ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಚಿತ್ರವೆಂದರೆ ‘ಕಾಂತಾರ ಚಾಪ್ಟರ್ 1’. ಈ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಶೋಗಳು ನಡೆಯುತ್ತಿವೆ. ಕಥಾ ಹಂದರ, ತಾಂತ್ರಿಕ ಮೆರುಗು ಹಾಗೂ ಸಂಸ್ಕೃತಿಯ ನೈಜ ಚಿತ್ರಣದಿಂದ ಈ ಚಿತ್ರವು ದೇಶಾದ್ಯಂತ ಸದ್ದು ಮಾಡುತ್ತಿದೆ. ಮೊದಲ ಭಾಗದಂತೆಯೇ, ಈ ಚಾಪ್ಟರ್ ಕೂಡ ಭಾವನಾತ್ಮಕ ಕತೆಯ ಜೊತೆಗೆ ಸಂಸ್ಕೃತಿ ಹಾಗೂ ಭಕ್ತಿಯ ಅಂಶಗಳನ್ನು ಒಟ್ಟುಗೂಡಿಸಿರುವುದರಿಂದ ಪ್ರೇಕ್ಷಕರ ಮನ ಗೆದ್ದಿದೆ.
ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇವಿ ಆಶೀರ್ವಾದ ಪಡೆಯಲು ಧಾರ್ಮಿಕ ಯಾತ್ರೆಗೆ ತೆರಳಿದ್ದಾರೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಅವರು ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ತಮ್ಮ ಹರ್ಷವನ್ನು ಹಂಚಿಕೊಂಡ ಬಗೆ ಹೀಗಿದೆ, ಎಲ್ಲವೂ ತುಂಬಾ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ಪ್ರೇಕ್ಷಕರು ನಮ್ಮ ಸಿನಿಮಾಗೆ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು, ಅದೇ ರೀತಿಯಲ್ಲಿ ಈ ಬಾರಿಯೂ ಪ್ರೇಕ್ಷಕರು ಚಾಪ್ಟರ್ 1 ಅನ್ನೂ ಕೂಡ ಹೃದಯಪೂರ್ವಕವಾಗಿ ಸ್ವೀಕರಿಸಿರುವುದು ನನಗೆ ಅಪಾರ ಸಂತೋಷವನ್ನು ನೀಡಿದೆ.
ಇನ್ನು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಿಷಬ್ ಶೆಟ್ಟಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಅವರು ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
‘ಕಾಂತಾರ ಚಾಪ್ಟರ್ 1’ ಯಶಸ್ಸು ಕೇವಲ ಒಂದು ಸಿನಿಮಾ ವಿಜಯವಲ್ಲ, ಇದು ಕನ್ನಡ ಸಂಸ್ಕೃತಿ, ಭಕ್ತಿ ಮತ್ತು ಹಳ್ಳಿ ಜೀವನದ ಆಳವಾದ ಕಥೆಯೊಂದರ ವಿಜಯವಾಗಿದೆ.

