ಯಾದಗಿರಿ: ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯಲ್ಲಿ ವಿಳಂಬ ಉಂಟಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೃಷಿ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸರ್ಕಾರ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ನಿರೀಕ್ಷೆಗೂ ಮೀರಿ ಪೂರೈಸಿದ್ದರೂ, ರಾಜ್ಯ ಸರ್ಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಲು ವಿಫಲವಾಗಿದ್ದೂ, ಸಿಎಂ ಸಿದ್ದರಾಮಯ್ಯನವರು ಕೇಂದ್ರದಿಂದ ಗೊಬ್ಬರ ಬಾರದಂತೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಗನೂರ ಆರೋಪಿಸಿದರು.
ರಾಜ್ಯದಲ್ಲಿ ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ, ಏಕಕಾಲದಲ್ಲಿ ಬಿತ್ತನೆ ಪ್ರಾರಂಭವಾಗದೆ, ಸರ್ಕಾರ ರಾಜ್ಯಕ್ಕೆ ಅಗತ್ಯವಿರುವ ಯೂರಿಯಾ ಮತ್ತು ಬೀಜಗಳ ಪ್ರಮಾಣವನ್ನು ಮುಂಚಿತವಾಗಿ ಅಂದಾಜು ಮಾಡಬೇಕಿತ್ತು. ಆದರೆ, ಗೋದಾಮುಗಳಲ್ಲಿ ಸರಿಯಾಗಿ ದಾಸ್ತಾನು ಮಾಡದೆ, ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದೆ.
ಗ್ಯಾರಂಟಿ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರ, ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸರ್ಕಾರ ಸಾಕಷ್ಟು ಸಾಧನೆ ಮಾಡಿದೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ರೈತರ ರಸಗೊಬ್ಬರದ ಸಂಕಷ್ಟ ಇವರಿಗೆ ಕಾಣಿಸುತ್ತಿಲ್ಲ.ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯದ ಫಲವನ್ನು ರೈತರು ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೃಷಿ ಸಚಿವರು ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲವೆಂದು ಹೇಳುವುದು ವಾಸ್ತವಿಕತೆಗೆ ದೂರವಾಗಿದೆ. ಜಿಲ್ಲೆಗಳ ಪರಿಸ್ಥಿತಿ ಅರಿತುಕೊಳ್ಳಲು ಅವರು ಎಲ್ಲಿಗೂ ಭೇಟಿ ನೀಡಿಲ್ಲ. ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ರೈತರ ಕಣ್ಣಲ್ಲಿ ನೀರು ಬರಿಸಿದರೆ ಆ ಮುಖ್ಯಮಂತ್ರಿಗಳಿಗೆ ಒಳ್ಳೆಯದಾಗದು. ರೈತರನ್ನು ದುಸ್ಥಿತಿಗೆ ತಂದ ಕೃಷಿ ಸಚಿವರಿಗೂ ಒಳ್ಳೆಯದಾಗದು. ಹವಾಮಾನ ಇಲಾಖೆಯಿಂದ ಸಾಕಷ್ಟು ಮಳೆಯ ಮುನ್ಸೂಚನೆ ಇದ್ದರೂ ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕಿಸಿದರು.
ಇದು ರೈತ ವಿರೋಧಿ ಸರಕಾರ, ಹಗರಣಗಳ ಸರಕಾರ. ರೈತರ ಕುರಿತು ಜವಾಬ್ದಾರಿಯಿಂದ ಮಾತನಾಡದೆ ಕೇಂದ್ರವನ್ನು ದೂಷಿಸಿದರೆ ಒಳ್ಳೆಯದಾಗದು ಎಂದ ಅವರು ಕೂಡಲೇ ರೈತರಿಗೆ ರಸಗೊಬ್ಬರದ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂದಾಗಬೇಕು ಇಲ್ಲವಾದಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಕೃಷಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

