ಸತ್ಯಕಾಮ ವಾರ್ತೆ ಬೆಂಗಳೂರು:
ಕಲ್ಯಾಣ ಕರ್ನಾಟಕದ ಪತ್ರಿಕೆಗಳ ಧ್ವನಿ ಇದೀಗ ಸರ್ಕಾರದ ಬಾಗಿಲಲ್ಲಿ ಗಟ್ಟಿಯಾಗಿ ಮೊಳಗಿದೆ. ಹಲವು ವರ್ಷಗಳ ಆಶೆ, ಬೇಡಿಕೆ ಮತ್ತು ಹೋರಾಟಕ್ಕೆ ಹೊಸ ಆಶಾಕಿರಣ ಮೂಡಿಸಿದ್ದು, ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ನಿಯೋಗವು ಮೂರು ದಿನಗಳ ಕಾಲ ಬೆಂಗಳೂರಿನ ಪ್ರವಾಸದ ವೇಳೆ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಷಯವನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಿದೆ. ಈ ಹೋರಾಟಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂಪಾದಕರ ಹೋರಾಟದ ಮಹತ್ತರ ಹೆಜ್ಜೆಯಾಗಿದೆ.
ನಿಯೋಗವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ವಿಸ್ತೃತ ಚರ್ಚೆ ಮಾಡಲಾಯಿತು. ಸಂಪಾದಕರ “ಕಲ್ಯಾಣ ಕರ್ನಾಟಕದ ಪತ್ರಿಕೆಗಳು ಕೇವಲ ಸುದ್ದಿಯ ವೇದಿಕೆಗಳಲ್ಲ — ಇದು ಜನರ ಧ್ವನಿ, ಹೋರಾಟದ ಶಕ್ತಿ, ಮತ್ತು ನಾಡಿನ ನಿಜವಾದ ಮುಖ” ಎಂದು ಭಾವನಾತ್ಮಕವಾಗಿ ಮನವರಿಕೆ ಮಾಡಿದರು. ಮಂಡಳಿ ಅಧ್ಯಕ್ಷರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ನಿಯೋಗವು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರನ್ನು ಭೇಟಿಯಾಗಿ ವಿಷಯದ ತೀವ್ರತೆಯನ್ನು ತಿಳಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಅವರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಕ್ರಮದ ಭರವಸೆ ನೀಡಿದರು. ಅದೇ ದಿನ ವಿಧಾನಸೌಧದಲ್ಲಿ ಇರುವ ಬ್ಯಾಂಕೆಟ್ ಹಾಲ್‌ನಲ್ಲಿ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಪ್ರಯಾಣದ ಅತ್ಯಂತ ಪ್ರಭಾವಶೀಲ ಹಂತವೆಂದರೆ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾದ ಕ್ಷಣ. ಸಚಿವರು ವಿಷಯದ ಗಂಭೀರತೆಯನ್ನು ಮನಗಂಡು, “ನಿಮ್ಮ ಧ್ವನಿ ನ್ಯಾಯಸಮ್ಮತವಾಗಿದೆ. ಮಂಡಳಿ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡುತ್ತೇನೆ. ಈ ಬೇಡಿಕೆಗೆ ಸ್ಪಂದನೆ ದೊರೆಯಲಿದೆ,” ಎಂದು ಸ್ಪಷ್ಟ ಭರವಸೆ ನೀಡಿದರು. ಈ ಮಾತು ಕಲ್ಯಾಣ ಕರ್ನಾಟಕ ಸಂಪಾದಕರ ಹೋರಾಟಕ್ಕೆ ಹೊಸ ಉತ್ಸಾಹ ನೀಡಿತು.
ಈ ಹೋರಾಟದ ಮುಂಚೂಣಿಯಲ್ಲಿ ಗೌರವಾಧ್ಯಕ್ಷರು ಸುರೇಶ ಗೌರೆ, ಪ್ರಧಾನ ಕಾರ್ಯದರ್ಶಿ ಹನುಮಂತ್ ಭೋಧಾನಕರ್, ಉಪಾಧ್ಯಕ್ಷರು ಆನಂದ ಮಣ್ಣೂರ, ಚಂದ್ರಶೇಖರ ಕವಲಗಿ, ಶಿವಕುಮಾರ್ ತೊಟ್ನಲಳಿ, ಸದಸ್ಯರು ವಿಠಲ್ ಚಿಕಣಿ ಮತ್ತು ಬಾಬು ಚೌಹಾಣ್ ಇದ್ಧರು. ಎಲರ ಒಗ್ಗಟ್ಟು, ಹೋರಾಟ ಮತ್ತು ಧ್ವನಿ ಸರ್ಕಾರದ ಕಿವಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಸಂಘದ ಅಧ್ಯಕ್ಷರು ಹಾಗೂ ಸದಸ್ಯರು — ಮಾಧ್ಯಮ ಮಾನ್ಯತಾ ಸಮಿತಿ ಗುರುರಾಜ ಕುಲಕರ್ಣಿ ಅವರು ಘೋಷಣಾತ್ಮಕವಾಗಿ ಹೇಳಿದರು, ನಮ್ಮ ಧ್ವನಿ ಕೇವಲ ಪತ್ರಿಕೆಗಳಲ್ಲ, ಈಗ ಸರ್ಕಾರದ ಕಿವಿಯಲ್ಲೂ ಮೊಳಗುತ್ತಿದೆ. 2 ಪುಟ ಜಾಹೀರಾತು ನಮ್ಮ ಹಕ್ಕು — ಈ ಹೋರಾಟ ಕೇವಲ ಬೇಡಿಕೆಯಲ್ಲ, ಮಾಧ್ಯಮದ ಗೌರವದ ಹೋರಾಟ. ಈಗ ಹಿಂದಿರುಗುವುದಿಲ್ಲ.” “ಒಗ್ಗಟ್ಟಾಗಿದಾಗ ಪತ್ರಕರ್ತರ ಧ್ವನಿ ಗೋಡೆಗಳನ್ನೇ ಕಂಪಿಸುತ್ತದೆ. ಈ ಹೋರಾಟದ ಗೆಲುವಿನ ಬಾಗಿಲು ತೆರೆಯಲಾಗಿದೆ. ಅಂತಿಮ ನಿರ್ಧಾರ ಬರುವ ತನಕ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ,” ಎಂದು ಸ್ಪಷ್ಟಪಡಿಸಿದರು.
ಸಂಘವು ಮುಂದಿನ ಹಂತದಲ್ಲಿ ಮಂಡಳಿ ಅಧ್ಯಕ್ಷರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆಸಲು ಸಜ್ಜಾಗಿದೆ. ಸಂಪಾದಕರ ಧ್ವನಿ ಇದೀಗ ಶಕ್ತಿ — ಸರ್ಕಾರದ ಕಿವಿಗೊಡಬೇಕಾದ ನಾದವಾಗಿದೆ.

