲಕ್ಷ ವೆಚ್ಚ ನಿಗದಿಯಾಗಿತ್ತು. ಆದರೆ, ವಾಸ್ತವಿಕವಾಗಿ ಕೇವಲ 529 ಮನೆಗಳಲ್ಲಿ (35%) ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದರೂ, ದಾಖಲೆಗಳಲ್ಲಿ 1257 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ತೋರಿಸಿ ₹330.39 ಲಕ್ಷ (82.5%) ಬಿಲ್ ಪಾವತಿ ಮಾಡಲಾಗಿದ್ದೂ, ಅಲ್ಲದೇ ಇದಕ್ಕೆ ಹೆಚ್ಚುವರಿಯಾಗಿ ₹190 ಲಕ್ಷ ಮೊತ್ತವನ್ನು ಕೆಲಸ ಪೂರ್ಣಗೊಳ್ಳದೇ ಇರುವ ಪರಿಸ್ಥಿತಿಯಲ್ಲೇ ಪಾವತಿಸಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಪಾಸಣೆಯಲ್ಲಿ, MDPE ಪೈಪುಗಳನ್ನು ಸರಿಯಾಗಿ ಅಳವಡಿಸದೇ GI ಪೈಪುಗಳಿಂದ ಮುಚ್ಚಿಲ್ಲ, ನೆಲದಡಿಯಲ್ಲಿ ಹಾಕಬೇಕಾದ ಪೈಪುಗಳನ್ನು ಮೇಲ್ಮೈಯಲ್ಲಿ ಅಳವಡಿಸಲಾಗಿದೆ, ಸುಳ್ಳು ದೃಢೀಕರಣ ಪತ್ರಗಳು ಮತ್ತು ನಕಲಿ ವರದಿಗಳ ಆಧಾರದಲ್ಲಿ ಬಿಲ್‌ಗಳು ಅನುಮೋದನೆಗೊಂಡಿರುವುದು ಪತ್ತೆಯಾಗಿದ್ದು, ಇದು ತುರ್ತು ಕ್ರಮಕ್ಕೆ ಕಾರಣವಾಗಿದೆ.
ಈ ಅವ್ಯವಹಾರದಲ್ಲಿ ಭಾಗಿಯಾದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಅಧಿಕಾರಿ (ಪ್ರ) ಸಹಾಯಕ ಇಂಜಿನಿಯರ್-2 ಎನ್. ಶ್ರೀನಿವಾಸ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಶಹಾಪೂರ ಪ್ರಸಕ್ತ ದೇವದುರ್ಗ ಲೋಕೋಪಯೋಗಿ ಇಲಾಖೆ, ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಬನ್ನಪ್ಪ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಯಾದಗಿರಿ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ, ಗುತ್ತಿಗೆದಾರ ವೆಂಕಟೇಶ್ ಜಿ. ಗುರಸಣಗಿ,Transportech Consultants, ಬೆಂಗಳೂರು (ಮೂರನೇ ತನಿಖಾ ತಂಡ) ಇವರ ವಿರುದ್ಧ ಇದೀಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಗುನ್ನೆ ನಂ.153/2025 ಕಲಂ 318(2), 418(4), 336(3) BNS-2023 ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

