ಸಿನಿಮಾ ಲೋಕದಲ್ಲಿ ಜನಪ್ರಿಯತೆ ಪಡೆದವರು ಎದುರಿಸಬೇಕಾದ ದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ತಮ್ಮ ಹೆಸರು ಮತ್ತು ಮುಖದ ದುರುಪಯೋಗ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆ ಡೀಪ್‌ಫೇಕ್ ಎಂಬ ಹೊಸ ಅಪಾಯವನ್ನು ತಂದುಕೊಟ್ಟಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಈ ತಂತ್ರಜ್ಞಾನವು ಯಾರ ಮುಖವನ್ನು ಬೇರೆ ವ್ಯಕ್ತಿಯ ದೇಹದ ಮೇಲೆ ನಿಖರವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಜವಾದ ಹಾಗೇ ಕಾಣುವ ನಕಲಿ ವೀಡಿಯೋಗಳನ್ನು ರಚಿಸಲಾಗುತ್ತದೆ. ಇದೇ ತಂತ್ರಜ್ಞಾನದಿಂದ ಈಗ ಮೆಗಾಸ್ಟಾರ್ ಚಿರಂಜೀವಿ ಸಂಕಷ್ಟ ಅನುಭವಿಸುತ್ತಿದ್ದಾರೆ
ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿಯೂ, ಸಾಮಾನ್ಯ ಜನರಲ್ಲಿಯೂ ಆಘಾತ ಮೂಡಿಸಿದೆ. ಚಿರಂಜೀವಿ ಅವರ ಹೆಸರು, ಮುಖದ ಹೋಲಿಕೆ ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಿದ ಅಶ್ಲೀಲ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಟ ಸ್ವತಃ ಕಾನೂನು ಹೋರಾಟ ಆರಂಭಿಸಿದ್ದಾರೆ.
ಚಿರಂಜೀವಿ ಅವರ ದೂರಿನಲ್ಲಿ ಏನಿದೆ?
ಹಲವು ವೆಬ್‌ಸೈಟ್‌ಗಳು ನನ್ನ ಹೆಸರು ಮತ್ತು ಮುಖವನ್ನು ಬಳಸಿ ಕೃತಕವಾಗಿ ರಚಿಸಿದ ಅಶ್ಲೀಲ ವೀಡಿಯೋಗಳನ್ನು ಪ್ರಕಟಿಸಿವೆ. ಈ ವೀಡಿಯೋಗಳು ನನಗೆ ವಿರುದ್ಧವಾದ ತಪ್ಪು ಗ್ರಹಿಕೆಯನ್ನು ಉಂಟುಮಾಡಿ, ನನ್ನ ಮಾನ-ಗೌರವಕ್ಕೆ ಧಕ್ಕೆಯುಂಟುಮಾಡಿವೆ. ನನ್ನ ಮೇಲೆ ಜನರಲ್ಲಿದ್ದ ಸದ್ಭಾವನೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ, ಎಂದು ತಿಳಿಸಿದ್ದಾರೆ.
ಈ ದೂರು ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಷನ್‌ಗಳು 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 79, 294, 296 ಮತ್ತು 336(4) ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4 ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.
ಚಿರಂಜೀವಿ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, ಈ ವೀಡಿಯೋಗಳು ಸಂಪೂರ್ಣ ನಕಲಿ. ಕೃತಕ ಬುದ್ಧಿಮತ್ತೆ ಮೂಲಕ ನನ್ನ ಮುಖಭಾವ, ಶರೀರಭಾಷೆ ಮತ್ತು ವ್ಯಕ್ತಿತ್ವವನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಮಾನಹಾನಿಕಾರಕ, ಎಂದು ಖಂಡಿಸಿದ್ದಾರೆ.
ಈ ಪ್ರಕರಣ ಕೇವಲ ಚಿರಂಜೀವಿಯವರ ವೈಯಕ್ತಿಕ ಹಕ್ಕಿನ ವಿಷಯವಲ್ಲ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರಕ್ರಿಯೆಗಳ ವಿರುದ್ಧ ಎಚ್ಚರಿಕೆಯ ಗಂಟೆ ಎಂಬಂತೆ ಪರಿಣಿತರು ಹೇಳಿದ್ದಾರೆ. ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಸೃಜನಶೀಲ ಕ್ಷೇತ್ರಗಳಿಗೆ ಅವಕಾಶಗಳನ್ನೂ ಕೊಡುವುದೇ ಸರಿ, ಆದರೆ ಅದನ್ನು ದುರುಪಯೋಗ ಮಾಡಿದರೆ ವ್ಯಕ್ತಿಗಳ ಗೌರವ ಮತ್ತು ಸಮಾಜದ ನೈತಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೈದರಾಬಾದ್ ಪೊಲೀಸರು ಈಗ ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಚಿರಂಜೀವಿಯ ಪ್ರಕರಣದಿಂದ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
